Site icon Vistara News

Carpooling Ban: ಬೆಂಗಳೂರಿನಲ್ಲಿ ಕಾರ್‌ಪೂಲಿಂಗ್ ನಿಷೇಧ? ಉಲ್ಲಂಘಿಸಿದರೆ 10 ಸಾವಿರ ರೂ.ದಂಡ

ಬೆಂಗಳೂರು: ರಾಜಧಾನಿಯಲ್ಲಿ ಕಾರ್‌ಪೂಲಿಂಗ್ ನಿಷೇಧ (Carpooling Ban) ಮಾಡಲು ರಾಜ್ಯ ಸಾರಿಗೆ ಇಲಾಖೆ ಮುಂದಾಗಿದ್ದು, ಇನ್ನು ಕೆಲವೇ ದಿನಗಳಲ್ಲಿ ಅಧಿಕೃತ ಆದೇಶ ಹೊರಡಿಸುವ ಸಾಧ್ಯತೆ ಇದೆ. ಇದರಿಂದ ಆ್ಯಪ್‌ಗಳನ್ನು ಬಳಸಿ ವೈಟ್ ಬೋರ್ಡ್ ವಾಹನಗಳನ್ನು ವಾಣಿಜ್ಯ ಉದ್ದೇಶಕ್ಕೆ ಬಳಸುವುದಕ್ಕೆ ಕಡಿವಾಣ ಬೀಳಲಿದೆ. ನಿಯಮ ಉಲ್ಲಂಘಿಸಿದರೆ ವಾಹನ ಚಾಲಕರಿಗೆ 5ರಿಂದ 10 ಸಾವಿರ ರೂ.ವರೆಗೆ ದಂಡ ವಿಧಿಸುವ ಸಾಧ್ಯತೆ ಇದೆ.

ಇತ್ತೀಚೆಗೆ ಮಹಾರಾಷ್ಟ್ರದಲ್ಲಿ ಕಾರ್‌ಪೂಲಿಂಗ್‌ ಹಾಗೂ ಬೈಕ್‌ ಶೇರಿಂಗ್‌ ಆ್ಯಪ್‌ಗಳನ್ನು ಬಳಸಿ ವೈಟ್ ಬೋರ್ಡ್ ವಾಹನಗಳನ್ನು ವಾಣಿಜ್ಯ ಉದ್ದೇಶಕ್ಕೆ ಬಳಸುವುದರ ಮೇಲೆ ನಿಷೇಧ ವಿಧಿಸಲಾಗಿತ್ತು. ಬೆಂಗಳೂರಿನಲ್ಲೂ ಕಾರ್‌ಪೂಲಿಂಗ್‌ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ಕ್ವಿಕ್‌ ರೈಡ್‌, ಬ್ಲಾಬ್ಲಾ ಕಾರ್‌ ಮತ್ತಿತರ ಆ್ಯಪ್‌ಗಳನ್ನು ಬಳಸಿ ಕಾರ್‌ಪೂಲಿಂಗ್‌ ಮಾಡುವುದಕ್ಕೆ ಸಾರಿಗೆ ಇಲಾಖೆ ನಿಷೇಧ ವಿಧಿಸುವ ಸಾಧ್ಯತೆ ಇದೆ.

ವಾಣಿಜ್ಯ ಉದ್ದೇಶಕ್ಕೆ ವಾಹನಗಳನ್ನು ಬಳಸಬೇಕೆಂದರೆ ಯೆಲ್ಲೋ ಬೋರ್ಡ್‌ ಇರಬೇಕಾಗುತ್ತದೆ. ಇದಕ್ಕಾಗಿ ಹೆಚ್ಚುವರಿ ತೆರಿಗೆ ಕಟ್ಟಬೇಕು. ಆದರೆ, ಕೆಲವರು ವೈಟ್‌ಬೋರ್ಟ್‌ ವಾಹನ ಬಳಸಿ ಬಾಡಿಗೆಗಾಗಿ ಓಡಿಸುತ್ತಿರುವುದರಿಂದ ಟ್ಯಾಕ್ಸಿ ಚಾಲಕರಿಗೆ ಅನ್ಯಾಯವಾಗುತ್ತಿದೆ. ಹೀಗಾಗಿ ಕಾರ್‌ಪೂಲಿಂಗ್‌ ನಿಷೇಧ ಮಾಡಬೇಕು ಎಂದು ಚಾಲಕರ ಸಂಘಟನೆಗಳು ಒತ್ತಾಯಿಸಿರುವ ಹಿನ್ನೆಲೆಯಲ್ಲಿ ಕಾರ್‌ಪೂಲಿಂಗ್‌ ಮೇಲೆ ನಿಷೇಧ ವಿಧಿಸಲು ಸರ್ಕಾರ ಚಿಂತನೆ ನಡೆಸಿದೆ.

ಇದನ್ನೂ ಓದಿ | Senior Citizens : ಹಿರಿಯ ನಾಗರಿಕರಿಗೆ ಗುಡ್‌ ನ್ಯೂಸ್;‌ ಶೀಘ್ರ ಮಾಸಾಶನ ಹೆಚ್ಚಳ

ಏನಿದು ಕಾರ್‌ಪೂಲಿಂಗ್‌

ಸಂಚಾರ ದಟ್ಟಣೆ ಕಿರಿಕಿರಿ ಕಡಿಮೆಯಾಗುವುದು ಹಾಗೂ ಒಂದೇ ಮಾರ್ಗದಲ್ಲಿ ಸಂಚರಿಸುವ ಉದ್ಯೋಗಿಗಳಿಗೆ ನೆರವಾಗುವುದರಿಂದ ಕಾರ್‌ಪೂಲಿಂಗ್ ಇತ್ತೀಚೆಗೆ ಟ್ರೆಂಡ್ ಆಗಿದೆ. ಇದರಿಂದ ಒಂದು ಮಾರ್ಗದಲ್ಲಿ ಒಬ್ಬ ವ್ಯಕ್ತಿ ಕಾರಿನಲ್ಲಿ ಹೋಗುವಾಗ ಅದೇ ಮಾರ್ಗದಲ್ಲಿ ಬರುವ ಇತರರನ್ನು ಕರೆದೊಯ್ಯುತ್ತಾನೆ. ಆದರೆ, ಈ ಇದನ್ನು ಆ್ಯಪ್‌ಗಳನ್ನು ಬಳಸಿ ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ ಎಂಬ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳಲು ಸಾರಿಗೆ ಇಲಾಖೆ ಮುಂದಾಗಿದೆ.

Exit mobile version