ಮಂಗಳೂರು: ಕಳೆದ ಹಲವು ವರ್ಷಗಳಿಂದ ಭಾರೀ ವಿವಾದದ ಕೇಂದ್ರ ಬಿಂದುವಾಗಿದ್ದ ಮಂಗಳೂರಿನ ಸುರತ್ಕಲ್ ಟೋಲ್ ಗೇಟನ್ನು ಕಿತ್ತೆಸೆಯಲು ಮುಂದಾಗಿರುವ ಪ್ರತಿಭಟನಾಕಾರರನ್ನು ತಡೆಯಲು ಹರಸಾಹಸ ಪಡುತ್ತಿದ್ದಾರೆ. ಭಾರಿ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಿದ್ದರೂ ಲೆಕ್ಕಿಸದೆ ಪ್ರತಿಭಟನಾಕಾರರು ಮುಂದಾಗಿದ್ದು, ಪೊಲೀಸರು ಲಾಠಿಚಾರ್ಜ್ ಮೂಲಕ ಚದುರಿಸಲು ಯತ್ನಿಸಿದ್ದಾರೆ. ಈ ಘಟನೆಯಲ್ಲಿ ಹಲವು ಮಂದಿಗೆ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಒಂದು ಟೋಲ್‌ಗೇಟ್‌ನಿಂದ ಇನ್ನೊಂದು ಟೋಲ್‌ಗೇಟ್‌ಗೆ ೬೦ ಕಿ.ಮೀ. ಅಂತರ ಇರಲೇಬೇಕು ಎಂಬ ನಿಯಮವನ್ನು ಮೀರಿ ಹೆಜಮಾಡಿ ಟೋಲ್‌ಗೇಟ್‌ನಿಂದ ಕೇವಲ ೧೭ ಕಿ.ಮೀ. ದೂರದ ಸುರತ್ಕಲ್ ಎನ್‌ಐಟಿಕೆ ಬಳಿ ೨೦೧೫ರಲ್ಲಿ ಟೋಲ್‌ಗೇಟ್ ಆರಂಭವಾಗಿತ್ತು. ಇದರ ವಿರುದ್ಧ ಅಂದಿನಿಂದ ನಿರಂತರವಾಗಿ ಪ್ರತಿಭಟನೆಗಳು ನಡೆದಿದೆ. ಕಳೆದ ಕೆಲವು ವರ್ಷಗಳಿಂದ ಟೋಲ್ ವಿರೋಧಿ ಹೋರಾಟ ಸಮಿತಿ ಇದರ ನೇತೃತ್ವ ವಹಿಸಿದೆ. ರಾಜಕಾರಣಿಗಳು ಸಾಕಷ್ಟು ಬಾರಿ ಈ ಟೋಲ್‌ಗೇಟನ್ನು ರದ್ದುಪಡಿಸುವ ಭರವಸೆ ನೀಡಿ ಬಳಿಕ ಮಾತು ತಪ್ಪಿಸುತ್ತಿದ್ದರು. ಇದರಿಂದ ಸಿಟ್ಟಿಗೆದ್ದ ನಾಗರಿಕರು ಟೋಲ್ ವಿರೋಧಿ ಹೋರಾಟ ಸಮಿತಿ ಮಂಗಳವಾರ ಟೋಲ್ ಗೇಟನ್ನು ಕಿತ್ತು ಹಾಕುವ ನೇರ ಕಾರ್ಯಾಚರಣೆಗೆ ಮುಂದಾಗಿದೆ. ನೇರ ಕಾರ್ಯಾಚರಣೆಗೆ ಕಾಂಗ್ರೆಸ್, ಡಿವೈಎಫ್ಐ, ಸಿಪಿಐಎಂ ಸೇರಿ ಹತ್ತಾರು ಸಮಾನ ಮನಸ್ಕ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿದ್ದವು.
