ವಿಜಯಪುರ: ಮೈಸೂರು ರಂಗಾಯಣದ ನಿರ್ದೇಶಕ ಅಡ್ಡಂಡ ಸಿ. ಕಾರ್ಯಪ್ಪ ಅವರು ರಚಿಸಿರುವ ʻಟಿಪ್ಪು ನಿಜ ಕನಸುಗಳುʼ (Tippu book) ಪುಸ್ತಕದ ಮಾರಾಟ ಮತ್ತು ಹಂಚಿಕೆಯ ವಿರುದ್ಧ ಹಾಕಲಾಗಿದ್ದ ಪ್ರಕರಣವನ್ನು ವಾಪಸ್ ಪಡೆಯಲಾಗಿದೆ. ಬೆಂಗಳೂರು ಜಿಲ್ಲಾ ವಕ್ಫ್ ಮಂಡಳಿಯ ಮಾಜಿ ಅಧ್ಯಕ್ಷ ರಫಿವುಲ್ಲಾ ಬಿ.ಎಸ್. ಅವರು ಸಲ್ಲಿಸಿದ್ದ ದಾವೆಯನ್ನು ವಾಪಸ್ ಪಡೆದುಕೊಂಡಿದ್ದಾರೆ. ಹೀಗೆಂದು ಸ್ವತಃ ಅಡ್ಡಂಡ ಅವರು ತಿಳಿಸಿದ್ದಾರೆ.
ಈ ಕುರಿತು ವಿಜಯಪುರದಲ್ಲಿ ಅಡ್ಡಂಡ ಕಾರ್ಯಪ್ಪ ಪ್ರತಿಕ್ರಿಯೆ ನೀಡಿದ್ದು, ಕೇಸ್ ವಾಪಸ್ ತೆಗೆದುಕೊಂಡಿದ್ದರ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. ಇದು ನಮ್ಮ ಅಖಂಡ ಹೋರಾಟಕ್ಕೆ ಸಿಕ್ಕ ಜಯವಾಗಿದ್ದು, ಇದನ್ನು ಸಂಭ್ರಮಿಸುವೆ ಎಂದಿದ್ದಾರೆ.
ಕೇಸ್‌ನ ಆರಂಭದಲ್ಲಿ ನಮಗೆ ಹಿನ್ನಡೆ ಆಯಿತು. ಕೋರ್ಟ್‌ಗೆ ಅನೇಕ ದಾಖಲೆಗಳನ್ನು ನೀಡಲಾಗಿತ್ತು. ಜತೆಗೆ ನಮ್ಮ ಪರ ವಕೀಲರು ಸಮರ್ಥವಾಗಿ ವಾದ ಮಂಡಿಸಿದ್ದರು. ಟಿಪ್ಪು ನಾಟಕ ಸತ್ಯದಿಂದ ಕೂಡಿದೆ, ಯಾವುದನ್ನೂ ಸುಳ್ಳು ತೋರಿಸಿಲ್ಲ, ಇದಕ್ಕೆ ಸಾಕ್ಷಿಗಳಿವೆ ಎಂದಾಗ ತಡೆಯಾಜ್ಞೆ ತೆರವಾಯಿತು. ಇದೀಗ ಬುಧವಾರ ಬೆಂಗಳೂರು ಕೋರ್ಟ್‌ನಲ್ಲಿ ಕೇಸ್ ವಿಚಾರಣೆಗೆ ಬಂದಾಗ ರಫಿವುಲ್ಲಾ ಇಡೀ ಪ್ರಕರಣವನ್ನೇ ವಾಪಸ್ ತೆಗೆದುಕೊಂಡಿದ್ದಾರೆ ಎಂದು ತಿಳಿಸಿದರು.
ಈ ಹಿಂದೆ ತ್ರಿಸದಸ್ಯ ಪೀಠ ನೀಡಿದ ಆದೇಶದಲ್ಲಿ ಟಿಪ್ಪು ಸ್ವಾತಂತ್ರ್ಯ ಹೋರಾಟಗಾರನಲ್ಲ ಎಂದಿತ್ತು. ಕರ್ನಾಟಕ ಸರ್ಕಾರ ಇದನ್ನೆಲ್ಲವನ್ನೂ ಗಮನಿಸಬೇಕು. ಜತೆಗೆ ಟಿಪ್ಪು ವೃತ್ತಗಳು, ಟಿಪ್ಪು ಗಾರ್ಡನ್‌ಗಳಿಗೆ ಮರುನಾಮಕರಣ ಮಾಡಬೇಕು ಎಂದು ಅಡ್ಡಂಡ ಕಾರ್ಯಪ್ಪ ಆಗ್ರಹಿಸಿದರು.
ಏನಿದು ಪ್ರಕರಣ?
ರಂಗಾಯಣ ನಿರ್ದೇಶಕ ಅಡ್ಡಂಡ ಸಿ. ಕಾರ್ಯಪ್ಪ ರಚನೆಯ ʼಟಿಪ್ಪು ನಿಜಕನಸುಗಳುʼ ಪುಸ್ತಕ ಮಾರಾಟಕ್ಕೆ ರಫಿವುಲ್ಲಾ ಬಿ.ಎಸ್ ಎಂಬುವವರು ತಡೆ ನೀಡಬೇಕು ಎಂದು ಅರ್ಜಿ ಸಲ್ಲಿಸಿದ್ದರು. ಅದರಂತೆ 2022ರ ನವೆಂಬರ್ 21ರಂದು ಪುಸ್ತಕ ಮಾರಾಟಕ್ಕೆ ನ್ಯಾಯಾಲಯ ನಿರ್ಬಂಧ ಹೇರಿ ತಾತ್ಕಾಲಿಕ ಆದೇಶವನ್ನು ಹೊರಡಿಸಿತ್ತು.
ಇದನ್ನೂ ಓದಿ: Anganawadi Workers: ಅಂಗನವಾಡಿ ಕಾರ್ಯಕರ್ತೆಯರಿಗೆ ಗುಡ್‌ನ್ಯೂಸ್; ಹೊರಬಿತ್ತು ಗ್ರಾಚ್ಯುಟಿ ಆದೇಶ
ಬೆಂಗಳೂರಿನ 14ನೇ ಹೆಚ್ಚುವರಿ ಸಿಟಿ ಸಿವಿಲ್ ಕೋರ್ಟ್ ತಾತ್ಕಾಲಿಕ ನಿರ್ಬಂಧ ಆದೇಶವನ್ನು ರದ್ದು ಮಾಡಿತ್ತು. ಜತೆಗೆ ಮಧ್ಯಂತರ ಆದೇಶ ನೀಡಬೇಕೆಂದು ರಫಿವುಲ್ಲಾ ಸಲ್ಲಿಸಿದ್ದ ಅರ್ಜಿಯೂ ವಜಾಗೊಂಡಿತ್ತು. ಬಳಿಕ ಪುಸ್ತಕ ಮಾರಾಟಕ್ಕಿದ್ದ ತಾತ್ಕಾಲಿಕ ಆದೇಶವನ್ನು ನ್ಯಾಯಾಲಯ ರದ್ದು ಪಡಿಸಿತ್ತು, ಅರ್ಜಿಯ ಮುಂದಿನ ವಿಚಾರಣೆಯನ್ನು ಜ.24ಕ್ಕೆ ಮುಂದೂಡಲಾಗಿತ್ತು. ಇದೀಗ ದಾವೆ ಸಲ್ಲಿಸಿದ್ದ ರಫಿವುಲ್ಲಾ ವಾಪಸ್ ಪಡೆದುಕೊಂಡಿದ್ದಾರೆ.