ಶಿವಮೊಗ್ಗ: ಶಿವಮೊಗ್ಗದಲ್ಲಿ ಸಾವರ್ಕರ್- ಟಿಪ್ಪು ಸಂಘರ್ಷ (ಟಿಪ್ಪು ವಿವಾದ) ತಣ್ಣಗಾಗುವಂತೆ ಕಾಣಿಸುತ್ತಿಲ್ಲ. ಯಾಕೆಂದರೆ ಅದನ್ನು ಜೀವಂತವಾಗಿಡುವ ಪ್ರಯತ್ನಗಳೇ ಮುಂದುವರಿಯುತ್ತಿವೆ. ಶಿವಮೊಗ್ಗ ಮಹಾನಗರ ಪಾಲಿಕೆಯ ಕಚೇರಿಯೊಂದರಲ್ಲಿ ಮಂಗಳವಾರ ಟಿಪ್ಪು ಫೋಟೊವನ್ನು ಅಳವಡಿಸುವ ಮೂಲಕ ಹೊಸ ವಿವಾದಕ್ಕೆ ನಾಂದಿ ಹಾಡಲಾಗಿದೆ. ಶಿವಮೊಗ್ಗ ಪಾಲಿಕೆಯ 25ನೇ ವಾರ್ಡ್ ಸದಸ್ಯೆ ಮೆಹಕ್ ಷರೀಫ್ ಅವರು ಲೆಕ್ಕಪತ್ರ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು, ಅವರ ಪದಗ್ರಹಣದ ಸಂದರ್ಭದಲ್ಲಿ ಅವರ ಕಚೇರಿಯಲ್ಲಿ ಫೋಟೊ ಅಳವಡಿಸಲಾಗಿದೆ.
ಲೆಕ್ಕಪತ್ರ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಆಯ್ಕೆಯಾದ ಮೆಹಕ್ ಅವರ ಪದಗ್ರಹಣ ಸಮಾರಂಭ ಮಂಗಳವಾರ ನಡೆಯಿತು. ಈ ವೇಳೆ ಮೆಹಕ್ ಅವರ ಪತಿ ಎಂ.ಡಿ. ಷರೀಫ್ ಮತ್ತು ಸ್ನೇಹಿತರು ಟಿಪ್ಪು ಪೋಟೊವನ್ನು ಉಡುಗೊರೆಯಾಗಿ ನೀಡಿದರು. ಅದನ್ನು ಮೆಹಕ್ ತಮ್ಮ ಕಚೇರಿಯಲ್ಲಿ ಅಳವಡಿಸಿದ್ದಾರೆ. ಇದೀಗ ಗಾಂಧೀಜಿ, ಅಂಬೇಡ್ಕರ್ ಭಾವಚಿತ್ರದ ಜತೆಗೆ ಸ್ವಲ್ಪ ದೂರದಲ್ಲಿ ಟಿಪ್ಪು ಫೋಟೊವನ್ನು ಹಾಕಿದ್ದಾರೆ.
ಯಾರು ಈ ಎಂ.ಡಿ. ಷರೀಫ್
ಕಳೆದ ಸ್ವಾತಂತ್ರ್ಯದಿನಾಚರಣೆ ಸಂದರ್ಭದಲ್ಲಿ ಶಿವಮೊಗ್ಗದ ಪ್ರತಿಷ್ಠಿತ ಶಿವಪ್ಪ ನಾಯಕ ಮಾಲ್‌ನಲ್ಲಿ ಸ್ವಾತಂತ್ರ್ಯ ವೀರರ ಫೋಟೊಗಳನ್ನು ಹಾಕಲಾಗಿತ್ತು. ಅದರಲ್ಲಿ ವಿ.ಡಿ. ಸಾವರ್ಕರ್ ಫೋಟೊ ಕೂಡಾ ಇತ್ತು. ಮುಸ್ಲಿಂ ಸಂಘಟನೆಯ ಮುಖ್ಯಸ್ಥರೂ ಆಗಿರುವ ಎಂ.ಡಿ. ಷರೀಫ್ ಅಲ್ಲಿ ಸಾವರ್ಕರ್ ಫೋಟೊ ಹಾಕಿದ್ದನ್ನು ತೀವ್ರವಾಗಿ ಖಂಡಿಸಿದ್ದ ಮತ್ತು ಗಲಾಟೆ ನಡೆಸಿದ್ದ.
ಸಾವರ್ಕರ್ ಭಾವಚಿತ್ರಕ್ಕೆ ಅವಹೇಳನ ಮಾಡಿದ್ದ ಮತ್ತು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ ಆತನ ವಿರುದ್ಧ ಪ್ರಕರಣ ದಾಖಲಾಗಿ ಜೈಲಿಗೆ ಹಾಕಲಾಗಿತ್ತು. ಅಲ್ಲಿಂದ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ಷರೀಫ್ ಈಗ ಪತ್ನಿಯ ಕಚೇರಿಯಲ್ಲಿ ಟಿಪ್ಪು ಪೋಟೊ ಅಳವಡಿಸಲು ಪ್ರೇರಣೆ ನೀಡುವ ಮೂಲಕ ಮತ್ತೊಂದು ವಿವಾದಕ್ಕೆ ಬೆಂಕಿ ಹಚ್ಚಿದ್ದಾರೆ.
ಕಳೆದ ಸ್ವಾತಂತ್ರ್ಯ ದಿನಾಚರಣೆಯಂದೇ ಶಿವಮೊಗ್ಗ ನಗರದ ಟಿಪ್ಪು ವೃತ್ತದಲ್ಲಿ ಪ್ರತಿ ಬಾರಿ ಟಿಪ್ಪು ಫ್ಲೆಕ್ಸ್ ಹಾಕುವ ಜಾಗದಲ್ಲಿ ಹಿಂದು ಕಾರ್ಯಕರ್ತರು ಸಾವರ್ಕರ್ ಫ್ಲೆಕ್ಸ್ ಹಾಕಿದ್ದರು. ಇದು ಭಾರಿ ವಿವಾದ ಮತ್ತು ಸಂಘರ್ಷಕ್ಕೆ ಕಾರಣವಾಗಿತ್ತು. ಮತ್ತು ಹಲವು ಸರಣಿ ಅನಾಹುತಗಳಿಗೆ ಕಾರಣವಾಗಿತ್ತು.