ವಿಧಾನ ಪರಿಷತ್: ಬೆಂಗಳೂರಿನ ನಾಗರಿಕರಲ್ಲಿ ಅನೇಕ ದಿನಗಳವರೆಗೆ ಚರ್ಚೆಯಾಗುತ್ತಿದ್ದ ಶ್ರೀ ಗುರು ರಾಘವೇಂದ್ರ ಕೊ ಆಪರೇಟಿವ್ ಬ್ಯಾಂಕ್‌ನಲ್ಲಿ ನಡೆದಿರುವ ಅವ್ಯವಹಾರ (Co-op Bank Fraud) ತನಿಖೆಗೆ ಅಚ್ಚರಿಯ ಅಡೆತಡೆ ಎದುರಾಗಿದೆ. ಸುಮಾರು 500 ಪುಟ ಇರುವ ದಾಖಲೆಗಳನ್ನು ಇಂಗ್ಲಿಷ್‌ಗೆ ಅನುವಾದ ಮಾಡಲು ಅಸಾಧ್ಯ ಎಂದು ಭಾಷಾಂತರ ಇಲಾಖೆ ತಿಳಿಸಿದೆ ಎಂದು ಸರ್ಕಾರ ವಿಧಾನ ಪರಿಷತ್‌ನಲ್ಲಿ ಉತ್ತರಿಸಿದೆ.
ಶ್ರೀ ಗುರುರಾಘವೇಂದ್ರ ಸಹಕಾರ ಬ್ಯಾಂಕಿನ ನಡೆದಿರುವ ಅವ್ಯವಹಾರ ತನಿಖೆಯನ್ನು ಸಿಬಿಐ ತನಿಖೆಗೆ ವಹಿಸದಿರುವ ಕುರಿತು ನಿಯಮ 72ರ ಅಡಿಯಲ್ಲಿ ಕಾಂಗ್ರೆಸ್‌ನ ಯು. ಬಿ. ವೆಂಕಟೇಶ್ ಪ್ರಸ್ತಾಪ ಮಡಿದರು. ಇದಕ್ಕೆ ಸಹಕಾರ ಸಚಿವ ಕೆ ಎನ್ ರಾಜಣ್ಣ ಉತ್ತರ ನೀಡಿದ್ದಾರೆ.
ಶ್ರೀ ಗುರು ರಾಘವೇಂದ್ರ ಸಹಕಾರ ಬ್ಯಾಂಕ್ ಅವ್ಯವಹಾರದ ಪ್ರಮಾಣವು ಅಗಾಧವಾದದ್ದು. ಬ್ಯಾಂಕಿನ ಪದಾಧಿಕಾರಿಗಳು, ಆಡಳಿತ ಮಂಡಳಿ ನಿರ್ದೇಶಕರುಗಳು ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರು ಸಾರ್ವಜನಿಕರಿಂದ ಅಪಾರ ಪುಮಾಣದಲ್ಲಿ ಹಣವನ್ನು ಠೇವಣಿ ರೂಪದಲ್ಲಿ ಸಂಗ್ರಹಿಸಿ ವಾಪಸ್ಸು ನೀಡದೇ ವಂಚನೆ ಎಸಗಿದ್ದಾರೆ. ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುವ ಅಗತ್ಯತೆ ಇರುವುದರಿಂದ ಈ ಪ್ರಕರಣದ ವಿಚಾರಣೆಯನ್ನು ಸಿಬಿಐಗೆ ವಹಿಸುವ ಬಗ್ಗೆ ದಿನಾಂಕ 17-01-2023 ರಂದು ಸಹಕಾರ ಸಚಿವರ ಅಧ್ಯಕ್ಷತೆಯಲ್ಲಿ ಜರುಗಿದ ಸಭೆಯಲ್ಲಿ ನಿರ್ಣಯಿಸಲಾಗಿರುತ್ತದೆ.
