Site icon Vistara News

Murdeshwar Beach: ಇದೆಂಥ ದುಸ್ಸಾಹಸ! ಮುರ್ಡೇಶ್ವರ ಕಡಲಲ್ಲಿ ಮುಳುಗಿದ ಪ್ರವಾಸಿಗ; ಇಬ್ಬರ ರಕ್ಷಣೆ

Tourist drowned in Murdeshwar sea

ಕಾರವಾರ: ಚಂಡಮಾರುತ ಸೇರಿದಂತೆ ಇನ್ನಿತರ ಕಾರಣಗಳಿಂದ ಸಮುದ್ರದಲ್ಲಿ ಅಲೆಗಳ ಉಬ್ಬರ ಹೆಚ್ಚುತ್ತಲಿರುವುದರಿಂದ ಕಡಲಿಗೆ ಯಾರೂ ಇಳಿಯದಂತೆ ಕಟ್ಟೆಚ್ಚರ ವಹಿಸಿ ಸೂಚನೆ ನೀಡಲಾಗುತ್ತಿದ್ದರೂ ಕೇಳದೇ ಜನರು ಈಜಲು ಹೋಗುತ್ತಿದ್ದಾರೆ. ಈ ಮೂಲಕ ತಮ್ಮ ಜೀವಕ್ಕೇ ಆಪತ್ತು ತಂದುಕೊಳ್ಳುತ್ತಿದ್ದಾರೆ. ಸೋಮವಾರ (ಜೂನ್‌ 12) ಮುರ್ಡೇಶ್ವರ ಕಡಲಿನಲ್ಲಿ (Murdeshwar Beach) ಯುವಕನೊಬ್ಬ ಈಜಲು ಹೋಗಿ ನಾಪತ್ತೆಯಾಗಿದ್ದ. ಅದರ ಬೆನ್ನಲ್ಲೇ ಮಂಗಳವಾರ (ಜೂನ್‌ 13) ಇನ್ನೋರ್ವ ಪ್ರವಾಸಿಗ ನೀರುಪಾಲಾಗಿದ್ದಾನೆ. ಇಬ್ಬರನ್ನು ರಕ್ಷಣೆ ಮಾಡಲಾಗಿದೆ.

ಭಟ್ಕಳ ತಾಲೂಕಿನ ಮುರ್ಡೇಶ್ವರ ದೇವಸ್ಥಾನದ ಪಕ್ಕದಲ್ಲೇ ಇರುವ ಕಡಲತೀರದಲ್ಲಿ ಈ ಅವಘಡ ಸಂಭವಿಸಿದೆ. ಪವನ್ ನಾಯ್ಕ (20) ಕಣ್ಮರೆಯಾದ ವಿದ್ಯಾರ್ಥಿ. ಬೆಂಗಳೂರು ಮೂಲದ ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದಾನೆ. 6 ಮಂದಿ ಸ್ನೇಹಿತರು ಮುರ್ಡೇಶ್ವರ ಪ್ರವಾಸಕ್ಕೆ ಬಂದಿದ್ದರು. ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಿಂದ ಬಂದಿದ್ದರು.

ಮುಖ್ಯ ಕಡಲತೀರದಲ್ಲಿ ಪವನ್ ಸೇರಿ ಮೂವರು ಈಜಲು ಮುಂದಾಗಿದ್ದರು. ಆಗ ಇವರಿಗೆ ಅಲ್ಲಿನ ಹೋಂ ಗಾರ್ಡ್‌ಗಳು ಈಜಲು ಅನುಮತಿ ನೀಡದೆ ಕಳುಹಿಸಿದ್ದಾರೆ. ಆದರೆ, ಇವರು ಅಲ್ಲಿಂದ ಸೀದಾ ದೇವಸ್ಥಾನ ಪಕ್ಕಕ್ಕೆ ಹೋಗಿ ಅಲ್ಲಿ ಸಮುದ್ರ ತೀರದಲ್ಲಿ ಈಜಲು ಇಳಿದಿದ್ದರು. ಲೈಫ್‌ಗಾರ್ಡ್ ಸಿಬ್ಬಂದಿ ಎಚ್ಚರಿಕೆ ನೀಡಿದರೂ ನಿರ್ಲಕ್ಷ್ಯಿಸಿ ನೀರಿಗಿಳಿದಿದ್ದಾರೆ.

ಇದನ್ನೂ ಓದಿ: Karnataka Govt: ಸರ್ಕಾರ ಬಂದು 20 ದಿನ ಆಗಿಲ್ಲ; 45% ಕಮಿಷನ್ ತೊಗೊಳ್ಳೋದು ಹೇಗೆ ಎಂದ ಸಚಿವ ವೆಂಕಟೇಶ್‌

ಆದರೆ, ಅಲೆಗಳ‌ ಅಬ್ಬರ ಜೋರಾಗಿಯೇ ಇತ್ತು. ಈ ಮೂವರು ಒಮ್ಮೆಲೆಗೆ ಅಲೆಗಳ ಹೊಡೆತಕ್ಕೆ ಸಿಲುಕಿ ತೀವ್ರ ಅಪಾಯಕ್ಕೆ ಸಿಲುಕಿದರು. ಇದೇ ವೇಳೆ ಈಜಲಾಗದೆ ಮುಳುಗುವ ಹಂತ ತಲುಪಿದ್ದರು. ಆಗ ಲೈಫ್‌ಗಾರ್ಡ್ ಸಿಬ್ಬಂದಿಗೆ ವಿಷಯ ಮುಟ್ಟಿಸಲಾಗಿದೆ. ಅವರೂ ಸಹ ತಕ್ಷಣ ಕಾರ್ಯಾಚರಣೆಗೆ ಇಳಿದರಾದರೂ ಇಬ್ಬರನ್ನು ರಕ್ಷಣೆ ಮಾಡುವಲ್ಲಿ ಯಶಸ್ವಿಯಾದರು. ಇನ್ನೊಬ್ಬ ಕಣ್ಮರೆಯಾಗಿದ್ದಾನೆ.

