ನವದೆಹಲಿ/ಬೆಂಗಳೂರು: ಬೆಂಗಳೂರಿನಲ್ಲಿಯೇ ಟೊಮ್ಯಾಟೊ ಬೆಲೆ ಒಂದು ಕೆ.ಜಿ.ಗೆ 150 ರೂಪಾಯಿ (Tomato Price Hike) ದಾಟಿದೆ. ಇನ್ನು ದೇಶದ ಬಹುತೇಕ ಭಾಗಗಳಲ್ಲಿ ಟೊಮ್ಯಾಟೊ ಬೆಲೆ 120 ರೂ. ದಾಟಿದೆ. ಇನ್ನು ಬದನೆಕಾಯಿ ಶತಕ ಬಾರಿಸಿದೆ. ಶುಂಠಿಯಂತೂ ಕೆ.ಜಿ.ಗೆ 100 ರೂ. ಇದ್ದಿದ್ದು 250 ರೂ. ಆಗಿದೆ. ಇನ್ನೂ ಹಲವು ತರಕಾರಿಗಳ ಬೆಲೆಯೂ ಗಗನಕ್ಕೇರಿದೆ. ಇದರಿಂದ ಸಾರ್ವಜನಿಕರಲ್ಲಿ ಆತಂಕ ಹೆಚ್ಚಾಗಿದೆ.
ದೇಶದ ಬಹುತೇಕ ಭಾಗಗಳಿಗೆ ಮುಂಗಾರು ಪ್ರವೇಶವಾದರೂ ಬೇಡಿಕೆಗೆ ತಕ್ಕಂತೆ ತರಕಾರಿ ಪೂರೈಕೆಯಾಗುತ್ತಿಲ್ಲ. ಅದರಲ್ಲೂ, ಉಷ್ಣಮಾರುತದಿಂದ ಟೊಮ್ಯಾಟೊ ಸೇರಿ ವಿವಿಧ ತರಕಾರಿ ಬೆಳೆದ ರೈತರಿಗೆ ನಷ್ಟವಾಗಿದೆ. ಹಾಗಾಗಿ, ಮಾರುಕಟ್ಟೆಗೆ ಹೇರಳವಾಗಿ ತರಕಾರಿಗಳ ಪೂರೈಕೆಯಾಗುತ್ತಿಲ್ಲ. ಹಾಗಾಗಿ, ಇನ್ನೂ 10-12 ದಿನ ತರಕಾರಿಗಳ ಬೆಲೆ ಎಗ್ಗಿಲ್ಲದೆ ಏರಿಕೆಯಾಗಲಿದೆ ಎಂದು ಅಂದಾಜಿಸಲಾಗಿದೆ. ಹಾಗಾಗಿ, ಗ್ರಾಹಕರ ಜೇಬಿಗೆ ತರಕಾರಿ ಬಲು ಭಾರ ಎನಿಸುವುದು ಗ್ಯಾರಂಟಿಯಾಗಿದೆ.
ಬೆಂಗಳೂರಿನಲ್ಲಿ ಟೊಮ್ಯಾಟೊ ಕೆ.ಜಿ.ಗೆ 150 ರೂ. ದಾಟಿದರೆ, ಹಲವು ತರಕಾರಿಗಳ ಬೆಲೆಯೂ ಹೆಚ್ಚಾಗಿದೆ. ದೆಹಲಿ, ಚಂಡೀಗಢ, ದೆಹಲಿ ಸೇರಿ ಹಲವೆಡೆ ಶುಂಠಿ ಬೆಲೆಯು ಒಂದೇ ವಾರದಲ್ಲಿ 100 ರೂಪಾಯಿಯಿಂದ 250 ರೂ.ಗೆ ಏರಿಕೆಯಾಗಿದೆ. ಬದನೆಕಾಯಿಯು 40 ರೂ.ನಿಂದ 100 ರೂ.ಗೆ ಜಿಗಿದಿದೆ. 10 ದಿನಗಳಲ್ಲಿ ಬಹುತೇಕ ತರಕಾರಿಗಳ ಬೆಲೆಯು ಶೇ.60ರಷ್ಟು ಏರಿಕೆಯಾಗಿದೆ. ಅದರಲ್ಲೂ, ಇನ್ನೂ 10-12 ದಿನ ಇದೇ ಪರಿಸ್ಥಿತಿ ಇರುವುದರಿಂದ ಜನ ಹೆಚ್ಚು ಬೆಲೆ ತೆರಲೇಬೇಕಾದ ಅನಿವಾರ್ಯಕ್ಕೆ ಸಿಲುಕಿದ್ದಾರೆ.
ಇದನ್ನೂ ಓದಿ: Karnataka Politics : ಟೊಮ್ಯಾಟೊಗೆ 130 ರೂ, ಎಂಜಿನಿಯರ್‌ಗೆ 5 ಕೋಟಿ ರೂ; Shadow CM ಪ್ರಕಟಣೆ ಎಂದ ಬಿಜೆಪಿ!
ಹಾಸನದಲ್ಲಿ ಟೊಮ್ಯಾಟೊ ಕಳ್ಳತನ
ಟೊಮ್ಯಾಟೋಗೆ ವಿಪರೀತ ಬೇಡಿಕೆ ಇರುವ ನಡುವೆಯೇ ಅದನ್ನು ಕಳವು ಮಾಡಲು ಕಾಯುವ ಕಳ್ಳರೂ ಇದ್ದಾರೆ ಎನ್ನುವುದು ಹಾಸನ ಜಿಲ್ಲೆಯಲ್ಲಿ ಪ್ರೂವ್ ಆಗಿದೆ. ಹಾಸನ ಜಿಲ್ಲೆ, ಬೇಲೂರು ತಾಲೂಕಿನ ಗೋಣಿ ಸೋಮನಹಳ್ಳಿ ಗ್ರಾಮದಲ್ಲಿ ರೈತರೊಬ್ಬರ ಹೊಲದಿಂದ ರಾತ್ರೋರಾತ್ರಿ ಭಾರಿ ಪ್ರಮಾಣದಲ್ಲಿ ಟೊಮ್ಯಾಟೊ ಕಳವು ಮಾಡಲಾಗಿದೆ. ಗಿಡದಿಂದಲೇ ಟೊಮ್ಯಾಟೋ ಕಿತ್ತು ಒಯ್ಯಲಾಗಿದೆ. ಸುಮಾರು 50ರಿಂದ 60 ಬ್ಯಾಗ್‌ನಷ್ಟು ಟೊಮ್ಯಾಟೋ ಕೊಯ್ದುಕೊಂಡು ಹೋಗಿರಬಹುದು ಎಂದು ಅಂದಾಜಿಸಲಾಗಿದೆ. ಕಳ್ಳತನವಾಗಿರುವ ಟೊಮ್ಯಾಟೊ ಬೆಳೆಯ ಮೌಲ್ಯ 1.5 ಲಕ್ಷ ರೂ. ಆಗಬಹುದು ಎಂದು ಅಂದಾಜಿಸಲಾಗಿದೆ.