Site icon Vistara News

ಹಬ್ಬದ ವೇಳೆ ಟಿಕೆಟ್‌ ದರ ಹೆಚ್ಚಿಸಿದ್ರೆ ಹುಷಾರ್ ಎಂದ ಸಾರಿಗೆ ಇಲಾಖೆ‌, 30% ಏರಿಕೆಗೆ ಪಟ್ಟುಹಿಡಿದ ಖಾಸಗಿ ಬಸ್‌ ಮಾಲೀಕರು

private buses

ಬೆಂಗಳೂರು: ಪ್ರತಿ ಬಾರಿಯೂ ಹಬ್ಬಗಳು ಬಂತೆಂದರೆ ಖಾಸಗಿ ಬಸ್‌ಗಳು ಟಿಕೆಟ್‌ ದರವನ್ನು ಎರಡು, ಮೂರು, ಕೆಲವೊಮ್ಮೆ ನಾಲ್ಕು ಪಟ್ಟು ಹೆಚ್ಚಿಸುವುದು ಸಾಮಾನ್ಯವೇ ಆಗಿ ಬಿಟ್ಟಿದೆ. ಈ ಬಗ್ಗೆ ಸಾಲು ಸಾಲು ದೂರುಗಳು ಸಾರಿಗೆ ಇಲಾಖೆಗೆ ಬರುತ್ತಲೇ ಇವೆ. ಈ ಬಾರಿಯೂ ಅಂಥಹುದೇ ದೂರು ಬಂದ ಹಿನ್ನೆಲೆಯಲ್ಲಿ ಗುರುವಾರ ಸಾರಿಗೆ ಇಲಾಖೆ ಅಧಿಕಾರಿಗಳು ಖಾಸಗಿ ಬಸ್‌ ಮಾಲೀಕರ ಜತೆ ಸಭೆ ನಡೆಸಿ ಹಬ್ಬದ ದಿನಗಳಲ್ಲಿ ಹೆಚ್ಚಿನ ಹಣ ವಸೂಲಿ ಮಾಡದಂತೆ ಎಚ್ಚರಿಕೆ ನೀಡಿದರು. ಆದರೆ, ಖಾಸಗಿ ಬಸ್‌ ಮಾಲೀಕರು ಶೇಕಡಾ ೩೦ರಷ್ಟು ಹೆಚ್ಚಿಸಿಯೇ ಸಿದ್ಧ ಎಂದು ಹಠ ಹಿಡಿದಿದ್ದಾರೆ.

ಅಕ್ಟೋಬರ್ ತಿಂಗಳಲ್ಲಿ ದಸರಾ, ದೀಪಾವಳಿ ಹಬ್ಬಗಳಿವೆ. ಗಾಂಧಿ ಜಯಂತಿ, ಆಯುಧ ಪೂಜೆ, ವಿಜಯ ದಶಮಿ, ದೀಪಾವಳಿ ಹಬ್ಬ ಮತ್ತು ವಾರಾಂತ್ಯದ ರಜೆಗಳನ್ನೆಲ್ಲ ಜತೆಗೂಡಿಸಿಕೊಂಡು ಹೆಚ್ಚಿನವರು ಬೆಂಗಳೂರಿನಿಂದ ತಮ್ಮ ತಮ್ಮ ಊರಿಗೆ ಹೋಗುವುದು ಸಾಮಾನ್ಯವಾಗಿದೆ. ಜತೆಗೆ ರಜೆ ಮುಗಿಸಿಕೊಂಡು ಊರಿನಿಂದ ಮರಳುತ್ತಾರೆ. ಈ ಎರಡೂ ಸಂದರ್ಭಗಳಲ್ಲಿ ಖಾಸಗಿ ಬಸ್‌ಗಳು ದುಪ್ಪಟ್ಟು ದರ ವಸೂಲಿ ಮಾಡುವ ಬಗ್ಗೆ ವ್ಯಾಪಕ ದೂರುಗಳಿವೆ. ಈ ನಿಟ್ಟಿನಲ್ಲಿ ಸಾರಿಗೆ ಇಲಾಖೆಯ ಅಪರ ಆಯುಕ್ತರಾದ ಮಲ್ಲಿಕಾರ್ಜುನ ಅವರು ಖಾಸಗಿ ಬಸ್‌ ಮಾಲೀಕರ ಜತೆಗೆ ಮಾತುಕತೆ ನಡೆಸಿದರು.