ಮಂಗಳವಾರವಷ್ಟೇ ಓರ್ವ ಪ್ರವಾಸಿಗ ಮುರ್ಡೇಶ್ವರ ಮುಖ್ಯ ಕಡಲತೀರದಲ್ಲಿ ಕಣ್ಮರೆಯಾಗಿದ್ದ. ಆತನ ಪತ್ತೆಗೆ ಮುನ್ನ ಇದೀಗ ಮತ್ತೊಂದು ಘಟನೆ ನಡೆದಿದೆ. ಮುರ್ಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಾಪತ್ತೆಯಾಗಿದ್ದ ಯುವಕ ಇನ್ನೂ ಸಿಕ್ಕಿಲ್ಲ

ಕಲಘಟಗಿ ಮೂಲದ ಸಂತೋಷ ಹುಲಿಗೊಂಡ (19) ಸೋಮವಾರ ಮುರ್ಡೇಶ್ವರ ಸಮುದ್ರದಲ್ಲಿ ಈಜಲು ಹೋಗಿ ಕಣ್ಮರೆಯಾದ ಪ್ರವಾಸಿಗ. ಹಸನ್ ಮಜ್ಜಿಗಿ ಗೌಡರ್ (21), ಸಂಜೀವ ಹೆಬ್ಬಳ್ಳಿ (20) ಎಂಬುವವರನ್ನು ರಕ್ಷಣೆ ಮಾಡಲಾಗಿತ್ತು. ಸೋಮವಾರ 22 ಮಂದಿ ಪ್ರವಾಸಕ್ಕೆಂದು ಮುರ್ಡೇಶ್ವರಕ್ಕೆ ಆಗಮಿಸಿದ್ದರು. ಈ ಪೈಕಿ ಒಬ್ಬ ಪ್ರವಾಸಿಗ ಅಲೆಗಳಿಗೆ ಸಿಲುಕಿ ನಾಪತ್ತೆಯಾಗಿದ್ದಾನೆ. ಆತನ ಶವ ಇನ್ನೂ ಸಿಕ್ಕಿಲ್ಲ.

ಸಮುದ್ರದಲ್ಲಿ ಬಿಪರ್‌ಜಾಯ್‌ ಸೈಕ್ಲೋನ್ ಎಫೆಕ್ಟ್‌ನಿಂದ ದಡಕ್ಕೆ ಆಳೆತ್ತರದ ಅಲೆಗಳು ಅಪ್ಪಳಿಸುತ್ತಿದ್ದವು. ಇದರಿಂದ ಕಡಲತೀರದ ಬಳಿ ನೀರಿಗಿಳಿಯದಂತೆ ಸೂಚನಾ ಫಲಕ ಹಾಕಲಾಗಿತ್ತು. ಅದರೂ ಪ್ರವಾಸಿಗರೂ ನಿರ್ಲಕ್ಷಿಸಿ ನೀರಿಗಿಳಿದಿದ್ದರು. ಇದರಿಂದ ಭಾರಿ ಅಲೆಗಳ ಹೊಡೆತಕ್ಕೆ ಸಿಲುಕಿದ್ದ ಮೂವರ ಪೈಕಿ ಇಬ್ಬರನ್ನು ಲೈಫ್ ಗಾರ್ಡ್‌ಗಳು ರಕ್ಷಣೆ ಮಾಡಿದ್ದರು.

ಇದನ್ನೂ ಓದಿ: Shivamogga Airport: ಆ.11ರಿಂದ ಶಿವಮೊಗ್ಗದಲ್ಲಿ ವಿಮಾನ ಹಾರಾಟ; ಟೈಮಿಂಗ್‌ ನೋಡಿ ನೀವೂ ಪ್ಲ್ಯಾನ್‌ ಮಾಡಿ!

ಸೂಚನಾ ಫಲಕ ಹಾಕಿದ್ದರೂ ನಿರ್ಲಕ್ಷ್ಯ

ಮುರ್ಡೇಶ್ವರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕಣ್ಮರೆಯಾದ ಪ್ರವಾಸಿಗನಿಗಾಗಿ ಶೋಧ ಕಾರ್ಯ ನಡೆಸಲಾಗುತ್ತಿದೆ. ಸೈಕ್ಲೋನ್ ಹಿನ್ನೆಲೆಯಲ್ಲಿ ಕಡಲತೀರಗಳಲ್ಲಿ ಸಮುದ್ರ ಪ್ರಕ್ಷುಬ್ಧಗೊಂಡಿದ್ದು ಯಾರೂ ಸಮುದ್ರಕ್ಕಿಳಿಯದಂತೆ ಸೂಚನಾ ಫಲಕಗಳನ್ನು ಅಳವಡಿಸಿ ಪ್ರವಾಸಿಗರಿಗೆ ಮುನ್ನೆಚ್ಚರಿಕೆ ನೀಡಲಾಗಿದೆ. ಆದರೂ ಪ್ರವಾಸಿಗರು ಜಿಲ್ಲಾಡಳಿತದ ಎಚ್ಚರಿಕೆಯನ್ನು ನಿರ್ಲಕ್ಷಿಸಿ ನೀರಿಗಿಳಿಯುತ್ತಿರುವುದರಿಂದ ಅವಘಡಗಳಿಗೆ ಕಾರಣವಾಗುತ್ತಿದೆ.‌

Exit mobile version