ಚಿಕ್ಕಬಳ್ಳಾಪುರ: ಟೊಮ್ಯಾಟೊ ಬೆಲೆ (tomato price) ಪುನಃ ನಾನೂರು ರೂಪಾಯಿ ದಾಟಿದೆ. ಹತ್ತು ಕೆಜಿ ಟೊಮ್ಯಾಟೊ ಬಾಕ್ಸ್ ಬೆಲೆ (tomato price rise) ನಾನೂರು ರೂಪಾಯಿ ತಲುಪಿದ್ದು, ಗ್ರಾಹಕರ ಕೈ ಸುಡಲು ಸಿದ್ಧವಾಗಿದೆ.
ಬಿಸಿಲಿನ ತಾಪಕ್ಕೆ ಹೆಚ್ಚಾಗಿ ಫಸಲು ಬಾರದ ಹಿನ್ನೆಲೆಯಲ್ಲಿ ಬೆಲೆ ಹೆಚ್ಚುತ್ತಿದೆ. ಜೊತೆಗೆ ಟೊಮ್ಯಾಟೊ ಬೆಳೆಗೆ ಬಿನುಗು ರೋಗ ತಗುಲಿದ ಹಿನ್ನೆಲೆಯಲ್ಲಿ ನಿರೀಕ್ಷಿತ ಫಸಲು ಕೂಡ ಬಂದಿಲ್ಲ. ಆ ಬಾರಿ ಬಿಸಿಲಿನ ಪರಿಣಾಮ ನಿರೀಕ್ಷೆಗಿಂತ ಮೊದಲೇ ನೀರಿನ ಲಭ್ಯತೆ ಕಡಿಮೆಯಾಗಿದೆ. ಬೋರ್ವೆಲ್‌ಗಳಲ್ಲಿಯೂ ನೀರು ಬತ್ತಿದ್ದು, ಈ ಹಿನ್ನೆಲೆಯಲ್ಲಿ ಹಲವು ರೈತರು ಟೊಮ್ಯಾಟೋ ಬೆಳೆಯಲು ಮುಂದಾಗಿಲ್ಲ.
ಚಿಕ್ಕಬಳ್ಳಾಪುರ ಎಪಿಎಂಸಿ ಮಾರುಕಟ್ಟೆಯಲ್ಲಿ ಇಂದು ಮುಂಜಾನೆ ಟೊಮ್ಯಾಟೊಗೆ ನಾನೂರು ರೂಪಾಯಿ ನಿಗದಿ ಮಾಡಲಾಗಿದೆ. ನಾಳೆ ನಾಡಿದ್ದರಲ್ಲಿ ಮತ್ತಷ್ಟು ಏರಬಹುದು ಎಂದು ನಿರೀಕ್ಷಿಸಲಾಗಿದೆ.
ಬೆಲೆ ಏರಿಕೆಗೆ ಕಾರಣ
ಉತ್ಪಾದನೆಯಲ್ಲಿ ಕುಸಿತ, ಹವಾಮಾನ ವೈಪರೀತ್ಯ, ಅತಿಯಾದ ಬಿಸಿಲು ಹಾಗೂ ಉಷ್ಣ ವಾತಾವರಣದಿಂದ ಬೆಳೆ ಕಡಿಮೆಯಾಗಿ ಬೆಲೆ ಏರಿಕೆಯಾಗಿದೆ. ಒಂದು ಅಧ್ಯಯನದ ಪ್ರಕಾರ ಗ್ರಾಹಕ ಕೊಂಡುಕೊಳ್ಳುವ ಬೆಲೆಯಲ್ಲಿ ರೈತನಿಗೆ ಕೇವಲ ಶೇಕಡಾ 32ರಷ್ಟು ಮಾತ್ರ ದಕ್ಕುತ್ತದೆ.
ಟೊಮೆಟೊ ಹೆಚ್ಚು ಬೆಳೆಯುವುದು ಎಲ್ಲಿ?
