ಬೆಂಗಳೂರು: ಲಾರಿ ಮಾಲೀಕರ ಸಂಘದ ಬೇಡಿಕೆಯಂತೆ ಮಧ್ಯಮ ಹಾಗೂ ಲಘು ವಾಹನಗಳು ನಗರ ಪ್ರವೇಶಿಸಲು ಟ್ರಾಫಿಕ್ ಪೋಲೀಸ್ ಇಲಾಖೆಯಿಂದ ಗ್ರೀನ್ ಸಿಗ್ನಲ್ ಸಿಕ್ಕಿದೆ. ಇದರೊಂದಿಗೆ ಮಾರ್ಚ್ 17ರಿಂದ ಆರಂಭವಾಗಬೇಕಾಗಿದ್ದ ಸರಕು ಸಾಗಣೆ ಬಂದ್‌ನ್ನು (Lorry strike) ವಾಪಸ್ ಪಡೆಯಲಾಗಿದೆ.
ನಗರದಲ್ಲಿ ವಾಹನ ದಟ್ಟಣೆ ಹೆಚ್ಚಾಗುವ ಹಿನ್ನೆಲೆಯಲ್ಲಿ ಬೆಳಗ್ಗೆ- ಸಂಜೆ ಲಾರಿಗಳ ಪ್ರವೇಶವನ್ನು ನಿಷೇಧಿಸಿ ಟ್ರಾಫಿಕ್ ಇಲಾಖೆ ಆದೇಶ ನೀಡಿತ್ತು. ಬೆಳಗ್ಗೆ 7 ರಿಂದ 11 ಹಾಗೂ ಸಂಜೆ 4ರಿಂದ 9 ರವರೆಗೆ ನಗರ ಪ್ರವೇಶಿಸದಂತೆ ನಿರ್ಬಂಧ ಹಾಕಲಾಗಿತ್ತು. ಈ ಆದೇಶವನ್ನು ಹಿಂಪಡೆಯುವಂತೆ ಒತ್ತಾಯಿಸಿದ್ದ ಲಾರಿ ಮಾಲೀಕರ ಬೇಡಿಕೆಗೆ ಇಲಾಖೆ ಮಣಿಯದೆ ಇದ್ದಾಗ ಕರ್ನಾಟಕ ರಾಜ್ಯ ಲಾರಿ ಮಾಲೀಕರ ಫೆಡರೇಶನ್ ಹಾಗೂ ಏಜೆಂಟ್‌ಗಳ ಅಸೋಸಿಯೇಶನ್ ಅಧ್ಯಕ್ಷ ಷಣ್ಮುಗಪ್ಪ ಇದೇ ತಿಂಗಳ 17ರಿಂದ ಸರಕು ಸಾಗಾಣಿಕೆಯನ್ನು ಬಂದ್ ಮಾಡುವ ಎಚ್ಚರಿಕೆ ನೀಡಿದ್ದರು.
ಮಾ.17ರ ಮಧ್ಯರಾತ್ರಿಯಿಂದಲೇ ಎಲ್ಲ ರೀತಿಯ ಸರಕು ಸಾಗಾಣಿಕೆ ವಾಹನಗಳ ನಗರ ಪ್ರವೇಶ ನಿಲ್ಲಿಸಿ ಪ್ರತಿಭಟಿಸುವುದಾಗಿ ತಿಳಿಸಿದ್ದರು. ನಿರ್ಧಾರ ಹಿಂಪಡೆಯದಿದ್ದರೆ ಪ್ರತಿಭಟನೆ ನಡೆದು ಹಣ್ಣು, ತರಕಾರಿ, ಔಷಧ ಸೇರಿ ಅಗತ್ಯ ವಸ್ತುಗಳ ಕೊರತೆ ಉಂಟಾದರೆ ಅದಕ್ಕೆ ಸರ್ಕಾರವೇ ಹೊಣೆ ಹೊರಬೇಕು ಎಂದು ಹೇಳಿದ್ದರು.
ಇದೀಗ 7.5 ಮೆಟ್ರಿಕ್ ಟನ್ ಲಗೇಜ್ ಹೊತ್ತ ವಾಹನಗಳ ಓಡಾಟಕ್ಕೆ ಟ್ರಾಫಿಕ್ ಕಮೀಷನರ್ ಅಸ್ತು ಎಂದು ಹೇಳಿದ್ದಾರೆ. ಹೀಗಾಗಿ ಲಘು ಮತ್ತು ಮಧ್ಯಮ ಸರಕು ಸಾಗಾಣಿಕೆ ವಾಹನಗಳು ಇನ್ನು ಮುಂದೆ ನಗರದಲ್ಲಿ ಸಂಚರಿಸಬಹುದಾಗಿದೆ.
ಟ್ರಾಫಿಕ್ ಕಮಿಷನರ್ ಅವರು ಲಾರಿ ಮಾಲೀಕರ ಸಂಘದ ಒಂದು ಪ್ರಮುಖ ಬೇಡಿಕೆ ಈಡೇರಿಸಿದ ಬೆನ್ನಲ್ಲೇ ಫೆಡರೇಷನ್ ಆಫ್ ಕರ್ನಾಟಕ ಸ್ಟೇಟ್ ಲಾರಿ ಓನರ್ಸ್ ಅಂಡ್ ಏಜೆಂಟ್ಸ್ ಅಸೋಸಿಯೇಷನ್ ಮುಷ್ಕರ ವಾಪಸ್ ಪಡದಿದೆ.
ಇದನ್ನೂ ಓದಿ : Lorry strike: ಬೆಂಗಳೂರಲ್ಲಿ ಮಾ. 17ರಿಂದ ಹಾಲು-ತರಕಾರಿ ಇಲ್ಲ? ಇದು ಲಾರಿ ಚಾಲಕರ ಮುಷ್ಕರ ಎಫೆಕ್ಟ್