Site icon Vistara News

Toilet Facility | ಮಂಡ್ಯದ ಬಸರಾಳು ಸರ್ಕಾರಿ ಶಾಲೆಯಲ್ಲಿ ಇಲ್ಲ ಶೌಚಾಲಯ; ವಿದ್ಯಾರ್ಥಿಗಳಿಗೆ ಬಯಲು ಬಹಿರ್ದೆಸೆಯೇ ಗತಿ

ಮಂಡ್ಯ: ಇಲ್ಲಿನ ಬಸರಾಳು ಗ್ರಾಮದಲ್ಲಿರುವ ಕರ್ನಾಟಕ ಸರ್ಕಾರಿ ಪಬ್ಲಿಕ್ ಶಾಲೆಯ ಅವ್ಯವಸ್ಥೆಗೆ ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ. ಶಾಲೆಯಲ್ಲಿ ಸರಿಯಾದ ಮೂಲಭೂತ ಸೌಲಭ್ಯಗಳು ಇಲ್ಲದೆ ವಿದ್ಯಾರ್ಥಿಗಳು ಕಂಗಾಲಾಗಿದ್ದಾರೆ. ಶಾಲೆಯಲ್ಲಿ ಸರಿಯಾದ ಶೌಚಾಲಯವಿಲ್ಲದ ಕಾರಣ ಬಯಲು ಬಹಿರ್ದೆಸೆಯೇ (Toilet Facility) ಗತಿಯಾಗಿದೆ.

ಮನುಷ್ಯ ವಿಸರ್ಜಿಸುವ ಮಲದಿಂದ ಸಾವು ತರಬಹುದಾದ ಅನೇಕ ಕಾಯಿಲೆಗಳನ್ನು ಹರಡುತ್ತದೆ. ಹೀಗಾಗಿ ಭಾರತ ಸೇರಿದಂತೆ ವಿಶ್ವದ ಹಲವು ದೇಶಗಳು ನೈರ್ಮಲ್ಯಕ್ಕೆ ಹೆಚ್ಚು ಆದ್ಯತೆ ನೀಡುತ್ತಿವೆ. ಆರೋಗ್ಯವಂತ ಮತ್ತು ಆರ್ಥಿಕ ಸದೃಢ ಸಮಾಜ ನಿರ್ಮಾಣದಲ್ಲಿ ಮನೆಗೊಂದು ಶೌಚಾಲಯ ಎಂಬ ಧ್ಯೇಯ ಅತೀ ಮುಖ್ಯ ಪಾತ್ರ ವಹಿಸುತ್ತಿದೆ.

ಸ್ವಚ್ಛ ಭಾರತ ಅಭಿಯಾನದಡಿ ಶೌಚಾಲಯದ ಬಳಕೆ ಬಗ್ಗೆ ಜಾಗೃತಿ ಮೂಡಿಸುವುದಲ್ಲದೆ, ಶೌಚಾಲಯ ನಿರ್ಮಿಸಿಕೊಳ್ಳಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪ್ರೋತ್ಸಾಹಧನವನ್ನು ನೀಡಿ, ಎಲ್ಲರಿಗೂ ಶೌಚಾಲಯ ಒದಗಿಸುವಲ್ಲಿ ಪ್ರಮುಖ ಪಾತ್ರವಹಿಸಿವೆ. ಹೀಗಿರುವಾಗ ಮೂಲ ಸೌಕರ್ಯ ಇರಬೇಕಾದ ಶಾಲೆಯಲ್ಲಿ ಶೌಚಾಲಯಕ್ಕೂ ವಿದ್ಯಾರ್ಥಿಗಳು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಶಾಲೆಯಲ್ಲಿ ಶೌಚಾಲಯವಿಲ್ಲದೆ ಹೆಣ್ಣು ಮಕ್ಕಳ ಸ್ಥಿತಿ ಆ ದೇವರಿಗೆ ಪ್ರೀತಿ. ಒಬ್ಬರಿಗೊಬ್ಬರು ಮರೆ ಮಾಡಿಕೊಂಡು ಬಯಲಿನಲ್ಲಿ ಶೌಚಾಲಯಕ್ಕೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಮಕ್ಕಳ ದುಸ್ಥಿತಿಗೆ ಪೋಷಕರ ಆಕ್ರೋಶ ಹೊರಹಾಕಿದ್ದಾರೆ. ಮಂಡ್ಯ ಶಾಸಕರೇ ಎಸ್‌ಡಿಎಂಸಿ ಅಧ್ಯಕ್ಷರಾಗಿದ್ದು, ಶಾಲೆಯ ಅಭಿವೃದ್ಧಿ ಬಗ್ಗೆ ಗಮನಹರಿಸದೇ ಇರುವುದಕ್ಕೆ ಪೋಷಕರು ಅಸಮಾಧಾನ ಹೊರಹಾಕಿದ್ದಾರೆ.

ಹುಳು ಮಿಶ್ರಿತ ಬಿಸಿಯೂಟ

ಶೌಚಾಲಯ ಸಮಸ್ಯೆ ಮಾತ್ರವಲ್ಲದೇ ಕಳೆದ 3 ತಿಂಗಳಿನಿಂದ 500ಕ್ಕೂ ಹೆಚ್ಚು ಮಕ್ಕಳಿಗೆ ಪ್ರತಿನಿತ್ಯ ಹುಳು ಮಿಶ್ರಿತ ಆಹಾರ ನೀಡಲಾಗುತ್ತಿರುವ ಆರೋಪವು ಕೇಳಿ ಬಂದಿದೆ. ಮಧ್ಯಾಹ್ನದ ಬಿಸಿಯೂಟದಲ್ಲಿ ಹುಳು‌‌ ಇರುವ ಅಕ್ಕಿ ಕಾಳನ್ನೇ ಬೇಯಿಸಿ‌ ಮಕ್ಕಳಿಗೆ ಊಟ ನೀಡಲಾಗುತ್ತಿದೆ. ಮಕ್ಕಳ ಆರೋಗ್ಯವನ್ನು ಲೆಕ್ಕಿಸದೆ ಹುಳುಹಿಡಿದ ಮಿಶ್ರಿತ ಆಹಾರವನ್ನೇ ಶಾಲೆಯ ಸಿಬ್ಬಂದಿಗಳು ನೀಡುತ್ತಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ | ಶಿಕ್ಷಣ ಸಚಿವರ ತವರು ಜಿಲ್ಲೆಯ ಶಾಲೆಯಲ್ಲೇ ಶೌಚಾಲಯವಿಲ್ಲ, ಅಧಿಕಾರಿಗಳು ಮಾತು ಕೇಳ್ತಿಲ್ಲ!

Exit mobile version