Site icon Vistara News

Traffic Violation: ಎಲೆಕ್ಷನ್‌ ಟೈಂನಲ್ಲಿ ಟ್ರಾಫಿಕ್‌ ರೂಲ್ಸ್‌ ಬ್ರೇಕ್‌; 25 ದಿನದಲ್ಲಿ 4 ಲಕ್ಷ ಕೇಸ್‌, 20 ಕೋಟಿ ರೂ. ದಂಡ

Traffic Violation

Traffic Violation

ಬೆಂಗಳೂರು: ವಿಧಾನಸಭಾ ಚುನಾವಣಾ (Karnataka Election 2023) ಸಮಯದಲ್ಲಿ ರಾಜಕೀಯ ಮುಖಂಡರು, ಕಾರ್ಯಕರ್ತರು ಅಬ್ಬರದ ಪ್ರಚಾರದಲ್ಲಿ ಮೈಮರೆತಿದ್ದರು. ಸಂಚಾರಿ ನಿಯಮ ಉಲ್ಲಂಘಿಸಿದ (Traffic Violation) ಕಾರಣಕ್ಕೆ ಈಗ ದುಬಾರಿ ದಂಡವನ್ನೇ ವಿಧಿಸಲಾಗಿದೆ. ಕೇವಲ 25 ದಿನಗಳಲ್ಲಿ ಬರೋಬ್ಬರಿ 4.12 ಲಕ್ಷದಷ್ಟು ಪ್ರಕರಣ ದಾಖಲಾಗಿದ್ದು, 22.89 ಕೋಟಿ ರೂ. ದಂಡವನ್ನು ಹಾಕಲಾಗಿದೆ.

ನೆಚ್ಚಿನ ನಾಯಕನನ್ನು ಗೆಲ್ಲಿಸಬೇಕೆಂದು ಬೈಕ್‌ ಏರಿದ ಕಾರ್ಯಕರ್ತರು ಗಲ್ಲಿ ಗಲ್ಲಿಗಳಲ್ಲಿ ಓಡಾಡಿ ಪ್ರಚಾರದಲ್ಲಿ ತೊಡಗಿದ್ದರು. ಆದರೆ ಸಂಚಾರಿ ನಿಯಮವನ್ನು ಗಾಳಿಗೆ ತೂರಿ ಯದ್ವಾತದ್ವಾ ವಾಹನವನ್ನು ಚಲಾಯಿಸಿ, ಈಗ ತಮ್ಮ ಜೇಬಿಗೆ ತಾವೇ ಕತ್ತರಿ ಹಾಕಿಸಿಕೊಂಡಿದ್ದಾರೆ.

ಟ್ರಾಫಿಕ್‌ ಪೊಲೀಸರು ನಮ್ಮನ್ನು ಗಮನಿಸುತ್ತಿಲ್ಲ, ಹೇಳುವವರು ಕೇಳುವವರು ಯಾರೂ ಇಲ್ಲ ಎಂದುಕೊಂಡಿದ್ದರು. ಹೀಗಾಗಿ ವಿಥ್‌ ಔಟ್‌ ಹೆಲ್ಮೆಟ್‌, ಓನ್ ವೇ, ರಾಂಗ್ ರೂಟ್, ಜಿಬ್ರಾ ಕ್ರಾಸ್, ತ್ರಿಬಲ್ ರೈಡಿಂಗ್ ಮಾತ್ರವಲ್ಲದೆ ಅತಿ ವೇಗದ ಚಾಲನೆ, ಸಿಗ್ನಲ್ ಜಂಪ್, ಚಾಲನೆ ವೇಳೆ ಮೊಬೈಲ್ ಬಳಕೆ ಮಾಡಿದ್ದರು. ಹೀಗೆ ಸಂಚಾರಿ ನಿಯಮವನ್ನು ಉಲ್ಲಂಘಿಸಿದ ಕಾರಣಕ್ಕೆ 4.12 ಲಕ್ಷದಷ್ಟು ಕೇಸ್‌ಗಳು ದಾಖಲಾಗಿವೆ. ಸದ್ಯ ದಾಖಲಾಗಿರುವ ಪ್ರಕರಣಗಳಿಗೆ ಸಂಬಂಧಿಸಿದಂತೆ ವಾಹನ ಸವಾರರ ಮೇಲೆ ಬರೋಬ್ಬರಿ 22.89 ಕೋಟಿ ರೂ. ದಂಡ ಹಾಕಲಾಗಿದೆ.

ಪೊಲೀಸರಿಂದ ತಪ್ಪಿಸಿಕೊಂಡ್ರು, ಸಿಸಿ ಕ್ಯಾಮೆರಾದಲ್ಲಿ ಸಿಕ್ಕಾಕೊಂಡ್ರು

ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ನಗರ ಸಂಚಾರಿ ಪೊಲೀಸರನ್ನು ಚುನಾವಣಾ ಕಾರ್ಯಗಳಿಗೆ ನಿಯೋಜನೆ ಮಾಡಲಾಗಿತ್ತು. ಹೀಗಾಗಿ ಇದನ್ನೇ ದುರಪಯೋಗ ಪಡಿಸಿಕೊಂಡ ಸವಾರರು ಕ್ಯಾರೆ ಎನ್ನದೆ ಸಂಚಾರಿ ನಿಯಮವನ್ನು ಉಲ್ಲಂಘನೆ ಮಾಡಿದ್ದರು. ಟ್ರಾಫಿಕ್‌ ಪೊಲೀಸರಿಂದ ತಪ್ಪಿಸಿಕೊಂಡೆವು ಎಂದುಕೊಂಡವರು ಸಿಸಿ ಕ್ಯಾಮೆರಾದಲ್ಲಿ ಲಾಕ್‌ ಆಗಿದ್ದಾರೆ.

ಇದನ್ನೂ ಓದಿ: Weather Report: ಇಂದು ಬಿಸಿಲಿಗೆ ಸುಡಲಿದೆ ರಾಜ್ಯ; ಅಲ್ಲಲ್ಲಿ ಮಾತ್ರವೇ ಮಳೆ ಅಬ್ಬರ

ಕೆಲವು ಪ್ರಕರಣಗಳನ್ನು ಖುದ್ದು ಸಂಚಾರಿ ಪೊಲೀಸರು ತಮ್ಮ ಬಳಿಯ ಐಟಿಎಂಎಸ್ ಆ್ಯಪ್ ಮೂಲಕ ಮೊಬೈಲ್‌ನಲ್ಲಿ ಸೆರೆ ಹಿಡಿದ ಫೋಟೊಗಳ ಆಧಾರದ ಮೇಲೆ ಕೇಸ್ ದಾಖಲಿಸಿದ್ದಾರೆ. ಉಳಿದ ಪ್ರಕರಣಗಳನ್ನು ಸಿಗ್ನಲ್‌ನಲ್ಲಿರುವ 250 ಐಟಿಎಂಎಸ್ ಕ್ಯಾಮೆರಾ ಹಾಗೂ ನಿರ್ಭಯ ಯೋಜನೆಯಲ್ಲಿ ಹಾಕಿರುವ ನೇತ್ರಾ ಕ್ಯಾಮೆರಾಗಳನ್ನು ಬಳಸಿಕೊಂಡು ಕೇಸ್‌ಗಳನ್ನು ಹಾಕಲಾಗಿದೆ.

Exit mobile version