Site icon Vistara News

Bangalore-Mysore Expressway: ಮಂಗಳವಾರದಿಂದ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಟೋಲ್‌ ಸಂಗ್ರಹ ಆರಂಭ

Toll collection on Bengaluru-Mysuru highway to begin from March 14

ರಾಮನಗರ: ಬೆಂಗಳೂರು- ಮೈಸೂರು ಎಕ್ಸ್‌ಪ್ರೆಸ್‌ ವೇ (Bangalore-Mysore Expressway) ಉದ್ಘಾಟನೆಗೂ ಮೊದಲು ವಿವಿಧ ಕಾರಣಗಳಿಂದಾಗಿ ಸ್ಥಗಿತಗೊಂಡಿದ್ದ ಸುಂಕ ವಸೂಲಾತಿ ಪ್ರಕ್ರಿಯೆ ಮಾರ್ಚ್‌ 14ರಂದು ಬೆಳಗ್ಗೆ 8 ಗಂಟೆಯಿಂದ ಆರಂಭವಾಗಲಿದೆ. ಈ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಮಾಹಿತಿ ನೀಡಿದೆ.

ಈ ಹಿಂದೆ ಸುಂಕ ವಸೂಲಾತಿಗೆ ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಪ್ರಕಟಣೆ ಹೊರಡಿಸಿತ್ತು. ಆದರೆ, ಉದ್ಘಾಟನೆಗೂ ಮುನ್ನಾ ಸುಂಕ ವಸೂಲಾತಿಗೆ ಸಾರ್ವಜನಿಕ ವಲಯದಲ್ಲಿ ಆಕ್ಷೇಪ ಕೇಳಿಬಂದಿದ್ದರಿಂದ ಟೋಲ್‌ ವಸೂಲಿ ನಿಲ್ಲಿಸಲಾಗಿತ್ತು. ಇದೀಗ ಮತ್ತೆ ಟೋಲ್‌ ಕೆಂದ್ರಗಳ ಕಾರ್ಯಾರಂಭ ಮಾಡಲು ಹೆದ್ದಾರಿ ಪ್ರಾಧಿಕಾರ ನಿರ್ಧಾರ ಕೈಗೊಂಡಿದೆ.

ಇದನ್ನೂ ಓದಿ | Farmers Suicide: 10 ವರ್ಷದಲ್ಲಿ 7,398 ರೈತರ ಆತ್ಮಹತ್ಯೆ; ದಿನಕ್ಕಿಬ್ಬರ ಸಾವು: ಮೂರೂ ಪಕ್ಷದ ಅವಧಿಯಲ್ಲಿ ನೀಗಲಿಲ್ಲ ಅನ್ನದಾತನ ಬವಣೆ

ವಿವಿಧ ಬಗೆಯ ವಾಹನಗಳಿಗೆ ಪ್ರತ್ಯೇಕ ದರ ನಿಗದಿ ಮಾಡಲಾಗಿದೆ. ಇತ್ತ ಸರ್ವೀಸ್ ರಸ್ತೆ ಪೂರ್ಣಗೊಳ್ಳದೇ ಟೋಲ್ ವಸೂಲಿಗೆ ಆರಂಭಿಸಿರುವುದಕ್ಕೆ ಬಿಡದಿ ಬ್ಲಾಕ್ ಕಾಂಗ್ರೆಸ್ ಪ್ರತಿಭಟನೆ ಎಚ್ಚರಿಕೆ ನೀಡಿದೆ. ಹೀಗಾಗಿ ಮಂಗಳವಾರ ಬೆಳಗ್ಗೆ ಪೊಲೀಸ್ ಭದ್ರತೆಯಲ್ಲಿ ಹೆದ್ದಾರಿ ಪ್ರಾಧಿಕಾರ ಟೋಲ್ ಕೇಂದ್ರಗಳನ್ನು ಆರಂಭಿಸಲಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಕಾನೂನು ಸುವ್ಯವಸ್ಥೆ ಕಾಪಾಡಲು ರಾಮನಗರ ಜಿಲ್ಲಾಧಿಕಾರಿ ಹಾಗೂ ಎಸ್ಪಿಗೆ ಹೆದ್ದಾರಿ ಯೋಜನಾ ನಿರ್ದೇಶಕ ಬಿ.ಟಿ ಶ್ರೀಧರ್ ಮನವಿ ಮಾಡಿದ್ದಾರೆ.

