Site icon Vistara News

Zero Shadow Day: ಇಂದು ಬೆಂಗಳೂರಿನಲ್ಲಿ ʼಶೂನ್ಯ ನೆರಳಿನ ದಿನʼ! ಏನಿದು ವಿಶಿಷ್ಟ ವಿದ್ಯಮಾನ?

Zero Shadow Day

ಬೆಂಗಳೂರು: ಏಪ್ರಿಲ್ 25, ಮಂಗಳವಾರ ಬೆಂಗಳೂರು ಒಂದು ವಿಶಿಷ್ಟವಾದ ಆಕಾಶ ಸಂಬಂಧಿತ ಘಟನೆಗೆ ಸಾಕ್ಷಿಯಾಗಲಿದೆ. ಇಂದು ಮಧ್ಯಾಹ್ನ ಒಂದು ನಿಮಿಷದ ಮಟ್ಟಿಗೆ ಇಲ್ಲಿನ ಯಾವುದೇ ಲಂಬ ವಸ್ತುವೂ ನೆರಳನ್ನು ಹೊಂದಿರುವುದಿಲ್ಲ!

ಇದನ್ನು ʼಶೂನ್ಯ ನೆರಳಿನ ದಿನʼ (Zero Shadow Day) ಎಂದು ಕರೆಯುತ್ತಾರೆ.

ಈ ವಿದ್ಯಮಾನ ಮಧ್ಯಾಹ್ನ 12:17ಕ್ಕೆ ನಡೆಯಲಿದೆ. ಬೆಂಗಳೂರಿನ ಕೋರಮಂಗಲದಲ್ಲಿರುವ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಆಸ್ಟ್ರೋಫಿಸಿಕ್ಸ್ (IIA) ಈ ಸಂದರ್ಭಕ್ಕಾಗಿ ತನ್ನ ಕ್ಯಾಂಪಸ್‌ನಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಿದೆ. ಬೆಂಗಳೂರಿನ ಬಹಳಷ್ಟು ಮಂದಿ ಬಾಹ್ಯಾಕಾಶ ಪ್ರೇಮಿಗಳು ಈ ಇವೆಂಟ್‌ಗೆ ತಯಾರಾಗುತ್ತಿರುವ ಫೋಟೋಗಳನ್ನು ಟ್ವೀಟ್ ಮಾಡಿದ್ದಾರೆ.

ಏನಾಗಲಿದೆ ಈ ಶೂನ್ಯ ನೆರಳಿನ ದಿನದಂದು?

ಆಸ್ಟ್ರೋನಾಮಿಕಲ್ ಸೊಸೈಟಿ ಆಫ್ ಇಂಡಿಯಾ (ASI) ಪ್ರಕಾರ, ಸೂರ್ಯನು ಮಧ್ಯಾಹ್ನ ನಡು ನೆತ್ತಿಯ ಮೇಲಿರುವಾಗ ಲಂಬವಾಗಿರುವ ವಸ್ತುವಿಗೆ ಸ್ವಲ್ಪಮಾತ್ರವಾದರೂ ನೆರಳು ಇದ್ದೇ ಇರುತ್ತದೆ. ಆದರೆ ಇಂದು ಅಂಥ ಯಾವುದೇ ನೆರಳು ಇರುವುದಿಲ್ಲ. ಉಷ್ಣವಲಯದ ಸ್ಥಳಗಳಲ್ಲಿ (ಕರ್ಕಾಟಕ ಸಂಕ್ರಾಂತಿ ಮತ್ತು ಮಕರ ಸಂಕ್ರಾಂತಿಯ ನಡುವೆ) ವರ್ಷಕ್ಕೆ ಎರಡು ಬಾರಿ ಶೂನ್ಯ ನೆರಳು ದಿನ ಸಂಭವಿಸುತ್ತದೆ ಎಂದು ASI ಹೇಳಿದೆ.