ಸಭೆಯ ಬಳಿಕ ಮಾತನಾಡಿದ ಮಲ್ಲಿಕಾರ್ಜುನ ಅವರು, ಪ್ರತಿ ಹಬ್ಬದ ದಿನಗಳಲ್ಲಿ ಬಸ್ ದರ ೧ರಿಂದ ೩ ಪಟ್ಟು ಏರಿಕೆ ಆಗುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರು ಬಂದಿದೆ. ಹೀಗಾಗಿ ಖಾಸಗಿ ಬಸ್ ಮಾಲೀಕರ ಜೊತೆ ಸಭೆ ಮಾಡಿದ್ದೇವೆ. ಹಬ್ಬದ ಸಂದರ್ಭದಲ್ಲಿ ಬಸ್ ದರ ಏರಿಕೆ ಮಾಡದಂತೆ ಎಚ್ಚರಿಕೆ ಕೊಟ್ಟಿದ್ದೇನೆ. ದರ ಹೆಚ್ಚಳ ಮಾಡಿದರೆ ಕಠಿಣ ಕ್ರಮ ಕೈಗೊಳ್ಳುತ್ತೇವೆ. ಸಾರ್ವಜನಿಕರಿಗೆ ಯಾವುದೇ ರೀತಿಯ ಸಮಸ್ಯೆ ಆಗದಂತೆ ನೋಡಿಕೊಳ್ಳಲಾಗುವುದು ಎಂದು ಹೇಳಿದರು.

ತನಿಖಾ ತಂಡ ರಚನೆ, ದೂರು ನೀಡಲು ಕಂಟ್ರೋಲ್‌ ರೂಂ
ಖಾಸಗಿ ಬಸ್‌ಗಳು ದರ ಹೆಚ್ಚಳ ಮಾಡಿದ್ದರ ಬಗ್ಗೆ ದೂರು ನೀಡಲು ಸಾರಿಗೆ ಇಲಾಖೆಯ ಕೇಂದ್ರ ಕಚೇರಿಯಲ್ಲಿ ಎರಡು ಕಂಟ್ರೋಲ್‌ ರೂಂ ರಚನೆ ಮಾಡಲಾಗಿದೆ. ಅಧಿಕ ದರ ವಸೂಲಿ ಮಾಡಿದರೆ 9449863429 ಮತ್ತು 9449863426 ಈ ನಂಬರ್‌ಗೆ ಕರೆ ಮಾಡಿ ಪ್ರಯಾಣಿಕರು ದೂರು ನೀಡಬಹುದು ಎಂದು ಜಂಟಿ ಆಯುಕ್ತರಾದ ಹಾಲಸ್ವಾಮಿ ಹೇಳಿಕೆ ನೀಡಿದ್ದಾರೆ.

ಪ್ರಯಾಣಿಕರು ಬಸ್ ನಂಬರ್ ಕೊಟ್ಟು ದೂರು ಮಾಡಬಹುದು, ದೂರುಗಳು ಬಂದರೆ ಮೊದಲ ಬಾರಿಗೆ ನೋಟಿಸ್ ನೀಡಿ ಎಚ್ಚರಿಕೆ ನೀಡಲಾಗುತ್ತದೆ. ಬಳಿಕ ಬಸ್ ಲೈಸೆನ್ಸ್ ರದ್ದು ಮಾಡಲಾಗುವುದು ಎಂದು ಹೇಳಿದರು.

ಅಧಿಕ ದರ ವಸೂಲಿ ಪತ್ತೆಗೆ ೧೨ ತನಿಖಾ ತಂಡ ರಚನೆ
ಅಧಿಕ ದರ ವಸೂಲಿಯನ್ನು ಪತ್ತೆ ಹೆಚ್ಚುವುದಕ್ಕೆ ೧೨ ತನಿಖಾ ತಂಡ ರಚನೆ ಮಾಡಲಾಗಿದೆ. ಗುರುವಾರದಿಂದಲೇ ತನಿಖಾ ತಂಡ ತನಿಖೆ ಶುರು ಮಾಡಲಿದೆ, ಟಿಕೆಟ್ ದರ ಹೆಚ್ಚಿಗೆ ವಸೂಲಿ ಕಂಡುಬಂದರೆ ತನಿಖಾ ತಂಡ ಪತ್ತೆ ಮಾಡುತ್ತದೆ ಎಂದು ಹೇಳಿದ ಅವರು, ಇದರ ಜತೆಗೆ ಅನಧಿಕೃತ ಸರಕುಗಳನ್ನು ತುಂಬುವುದಕ್ಕೂ ಬ್ರೇಕ್ ಹಾಕಲಾಗುತ್ತದೆ. ಸಾರ್ವಜನಿಕರ ಸುರಕ್ಷತೆಗಾಗಿ ಕ್ರಮಗಳನ್ನು ತೆಗೆದುಕೊಳ್ಳಲು ಸರ್ಕಾರ ಕ್ರಮ ಕೈಗೊಳ್ಳಲಾಗುವುದು ಎಂದರು.

