ಮೈಸೂರು: ಮೈಸೂರನ್ನು ಆಳಿದ ಟಿಪ್ಪು ಸುಲ್ತಾನ್ ( ಟಿಪ್ಪು ವಿವಾದ ) ತನ್ನ ಆಡಳಿತಾವಧಿಯಲ್ಲಿ ಹಲವಾರು ದೇವಾಲಯಗಳನ್ನು ನಾಶ ಮಾಡಿದ ಆರೋಪ ಎದುರಿಸುತ್ತಿದ್ದಾನೆ. ಆದರೂ ಆತ ನಂಜನಗೂಡಿನ ಶ್ರೀ ನಂಜುಂಡೇಶ್ವರ, ಶ್ರೀರಂಗಪಟ್ಟಣದ ಶ್ರೀ ರಂಗನಾಥ, ಮೇಲುಕೋಟೆಯ ಚಲುವನಾರಾಯಣ ದೇವಾಲಯವನ್ನು ಮುಟ್ಟಿಲ್ಲ. ಇದಕ್ಕೆ ಕಾರಣವೇನು ಎನ್ನುವುದರ ಬಗ್ಗೆ ಈಗಾಗಲೇ ಸಾಕಷ್ಟು ಚರ್ಚೆಗಳಿವೆ.
ರಂಗಾಯಣ ನಿರ್ದೇಶಕರಾಗಿರುವ ಅಡ್ಡಂಡ ಸಿ. ಕಾರ್ಯಪ್ಪ ಅವರು ಬರೆದಿರುವ ʻಟಿಪ್ಪು ನಿಜ ಕನಸುʼ ನಾಟಕದಲ್ಲಿ ಈ ಬಗ್ಗೆ ದೃಶ್ಯವೊಂದನ್ನು ಸಂಯೋಜಿಸಿದ್ದು, ಇದನ್ನು ಉಳಿಸಿದ್ದು ಟಿಪ್ಪು ಸುಲ್ತಾನ್ ಪತ್ನಿ ರುಕಿಯಾ ಬಾನು ಬೇಗಂ ಎಂದು ಹೇಳುತ್ತಾರೆ. ಟಿಪ್ಪು ಈ ದೇವಸ್ಥಾನಗಳನ್ನು ನಾಶ ಮಾಡುವುದಿಲ್ಲ ಎಂದು ಪತ್ನಿಗೆ ಭಾಷೆ ಕೊಟ್ಟಿದ್ದ. ಹೀಗಾಗಿ ಆತ ಅದಕ್ಕೆ ಏನೂ ತೊಂದರೆ ಮಾಡಿಲ್ಲ ಎಂದಿದ್ದಾರೆ.
ʻʻಟಿಪ್ಪು ನಿಜ ಕನಸುʼ ನಾಟಕ ಕೃತಿಯ ೭೧ನೇ ಪುಟದಲ್ಲಿ ಟಿಪ್ಪು ಮತ್ತು ರುಕಿಯಾ ಬಾನು ನಡುವಿನ ಸಂಭಾಷಣೆ ಇದೆ. ರುಕಿಯಾ ಬೇಗಂ ಅನಾರೋಗ್ಯಕ್ಕೆ ಒಳಗಾಗಿ ಹಾಸಿಗೆ ಹಿಡಿದಿರುತ್ತಾಳೆ. ಆಗ ತನ್ನ ಬಳಿ ಬರುವ ಟಿಪ್ಪುವಿಗೆ ಆಕೆ ಸಾಕಷ್ಟು ಬುದ್ಧಿವಾದವನ್ನು ಹೇಳುತ್ತಾಳೆ.
