Site icon Vistara News

Tragedy | ನೀರು ಕುಡಿಯಲು ಹೋಗಿ ಜಾರಿ ಬಿದ್ದ ಅಣ್ಣ, ರಕ್ಷಿಸಲು ಹೋದ ತಮ್ಮ ಇಬ್ಬರೂ ಕಾಲುವೆ ಪಾಲು

Two persons drowned in ganga river

ವಿಜಯಪುರ: ಅಣ್ಣ-ತಮ್ಮ ಇಬ್ಬರೂ ಕಾಲುವೆ ಪಾಲಾದ ಆಘಾತಕಾರಿ ಘಟನೆಯೊಂದು ವಿಜಯಪುರ ಜಿಲ್ಲೆಯ ಕೊಲ್ಹಾರ ತಾಲೂಕಿನ ಹಳ್ಳದ ಗೆಣ್ಣೂರ ಗ್ರಾಮದಲ್ಲಿ ನಡೆದಿದೆ. ಅಣ್ಣ ಅನಿಲ್ ಮಾದರ(25) ಮತ್ತು ತಮ್ಮ ಸುನೀಲ್ ಮಾದರ(20) ಕಾಲುವೆ ನೀರುಪಾಲಾದ ದುರ್ದೈವಿಗಳು. ಮೊದಲು ಅಣ್ಣ ನೀರಿಗೆ ಬಿದ್ದರೆ ರಕ್ಷಿಸಲು ಹೋದ ತಮ್ಮನೂ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ.

ಏನಾಯಿತು ಹಾಗಿದ್ದರೆ?
ಅನಿಲ್‌ ಮತ್ತು ಸುನಿಲ್‌ ಇಬ್ಬರೂ ಭಾನುವಾರ ಬೆಳಗ್ಗೆ ಒಟ್ಟಿಗೆ ಮೇಕೆ ಮೇಯಿಸಲು ಹೋಗಿದ್ದರು. ಈ ನಡುವೆ, ಅಣ್ಣನಿಗೆ ಬಾಯಾರಿಕೆ ಆಗಿದೆ. ಹೀಗಾಗಿ ಆತ ಸಮೀಪದಲ್ಲೇ ಹರಿಯುತ್ತಿದ್ದ ಕಾಲುವೆಗೆ ನೀರು ಕುಡಿಯಲೆಂದು ಇಳಿದರು. ಆಗ ಕಾಲು ಜಾರಿ ಬಿದ್ದರು.

ಇದನ್ನು ನೋಡುತ್ತಿದ್ದ ತಮ್ಮ ಸುನಿಲ್‌ ಕೂಡಲೇ ಧಾವಿಸಿದರು. ಅವರೂ ನೀರಿಗೆ ಇಳಿದು ಅಣ್ಣನನ್ನು ರಕ್ಷಿಸಲು ಪ್ರಯತ್ನಿಸಿದರು. ಆದರೆ, ಕಾಲುವೆಯ ನೀರಿನಲ್ಲಿ ಮುಳುಗಿದರು.
ಸೋದರರಿಬ್ಬರು ನೀರುಪಾಲಾದ ಘಟನೆ ಕೇಳಿ ದೊಡ್ಡ ಸಂಖ್ಯೆಯಲ್ಲಿ ಜನರು ಜಮಾಯಿಸಿದರು. ಪೊಲೀಸರು, ಅಗ್ನಿಶಾಮಕ ದಳದವರು ದೌಡಾಯಿಸಿದರು. ಅಂತಿಮವಾಗಿ ಅಣ್ಣ-ತಮ್ಮ ಕಾಲುವೆಯಿಂದ ಹೊರಬಂದದ್ದು ಹೆಣವಾಗಿ. ಕೊಲ್ಹಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version