ಬೆಂಗಳೂರು: ಬೆಂಗಳೂರಿನ ಗಾಂಧಿ ಬಜಾರ್‌ನಲ್ಲಿರುವ ಜನಪ್ರಿಯ ರೆಸ್ಟೋರೆಂಟ್, ʻವಿದ್ಯಾರ್ಥಿ ಭವನʼದ (Vidyarthi Bhavana) ನೋಂದಾಯಿತ ಟ್ರೇಡ್‌ಮಾರ್ಕ್ (Trade mark row) ಅನ್ನು ಬಳಸದಂತೆ ಶಿವಮೊಗ್ಗದ ರೆಸ್ಟೋರೆಂಟ್‌ಗೆ ಬೆಂಗಳೂರಿನ ಕೋರ್ಟ್ ಶಾಶ್ವತ ಪ್ರತಿಬಂಧಕಾದೇಶ ಜಾರಿ ಮಾಡಿದೆ.
ʼವಿದ್ಯಾರ್ಥಿ ಭವನʼದ ಪಾಲುದಾರರಾದ ಎಸ್ ಅರುಣ್ ಕುಮಾರ್ ಅಡಿಗ ಅವರು ಹೂಡಿದ್ದ ದಾವೆಯನ್ನು ಬೆಂಗಳೂರಿನ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸತ್ರ ನ್ಯಾಯಾಧೀಶರಾದ ಪದ್ಮ ಪ್ರಸಾದ್ ಅವರು ಭಾಗಶಃ ಮಾನ್ಯ ಮಾಡಿದ್ದಾರೆ. ಟ್ರೇಡ್‌ಮಾರ್ಕ್ ಕಾಯಿದೆ 1996ರ ಕ್ಲಾಸ್ 42 ಮತ್ತು 43ರ ಅಡಿ ವಿದ್ಯಾರ್ಥಿ ಭವನ ಎಂಬ ಹೆಸರಿನ ಅಡಿ ನೋಂದಾಯಿಸಿ, 1956ರಿಂದ ಫಿರ್ಯಾದಿಯು ಶಾಖಾಹಾರಿ ರೆಸ್ಟೊರಂಟ್ ನಡೆಸುತ್ತಿದ್ದಾರೆ. ವಿದ್ಯಾರ್ಥಿ ಭವನವು ಉತ್ತಮ ಹೆಸರು ಮತ್ತು ಅಪಾರ ಪ್ರಮಾಣದ ವರ್ಚಸ್ಸು ಗಳಿಸಿದೆ.
2018ರಲ್ಲಿ ಕಿರಣ್ ಗೌಡ ಎಂಬವರು ಅನಧಿಕೃತವಾಗಿ ವಿಬಿ ವಿಧಾತ್ರಿ ಭವನ ಹೆಸರಿನಲ್ಲಿ ತಮ್ಮ ನೋಂದಾಯಿತ ಟ್ರೇಡ್‌ಮಾರ್ಕ್ ಬಳಸಿದ್ದಾರೆ ಎಂದು ಆರೋಪಿಸಲಾಗಿತ್ತು. ವಿಬಿ ವಿಧಾತ್ರಿ ಭವನ ಹೆಸರನ್ನು ಬಳಸಲು ಪ್ರತಿವಾದಿಗಳಿಗೆ ಯಾವುದೇ ಅಧಿಕಾರವಿಲ್ಲ. ಉಭಯ ಸಂಸ್ಥೆಗಳು ಒಂದೇ ಉದ್ಯಮದಲ್ಲಿದ್ದು, ಅದೇ ಹೆಸರನ್ನು ಬಳಕೆ ಮಾಡುವುದರಿಂದ ಜನರಲ್ಲಿ ಗೊಂದಲ ಸೃಷ್ಟಿಯಾಗುತ್ತದೆ ಎಂದು ಆಕ್ಷೇಪಿಸಲಾಗಿತ್ತು.
ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರೂ ಪ್ರತಿವಾದಿಗಳು ಮಾಧ್ಯಮ ಗೋಷ್ಠಿ ನಡೆಸಿ ಬೆಂಗಳೂರು ಫುಡ್ ಟ್ರೆಂಡ್ ಇನ್ ಶಿವಮೊಗ್ಗ ಪಂಚ್‌ಲೈನ್‌ನೊಂದಿಗೆ ವಿ ಬಿ ವಿಧಾತ್ರಿ ಭವನ ಅನ್ನು ಪ್ರಚಾರ ಮಾಡಿದ್ದಾರೆ. ಅಲ್ಲದೇ, ಈ ಸಂಬಂಧ ಹೋರ್ಡಿಂಗ್ ಮತ್ತು ಬ್ಯಾನರ್ ಅನ್ನು ಶಿವಮೊಗ್ಗ ಪೂರ್ತಿ ಕಟ್ಟಿದ್ದು, ಸ್ಥಳೀಯ ಪತ್ರಿಕೆಗಳಲ್ಲೂ ಪ್ರಚಾರ ನಡೆಸಿದ್ದಾರೆ ಎಂದು ವಾದಿಸಲಾಗಿತ್ತು.