ʻʻನೋಡಿ, ಇದು ಹಿಂದೂ ಪ್ರಾಬಲ್ಯದ ರಾಜ್ಯ, ನಾಳೆ ಅವರೆಲ್ಲಾ ಒಂದಾಗಿ ದಂಗೆ ಎದ್ದರೆ ಈ ಸಿಂಹಾಸನ ಉಳಿಯುವುದಿಲ್ಲ. ಹಿಂದೂ ದೇವಸ್ಥಾನ ಹನುಮಾನ್ ದೇವಾಲಯವನ್ನೇ ಜಾಮಿಯಾ ಮಸೀದಿ ಮಾಡಿದ್ದೀರಿ! ಚಿತ್ರದುರ್ಗದ ಪಾಪದ ಜನರ ಉಚ್ಚಂಗಮ್ಮನ ಗುಡಿಯನ್ನು ಕೆಡವಿ ಮಸೀದಿ ಕಟ್ಟಿಸಿದ್ದೀರಿ. ನರಸಿಂಹಸ್ವಾಮಿ ಆಲಯದ ರಾಜಗೋಪುರ, ಶ್ರೀ ಗಂಗಾಧರೇಶ್ವರನ ಗೋಪುರ, ಮೈಸೂರು ಅರಮನೆಯ ತ್ರಿನಯನೇಶ್ವರ, ವೆಂಕಟರಮಣಸ್ವಾಮಿ ದೇವಾಲಯಗಳ ಗೋಪುರವನ್ನು ಕೆಡವಿ ಹಾಕಿದ್ದೀರಿ. ಇನ್ನು ಸಾಕು, ನನ್ನ ಕೊನೆಯ ಆಸೆ ಶ್ರೀರಂಗಪಟ್ಟಣ, ಮೇಲುಕೋಟೆ, ನಂಜನಗೂಡು ದೇವಸ್ಥಾನಗಳನ್ನು ಮುಟ್ಟೋದಿಲ್ಲ.. ಅಂತ ಭಾಷೆ ಕೊಡಿ! ಇದನ್ನೊಂದು ನಡೆಸಿಕೊಡಿ ದಯಮಾಡಿʼʼ ಎನ್ನುತ್ತಾ ಕೆಮ್ಮುತ್ತಾಳೆ. ಸ್ವಲ್ಪ ಮಟ್ಟಿಗೆ ಪ್ರತಿರೋಧ ತೋರುವ ಟಿಪ್ಪು ಅಂತಿಮವಾಗಿ ಆಕೆಯ ಮಾತಿಗೆ ಒಪ್ಪುತ್ತಾನೆ, ಭಾಷೆ ಕೊಡುತ್ತಾನೆ. ʻʻನನ್ನ ಕನಸಿನ ಇಸ್ಲಾಂ ರಾಜ್ಯದ ಸ್ಥಾಪನೆ ನಿರ್ಧಾರ ಬದಲಾಗದುʼ ಎನ್ನುವ ಸಾಲಿನೊಂದಿಗೆ ದೃಶ್ಯ ಅಂತ್ಯವಾಗುತ್ತದೆ.
ಟಿಪ್ಪು ಸುಲ್ತಾನ್ ಹಲವಾರು ದೇವಸ್ಥಾನಗಳನ್ನು ಒಡೆದಿದ್ದ, ಆದರೆ, ಕೆಲವು ದೇವಸ್ಥಾನಗಳಿಗೆ ಒಳಿತನ್ನೂ ಮಾಡಿದ್ದ ಎಂದು ಹೇಳಲಾಗುತ್ತಿದೆ. ಈ ರೀತಿ ಮಾಡಿದ್ದೇಕೆ ಎನ್ನುವುದಕ್ಕೆ ನಾಟಕದಲ್ಲಿ ದೃಶ್ಯವೊಂದರ ಮೂಲಕ ಉತ್ತರ ನೀಡಲಾಗಿದೆ.
ಕೃತಿಯ ೭೧ ಮತ್ತು ೭೨ನೇ ಪುಟದಲ್ಲಿರುವ ಸಂಭಾಷಣೆ ಈ ರೀತಿ ಇದೆ.