ಹೋರಾಟ ಕಾವು ಪಡೆಯುತ್ತಿರುವುದನ್ನು ಗಮನಿಸಿದ ಪೊಲೀಸ್ ಇಲಾಖೆ ಟೋಲ್ ಗೇಟ್ ಪರಿಸರದಲ್ಲಿ ಭಾರಿ ಭದ್ರತೆಯನ್ನು ಏರ್ಪಡಿಸಿದ್ದಲ್ಲದೆ, ಹೋರಾಟ ಸಮಿತಿಯಲ್ಲಿರುವವರಿಗೆ ನೋಟಿಸ್ ನೀಡಿದೆ. ಏನಾದರೂ ತೊಂದರೆ ಆದರೆ ನಾವೇ ಹೊಣೆ ಎನ್ನುವ ಮುಚ್ಚಳಿಕೆ ಪತ್ರವನ್ನು ಬರೆಸಿಕೊಳ್ಳಲು ಮುಂದಾಗಿತ್ತು. ಇದಕ್ಕೂ ತೀವ್ರ ವಿರೋಧ ವ್ಯಕ್ತವಾಗಿತ್ತು. 16 ಹೋರಾಟಗಾರರಿಗೆ ನೋಟೀಸ್ ಜಾರಿ ಮಾಡಿರುವ ಪೊಲೀಸ್ ಇಲಾಖೆ, ರಾತ್ರೋರಾತ್ರಿ ಹೋರಾಟಗಾರರ ಮನೆಗಳಿಗೆ ತೆರಳಿ ಸುರತ್ಕಲ್, ಪಣಂಬೂರು ಪೊಲೀಸರಿಂದ ನೋಟೀಸ್ ಜಾರಿ ಮಾಡಲಾಗಿದೆ. ಸಂಚಾಲಕ ಮುನೀರ್ ಕಾಟಿಪಳ್ಳ, ಕಾಂಗ್ರೆಸ್ ನಾಯಕಿ ಪ್ರತಿಭಾ ಕುಳಾಯಿ ಸೇರಿ 16 ಜನರಿಗೆ ನೋಟೀಸ್ ನೀಡಿದ್ದು, ಅಹಿತಕರ ಘಟನೆ ನಡೆದರೆ ಹೋರಾಟಗಾರರೇ ಜವಾಬ್ದಾರಿ ಅಂತ ಮುಚ್ಚಳಿಕೆ ಬರೆಸಲು ನೋಟೀಸ್ ಕೊಡಲಾಗಿದೆ.
ಮುಂಜಾನೆಯಿಂದಲೇ ಉದ್ವಿಗ್ನ ಸ್ಥಿತಿ
ಟೋಲ್‌ಗೇಟನ್ನು ಉರುಳಿಸುವ ನೇರ ಕಾರ್ಯಾಚರಣೆಗೆ ಕರೆ ನೀಡಿದ್ದರಿಂದ ಟೋಲ್‌ಗೇಟ್ ಪರಿಸರದಲ್ಲಿ ಮಂಗಳವಾರ ಮುಂಜಾನೆಯಿಂದಲೇ ೫೦೦ಕ್ಕೂ ಅಧಿಕ ಪೊಲೀಸರನ್ನು ನಿಯೋಜಿಸಲಾಗಿತ್ತು. ಟೋಲ್‌ಗೇಟ್ ಭಾಗಕ್ಕೆ ಬರುವ ಎರಡೂ ಕಡೆಗಳಲ್ಲಿ ಪ್ರತಿಭಟನಾಕಾರರನ್ನು ತಡೆಯಲಾಗಿದೆ. ಈ ವೇಳೆ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಭಾರಿ ಸಂಘರ್ಷ ಏರ್ಪಟ್ಟಿದ್ದು, ಪೊಲೀಸರು ಲಘು ಲಾಠಿ ಪ್ರಹಾರದ ಮೂಲಕ ಅವರನ್ನು ಚದುರಿಸಿದ್ದಾರೆ. ಘಟನೆಯಲ್ಲಿ ಅಬ್ದುಲ್ ಖಾದರ್ ಎಂಬವರ ಕಣ್ಣಿನ ಹತ್ತಿರ ಗಾಯವಾಗಿದ್ದು, ಅವರನ್ನು ಪದ್ಮಾವತಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ಪೊಲೀಸರ ಕಣ್ಣು ತಪ್ಪಿಸಿ ಸಾಕಷ್ಟು ಪ್ರತಿಭಟನಾಕಾರರು ಎನ್‌ಐಟಿಕೆ ಎದುರು ಇರುವ ಟೋಲ್‌ಗೇಟ್‌ನತ್ತ ನುಗ್ಗಿದ್ದಾರೆ. ಪೊಲೀಸರು ಜನರನ್ನು ತಡೆಯಲು ಹರಸಾಹಸಪಡುತ್ತಿದ್ದಾರೆ. ಈ ನಡುವೆ ಉಡುಪಿ-ಮಂಗಳೂರು ನಡುವೆ ವಾಹನ ಸಂಚಾರ ಸಂಪೂರ್ಣ ಬಂದ್ ಆಗಿದೆ.
ಏನಿದು ಟೋಲ್‌ಗೇಟ್ ರಾಜಕೀಯ?
