ಬೆಂಗಳೂರು: ವಿಧಾನಸೌಧದಲ್ಲಿ ಗುರುವಾರ ನಡೆಯಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜ್ಯ ಮಟ್ಟದ ಎರಡನೇ ಜನತಾ ದರ್ಶನ ಕಾರ್ಯಕ್ರಮಕ್ಕೆ ಸಕಲ ಸಿದ್ಧತೆಗಳು ನಡೆದಿವೆ. ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಲಿರುವ ಸಾರ್ವಜನಿಕರು ಸಲ್ಲಿಸುವ ದೂರು ಹಾಗೂ ಮನವಿಗಳನ್ನು ಸ್ವೀಕರಿಸಲು ಇಲಾಖಾವಾರು ಕೌಂಟರ್‌ಗಳು, ಅಧಿಕಾರಿಗಳ ನಿಯೋಜನೆ ಹಾಗೂ ಎಸ್‌ಒಪಿ ಜಾರಿ ಮಾಡಿ ಆದೇಶಿಸಲಾಗಿದೆ.
ಹೀಗಾಗಿ ರಾಜ್ಯದ ನಾನಾ ಮೂಲೆಗಳಿಂದ ಬರುವ ರಾಜ್ಯದ ಜನತೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಈ ಕ್ರಮವನ್ನು ಕೈಗೊಳ್ಳಲಾಗಿದೆ.
ಇಲಾಖಾವಾರು ಕೌಂಟರ್‌ಗಳು
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜನತಾದರ್ಶನ ನಡೆಯುವ ಸ್ಥಳದಲ್ಲಿ ಎಲ್ಲ ಇಲಾಖೆಗಳ ಸ್ಟಾಲ್‌ಗಳನ್ನು ಅಳವಡಿಸಲಾಗಿದ್ದು ಪ್ರತಿ ಸ್ಟಾಲ್‌ಗೆ ಸಂಖ್ಯೆಯನ್ನು ನೀಡಲಾಗಿದೆ. ಜನತಾದರ್ಶನಕ್ಕಾಗಿ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದ್ದು, ನಾಗರಿಕರನ್ನು ಪ್ರಥಮ ಹಂತದಲ್ಲಿ ವಿಚಾರಿಸಿ, ಯಾವ ಇಲಾಖೆಯ ಸ್ಟಾಲ್‌ಗೆ ನಿರ್ದೇಶಿಸಿ ಕಳಿಸಬೇಕು ಎಂದು ವಿಂಗಡಿಸುವ ಕೆಲಸವನ್ನು ಮಾಡಲಾಗುವುದು. ಇದಕ್ಕಾಗಿ ಅನುಭವಿ ಅಧಿಕಾರಿ – ಸಿಬ್ಬಂದಿಯುಳ್ಳ ವಿಚಾರಣಾ ಕೌಂಟರ್‌ಗಳನ್ನು (enquiry counter) ತೆರೆಯಲಾಗಿದೆ. ಅಲ್ಲಿ ನಾಗರಿಕರ ಮೊಬೈಲ್ ನಂಬರ್ & ಪ್ರಾಥಮಿಕ ವಿವರಗಳನ್ನು ದಾಖಲಿಸಲು ರಿಜಿಸ್ಟರ್ ಹಾಗೂ ಅವರನ್ನು ಯಾವ ಇಲಾಖೆಗೆ ಕಳಿಸಲಾಗಿದೆ ಎಂದು ಸ್ಟಾಲ್ ನಂಬರ್ ನಮೂದಿಸಲಾಗುವುದು. ಸ್ಟಾಲ್‌ಗಳಲ್ಲಿ ನಾಗರಿಕರಿಗೆ ಕುಳಿತುಕೊಳ್ಳಲು ಕುರ್ಚಿಗಳ ವ್ಯವಸ್ಥೆಯನ್ನು ಕಲ್ಪಿಸುವುದರ ಜತೆಗೆ ವಯೋವೃದ್ಧರು / ಹಿರಿಯ ನಾಗರಿಕರು / ವಿಕಲಚೇತನರು / ಗರ್ಭಿಣಿಯರು / ಸಣ್ಣ ಮಕ್ಕಳೊಂದಿಗೆ ಬಂದಂತಹ ನಾಗರಿಕರಿಗೆ ಆದ್ಯತೆ ನೀಡಲು ಸೂಚಿಸಲಾಗಿದೆ.