ಟಿಪ್ಪು: ಬೇಗಂ, ಅವರು ಹುಲಿಯ ಮಕ್ಕಳು ಹುಲಿಯ ಹೊಟ್ಟೆಯಲ್ಲಿ ನರಿಗಳು ಹುಟ್ಟುವುದಿಲ್ಲ. ನಾಳೆ ಇತಿಹಾಸ ಟಿಪ್ಪುವಿನ ಮಕ್ಕಳು ʻಹೇಡಿಗಳುʼ ಎನ್ನಬಾರದು, ಹಿಂದೂಗಳ ಕಥೆಯಂತೆ ನನ್ನ ಮಕ್ಕಳು ಉತ್ತರ ಕುಮಾರ ಆಗಬಾರದು.
ಬೇಗಂ: ಅರ್ಥವಿಲ್ಲದ ಮಾತುಗಳು ಕೇವಲ ಗಾಳಿಗೆ ಗುದ್ದು ಅಷ್ಟೇ, ಬನ್ನಿ.. ಮಲಗಿ, ಸಾಕಷ್ಟು ಹೊತ್ತಾಗಿದೆ. ನಾನು ನಿಮಗಾಗಿ, ಈ ರಾಜ್ಯದ ಆರೋಗ್ಯಕ್ಕಾಗಿ ಪ್ರಾರ್ಥಿಸುತ್ತೇನೆ.
ಟಿಪ್ಪು: (ವ್ಯಂಗ್ಯವಾಗಿ) ಪ್ರಾರ್ಥಿಸು! ಪ್ರಾರ್ಥಿಸು! (ಮೌನ, ಸಂಗೀತ ಕೇಳಿಸುತ್ತದೆ)
(ಬೇಗಂ ಹತ್ತಿರ ಬಂದು ಅವಳ ಕೈಹಿಡಿದು ತಲೆ ನೇವರಿಸುತ್ತಾ) ನಿನ್ನ ಆರೋಗ್ಯ ನನಗೆ ಮುಖ್ಯ ಬೇಗಂ. ನೀನು ನನ್ನ ಶಕ್ತಿ. ನನ್ನ ಪ್ರೀತಿಯ ರುಕಿಯಾ! ನಿನ್ನ ಹೃದಯ ಕೋಮಲವಾದದ್ದು, ಕಣ್ಣೀರು ಕಂಡಾಗ ಕರಗುತ್ತದೆ. ನನ್ನ ಹಿತ ಬಯಸಿಯೇ ಎಲ್ಲವನ್ನೂ ಹೇಳಿದ್ದೀಯಾ! ಆದರೆ, ಬೇಗಂ ನಾನು ತುಂಬಾ ದೂರ ಕ್ರಮಿಸಿದ್ದೇನೆ. ಮತ್ತೆ ವಾಪಸ್ಸು ಬರಲು ಸಾಧ್ಯವಿಲ್ಲ. ನನ್ನ ಕನಸಿನತ್ತ, ನಿಶ್ಚಿತ ಗುರಿಯತ್ತ ನನ್ನ ಧರ್ಮದತ್ತ, ನನ್ನ ಇಸ್ಲಾಂನತ್ತ. ಇದು ಜಿಹಾದ್!