ಇದನ್ನು ಸಾಮಾನ್ಯವಾಗಿ ಪರೀಕ್ಷಿಸುವವರು ಲಂಬವಾದ ಒಂದು ಕಂಬ, ಪಿವಿಸಿ ಪೈಪ್‌, ಸನ್ನೆಗೋಲು ಮುಂತಾದವುಗಳನ್ನು ಬಿಸಿಲಿನಲ್ಲಿ ನೆಟ್ಟಗೆ ನೆಟ್ಟು ಪರೀಕ್ಷಿಸುತ್ತಾರೆ. ನೀವೂ ಪರೀಕ್ಷಿಸಿ ನೋಡಬಹುದು.

ಏಕೆ ಸಂಭವಿಸುತ್ತದೆ?

ಸೂರ್ಯನ ಸುತ್ತ ಭೂಮಿಯ ಪರಿಭ್ರಮಣೆಯ ಅಕ್ಷವು ತನ್ನ ಸಮತಲದಿಂದ 23.5 ಡಿಗ್ರಿಗಳಷ್ಟು ಬಾಗಿದೆ. ಇದರಿಂದ ವಿವಿಧ ಋತುಗಳು ಸಂಭವಿಸುತ್ತವೆ. ಇದರಿಂದಾಗಿ ಸೂರ್ಯನು ದಿನದ ಅತ್ಯುನ್ನತ ಬಿಂದುವಿನಲ್ಲಿರುವಾಗ, ಉತ್ತರಾಯಣದಲ್ಲಿ ಆಕಾಶ ಸಮಭಾಜಕದ ದಕ್ಷಿಣದ 23.5 ಡಿಗ್ರಿಗಳಿಂದ ಸಮಭಾಜಕದ ಉತ್ತರಕ್ಕೆ 23.5 ಡಿಗ್ರಿಗಳಿಗೆ ಚಲಿಸುತ್ತಾನೆ ಮತ್ತು ದಕ್ಷಿಣಾಯನದಲ್ಲಿ ಇದರ ವಿರುದ್ಧಕ್ಕೆ ಚಲಿಸುತ್ತಾನೆ.

ಈ ಪರಿಭ್ರಮಣ ಚಲನೆಯಿಂದಾಗಿ, ಒಂದು ಶೂನ್ಯ ನೆರಳು ದಿನವು ಉತ್ತರಾಯಣದಲ್ಲಿ (ಸೂರ್ಯ ಉತ್ತರದ ಕಡೆಗೆ ಚಲಿಸುವಾಗ) ಬರುತ್ತದೆ ಮತ್ತು ಇನ್ನೊಂದು ದಕ್ಷಿಣಾಯನದಲ್ಲಿ (ಸೂರ್ಯನು ದಕ್ಷಿಣಕ್ಕೆ ಚಲಿಸುವಾಗ) ಬರುತ್ತದೆ. 23.5 ಡಿಗ್ರಿ ಉತ್ತರ ಮತ್ತು 23.5 ಡಿಗ್ರಿ ದಕ್ಷಿಣ ಅಕ್ಷಾಂಶಗಳ ನಡುವೆ ವಾಸಿಸುವ ಜನರಿಗೆ, ಸೂರ್ಯನ ಅವನತಿಯು ಅವರ ಅಕ್ಷಾಂಶಕ್ಕೆ ಎರಡು ಬಾರಿ ಸಮನಾಗಿರುತ್ತದೆ.

ಎಷ್ಟು ಹೊತ್ತು ಇರುತ್ತದೆ?

ನಿಜವಾಗಿಯೂ ಶೂನ್ಯ ನೆರಳಿನ ಪ್ರಕ್ರಿಯೆ ಸಂಭವಿಸುವುದು ಕೆಲವೇ ಸೆಕೆಂಡ್‌ ಮಾತ್ರ. ಆದರೆ ಸುಮಾರು ಒಂದೂವರೆ ನಿಮಿಷ ಕಾಲ ಇದರ ಪರಿಣಾಮ ನೋಡಬಹುದು. 2021ರಲ್ಲಿ ಒಡಿಶಾದ ಭುವನೇಶ್ವರದಲ್ಲಿ ಈ ಪ್ರಕ್ರಿಯೆ ಸಂಭವಿಸಿತ್ತು.

Exit mobile version