Site icon Vistara News

Tippu Jayanti| ಈದ್ಗಾ ಮೈದಾನದಲ್ಲಿ ಟಿಪ್ಪು ಜಯಂತಿ ಯಶಸ್ವಿ, ನಾಳೆ ಕನಕ ಜಯಂತಿಗೆ ಶ್ರೀರಾಮ ಸೇನೆ ರೆಡಿ!

hubballi tippu jayanthi

ಹುಬ್ಬಳ್ಳಿ: ಸಾಕಷ್ಟು ವಿವಾದಕ್ಕೆ ಕಾರಣವಾಗಿದ್ದ ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಕೊನೆಗೂ ಟಿಪ್ಪು ಜಯಂತಿ ಆಚರಣೆ ಮಾಡಲಾಗಿದೆ. ಶ್ರೀ ರಾಮ ಸೇನೆಯ ತೀವ್ರ ವಿರೋಧದ ನಡುವೆಯೂ ಎಐಎಂಐಎಂ ಪಕ್ಷದ ಮುಖಂಡರು ಈದ್ಗಾ ಮೈದಾನದಲ್ಲಿ ಟಿಪ್ಪು ಜಯಂತಿ ಆಚರಣೆ ಮಾಡಿದ್ದಾರೆ. ಬಿಜೆಪಿ ಆಡಳಿತವಿರುವ ಪಾಲಿಕೆಯಿಂದ ಟಿಪ್ಪು ಜಯಂತಿಗೆ ಅಧಿಕೃತ ಅನುಮತಿ ದೊರೆತಿದ್ದು ಶ್ರೀ ರಾಮ ಸೇನೆಯನ್ನು ಕೆರಳಿಸಿದೆ. ಇದರ ಜತೆಗೆ ಶ್ರೀರಾಮ ಸೇನೆ ವತಿಯಿಂದ ಶುಕ್ರವಾರ ಕನಕ ಜಯಂತಿ ಆಚರಣೆಗೆ ಸಿದ್ಧತೆ ನಡೆದಿದೆ.

ಹುಬ್ಬಳ್ಳಿಯ ರಾಣಿ ಚೆನ್ನಮ್ಮ ವೃತ್ತದ ಬಳಿಯ ಈದ್ಗಾ ಮೈದಾನದಲ್ಲಿ ಟಿಪ್ಪು ಜಯಂತಿ ಆಚರಣೆಗೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಅನುಮತಿ ನೀಡಿದೆ. ಅನುಮತಿ ಕೊಟ್ಟಿರುವ ಬಗ್ಗೆ ಪಾಲಿಕೆ ಅಧಿಕೃತ ಘೋಷಣೆ ಹೊರಡಿಸುತ್ತದ್ದಂತೆ ಪರ ವಿರೋಧ ಚರ್ಚೆ ಆರಂಭವಾಗಿದ್ದವು. ಅನುಮತಿ ಕೇಳಿದ್ದ ಎಐಎಂಐಎಂ ಪಕ್ಷದ ಜಿಲ್ಲಾಧ್ಯಕ್ಷರೇ ಮೈದಾನದಲ್ಲಿ ಜಯಂತಿ ಬೇಡ ಅಂತ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದರು. ಶ್ರೀರಾಮಸೇನೆ ಮತ್ತು ವಿಪಕ್ಷ ಕಾಂಗ್ರೆಸ್ ಸಹ ಪಾಲಿಕೆ ನಿರ್ಣಯದ ವಿರುದ್ಧ ಕೆಂಡಾಮಂಡಲವಾಗಿದ್ದವು. ಹೀಗಾಗಿ ಇಂದು ಎಲ್ಲರ ಚಿತ್ತ ಈದ್ಗಾ ಮೈದಾನದತ್ತ ಇತ್ತು ನಿರೀಕ್ಷೆಯಂತೆ ಎಐಎಂಐಎಂ ಪಕ್ಷದ ಮುಖಂಡ ವಿಜಯ್ ಗುಂಟ್ರಾಳ ಮತ್ತು ಇತರೇ ಸದಸ್ಯರು ಈದ್ಗಾ ಮೈದಾನದಲ್ಲಿ ಟಿಪ್ಪು ಜಯಂತಿ ಆಚರಿಸಿದರು. ಟಿಪ್ಪು ಭಾವ ಚಿತ್ರವಿಟ್ಟು, ಪುಷ್ಪಾರ್ಪಣೆ ಮಾಡಿ, ಟಿಪ್ಪು ಪರ ಜಯಘೋಷ ಹಾಕಿದರು.

ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಎಐಎಂಐಎಂ ವತಿಯಿಂದ ಟಿಪ್ಪು ಜಯಂತಿ ಆಚರಿಸಲಾಯಿತು.

ಬಿಗಿ ಭದ್ರತೆ, ತಡೆಗೋಡೆ
ಟಿಪ್ಪು ಜಯಂತಿ ಆಚರಣೆಗೆ ಶ್ರೀರಾಮಸೇನೆ ತೀವ್ರ ವಿರೋಧ ವ್ಯಕ್ತಪಡಿಸಿದ್ದ ಹಿನ್ನೆಲೆಯಲ್ಲಿ ಬುಧವಾರ ತಡರಾತ್ರಿಯಿಂದಲೇ ಮೈದಾನಕ್ಕೆ ಪೊಲೀಸರು ಭದ್ರತೆಯನ್ನು ಒದಗಿಸಿದ್ದರು. ಗಣೇಶ ಚತುರ್ಥಿಯ ಸಮಯದಲ್ಲಿ ಕೈಗೊಂಡ ನಿಯಮದಂತೆ, ಮೈದಾನದಲ್ಲಿ ಮುಸ್ಲಿಂ ಸಮುದಾಯದವರು ಪ್ರಾರ್ಥನೆ ಸಲ್ಲಿಸಲು ಸ್ಥಳವನ್ನು ಬಿಟ್ಟು ನಡುವೆ ಪರದೆಯನ್ನು ಕಟ್ಟಲಾಗಿತ್ತು.