ಫೆ.27ರಂದು ಎನ್‌ಎಚ್ಎಐ ಪ್ರಕಟಿಸಿದ್ದ ಹೆದ್ದಾರಿ ಟೋಲ್‌ ದರ ವಿವರ

ಫೆ.28ರ ಬೆಳಗ್ಗೆ 8 ಗಂಟೆಯಿಂದ ಮೊದಲ ಹಂತದ ಟೋಲ್‌ ಕೇಂದ್ರಗಳು ಕಾರ್ಯಾರಂಭ ಮಾಡಲಾಗುತ್ತದೆ ಎಂದು ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಹೆದ್ದಾರಿ ಉದ್ಘಾಟನೆಗೂ ಮೊದಲು ಪ್ರಕಟಣೆ ಹೊರಡಿಸಿತ್ತು. ಆದರೆ, ಹೆದ್ದಾರಿ ಕಾಮಗಾರಿ ಪೂರ್ಣವಾಗದೆ ಟೋಲ್‌ ಕೇಂದ್ರಗಳ ಆರಂಭ ಹಾಗೂ ದುಬಾರಿ ಸುಂಕ ವಸೂಲಾತಿಗೆ ಸಾರ್ವಜನಿಕ ವಲಯದಿಂದ ಆಕ್ಷೇಪ ವ್ಯಕ್ತವಾದ ಹಿನ್ನೆಲೆಯಲ್ಲಿ ಸುಂಕ ವಸೂಲಾತಿಯನ್ನು ಮುಂದೂಡಲಾಗಿತ್ತು. ಮಾರ್ಚ್‌ 12ರಂದು ಪ್ರಧಾನಿ ಮೋದಿ ಅವರು ಹೆದ್ದಾರಿಯನ್ನು ಉದ್ಘಾಟನೆ ಮಾಡಿದ ಹಿನ್ನೆಲೆಯಲ್ಲಿ ಸುಂಕು ವಸೂಲಾತಿಯನ್ನು ಅಧಿಕೃತವಾಗಿ ಪ್ರಾರಂಭಿಸಲು ಹೆದ್ದಾರಿ ಪ್ರಾಧಿಕಾರ ಮುಂದಾಗಿದೆ.

ಸುಮಾರು 8000 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ವೇ (Bangalore–Mysore Expressway) ಮೊದಲ ಹಂತದ ಕಾಮಗಾರಿ ಮುಕ್ತಾಯವಾಗಿದೆ. ಈ ಹಿನ್ನೆಲೆಯಲ್ಲಿ‌ ಟೋಲ್‌ ಸಂಗ್ರಹ ಆರಂಭ ಮಾಡಲಾಗುತ್ತಿದೆ. ಆರು ಪಥಗಳ ಎಕ್ಸ್‌ಪ್ರೆಸ್ ವೇನಲ್ಲಿ ಸಂಚರಿಸುವವರಿಗೆ ಮಾತ್ರ ಟೋಲ್ ಅನ್ವಯ ಆಗಲಿದ್ದು, ಸರ್ವಿಸ್ ರಸ್ತೆಯಲ್ಲಿ ಸಂಚಾರಕ್ಕೆ ಯಾವುದೇ ಟೋಲ್ ಇರುವುದಿಲ್ಲ. ವಿವಿಧ ಮಾದರಿಯ ವಾಹನಗಳಿಗೆ ಪ್ರತ್ಯೇಕ ದರ ನಿಗದಿ ಮಾಡಲಾಗಿದ್ದು, ನಿಯಮಿತವಾಗಿ ಪ್ರಯಾಣಿಸುವವರಿಗೆ ತಿಂಗಳ ಪಾಸ್ ಸೌಲಭ್ಯವೂ ಇದೆ.

ಇದನ್ನೂ ಓದಿ | Mandya Politics: ಮೋದಿ ಆಗಮನದ ಬೆನ್ನಲ್ಲೇ ಎಚ್ಚೆತ್ತ ಜೆಡಿಎಸ್‌: ಸ್ವತಃ ಎಚ್‌.ಡಿ. ದೇವೇಗೌಡರಿಂದ ಸಭೆ

ಬೆಂಗಳೂರಿನಿಂದ ಮೈಸೂರು ಕಡೆಗೆ ಹೋಗುವವರಿಂದ ಟೋಲ್‌ ಸಂಗ್ರಹಕ್ಕೆ ಬೆಂಗಳೂರು ನಗರ ಜಿಲ್ಲೆಯ ಕಣಮಿಣಕಿ ಗ್ರಾಮದ ಬಳಿ ಟೋಲ್ ಕೇಂದ್ರ ನಿರ್ಮಾಣವಾಗಿದೆ. ಇನ್ನು ಮೈಸೂರು ಕಡೆಯಿಂದ ಪ್ರಯಾಣಿಸುವವರಿಗಾಗಿ ರಾಮನಗರ ತಾಲೂಕಿನ ಶೇಷಗಿರಿಹಳ್ಳಿ ಬಳಿ ಟೋಲ್‌ ಪ್ಲಾಜಾ ನಿರ್ಮಾಣವಾಗಿದೆ. ಈ ಕೇಂದ್ರಗಳು ತಲಾ 11 ಗೇಟ್‌ಗಳನ್ನು ಒಳಗೊಂಡಿವೆ.

Exit mobile version