೩೦% ಏರಿಕೆ ಖಚಿತ ಎಂದ ಖಾಸಗಿ ಬಸ್‌ ಮಾಲೀಕರು
ಸಾರಿಗೆ ಇಲಾಖೆಯ ಸೂಚನೆಗೆ ಖಾಸಗಿ ಮಾಲೀಕರು ಕ್ಯಾರೇ ಅನ್ನುವ ಹಾಗೆ ಕಾಣುತ್ತಿಲ್ಲ. ಈಗಾಗಲೇ ಕೆಲವು ಬಸ್‌ ಕಂಪನಿಗಳು ಸಾಮಾನ್ಯ ದರಕ್ಕಿಂತ ನಾಲ್ಕು ಪಟ್ಟು ದರವನ್ನು ನಿಗದಿಪಡಿಸಿವೆ ಮತ್ತು ಆ ಬಸ್‌ಗಳಲ್ಲೂ ಸೀಟುಗಳೆಲ್ಲವೂ ಬುಕ್‌ ಆಗಿವೆ. ಇದರ ನಡುವೆ ಖಾಸಗಿ ಬಸ್‌ ಮಾಲೀಕರು ಕೂಡಾ ತಾವು ಕನಿಷ್ಠ ಶೇಕಡಾ ೩೦ರಷ್ಟು ದರ ಏರಿಕೆ ಮಾಡುವುದು ಖಚಿತ ಎಂಬ ಹಠಕ್ಕೆ ಬಿದ್ದಿದ್ದಾರೆ.

ಸಭೆಯ ಬಳಿಕ ಮಾತನಾಡಿದ ರಾಜ್ಯ ಹಾಗೂ ಅಂತರರಾಜ್ಯ ಖಾಸಗಿ ಬಸ್ ಮಾಲೀಕರ ಸಂಘದ ಖಜಾಂಚಿ ಶಕೀಲ್‌ ಅವರು, ಹಬ್ಬದ ದಿನಗಳಲ್ಲಿ ಖಾಸಗಿ ಬಸ್ ಟಿಕೆಟ್ ದರವನನ್ನು 30% ಹೆಚ್ಚಳ ಮಾಡುತ್ತೇವೆ. ಬೇಡಿಕೆ ಹೆಚ್ಚಿರುವುದರಿಂದ ಸಹಜವಾಗಿಯೇ ಈ ದರ ಹೆಚ್ಚಳ ಮಾಡುತ್ತೇವೆ. ಖಾಸಗಿ ಬಸ್ ಮಾಲಿಕರಾಗಿ ನಮಗೂ ಸಮಸ್ಯೆಗಳಿವೆ. ಹೀಗಾಗಿ ಶೇಕಡಾ ೩೦ರಷ್ಟು ದರ ಹೆಚ್ಚಳ ಅನಿವಾರ್ಯ ಎಂದು ಹೇಳಿದರು.
ಸಾರಿಗೆ ಅಧಿಕಾರಿಗಳ ಸಭೆಯಲ್ಲೂ ಶೇಕಡಾ ೩೦ರಷ್ಟು ಹೆಚ್ಚಳ ಮಾಡುವುದಾಗಿ ಹೇಳಿದ್ದೇವೆ ಎಂದು ನುಡಿದರು. ಈ ನಡುವೆ ಖಾಸಗಿ ಬಸ್‌ಗಳು ದರ ಹೆಚ್ಚಳ ಮಾಡಬಾರದು ಎಂದು ಹೇಳುವ ಸಾರಿಗೆ ಇಲಾಖೆ, ಸರಕಾರಿ ಬಸ್‌ಗಳು ಏರಿಸಿರುವುದನ್ನು ಯಾಕೆ ತಡೆಯುತ್ತಿಲ್ಲ ಎಂದು ಕೇಳಿದ್ದಾರೆ ಖಾಸಗಿ ಬಸ್‌ ಮಾಲೀಕರು.

Exit mobile version