ಹಿಂದೂ ಸಂಘಟನೆಗಳು ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದ ಸ್ಥಳದಲ್ಲೇ ಟಿಪ್ಪು ಜಯಂತಿಗೆ ಅವಕಾಶ ನೀಡಲಾಗಿತ್ತು. ಜಯಂತಿ ಆಚರಣೆಗೂ ಮುನ್ನ ಮೈದಾನದ ಬಳಿ ಪ್ರತಿಭಟನೆ ನಡೆಸಲು ಆಗಮಿಸಿದ್ದ ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಮತ್ತು ಕಾರ್ಯಕರ್ತರನ್ನು ರಾಣಿ ಚೆನ್ನಮ್ಮ ವೃತ್ತದಲ್ಲಿ ಪೊಲೀಸರು ವಶಕ್ಕೆ ಪಡೆದರು.

ಕಾರ್ಯಕರ್ತರನ್ನು ಬಸ್‌ನಲ್ಲಿ ಸ್ಥಳಾಂತರ ಮಾಡಿದರೆ ಮುತಾಲಿಕ್ ಅವರನ್ನು ಅವರ ಕಾರಿನಲ್ಲಿಯೇ ವಶಕ್ಕೆ ಪಡೆದ ಪೊಲೀಸರು ಠಾಣೆಗೆ ಕರೆದುಕೊಂಡು ಹೋಗಿ ಬಳಿಕ ಬಿಡುಗಡೆ ಮಾಡಿದರು. ಈ ನಡುವೆ ಮಾಧ್ಯಮಗಳ ಮಾತನಾಡಿದ ಮುತಾಲಿಕ್, ಟಿಪ್ಪು ಸುಲ್ತಾನ್ ವಿರುದ್ಧ ಮತ್ತು ಜಯಂತಿ ಆಚರಣೆ ಮಾಡುತ್ತಿರುವವರ ವಿರುದ್ಧ ಹರಿಹಾಯ್ದರು. ಪಾಲಿಕೆ ಕ್ರಮ ಖಂಡಿಸಿ ಹೈಕೋರ್ಟ್‌ಗೆ ಪಿಐಎಲ್ ಸಲ್ಲಿಸುವುದಾಗಿ ಹೇಳಿದರು.

ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಬಿಗಿ ಭದ್ರತೆ

ಯಾವುದೇ ಜಯಂತಿ ಮಾಡಲು ಅವಕಾಶ ಕೊಡದಂತೆ ಮನವಿ ಮಾಡಿದ್ದ ಕಾಂಗ್ರೆಸ್ ಮುಖಂಡರು ಮೇಯರ್ ವಿರುದ್ಧ ಹರಿಹಾಯ್ದಿದ್ದಾರೆ. ಒಟ್ಟಿನಲ್ಲಿ ವಿವಾದದ ಕೇಂದ್ರ ಬಿಂದುವಾಗಿದ್ದ ಈದ್ಗಾ ಮೈದಾನದಲ್ಲಿ ಇಂದು ಟಿಪ್ಪು ಜಯಂತಿ ಮಾಡಲಾಗಿದ್ದು ನಾಳೆ ಕನಕದಾಸ ಜಯಂತಿ ಮಾಡಲು ಶ್ರೀರಾಮಸೇನೆ ಮುಂದಾಗಿದೆ.

ದ್ವಂದ್ವ ನಿಲುವಿನ ಬಗ್ಗೆ ಗೊಂದಲ
ರಾಜ್ಯ ಸರಕಾರ ಟಿಪ್ಪು ಜಯಂತಿಯನ್ನು ರದ್ದುಪಡಿಸಿದೆ. ಬಿಜೆಪಿಯೂ ಅದರ ವಿರುದ್ಧವಾಗಿದೆ. ಆದರೆ, ಹುಬ್ಬಳ್ಳಿ ಮಹಾನಗರ ಪಾಲಿಕೆ ವಿವಾದಿತ ಜಾಗದಲ್ಲಿ ಟಿಪ್ಪು ಜಯಂತಿ ಆಚರಣೆಗೆ ಅವಕಾಶ ನೀಡಿದ್ದು ಯಾಕೆ, ಬಿಜೆಪಿಯಲ್ಲೇ ಈ ರೀತಿಯ ದ್ವಂದ್ವ ನಿಲುವು ಯಾಕೆ ಎಂಬ ಪ್ರಶ್ನೆ ಈಗ ಎದುರಾಗಿದೆ.

ಇದನ್ನೂ ಓದಿ | Tippu jayanthi | ಈದ್ಗಾ ಮೈದಾನ ಪ್ರವೇಶಿಸಲು ಯತ್ನಿಸಿದ ಶ್ರೀರಾಮ ಸೇನೆ ನಾಯಕ ಮುತಾಲಿಕ್‌ಗೆ ತಡೆ


Exit mobile version