ಬೇಗಂ: ನೋಡಿ, ಇದು ಹಿಂದೂ ಪ್ರಾಬಲ್ಯದ ರಾಜ್ಯ, ನಾಳೆ ಅವರೆಲ್ಲಾ ಒಂದಾಗಿ ದಂಗೆ ಎದ್ದರೆ ಈ ಸಿಂಹಾಸನ ಉಳಿಯುವುದಿಲ್ಲ. ಹಿಂದೂ ದೇವಸ್ಥಾನ ಹನುಮಾನ್ ದೇವಾಲಯವನ್ನೇ ಜಾಮಿಯಾ ಮಸೀದಿ ಮಾಡಿದ್ದೀರಿ! ಚಿತ್ರದುರ್ಗದ ಪಾಪದ ಜನರ ಉಚ್ಚಂಗಮ್ಮನ ಗುಡಿಯನ್ನು ಕೆಡವಿ ಮಸೀದಿ ಕಟ್ಟಿಸಿದ್ದೀರಿ. ನರಸಿಂಹಸ್ವಾಮಿ ಆಲಯದ ರಾಜಗೋಪುರ, ಶ್ರೀ ಗಂಗಾಧರೇಶ್ವರನ ಗೋಪುರ, ಮೈಸೂರು ಅರಮನೆಯ ತ್ರಿನಯನೇಶ್ವರ, ವೆಂಕಟರಮಣಸ್ವಾಮಿ ದೇವಾಲಯಗಳ ಗೋಪುರವನ್ನು ಕೆಡವಿ ಹಾಕಿದ್ದೀರಿ. ಇನ್ನು ಸಾಕು, ನನ್ನ ಕೊನೆಯ ಆಸೆ ಶ್ರೀರಂಗಪಟ್ಟಣ, ಮೇಲುಕೋಟೆ, ನಂಜನಗೂಡು ದೇವಸ್ಥಾನಗಳನ್ನು ಮುಟ್ಟೋದಿಲ್ಲ.. ಅಂತ ಭಾಷೆ ಕೊಡಿ! ಇದನ್ನೊಂದು ನಡೆಸಿಕೊಡಿ… ದಯಮಾಡಿ… (ಕೆಮ್ಮುತ್ತಾಳೆ.)
ಟಿಪ್ಪು: ಏನು ಹೇಳುತ್ತಿದ್ದೀಯಾ? ಇದೇನು ಮುಸ್ಲಿಮರ ಪ್ರಾರ್ಥನಾ ಸ್ಥಳಗಳೇ? ಕಾಫಿರರ ಮಂದಿರಗಳು, ಅರ್ಥ ಮಾಡಿಕೋ, ನನ್ನನ್ನು ಧರ್ಮಭ್ರಷ್ಟನನ್ನಾಗಿ ಮಾಡಬೇಡ!
ಬೇಗಂ: ನನ್ನ ಸಾವನ್ನು ನೀವು ನಿರೀಕ್ಷಿಸುತ್ತಿದ್ದೀರಾ? ಒಳ್ಳೆಯ ಮಾತುಗಳು ನಿಮಗೆ ಹರಾಮ್ ಆಗಿದೆ. ನಿಮ್ಮಿಷ್ಟದಂತೆ ಮಾಡಿ. ಆದರೆ ಇದನ್ನೆಲ್ಲಾ ನೋಡುವುದಕ್ಕಿಂತ ನನಗೆ ಬೇಗ ಸಾವು ಬರಲಿ! ಅಲ್ಲಾ… ಓ ಪರವಾರಧಿಕಾರ್! (ಟಿಪ್ಪು ಮೌನ)
ಟಿಪ್ಪು: ಆಯಿತು ನಿನಗಾಗಿ ಈ ಮೂರು ದೇವಾಲಯಗಳನ್ನು ಮುಟ್ಟೋದಿಲ್ಲ ಇದು ನಿನಗಾಗಿ ಮಾತ್ರ! ನಿನ್ನ ಆರೋಗ್ಯಕ್ಕಾಗಿ ಮಾತ್ರ ಆದರೆ ನನ್ನ ಕನಸಿನ ಇಸ್ಲಾಂ ರಾಜ್ಯದ ಸ್ಥಾಪನೆ ಬದಲಾಗದು!
(ಹಿನ್ನೆಲೆಯಲ್ಲಿ ಸಂಗೀತ ಕೇಳಿಸುತ್ತದೆ. ರಂಗದಲ್ಲಿ ಕತ್ತಲಾಗುತ್ತದೆ.)