Site icon Vistara News

ಪಂಚಮಸಾಲಿ ಮೀಸಲಾತಿ | ಡೆಡ್‌ಲೈನ್‌ ಇಂದು ಮುಕ್ತಾಯ, ಏನು ಮಾಡ್ತಾರೆ ಸಿಎಂ?

panchamasali

ಬೆಳಗಾವಿ: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡುವ ಕುರಿತು ನಿರ್ಧಾರ ತೆಗೆದುಕೊಳ್ಳಲು ಸಮುದಾಯ ನೀಡಿರುವ ಡೆಡ್‌ಲೈನ್ ಇಂದು ಮುಕ್ತಾಯಗೊಳ್ಳುತ್ತಿದ್ದು, ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಏನು ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂಬತ್ತ ಕುತೂಹಲ ಮೂಡಿದೆ.

ಇಂದು ನಡೆಯುವ ಸಚಿವ ಸಂಪುಟ ಸಭೆಯಲ್ಲಿ ‌ಚರ್ಚೆ ಬಳಿಕ ಮೀಸಲಾತಿ ಬಗ್ಗೆ ಸಿಎಂ ತೀರ್ಮಾನ ‌ಪ್ರಕಟಿಸುವ ಸಾಧ್ಯತೆ ಇದೆ. ಬೆಳಗಾವಿಯ ಸುವರ್ಣಸೌಧದಲ್ಲಿ ಸಂಜೆ ಐದಕ್ಕೆ ಸಚಿವ ಸಂಪುಟ ‌ಸಭೆ ನಿಗದಿಯಾಗಿದೆ. ಡಿಸೆಂಬರ್ 29ಕ್ಕೆ 2ಎ ಮೀಸಲಾತಿ ಘೋಷಿಸುವ ಭರವಸೆಯನ್ನು ಸಿಎಂ ನೀಡಿದ್ದರು.

ಡಿ.‌22ರಂದು ಪಂಚಮಸಾಲಿ ಸಮಾಜದಿಂದ ಪಂಚಲಕ್ಷ ವಿರಾಟ್‌ ಸಮಾವೇಶ ನಡೆದಿತ್ತು. ಸಮಾವೇಶದಲ್ಲಿ 2 ಲಕ್ಷಕ್ಕಿಂತ ಅಧಿಕ ಪಂಚಮಸಾಲಿ ‌ಸಮುದಾಯದವರು ಪಾಲ್ಗೊಂಡಿದ್ದರು. ಅಂದು ಪಂಚಮಸಾಲಿ ‌ಶಾಸಕರ ನಿಯೋಗಕ್ಕೆ ಸಿಎಂ ಭರವಸೆ ನೀಡಿದ್ದ ಹಿನ್ನೆಲೆಯಲ್ಲಿ ಸುವರ್ಣಸೌಧ ಮುತ್ತಿಗೆ ನಿರ್ಧಾರದಿಂದ ಸಮುದಾಯ ಹಿಂದೆ ಸರಿದಿತ್ತು.

ಇದನ್ನೂ ಓದಿ | ವಿಸ್ತಾರ TOP 10 NEWS | ಕೋವಿಡ್‌ ಮುಂಜಾಗ್ರತೆಯಿಂದ ಪಂಚಮಸಾಲಿ ಮೀಸಲು ಮುಂದೂಡಿಕೆವರೆಗಿನ ಪ್ರಮುಖ ಸುದ್ದಿಗಳಿವು

ಬೆಳಗಾವಿಯ ಗಾಂಧಿಭವನದಲ್ಲಿ ಪಂಚಮಸಾಲಿ ‌ಸಮಾಜದ ನಾಯಕರಿಂದ ಇಂದು ಸಂಜೆ 5ಕ್ಕೆ ಸಭೆ ನಡೆಯಲಿದೆ.

ಕೂಡಲಸಂಗಮ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಶಾಸಕರಾದ ಬಸವನಗೌಡ ಪಾಟೀಲ ಯತ್ನಾಳ, ಲಕ್ಷ್ಮಿ ಹೆಬ್ಬಾಳ್ಕರ್, ಅರವಿಂದ ಬೆಲ್ಲದ, ಮಹಾಂತೇಶ ‌ದೊಡ್ಡಗೌಡರ, ಮಾಜಿ ಶಾಸಕರಾದ ಎ.ಬಿ ಪಾಟೀಲ, ವಿಜಯಾನಂದ ಕಾಶಪ್ಪನವರ ಸೇರಿ ಹಲವು ಪಂಚಮಸಾಲಿ ನಾಯಕರು ಭಾಗಿಯಾಗುವ ಸಾಧ್ಯತೆಯಿದೆ. ಸಿಎಂ ತೆಗೆದುಕೊಳ್ಳುವ ನಿರ್ಧಾರದ ಮೇಲೆ ಮುಂದಿನ ನಡೆಯ ಬಗ್ಗೆ ಚರ್ಚೆ ನಡೆಯಲಿದೆ.

ಹಿಂದುಳಿದ ವರ್ಗಗಳ ವರದಿ

ಪಂಚಮಸಾಲಿ ಮೀಸಲು ಸಂಬಂಧ ಹಿಂದುಳಿದ ವರ್ಗಗಳ ಆಯೋಗದ ವರದಿಯನ್ನು ಸಿಎಂ ಅವಲಂಬಿಸಲಿದ್ದು, ಡಿಸೆಂಬರ್ 22ರಂದೇ ಹಿಂದುಳಿದ ವರ್ಗಗಳ ಆಯೋಗದ ವರದಿ ಮುಖ್ಯಮಂತ್ರಿ ಕೈ ಸೇರಿದೆ. ಆಯೋಗದ ‌ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಅವರಿಂದ ಸರ್ಕಾರಕ್ಕೆ ಮಧ್ಯಂತರ ವರದಿ ಸಲ್ಲಿಕೆಯಾಗಿದೆ. ಮುಚ್ಚಿದ ಲಕೋಟೆಯಲ್ಲಿ ಮಧ್ಯಂತರ ವರದಿ ಸಲ್ಲಿಸಲಾಗಿದ್ದು, ವರದಿ ಬಗ್ಗೆ ಕಾನೂನು ಸಚಿವರ, ಕಾನೂನು ತಜ್ಞರ ಜೊತೆಗೆ ಸಮಾಲೋಚನೆ ‌ನಡೆಸುವುದಾಗಿ ಸಿಎಮ ಹೇಳಿದ್ದರು. ಕಾನೂನು ಸಲಹೆ ಬಂದಿದ್ದರೆ ಇಂದು ಸಚಿವ ಸಂಪುಟ ಸಭೆಯಲ್ಲಿ ಆ ಬಗ್ಗೆ ಚರ್ಚೆ ನಡೆಯಲಿದೆ. ಇಲ್ಲದಿದ್ದರೆ ಇನ್ನೂ ಕೆಲ ದಿನಗಳ ಸಮಯಾವಕಾಶ ಕೋರಬೇಕಾದ ಅನಿವಾರ್ಯತೆ ಇದೆ.

ಇದನ್ನೂ ಓದಿ | ಪಂಚಮಸಾಲಿ ಮೀಸಲಾತಿ | ಬೀಸೋ ದೊಣ್ಣೆಯಿಂದ 7 ದಿನ ತಪ್ಪಿಸಿಕೊಂಡ ಬೊಮ್ಮಾಯಿ ಸರ್ಕಾರ; ತಾಯಿ ಮೇಲೆ ಆಣೆ ಮಾಡಿದ್ದಾರೆ ಎಂದ ಯತ್ನಾಳ್‌

Exit mobile version