Site icon Vistara News

ರಸ್ತೆಗಳು ಹದಗೆಟ್ಟಿವೆ, ನಿಮ್ಮ ಭಾಗಕ್ಕೆ ಬಸ್‌ ಇಲ್ಲ; ಸಾರಿಗೆ ಘಟಕದ ಬೋರ್ಡ್‌ ನೋಡಿ ಕಂಗೆಟ್ಟ ಲಕ್ಷ್ಮೇಶ್ವರ ಮಂದಿ!

ಗದಗ_ಲಕ್ಷ್ಮೇಶ್ವರ ಬಸ್‌

ಗದಗ (ಲಕ್ಷ್ಮೇಶ್ವರ): ಸತತ ಮಳೆಯಿಂದಾಗಿ ಲಕ್ಷ್ಮೇಶ್ವರ ತಾಲೂಕಿನ ಹಲವು ಹಳ್ಳಗಳು ತುಂಬಿ ಹರಿಯುತ್ತಿವೆ. ಹಲವು ರಸ್ತೆಗಳು ಕಿತ್ತುಹೋಗಿದ್ದು, 90 ಕಿ.ಮೀ.ಗೂ ಹೆಚ್ಚು ದೂರದ ರಸ್ತೆ ತುರ್ತು ದುರಸ್ತಿ ಹೊಂದಬೇಕಿದೆ. ರಸ್ತೆಗಳಲ್ಲಿ ದೊಡ್ಡ ದೊಡ್ಡ ಗುಂಡಿಗಳು ಬಿದ್ದಿರುವ ಪರಿಣಾಮ ರಸ್ತೆ ಯಾವುದು? ಗುಂಡಿ ಯಾವುದು? ಎನ್ನುವಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಈ ಹಿನ್ನೆಲೆಯಲ್ಲಿ “ಬಸ್‌ ಸೇವೆ ರದ್ದಾಗಿದೆ” ಎಂಬ ಕೆಎಸ್‌ಆರ್‌ಟಿಸಿ ಬಸ್‌ ಘಟಕ ಹಾಕಿದ ನಾಮಫಲಕ ನಾಗರಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಕಳೆದ 5 ದಿನದಿಂದ ಲಕ್ಷ್ಮೇಶ್ವರ ಪಟ್ಟಣದಿಂದ ಹರದಗಟ್ಟಿ, ಗುತ್ತಲ, ಛಬ್ಬಿ, ಬೆಳ್ಳಟ್ಟಿ, ಬಡ್ನಿ, ಆದರಳ್ಳಿ, ಚನ್ನಪಟ್ಟಣ, ಸೇರಿದಂತೆ ಕೆಲವು ಗ್ರಾಮಗಳಿಗೆ ಬಸ್‌ಗಳು ತೆರಳುತ್ತಿಲ್ಲ. ಮಳೆಯಿಂದ ರಸ್ತೆಗಳು ಹದಗೆಟ್ಟು ಹೋಗಿದ್ದರಿಂದ ಗ್ರಾಮಗಳಿಗೆ ಬಸ್ ಸೇವೆ ಸ್ಥಗಿತಗೊಂಡಿದೆ. ಸ್ಥಳೀಯ ನಿವಾಸಿಗಳು ಹಾಗೂ ವಿದ್ಯಾರ್ಥಿಗಳ ಗೋಳನ್ನು ಕೇಳುವವರೇ ಇಲ್ಲವಾಗಿದೆ.

ಸುತ್ತಮುತ್ತಲಿನ ಹಳ್ಳಿಗಳ ಜನರು ದೈನಂದಿನ ವಹಿವಾಟಿಗೆ ಲಕ್ಷ್ಮೇಶ್ವರ ಪಟ್ಟಣವನ್ನೇ ಅವಲಂಬಿಸಿದ್ದಾರೆ. 5 ದಿನಗಳಿಂದ ಸಾರಿಗೆ ಬಸ್ ಬಾರದ ಕಾರಣ ಜನರು ಸಂಕಷ್ಟಕ್ಕೀಡಾಗಿದ್ದಾರೆ. ಈ ಬಗ್ಗೆ ವಿಚಾರಿಸಲು ಕೆಎಸ್‌ಆರ್‌ಟಿಸಿ ಬಸ್‌ ಘಟಕಕ್ಕೆ ಹೋದರೆ ಆಘಾತ ಕಾದಿತ್ತು.

ರಸ್ತೆ ಮೇಲೆ ನೀರು ಹರಿಯುತ್ತಿರುವುದರಿಂದ ಸಂಪರ್ಕ ಬಂದ್‌ ಆಗಿರುವುದು.

ನಾಮಫಲಕ ಅವಾಂತರ!
“ಈ ಊರುಗಳ ರಸ್ತೆಗಳು ಹದಗೆಟ್ಟಿವೆ. ಹಾಗಾಗಿ ಬಸ್ ಸೇವೆ ರದ್ದಾಗಿವೆ” ಎಂದು ಲಕ್ಷ್ಮೇಶ್ವರ ಬಸ್ ಘಟಕ ಮೇಲ್ವಿಚಾರಕರು ಬಸ್ ನಿಲ್ದಾಣದಲ್ಲಿ ನಾಮಫಲಕ ಹಾಕಿದ್ದಾರೆ. ಅಧಿಕಾರಿಗಳ ಈ ನಿರ್ಧಾರದಿಂದ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.

