ಬೆಂಗಳೂರು: ಮಂಡ್ಯ ಪ್ರದೇಶದಲ್ಲಿ ರಾಜಕೀಯ ವಲಯದಲ್ಲಿ ಕೋಲಾಹಲ ಸೃಷ್ಟಿಸಿದ್ದ, ಬಿಜೆಪಿ- ಕಾಂಗ್ರೆಸ್ ನಡುವೆ ವಾಕ್ಸಮರಕ್ಕೆ ಕಾರಣವಾಗಿದ್ದ ʼಉರಿಗೌಡ- ನಂಜೇಗೌಡʼ ವಿಚಾರದಲ್ಲಿ ಇನ್ನೊಂದು ತಿರುವು ಎದುರಾಗಿದೆ. ಈ ಹೆಸರಿನ ಸಿನಿಮಾ ನಿರ್ಮಾಣಕ್ಕೆ ಮುಂದಾಗಿದ್ದ ಸಚಿವ ಮುನಿರತ್ನ, ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರ ಭೇಟಿಯ ಬಳಿಕ ಈ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ.
ʼʼಸಿನಿಮಾ ಮಾಡಲು ಬಹಳ ಕತೆಗಳು ಸಿಗುತ್ತವೆ. ಪ್ಯಾನ್ ಇಂಡಿಯಾ ಸಿನಿಮಾ ಮಾಡಬೇಕೆಂಬುದು ನನ್ನ ಕನಸಾಗಿತ್ತು. ಆ ಹಿನ್ನೆಲೆಯಲ್ಲಿ ನಾನು ಈ ಹೆಸರು ನೊಂದಾಯಿಸಿದ್ದೆ. ಈ ವಿಚಾರದಲ್ಲಿ ನೈಜತೆ ಇದ್ದರೆ ಮುಂದುವರಿ ಎಂದು ಸ್ವಾಮೀಜಿ ಹೇಳಿದ್ದಾರೆ. ಯಾವುದೇ ವ್ಯಕ್ತಿಯನ್ನು ನೋಯಿಸಿ ಸಿನಿಮಾ ಮಾಡುವವನು ನಾನಲ್ಲ. ಹೀಗಾಗಿ ʼಉರಿಗೌಡ- ನಂಜೇಗೌಡʼ ಸಿನಿಮಾ ಮಾಡುವುದಿಲ್ಲ. ಇದರೆ ಬಗೆಗೆ ಮಾತನಾಡುವುದಿಲ್ಲ. ಈ ಕುರಿತು ಸ್ವಾಮೀಜಿಯವರಿಗೆ ತಿಳಿಸಿದ್ದೇನೆ. ಚಿತ್ರೀಕರಣದಿಂದ ಹಿಂದೆ ಸರಿದಿದ್ದೇನೆʼʼ ಎಂದು ಮುನಿರತ್ನ ಹೇಳಿದ್ದಾರೆ.
ನಿನ್ನೆ ಹಲವು ಮಾಧ್ಯಮಗಳಲ್ಲಿ ಮುನಿರತ್ನ ಅವರು ʼಉರಿಗೌಡ-ನಂಜೇಗೌಡʼ ಚಿತ್ರದ ನಿರ್ಮಾಣದ ಕುರಿತು ಜಾಹಿರಾತು ನೀಡಿದ್ದರು. ಚಿತ್ರದ ನಿರ್ಮಾಣ ಮುನಿರತ್ನ, ಚಿತ್ರಕಥೆ ಡಾ.ಸಿ.ಎನ್. ಅಶ್ವತ್ಥ್ ನಾರಾಯಣ, ʼಆರ್. ಅಶೋಕ್ ಮತ್ತು ಸಿ.ಟಿ. ರವಿ ಅರ್ಪಿಸುವʼ ಎಂದಿತ್ತು. ನಿನ್ನೆ ಸಂಜೆ ಈ ಕುರಿತು ಪ್ರತಿಕ್ರಿಯೆ ನೀಡಿದ್ದ ಸಚಿವ ಅಶ್ವತ್ಥ್‌ನಾರಾಯಣ, ʼಸಿನಿಮಾ ಕಥೆ ನಾನು ರಚಿಸಿಲ್ಲ, ಸಿನಿಮಾಗೂ ನನಗೂ ಸಂಬಂಧ ಇಲ್ಲʼ ಎಂದಿದ್ದರು.
ಇದಾದ ಬಳಿಕ ಆದಿಚುಂಚನಗಿರಿ ಶ್ರೀ ನಿರ್ಮಲಾನಂದನಾಥ ಶ್ರೀಗಳು ಮುನಿರತ್ನ ಅವರಿಗೆ ಬುಲಾವ್ ನೀಡಿ ಕರೆಸಿದ್ದರು. ʼʼನಿಮ್ಮ ಸಿನಿಮಾ ಹುಚ್ಚಿನಿಂದಾಗಿ ಒಕ್ಕಲಿಗ ಸಮುದಾಯ ಇನ್ನೊಂದು ಧರ್ಮದ ವಿರುದ್ಧ ಇದೆ ಎಂದು ಸಂದೇಶ ರವಾನೆ ಮಾಡಬೇಡಿ. ವಿಚಾರದಲ್ಲಿ ನೈಜತೆ ಇದ್ದರೆ ಮಾತ್ರ ಮಾಡಿʼʼ ಎಂದು ಸ್ವಾಮೀಜಿ ಮುನಿರತ್ನಗೆ ಎಚ್ಚರಿಕೆ ನೀಡಿದ್ದಾರೆ. ಆ ಬಳಿಕ ಸಿನಿಮಾ ನಿರ್ಮಾಣ ಯೋಚನೆಯನ್ನು ಮುನಿರತ್ನ ಕೈಬಿಟ್ಟಿದ್ದಾರೆ.
ಈ ವಿಚಾರವನ್ನು ಬೆಳೆಸುವುದರಿಂದ ಬಿಜೆಪಿಗೆ ಮಂಡ್ಯ ಪ್ರದೇಶದಲ್ಲಿ ಹಿನ್ನಡೆ ಉಂಟಾಗಬಹುದು ಎಂಬ ಆತಂಕ ಬಿಜೆಪಿಯಲ್ಲಿ ಮೂಡಿದ್ದು, ಇದರಿಂದ ಹಿಂದೆ ಸರಿಯುವಂತೆ ಮಾಡಿದೆ ಎಂದು ವ್ಯಾಖ್ಯಾನಿಸಲಾಗಿದೆ.
ಇದನ್ನೂ ಓದಿ: Tipu Sultan: ಉರಿಗೌಡ-ನಂಜೇಗೌಡ ಸಿನಿಮಾಗೆ ಬ್ರೇಕ್?: ಅಂತರ ಕಾಯ್ದುಕೊಂಡ ಕಟೀಲ್; ಚರ್ಚಿಸಲು ಮುನಿರತ್ನಗೆ ಚುಂಚಶ್ರೀ ಆಹ್ವಾನ