ಆಂಧ್ರಪ್ರದೇಶ, ಕರ್ನಾಟಕದ, ಒಡಿಶಾ, ಗುಜರಾತ್ ಮತ್ತು ಮಧ್ಯ ಪ್ರದೇಶದಲ್ಲಿ ಪ್ರಮುಖವಾಗಿ ಬೆಳೆಯಲಾಗುತ್ತದೆ. ಈ ರಾಜ್ಯಗಳು ದೇಶದ ಒಟ್ಟು ಉತ್ಪಾದನೆಯು ಶೇಕಡಾ ಐವತ್ತರಷ್ಟು ಕೊಡುಗೆ ನೀಡುತ್ತವೆ. ಛತ್ತೀಸ್ ಗಢ, ಉತ್ತರ ಪ್ರದೇಶ, ತಮಿಳುನಾಡು, ಮಹಾರಾಷ್ಟ್ರ, ಹರಿಯಾಣ, ಪಶ್ಚಿಮ ಬಂಗಾಳ, ಬಿಹಾರ ತೆಲಂಗಾಣ ಶೇಕಡಾ 40 ರಷ್ಟು ಟೊಮೆಟೊ ಉತ್ಪಾದನೆ ಮಾಡುತ್ತವೆ. ಮುಂಗಾರು ಮತ್ತು ಹಿಂಗಾರು ಬೆಳೆಯಾಗಿ ಟೊಮ್ಯಾಟೊ ಬೆಳೆಯಲಾಗುತ್ತದೆ. ಸಾಮಾನ್ಯವಾಗಿ ಮಾರ್ಚ್‌ನಿಂದ ಆಗಸ್ಟ್ ನಡುವೆ ಹಿಂಗಾರು ಬೆಳೆಯಲಾಗುತ್ತದೆ. ಮುಂಗಾರು ಬೆಳೆ ಸೆಪ್ಟಂಬರ್ ತಿಂಗಳಿನಿಂದ ಕೊಯ್ಲಿಗೆ ಬರುತ್ತದೆ. ಮಹಾರಾಷ್ಟ್ರ ಮತ್ತು ಹಿಮಾಚಲ ಪ್ರದೇಶದ ಕೆಲವು ಭಾಗಗಳಲ್ಲಿ ಮಳೆಗಾಲದಲ್ಲಿ ಟೊಮ್ಯಾಟೊ ಬೆಳೆಯುತ್ತಾರೆ. ಬೇಸಿಗೆಯ ಉತ್ಪಾದನೆಯ ಶೇಕಡಾ 90ರಷ್ಟು ಬೆಳೆಯನ್ನು ಆಂಧ್ರ ಪ್ರದೇಶದ ಮದನಪಲ್ಲಿಯಲ್ಲಿ ಬೆಳೆಯುತ್ತಾರೆ.
ಮಾಹಿತಿಗಳ ಪ್ರಕಾರ 2020ರಿಂದ ಟೊಮ್ಯಾಟೊ ಉತ್ಪಾದನೆ ಕಡಿಮೆಯಾಗುತ್ತಿದೆ. 2019-2 0ರಲ್ಲಿ 21.187 ಮಿಲಿಯನ್ ಟನ್ ಗಳಷ್ಟು ಟೊಮ್ಯಾಟೊ ಉತ್ಪಾದನೆ ಆಗಿದ್ದರೆ 2020-21ರಲ್ಲೂ 20.69ಮಿಲಿಯನ್ ಟನ್ ಗೆ ಇಳಿದಿದೆ. 2022-23ರಲ್ಲೂ 20.62 ಮಿಲಿಯನ್ ಟನ್ ಗೆ ಕುಸಿದಿದೆ.
ಇದನ್ನೂ ಓದಿ: Sugar Price: ಟೊಮ್ಯಾಟೊ ‘ಹುಳಿ’ಯಾದ ಬೆನ್ನಲ್ಲೇ ಸಕ್ಕರೆ ‘ಕಹಿ’; ಜನರ ಹಬ್ಬದ ಖುಷಿಗೆ ಬೆಲೆಯೇರಿಕೆ ಬಿಸಿ