ಈ ಸಂಬಂಧ ನಿಬಂಧಕರಿಂದ ದಿನಾಂಕ:09-02-2023ರಂದು ಸ್ವೀಕೃತವಾಗಿದ್ದ ಪ್ರಸ್ತಾವನೆಯನ್ನು ಪರಿಶೀಲಿಸಿ ಒಳಾಡಳಿತ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಒಳಾಡಳಿತ ಇಲಾಖೆಯು ಪ್ರಕರಣಕ್ಕೆ ಸಂಬಂಧಿಸಿದ ಮಾಹಿತಿ/ದಾಖಲೆಗಳನ್ನು ಇಂಗ್ಲಿಷ್ ಭಾಷೆಯಲ್ಲಿ ಸಲ್ಲಿಸುವಂತೆ ಸೂಚಿಸಿದೆ. ಈ ಹಿನ್ನೆಲೆಯಲ್ಲಿ ದಿನಾಂಕ:04-05-2023 ರಂದು ಸಂಪೂರ್ಣ ದಾಖಲೆಗಳನ್ನು ಆಂಗ್ಲ ಭಾಷೆಗೆ ಅನುವಾದಿಸಿಕೊಡುವಂತೆ ಭಾಷಾಂತರ ಇಲಾಖೆ ನಿರ್ದೇಶಕರಿಗೆ ಇವರಿಗೆ ನಿಬಂಧಕರ ಹಂತದಲ್ಲಿ ಪತ್ರ ಬರೆಯಲಾಗಿತ್ತು.
ಭಾಷಾಂತರಕ್ಕೆ ನೀಡಿರುವ ದಾಖಲೆಗಳು ಅಗಾಧವಾಗಿದ್ದು, ಮಾನವ ಸಂಪನ್ಮೂಲದ ಕೊರತೆ ಇದೆ. ಕರ್ನಾಟಕ ಸರ್ಕಾರ ಅಧಿಸೂಚಿಸಿರುವ ಭಾಷಾಂತರಕಾರರನ್ನು ಸಂಪರ್ಕಿಸಿ, ಭಾಷಾಂತರಕ್ಕೆ ತಗಲುವ ಖರ್ಚುವೆಚ್ಚಗಳನ್ನು ತಮ್ಮ ಇಲಾಖೆಯೇ ಭರಿಸಿ ಅನುವಾದ ಕಾರ್ಯ ಮಾಡಿಕೊಳ್ಳಬೇಕೆಂದು ಭಾಷಾಂತರ ಇಲಾಖೆ ನಿರ್ದೇಶಕರು ಹಿಂಬರಹ ನೀಡಿರುತ್ತಾರೆ.
ಈ ಹಿನ್ನೆಲೆಯಲ್ಲಿ:19-06-2023 ರಂದ ಬ್ಯಾಂಕಿಗೆ ಸಂಬಂಧಿಸಿದ ದಾಖಲೆಗಳನ್ನು ಇಂಗ್ಲಿಷ್ ಭಾಷೆಗೆ ಅನುವಾದಿಸಲು ಸರ್ಕಾರ ಹೊರಡಿಸಿರುವ ಅಧಿಸೂಚಿತ ಭಾಷಾಂತರಕಾರರಿಗೆ ನೀಡಲಾಗಿದೆ. 500 ಪುಟಗಳ ದಾಖಲೆಗಳು ಆಂಗ್ಲ ಭಾಷೆಗೆ ತರ್ಜುಮೆಗೊಂಡ ನಂತರ ಅಗತ್ಯ ಕ್ರಮ ವಹಿಸಲಾಗುವುದು. ಲಿಕ್ವಿಡೇಷನ್ ಮಾಡಲು ನಮಗೂ ಸಮ್ಮತಿ ಇಲ್ಲ, ಈ ಬಗ್ಗೆ ನ್ಯಾಯಾಲಯ ಗಮನಕ್ಕೆ ತರುತ್ತೇವೆ ಎಂದು ರಾಜಣ್ಣ ತಿಳಿಸಿದ್ದಾರೆ.