ತುಂಬಿದ ಹಳ್ಳಗಳು
ಸತತವಾಗಿ ಸುರಿಯುತ್ತಿರುವ ಮಳೆಗೆ ಹಾಲಗಿ ಹೊಳೆ, ಚನ್ನಪಟ್ಟಣ, ನೆಲೋಗಲ, ಹಳ್ಳ, ಶೆಟ್ಟಿಕೇರಿ ತುಂಬಿಹರಿದು, ರಸ್ತೆಗಳು ಕೊಚ್ಚಿ ಹೋಗಿವೆ. ಇದರಿಂದ ಬಸ್ ಸಂಚಾರ ಇಲ್ಲದೆ ವಿದ್ಯಾರ್ಥಿಗಳು, ರೋಗಿಗಳ, ಸಣ್ಣ ಉದ್ಯೋಗ ಮಾಡಲು ಪಟ್ಟಣಕ್ಕೆ ಬರುವ ಜನರ ಪರಿಸ್ಥಿತಿ ಅಯೋಮಯವಾಗಿದೆ.

ಕೇವಲ 61 ಬಸ್ ಸೇವೆ
ಲಕ್ಷ್ಮೇಶ್ವರ ಡಿಪೋದಲ್ಲಿ ಸುಮಾರು 61 ಬಸ್‌ಗಳು ಸಂಚಾರಕ್ಕಿವೆ. ಹಳ್ಳಿಗಳಿಗೆ ಸರಿಯಾದ ಬಸ್ ವ್ಯವಸ್ಥೆ ಬೇಕಾದರೆ 115 ಬಸ್‌ಗಳು ಬೇಕು ಎಂದು ಹೇಳಲಾಗಿದೆ. ಅಲ್ಲದೆ, ಡಿಪೋದಲ್ಲಿ ಡ್ರೈವರ್, ಕಂಡಕ್ಟರ್ ಸೇರಿದಂತೆ 229 ಸಾರಿಗೆ ಸಿಬ್ಬಂದಿ ಇದ್ದು, 400ಕ್ಕಿಂತ ಅಧಿಕ ಸಿಬ್ಬಂದಿಯ ಅಗತ್ಯವಿದೆ ಎಂದು ಹೇಳಲಾಗಿದೆ. ಆದರೆ, ಈ ಬಗ್ಗೆ ಸಂಬಂಧಪಟ್ಟ ಮಂತ್ರಿಗಳು, ಅಧಿಕಾರಿಗಳು ಗಮನಹರಿಸುತ್ತಿಲ್ಲ ಎಂಬುದು ಗ್ರಾಮದವರ ಅಸಮಾಧಾನವಾಗಿದೆ.

ಹದಗೆಟ್ಟಿರುವ ರಸ್ತೆಗಳು, ಹಳ್ಳಗಳು, ಹೊಳೆಗಳು ತುಂಬಿ ಹರಿಯುತ್ತಿರುವ ಕಡೆಗಳಲ್ಲಿ ತಾತ್ಕಾಲಿಕವಾಗಿ ಬಸ್‌ ಸೇವೆಯನ್ನು ರದ್ದು ಮಾಡಲಾಗಿದೆ. ಹರಿಯುತ್ತಿರುವ ಹಳ್ಳಗಳಲ್ಲಿ ನೀರಿನ ಮಟ್ಟ ಕಡಿಮೆಯಾದ ನಂತರ ಬಸ್‌ ಸಂಚಾರವನ್ನು ಪುನಾರಂಭಿಸಲಾಗುವುದು.
| ಸವಿತಾ ಆದಿ, ಲಕ್ಷ್ಮೇಶ್ವರ ಘಟಕ ವ್ಯವಸ್ಥಾಪಕಿ

ಲಕ್ಷ್ಮೇಶ್ವರ ತಾಲೂಕಿನಲ್ಲಿ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಅನೇಕ ರಸ್ತೆಗಳು ಹದಗೆಟ್ಟು ಹಳ್ಳಿಗಳಿಗೆ ಬಸ್ ಬರುತ್ತಿಲ್ಲ. ಇದರಿಂದ ದೈನಂದಿನ ಚಟುವಟಿಕೆಗೆ ಪಟ್ಟಣವನ್ನೇ ಅವಲಂಬಿಸಿದ ಜನರಿಗೆ, ವಿದ್ಯಾರ್ಥಿಗಳಿಗೆ ಬಹಳ ತೊಂದರೆ ಆಗುತ್ತಿದ್ದು, ಜನಪ್ರತಿನಿದಿಗಳು ಇತ್ತ ಕಡೆ ಗಮನ ಹರಿಸಿ ಸಮಸ್ಯೆಗಳನ್ನು ಸರಿಪಡಿಸಬೇಕು.
| ಪದ್ಮರಾಜ ಪಾಟೀಲ, ಜೆಡಿಎಸ್ ಮುಖಂಡ

Exit mobile version