“ಪ್ರತಿವಾದಿಗಳು ʼವಿದ್ಯಾರ್ಥಿ ಭವನʼ ಹೆಸರು ಬಳಕೆ ಮಾಡಿದ್ದು, ಅದನ್ನು ಅಲ್ಪ ಬದಲಾವಣೆ ಮಾಡಿದ್ದರೂ ಹಿಂದಿನ ಹೆಸರಿಗೆ ಹತ್ತಿರವಾಗಿದೆ. ಅಕ್ಷರದಲ್ಲಿ ಬದಲಾವಣೆ ಮಾಡಿ, ವಿ ಬಿ ವಿಧಾತ್ರಿ ಭವನ್ ಹೆಸರಿನಲ್ಲಿ ಉದ್ಯಮ ನಡೆಸುತ್ತಿದ್ದಾರೆ. ವಿಧಾತ್ರಿ ಮತ್ತು ವಿದ್ಯಾರ್ಥಿ ಒಂದೇ ರೀತಿ ಕಾಣುತ್ತಿದ್ದು, ಅದರಲ್ಲಿ ಭಿನ್ನತೆ ಕಾಣುತ್ತಿಲ್ಲ” ಎಂದು ನ್ಯಾಯಾಲಯವು ಆದೇಶದಲ್ಲಿ ಹೇಳಿದೆ.
“ಪ್ರತಿವಾದಿಗಳು ಫಿರ್ಯಾದಿಯ ಟ್ರೇಡ್‌ಮಾರ್ಕ್ ಹೆಸರಿಗಿಂತ ಭಿನ್ನ ಎಂಬುದನ್ನು ಸಾಬೀತುಪಡಿಸಲು ಯಾವುದೇ ದಾಖಲೆಗಳನ್ನು ಪ್ರಸ್ತುತಪಡಿಸಿಲ್ಲ. ಹೀಗಾಗಿ, ಫಿರ್ಯಾದಿಯ ನೋಂದಾಯಿತ ಟ್ರೇಡ್‌ಮಾರ್ಕ್ ʼವಿದ್ಯಾರ್ಥಿ ಭವನʼ ಹೆಸರು ಬಳಕೆ ಮಾಡದಂತೆ ಪ್ರತಿವಾದಿಯನ್ನು ಶಾಶ್ವತವಾಗಿ ನಿರ್ಬಂಧಿಸಲಾಗಿದೆ” ಎಂದು ನ್ಯಾಯಾಲಯ ಆದೇಶದಲ್ಲಿ ಹೇಳಿದೆ.
ಬೆಂಗಳೂರಿನ ವಿದ್ಯಾರ್ಥಿ ಭವನ ಗಾಂಧಿ ಬಜಾರ್‌ನಲ್ಲಿದ್ದರೆ, ಶಿವಮೊಗ್ಗ ವಿದ್ಯಾರ್ಥಿ ಭವನ ಅಲ್ಲಿನ ಗಾಂಧಿ ನಗರದಲ್ಲಿದೆ. ಶಿವಮೊಗ್ಗ ವಿಧಾತ್ರಿ ಭವನದ ಜಾಹೀರಾತುಗಳಲ್ಲಿ ಈಗ ಬೆಂಗಳೂರಿನ ರುಚಿಕರ ತಿಂಡಿಗಳು ಶಿವಮೊಗ್ಗದಲ್ಲಿ ಲಭ್ಯವಿದೆ ಎಂದು ಹೇಳಲಾಗಿದೆ.
ಬೆಂಗಳೂರಿನ ವಿದ್ಯಾರ್ಥಿ ಭವನದ ದೋಸೆ ಮತ್ತು ವಡೆಗಳು ಭಾರಿ ರುಚಿಕರವಾಗಿವೆ ಎಂದು ಹಲವಾರು ಗಣ್ಯರುಗಳು ಅಭಿಪ್ರಾಯಪಟ್ಟಿದ್ದು, ಇದೊಂದು ಪಾರಂಪರಿಕ ತಾಣದಂತೆ, ಲ್ಯಾಂಡ್ ಮಾರ್ಕ್‌ನಂತೆ ಗುರುತಿಸಲ್ಪಟ್ಟಿದೆ. ಶಿವಮೊಗ್ಗ ವಿಧಾತ್ರಿ ಭವನದಲ್ಲಿ ಸಿಗುವ ಆಹಾರ ವಸ್ತುಗಳ ಬಗ್ಗೆ ಕೂಡಾ ಉತ್ತಮ ಅಭಿಪ್ರಾಯಗಳಿದ್ದು, ಒಳ್ಳೆಯ ಆಹಾರ ಇಲ್ಲಿ ಸಿಗುತ್ತದೆ ಎಂದು ಅಲ್ಲಿಗೆ ಭೇಟಿ ನೀಡಿದ ಪ್ರವಾಸಿಗರು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ : Karnataka Election: ಮಂಗಳವಾರ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ: ಬಿ.ಎಸ್.ಯಡಿಯೂರಪ್ಪ