2015ರಲ್ಲಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಎನ್‌ಐಟಿಕೆ ಬಳಿಕ ಟೋಲ್ ಗೇಟ್ ಆರಂಭಗೊಂಡಿತ್ತು. ಆದರೆ ಹೈವೇಯಲ್ಲಿ 60 ಕಿಲೋಮೀಟರ್ ಅಂತರದಲ್ಲಿ ಟೋಲ್ ಇರಬೇಕಾದದ್ದು ಹೆದ್ದಾರಿ ಪ್ರಾಧಿಕಾರದ ನಿಯಮ. ಆದರೆ ಸುರತ್ಕಲ್ ಟೋಲ್ ಆ ನಿಯಮವನ್ನು ಮೀರಿದೆ ಎಂಬ ಆರೋಪ ಇದೆ. ಸುರತ್ಕಲ್ ಟೋಲ್ ನಿಂದ ಉಡುಪಿಯ ಹೆಜಮಾಡಿ ಟೋಲ್ ಪ್ಲಾಜಾ ದೂರ ಕೇವಲ 17 ಕಿ.ಮೀ. ಅಕ್ರಮವಾಗಿ ಹಲವು ವರ್ಷಗಳಿಂದ ಟೋಲ್ ಸಂಗ್ರಹ ಇದ್ದು, ಸುರತ್ಕಲ್ ಟೋಲ್ ಮುಚ್ಚುವಂತೆ ಹಲವು ವರ್ಷಗಳಿಂದ ಹೋರಾಟ ನಡೆಯುತ್ತಿತ್ತು. ಸಂಸದ ನಳಿನ್ ಕುಮಾರ್ ಈ ಬಗ್ಗೆ ಗಡ್ಕರಿ ಜೊತೆ ಮಾತನಾಡಿ ಈ ಸ್ವಾತಂತ್ರ್ಯೋತ್ಸವಕ್ಕೆ ಮುನ್ನ ಮುಚ್ಚುವ ಭರವಸೆ ನೀಡಿದ್ದರು. ಆದರೆ ಮುಚ್ಚುವ ಬದಲು ಹೊಸ ಗುತ್ತಿಗೆದಾರನಿಗೆ ಟೋಲ್ ವಹಿಸಲು ಟೆಂಡರ್ ಆಗಿದ್ದು, ಹೀಗಾಗಿ ನಿರ್ಣಾಯಕ ಹೋರಾಟಕ್ಕೆ ಸಂಘಟನೆಗಳು ಮುಂದಾಗಿವೆ.
ನಳಿನ್ ಕುಮಾರ್ ಕಟೀಲ್ ಹೇಳಿದ್ದೇನು?
ಈ ಬಗ್ಗೆ ದ.ಕ ಲೋಕಸಭಾ ಸಂಸದ ನಳಿನ್ ಕುಮಾರ್ ಕಟೀಲ್ ಪ್ರತಿಕ್ರಿಯೆ ನೀಡಿ, ʻʻನಾವು ಹೋರಾಟ ಕೈ ಬಿಡಿ ಅಂತ ಈಗಾಗಲೇ ವಿನಂತಿ ಮಾಡಿದ್ದೇವೆ. ಹೋರಾಟಗಾರರಿಗೆ ನೋಟೀಸ್ ಕೊಟ್ಟ ಬಗ್ಗೆ ಮಾಹಿತಿ ಇರಲಿಲ್ಲ. ನಾನು ಕಮಿಷನರ್ ಗೆ ಹೇಳಿದ್ದೇನೆ, ಹೋರಾಟ ಸಹಜ, ಯಾವುದೇ ನೋಟೀಸ್ ಮಾಡಬೇಡಿ. ಶಾಂತಿಯುತ ಹೋರಾಟಕ್ಕೆ ನನ್ನ ವಿರೋಧ ಇಲ್ಲ. ಆದರೆ ಕಾನೂನು ಕೈಗೆತ್ತಿಕೊಂಡರೆ ಸರ್ಕಾರ ತನ್ನದೇ ಆದ ನಿಯಮದಡಿ ಕ್ರಮ ಕೈಗೊಳ್ಳುತ್ತದೆ. ಹೆದ್ದಾರಿ ಪ್ರಾಧಿಕಾರ 20 ದಿನ ಸಮಯ ಕೇಳಿದೆ, ನಾವು ಸಮಯ ಕೊಡುವ. ನಾನು ಹೋರಾಟಗಾರರ ಜೊತೆ ಮಾತನಾಡಿದ್ರೆ ರಾಜಕೀಯ ಬರುತ್ತೆ. ಹಾಗಾಗಿ ಡಿಸಿ ಸೇರಿ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿ ಅವರ ಜೊತೆ ಮಾತನಾಡಿಸಿದ್ದೇನೆ. ಈಗ ಮತ್ತೆ ವಿನಂತಿ ಮಾಡ್ತೇನೆ, 20 ದಿನಗಳ ಕಾಲಾವಕಾಶ ಕೊಡಿ. ಹೋರಾಟವನ್ನು ಶಾಂತಿಯುತವಾಗಿ ಮಾಡಲು ನನ್ನ ಅಭ್ಯಂತರ ಇಲ್ಲ. ಕಾನೂನು ಕೈಗೆತ್ತಿಕೊಂಡರೆ ಮುಂದಕ್ಕೆ ಆಗುವ ಅನಾಹುತಕ್ಕೆ ಅವರೇ ಹೊಣೆ. ನಾನು ಟೋಲ್ ಗೇಟ್ ತೆಗೆಯಲು ಕಠಿಬದ್ದನಾಗಿದ್ದೇನೆ, ತೆಗೆದೇ ತೆಗೆಸ್ತೀನಿ. ಕಾನೂನು ಸಮಸ್ಯೆ ಕಾರಣ ಟೋಲ್ ಗೇಟ್ ತೆರವು ಕಷ್ಟವಾಗಿದೆ. ಹೀಗಾಗಿ 20 ದಿನಗಳ ಕಾಲ ಹೋರಾಟ ಮುಂದೂಡಿ ಅಂತ ವಿನಂತಿ ಮಾಡುತ್ತೇನೆʼʼ ಎಂದಿದ್ದಾರೆ.