ಇಲಾಖೆಯ ಕಾರ್ಯದರ್ಶಿಗಳು ತಮ್ಮ ಇಲಾಖೆಯ ಸಚಿವಾಲಯದ ಹಾಗೂ ಅಧೀನ ಇಲಾಖೆಯ ಮುಖ್ಯಸ್ಥರು, ಅಧಿಕಾರಿ, ಸಿಬ್ಬಂದಿಯ ತಂಡದೊಡನೆ ಸ್ಟಾಲ್‌ನಲ್ಲಿದ್ದು, ಜನತಾದರ್ಶನಗಳಲ್ಲಿ ಬಂದ ಅರ್ಜಿಗಳನ್ನು ನಾಗರಿಕರಿಂದ ಸ್ವೀಕರಿಸಲಿದ್ದಾರೆ.
ಹಿರಿಯ ನಾಗರಿಕರು: ವಿಕಲಚೇತನರಿಗೆ ವ್ಹೀಲ್ ಚೇರ್ ವ್ಯವಸ್ಥೆ
ವಯೋವೃದ್ಧರು / ಹಿರಿಯ ನಾಗರಿಕರು / ವಿಕಲಚೇತನರು / ಗರ್ಭಿಣಿಯರಿಗಾಗಿ Battery ಚಾಲಿತ buggy/Wheel Chairs ಗಳ ವ್ಯವಸ್ಥೆ ಕಲ್ಪಿಸಲಾಗಿದ್ದು ಸಂಬಂಧಿಸಿದ ಇಲಾಖೆಯ ಸ್ಟಾಲ್‌ಗೆ ಅವರನ್ನು ಕರೆದೊಯ್ಯುವ ವ್ಯವಸ್ಥೆಯಾಗಿದೆ.
ಊಟದ ವ್ಯವಸ್ಥೆ
ಜನತಾದರ್ಶನಕ್ಕೆ ಆಗಮಿಸುವ ನಾಗರಿಕರಿಗೆ ಊಟ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಐದರಿಂದ ಹತ್ತು ಸಾವಿರ ಜನರಿಗೆ ಆಹಾರ ಪೂರೈಸುವಂತಹ ವ್ಯವಸ್ಥೆಯಾಗಿದೆ.
ಶೌಚಾಲಯ ವ್ಯವಸ್ಥೆ
ಜನತಾದರ್ಶನಕ್ಕೆ ಬರುವ ಎಲ್ಲ ಸಾರ್ವಜನಿಕರು ಹಾಗೂ ದಿವ್ಯಾಂಗರಿಗೆ ಸ್ವಚ್ಛ ಶೌಚಾಲಯಗಳ ವ್ಯವಸ್ಥೆಯನ್ನು ಮಾಡಲಾಗಿದೆ.
ಸಾರಿಗೆ ವ್ಯವಸ್ಥೆ
ಜನಸ್ಪಂದನಾ ಕಾರ್ಯಕ್ರಮ ದಲ್ಲಿ ಪಾಲ್ಗೊಳ್ಳಲು ಬಿಎಂಟಿಸಿ ವತಿಯಿಂದ ಉಚಿತ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.
ಇದನ್ನೂ ಓದಿ: BJP Protest: ಐದರ ಜತೆ ನಾಮ ಹಾಕುವ ಗ್ಯಾರಂಟಿ ನೀಡಿದ ಕಾಂಗ್ರೆಸ್: ಆರ್.ಅಶೋಕ್ ಕಿಡಿ
3738 ಅರ್ಜಿ ವಿಲೇವಾರಿ
ನವೆಂಬರ್ 27 ರಂದು ನಡೆದ ಜನತಾ ದರ್ಶನದಲ್ಲಿ 4030 ಅರ್ಜಿಗಳನ್ನು ಸ್ವೀಕರಿಸಲಾಗಿದ್ದು, ಈವರೆಗೆ 3738 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ. ಒಟ್ಟಾರೆ ಸಾರ್ವಜನಿಕರು ತಮ್ಮ ಸಮಸ್ಯೆಗಳನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದು ಸುಗಮವಾಗಿ ಪರಿಹಾರವನ್ನು ಪಡೆಯಲು ಜನಸ್ಪಂದನ ಕಾರ್ಯಕ್ರಮ ನೆರವಾಗಲು ಭರದ ಸಿದ್ಧತೆ ನಡೆದಿದೆ.