Site icon Vistara News

Cauvery Water: ಕಾವೇರಿ ನೀರು ಬಿಡೋದಕ್ಕೆ ಕರ್ನಾಟಕಕ್ಕೆ ಹೇಳಿ: ಕೇಂದ್ರದ ಮೇಲೆ ತಮಿಳುನಾಡು ಸರ್ಕಾರ ಒತ್ತಡ

Doraimurugan

ಬೆಂಗಳೂರು, ಕರ್ನಾಟಕ: ತಮಿಳುನಾಡು ಜಲಸಂಪನ್ಮೂಲ ಸಚಿವ ದೊರೈಮುರುಗನ್ (Tamil Nadu Water Resources Minister Duraimurugan) ಅವರು ಕರ್ನಾಟಕದಿಂದ (Karnataka) ಕಾವೇರಿ ನದಿ ನೀರು ಬಿಡಲು (Cauvery water) ಒತ್ತಡ ಹೇರುವಂತೆ ಕೇಂದ್ರ ಸರ್ಕಾರಕ್ಕೆ (Union Jal Shakti Minister Gajendra Singh Shekhawat) ವಿನಂತಿಸಿಕೊಂಡಿದ್ದಾರೆ. ಬುಧವಾರ ದಿಲ್ಲಿಯಲ್ಲಿ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರನ್ನು ಭೇಟಿ ಮಾಡಿದ ದೂರೈಮುರುಗನ್ ಅವರು ಕಾವೇರಿ ನೀರು ಬಿಡಲು ಕರ್ನಾಟಕಕ್ಕೆ ಸೂಚಿಸುವಂತೆ ಕೇಳಿಕೊಂಡರು.

ದಿಲ್ಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ತಮಿಳುನಾಡು ಜಲಸಂಪನ್ಮೂಲ ಸಚಿವ ದೊರೈಮುರುಗನ್ ಅವರು, ಕರ್ನಾಟಕದಿಂದ ತಮಿಳುನಾಡಿಗೆ ಜೂನ್ ತಿಂಗಳಲ್ಲಿ 12.213 ಟಿಎಂಸಿ ನೀರು ಹರಿದು ಬರಬೇಕು ಎಂದು ಹೇಳಿದರು. ಆದರೆ, ಈವರೆಗೆ ಕೇವಲ ಕೇವಲ 2.993 ಟಿಎಂಸಿ ನೀರು ಬಂದಿದೆ. ಇನ್ನೂ 9.220 ಟಿಎಂಸಿ ನೀರು ಕೊರತೆಯಾಗಿದೆ. ಒಂದು ವೇಳೆ ನೀರು ಬಿಡದಿದ್ದರೆ ತಮಿಳುನಾಡಿನಲ್ಲಿ ಕಾವೇರಿ ಕಣಿವೆಯ ಬೆಳೆ ಒಣಗಲಿದೆ ಎಂದು ಅವರು ತಿಳಿಸಿದರು.

ಸುಪ್ರೀಂ ಕೋರ್ಟ್‌ನ ಐತೀರ್ಪು ಪ್ರಕಾರ ಈ ಕುರಿತು ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ ನಿರ್ಧಾರ ಕೈಗೊಳ್ಳಬೇಕಿದೆ. ತಮಿಳುನಾಡಿಗೆ ಕಾವೇರಿ ನೀರು ಬಿಡುವುದನ್ನು ಖಚಿತಪಡಿಸಿಕೊಳ್ಳಲು ಕರ್ನಾಟಕದೊಂದಿಗೆ ಸಂಪರ್ಕ ಸಾಧಿಸಲು ಪ್ರಾಧಿಕಾರವನ್ನು ಒತ್ತಾಯಿಸುವಂತೆ ಶೇಖಾವತ್ ಅವರಿಗೆ ಮನವಿ ಮಾಡಿದ್ದೇನೆ. ನೀರು ಬಿಡಲು ಪ್ರಾಧಿಕಾರದ ಗಮನಕ್ಕೆ ತರುವಂತೆ ಕೇಂದ್ರ ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಹಾಗಾಗಿ, ಈ ಬಗ್ಗೆ ಕಾದು ನೋಡೋಣ ಎಂದು ಅವರು ತಿಳಿಸಿದರು.

ಈ ಸುದ್ದಿಯನ್ನೂ ಓದಿ: Dam Level: ಜಲಾಶಯಗಳೂ ʼಬರ‌ʼಬಾದ್! ಕೃಷ್ಣೆ, ಕಾವೇರಿ, ತುಂಗಭದ್ರೆಯಲ್ಲೂ ನೀರಿಲ್ಲ; ಡ್ಯಾಂಗಳೀಗ ಖಾಲಿ!

ಕೇಂದ್ರ ಸರ್ಕಾರದ ಮೂಲಕ ಕರ್ನಾಟಕಕ್ಕೆ ಹೇಳುವ ಬದಲು, ನೀರು ಬಿಡುವಂತೆ ತಮಿಳುನಾಡಿನ ಡಿಎಂಕೆ ಸರ್ಕಾರವು ನೇರವಾಗಿ ಕರ್ನಾಟಕದ ಕಾಂಗ್ರೆಸ್‌ ಸರ್ಕಾರ ಜತೆಗೆ ಮಾತನಾಡಬಹುದಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಆ ರೀತಿಯ ಮಾತುಕತೆ ಸಾಧ್ಯವಿಲ್ಲ ಎಂದರು. ಅಲ್ಲದೇ, ಈ ಕುರಿತು ಅವರು ತಮಿಳು ಗಾದೆಯೊಂದನ್ನು ಉದಾಹರಣೆಯಾಗಿ ನೀಡಿದರು. ತಾಯಿ-ಮಗುವಿನಷ್ಟೇ ಬಂಧ ಇದ್ದರೂ ಆಹಾರ ಮತ್ತು ನೀರು ವಿಷಯಕ್ಕೆ ಬಂದಾಗ ಅಂಥ ಬಂಧವೂ ಪ್ರತ್ಯೇಕವಾಗುತ್ತದೆ. ಹಾಗಾಗಿ, ಇಂಥ ವಿಷಯಗಳನ್ನು ಕ್ರಮಬದ್ಧವಾಗಿ ನಿರ್ವಹಣೆ ಮಾಡಬೇಕು ಎಂದು ಅವರು ತಿಳಿಸಿದರು.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version