ಮಂಡ್ಯ: ಕೆಆರ್‌ಎಸ್ ಹಿನ್ನೀರಿನಲ್ಲಿ (KRS Dam) ಪ್ರವಾಸಿಗರ ಮೋಜು ಮಸ್ತಿ ಮಾಡುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ. ನಿರ್ಬಂಧಿತ ಪ್ರದೇಶವಾದರೂ ಇಲ್ಲಿಗೆ ಆಗಮಿಸಿ ಮೋಜು ಮಸ್ತಿ ಮಾಡುತ್ತಿರುವುದು ಅಧಿಕಾರಿಗಳ ನಿರ್ಲಕ್ಷ್ಯವನ್ನು ಎತ್ತಿ ತೋರಿಸುತ್ತಿದೆ.
ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೆಆರ್‌ಎಸ್ ಜಲಾಶಯದ ಒಳ ಹರಿವಿನಲ್ಲಿ ಏರಿಕೆ ಕಂಡಿದೆ. ಸದ್ಯ ಜಲಾಶಯಕ್ಕೆ 13,449 ಕ್ಯೂಸೆಕ್ ನೀರು ಒಳಹರಿವು ಇದೆ. ಒಂದೇ ದಿನದಲ್ಲಿ ಹರಿದು 2 ಅಡಿ ನೀರು ಹರಿದು ಬಂದಿದೆ. ಹಾಗಾಗಿ ಜಲಾಶಯದ ಹಿನ್ನೀರಿನಲ್ಲಿ ಮನಮೋಹಕ ದೃಶ್ಯವನ್ನು ಕಣ್ತುಂಬಿಕೊಳ್ಳಲು ಕಳ್ಳ ಹೆಜ್ಜೆಯನ್ನಿಟ್ಟು ಜನರು ಬರುತ್ತಿದ್ದಾರೆ.
ಅಲೆಗಳ ರಭಸ, ಗಾಳಿ ಸಹಿತ ಮಳೆಯು ಇಲ್ಲಿ ಪ್ರವಾಸಿಗರನ್ನು ಆಕರ್ಷಿಸುತ್ತಿದೆ ಎನ್ನಲಾಗಿದೆ. ಹೀಗಾಗಿ ಸ್ವಲ್ಪ ರಿಸ್ಕ್ ಇದ್ದರೂ ಇಲ್ಲಿಗೆ ಬಂದು ಹೋಗುತ್ತಿದ್ದಾರೆ ಎನ್ನಲಾಗುತ್ತಿದೆ. ಆದರೆ, ಜಲಾಶಯದ ಹಿನ್ನೀರಿನಲ್ಲಿ ಪ್ರವಾಸಿಗರು ಮೋಜು ಮಸ್ತಿ ಮಾಡುತ್ತಿರುವುದು ಕಾನೂನು ಬಾಹಿರವಾಗಿದೆ.
ಹಿನ್ನೀರಿನಲ್ಲಿ ಈಜು ಹೊಡೆಯುವುದು, ಕಾರು ತೊಳೆಯುವ ಸೇರಿದಂತೆ ಇನ್ನಿತರ ಚಟುವಟಿಕೆಯಲ್ಲಿ ಪ್ರವಾಸಿಗರು ನಿರತರಾಗಿದ್ದಾರೆ. ಈ ವೇಳೆ ಅವಘಡಗಳು ಸಂಭವಿಸಿದರೆ ಯಾರು ಹೊಣೆ ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡಿದೆ.
ವೇಣುಗೋಪಾಲಸ್ವಾಮಿ ದೇವಸ್ಥಾನದಿಂದ ಸೀದಾ ಇಲ್ಲಿಗೆ!
ವೇಣುಗೋಪಾಲಸ್ವಾಮಿ ದೇವಸ್ಥಾನಕ್ಕೆ ಆಗಮಿಸುವ ಪ್ರವಾಸಿಗರು, ಅಲ್ಲಿ ದೇವರ ದರ್ಶನ ಪಡೆದುಕೊಳ್ಳುತ್ತಾರೆ. ಬಳಿಕ ಅಲ್ಲಿನ ಪ್ರಕೃತಿ ಸೌಂದರ್ಯವನ್ನು ಸವಿದು ನೇರವಾಗಿ ಹಿನ್ನೀರಿನ ಕಡೆಗೆ ಕಾರಿನಲ್ಲಿ ಆಗಮಿಸುತ್ತಿದ್ದಾರೆ. ಹಿನ್ನೀರಿನ ಪ್ರದೇಶಕ್ಕೆ ಪ್ರವಾಸಿಗರಿಗೆ ನಿರ್ಬಂಧ ಇದ್ದರೂ ಬರುತ್ತಿರುವುದು ಸರಿಯಲ್ಲ ಎಂದು ಸ್ಥಳೀಯರು ಹೇಳುತ್ತಿದ್ದಾರೆ. ಅಲ್ಲದೆ, ಈ ಹಿಂದೆ ಹಲವು ಅವಘಡ ಸಂಭವಿಸಿ ಸಾವು, ನೋವುಗಳು ಆಗಿವೆ. ಹಿನ್ನೀರಿನಲ್ಲಿ ಯಾವೊಬ್ಬ ಸೆಕ್ಯುರಿಟಿಯನ್ನು ಸಹ ಹಾಕಲಾಗಿಲ್ಲ. ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತಿದ್ದಾರೆ ಎಂದು ಸ್ಥಳೀಯರು ಆಕ್ರೋಶವನ್ನು ಹೊರಹಾಕಿದ್ದಾರೆ.