ಬೆಂಗಳೂರು: ಅಗಲಿದ ನಾಯಕ ನಟ, ಕನ್ನಡಿಗರ ಕಣ್ಮಣಿ ಪುನೀತ್ ರಾಜ್‌ಕುಮಾರ್ ಅವರ ನೆನಪಿನಲ್ಲಿ ʼಪುನೀತ ಪರ್ವʼ ಕಾರ್ಯಕ್ರಮ ಇಂದು ಅರಮನೆ ಮೈದಾನದಲ್ಲಿ ಅದ್ಧೂರಿಯಾಗಿ ನಡೆಯಲಿದೆ.
ಅಶ್ವಿನಿ ಪುನೀತ್ ರಾಜಕುಮಾರ್ ಮುಂದಾಳುತ್ವದಲ್ಲಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಅನೇಕ ಸಿನಿಮಾ ಗಣ್ಯರು ಭಾಗವಹಿಸಲಿದ್ದಾರೆ. ಪುನೀತ್ ನಟನೆಯ ಕೊನೆಯ ಸಿನಿಮಾ ʼಗಂಧದ ಗುಡಿʼ ಚಿತ್ರದ ಪ್ರೀ ರಿಲೀಸ್ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಪುನೀತ್ ಕುಟುಂಬ ಹಾಗೂ ಸಿನಿಮಾ ತಂಡ ನಿರ್ಧರಿಸಿದೆ. ಇವೆಂಟ್‌ಗೆ ರಾಜಕೀಯ ನಾಯಕರು ಸೇರಿದಂತೆ ಸಿನಿಮಾ ರಂಗದ ಖ್ಯಾತನಾಮರು ಆಗಮಿಸಲಿದ್ದಾರೆ.
ಸಂಜೆ 6.30ಕ್ಕೆ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಟಾಲಿವುಡ್, ಕಾಲಿವುಡ್ನಿಂದಲೂ ನಟ – ನಟಿಯರು ಆಗಮಿಸುತ್ತಿದ್ದಾರೆ. ಟಾಲಿವುಡ್‌ನಿಂದ ಬಾಲಯ್ಯ, ಕಾಲಿವುಡ್ ನಾಯಕ ಕಮಲ್ ಹಾಸನ್, ಸೂರ್ಯ, ಬಹುಭಾಷಾ ನಟ ಪ್ರಭುದೇವ, ರಾಣಾ ದಗ್ಗುಬಾಟಿ ಹೀಗೆ ಇನ್ನೂ ಅನೇಕರು ಈ ಪುನೀತ್ ಪರ್ವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ. ಪುನೀತ ಪರ್ವಕ್ಕೆ ಚಂದನವನದ ಖ್ಯಾತನಾಮರು ಸಹ ಸಾಕ್ಷಿಯಾಗಲಿದ್ದಾರೆ. ಕಿಚ್ಚ ಸುದೀಪ್, ಯಶ್, ಡಾರ್ಲಿಂಗ್ ಕೃಷ್ಣ, ಡಾಲಿ ಧನಂಜಯ್, ರಮ್ಯಾ ಸೇರಿದಂತೆ ಅನೇಕ ಸ್ಯಾಂಡಲ್‌ವುಡ್ ತಾರೆಯರು ಭಾಗಿಯಾಗಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಹಾಡು, ನೃತ್ಯ ಎಲ್ಲವೂ ಇರಲಿದೆ. ನಟ ಶಿವರಾಜ್ಕುಮಾರ್, ರಮ್ಯಾ ಸೇರಿದಂತೆ ಅನೇಕ ನಟ – ನಟಿಯರು ತಮ್ಮ ನೃತ್ಯದ ಮೂಲಕ ರಂಜಿಸಲಿದ್ದಾರೆ. ಗಂಧದ ಗುಡಿ ಸಾಕ್ಷ್ಯಚಿತ್ರವನ್ನು ಅಮೋಘವರ್ಷ ನಿರ್ದೇಶಿಸಿದ್ದು, ಅಕ್ಟೋಬರ್ 28ಕ್ಕೆ ಸಿನಿಮಾ ರಿಲೀಸ್ ಆಗಲಿದೆ.
ಕಾರ್ಯಕ್ರಮಕ್ಕೆ ಬಂದೋಬಸ್ತ್
ಕಾರ್ಯಕ್ರಮಕ್ಕೆ ಕೇಂದ್ರ ವಿಭಾಗ ಡಿಸಿಪಿ ನೇತೃತ್ವದಲ್ಲಿ ಬಂದೋಬಸ್ತ್ ಏರ್ಪಡಿಸಲಾಗಿದೆ. 3 ಡಿಸಿಪಿ, 14 ಎಸಿಪಿ, 60 ಇನ್ಸ್‌ಪೆಕ್ಟರ್, 180 ಪಿಎಸ್ಐ ಹಾಗೂ 1400 ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ. 20 KSRP ತುಕಡಿಗಳನ್ನು ಭದ್ರತೆಗೆ ನಿಯೋಜನೆ ಮಾಡಲಾಗಿದೆ. ಕಾರ್ಯಕ್ರಮದಲ್ಲಿ 50 ಸಾವಿರಕ್ಕಿಂತಲೂ ಅಧಿಕ ಜನ ಸೇರುವ ನಿರೀಕ್ಷೆ ಇದ್ದು, ಕಾರ್ಯಕ್ರಮಕ್ಕೆ ಬರುವ ಪ್ರತಿಯೊಬ್ಬರಿಗೂ ಪಾಸ್ ನೀಡುವಂತೆ ಆಯೋಜಕರಿಗೆ ತಿಳಿಸಲಾಗಿದೆ. ಪಾಸ್ ಇದ್ದವರಿಗೆ ಮಾತ್ರ ಅವಕಾಶ. ಪ್ರತ್ಯೇಕವಾದ ಪಾರ್ಕಿಂಗ್ ನೀಡಲಾಗಿದೆ ಎಂದು ಕೇಂದ್ರ ವಿಭಾಗ ಡಿಸಿಪಿ ಶ್ರೀನಿವಾಸ್ ಗೌಡ ಹೇಳಿದ್ದಾರೆ.
ಗುರುವಾರ ರಾತ್ರಿ ಪ್ಯಾಲೇಸ್ ಗ್ರೌಂಡ್‌ನಲ್ಲಿ ನಡೆಯಲಿರುವ ಕಾರ್ಯಕ್ರಮದ ಸಿದ್ಧತೆಗಳನ್ನು ವಿನಯ್ ರಾಜ್‌ಕುಮಾರ್, ಪುನೀತ್ ಕಿರಿಯ ಪುತ್ರಿ ಆಗಮಿಸಿ ಪರೀಕ್ಷಿಸಿದರು.
ಇದನ್ನೂ ಓದಿ | ಪುನೀತ್ ರಾಜಕುಮಾರ್‌ಗೂ ಮುನ್ನ ಕರ್ನಾಟಕ ರತ್ನ ಪ್ರಶಸ್ತಿ ಪಡೆದವರಾರು? ಇಲ್ಲಿದೆ ವಿವರ