ಸ್ವಲ್ಪ ಸಮಯಾವಕಾಶ ಬೇಕು
ʻʻಟೋಲ್ ಗೇಟ್ ತೆರವು ವಿನಂತಿ ಹಿನ್ನೆಲೆಯಲ್ಲಿ ಅನೇಕ ಸಭೆ ಆಗಿದೆ. ಈಗ ತೆರವು ಪ್ರಕ್ರಿಯೆ ಅಂತಿಮ ಹಂತದಲ್ಲಿ ಇದೆ, ನಿತಿನ್ ಗಡ್ಕರಿ ಕೂಡ ಹೇಳಿದ್ದಾರೆ. ಆದರೆ ಕಾನೂನಿನ ತೊಡಕಿನ ಕಾರಣ ತೆರವು ತಡವಾಗಿದೆ. ನವಯುಗ್ ಸಂಸ್ಥೆ ಜೊತೆ ಮಾತುಕತೆ ಮುಗಿದಿದೆ, ಆದರೂ ಸ್ವಲ್ಪ ಸಮಯ ಕೇಳಿದ್ದಾರೆ. ಹೋರಾಟಗಾರರು ಸಮಯ ಕೊಟ್ಟಿದ್ದಾರೆ, ಅವರು ಕೇಳೋದ್ರಲ್ಲಿ ತಪ್ಪಿಲ್ಲ. ಆದರೆ ಹೆದ್ದಾರಿ ಪ್ರಾಧಿಕಾರ 20 ದಿನ ಸಮಯ ಕೇಳಿದೆ. ನಾವು ಅಧಿಕಾರಿಗಳ ಮೂಲಕ ಹೋರಾಟಗಾರರಿಗೆ ವಿನಂತಿ ಮಾಡಿದ್ದೇವೆ. ಸುರತ್ಕಲ್ ಟೋಲ್ ಗೇಟ್ ತೆರವಿಗೆ ಬಿಜೆಪಿ ಬೆಂಬಲ ಇದೆ. ಲೋಕಸಭಾ ಸದಸ್ಯನಾಗಿ ನಾನು ಕೂಡ ತೆರವಿಗೆ ಬೆಂಬಲಿಸ್ತೇನೆ. 20 ದಿನದ ಬಳಿಕವೂ ಆಗದಿದ್ರೆ ನಾನೇ ಕೋರ್ಟ್ ಗೆ ಹೋಗ್ತೇನೆ, ಇದನ್ನು ನಿತಿನ್ ಗಡ್ಕರಿಯವರಿಗೂ ಹೇಳಿದ್ದೇನೆ. ಇವತ್ತು ಬ್ಯಾಂಕರ್ಸ್ ಬಂದು ಸಭೆ ನಡೆಸಿ ಒಪ್ಪಂದಕ್ಕೆ ಬರ್ತಾರೆ. ಈ ಹೋರಾಟದಲ್ಲಿ ರಾಜಕೀಯವೂ ಇದೆ, ಹಾಗಾಗಿ ನಾವೂ ಮಾತನಾಡ್ತೇವೆ. 2015 ರಲ್ಲಿ ಆಸ್ಕರ್ ಇದ್ದಾಗಲೇ ಈ ಟೋಲ್ ಗೇಟ್ ಆಗಿರೋದು. ಅವರು ರಾಜಕೀಯ ಮಾತನಾಡಿದ್ರೆ ನಾವೂ ಮಾತನಾಡುತ್ತೇವೆʼʼ ಎಂದಿದ್ದಾರೆ.