ಬೆಂಗಳೂರು: ಉದ್ಯಮಿಯೊಬ್ಬರ ಪುತ್ರ ವಿದ್ವತ್ ಮೇಲೆ ಹಲ್ಲೆ ನಡೆಸಿದ ಪ್ರಕರಣದಲ್ಲಿ ಕಾಂಗ್ರೆಸ್ ಶಾಸಕ ಎನ್ ಎ ಹ್ಯಾರಿಸ್ ಪುತ್ರ ಹಾಗೂ ಯುವ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ನಲಪಾಡ್ ವಿರುದ್ಧದ ವಿಚಾರಣೆಗೆ ವಿಚಾರಣಾಧೀನ ನ್ಯಾಯಾಲಯವು ಅಸ್ತು ಎಂದಿದೆ. ಈ ವಿಚಾರಣೆಗೆ ಹೈಕೋರ್ಟ್ ಹಿಂದೆ ಆರು ತಿಂಗಳ ಕಾಲ ತಡೆಯಾಜ್ಞೆ ನೀಡಿತ್ತು. ಬಳಿಕ ಅದನ್ನು ವಿಸ್ತರಣೆ ಮಾಡದೆ ಇರುವುದರಿಂದ ವಿಚಾರಣಾಧೀನ ಕೋರ್ಟ್ ವಿಚಾರಣೆ ಮುಂದುವರಿಸಲು ನಿರ್ಧರಿಸಿದೆ.
ಹಿರಿಯ ವಕೀಲ ಶ್ಯಾಮ್‌ಸುಂದರ್ ಅವರನ್ನು ವಿಶೇಷ ಸರ್ಕಾರಿ ಅಭಿಯೋಜಕರಾಗಿ ಮುಂದುವರಿಸಲು ಮತ್ತು ಪ್ರಕರಣದ ವಿಚಾರಣೆ ಮುಂದುವರಿಸುವಂತೆ ಕೋರಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು 66ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸತ್ರ ನ್ಯಾಯಾಧೀಶರಾದ ಎಸ್ ನಟರಾಜ್ ಅವರು ಮಾನ್ಯ ಮಾಡಿದ್ದಾರೆ.
“ಹಿರಿಯ ವಕೀಲ ಎಂ ಶ್ಯಾಮ್ ಸುಂದರ್ ಅವರು ಪ್ರಾಸಿಕ್ಯೂಷನ್ ಪರವಾಗಿ ಈ ನ್ಯಾಯಾಲಯದಲ್ಲಿ ವಾದ ಮಂಡಿಸಲು ಅರ್ಹರಾಗಿದ್ದಾರೆ. ಆರು ತಿಂಗಳಿಂದ ಪ್ರಕರಣಕ್ಕೆ ನೀಡಲಾಗಿದ್ದ ತಡೆಯಾಜ್ಞೆ ಮುಂದುವರಿಸಿಲ್ಲವಾದ್ದರಿಂದ ವಿಚಾರಣೆಗೆ ಅನುಮತಿಸಲಾಗಿದೆ” ಎಂದು ನ್ಯಾಯಾಲಯವು ಆದೇಶದಲ್ಲಿ ಹೇಳಿದೆ.
“ಶ್ಯಾಮ್‌ಸುಂದರ್ ಅವರಿಗೆ ಹಿರಿಯ ವಕೀಲರಾಗಿ ಪದೋನ್ನತಿ ನೀಡಿದ ಬಳಿಕ ಅವರನ್ನು ವಿಶೇಷ ಸರ್ಕಾರಿ ಅಭಿಯೋಜಕರನ್ನಾಗಿ ನೇಮಕ ಮಾಡಿ ರಾಜ್ಯ ಸರ್ಕಾರ ಹೊರಡಿಸಿರುವ ಅಧಿಸೂಚನೆಯನ್ನು ಆರೋಪಿಯು ಪ್ರಶ್ನಿಸಿಲ್ಲ. ಸಿಆರ್‌ಪಿಸಿ ಸೆಕ್ಷನ್ 24 ಮತ್ತು ವಕೀಲರ ಕಾಯಿದೆ 1961ರಲ್ಲಿ ಹಿರಿಯ ವಕೀಲರು ವಿಶೇಷ ಸರ್ಕಾರಿ ಅಭಿಯೋಜಕರಾಗಿ ವಾದಿಸುವಂತಿಲ್ಲ ಎಂದು ನಿರ್ಬಂಧ ವಿಧಿಸಲಾಗಿಲ್ಲ. ಹೀಗಾಗಿ, ಆರೋಪಿ ನಲಪಾಡ್ ಆಕ್ಷೇಪಣೆಯಲ್ಲಿ ಯಾವುದೇ ತಿರುಳಿಲ್ಲ” ಎಂದು ಪೀಠವು ಆದೇಶದಲ್ಲಿ ಹೇಳಿದೆ.
ಯು ಬಿ ಸಿಟಿಯ ಫರ್ಜಿ ಕೆಫೆಯಲ್ಲಿ ನಡೆದಿದ್ದ ಹಲ್ಲೆ ಪ್ರಕರಣ
2018ರ ಫೆಬ್ರವರಿ 17ರ ರಾತ್ರಿರ ನಲಪಾಡ್ ಮತ್ತು ಅವರ ಸಹಚರರು ಬೆಂಗಳೂರಿನ ಯುಬಿ ಸಿಟಿಯ ಫರ್ಜಿ ಕೆಫೆಯಲ್ಲಿ ವಿದ್ವತ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದರು. 2018ರ ಜೂನ್ 14ರಂದು ಕರ್ನಾಟಕ ಹೈಕೋರ್ಟ್ ಜಾಮೀನು ನೀಡುವಾಗ ಆರೋಪಿ ಬೆಂಗಳೂರು ನಗರದ ನ್ಯಾಯಾಲಯದ ವ್ಯಾಪ್ತಿ ಬಿಟ್ಟು ಹೊರಗೆ ಹೋಗಬಾರದು ಎಂಬ ಷರತ್ತನ್ನು ವಿಧಿಸಿತ್ತು. ನಂತರ ಮೆಕ್ಕಾಗೆ ತೆರಳಲು ಜಾಮೀನು ಷರತ್ತು ಸಡಿಲಿಕೆ ಮಾಡಿತ್ತು. ಆನಂತರ ಪ್ರಕರಣದ ವಿಚಾರಣೆಗೆ ತಡೆ ನೀಡಿತ್ತು. ಬಳಿಕ ತಡೆಯಾಜ್ಞೆಯನ್ನು ವಿಸ್ತರಿಸಿರಲಿಲ್ಲ.
ಇದನ್ನೂ ಓದಿ | ಅಪಘಾತದಲ್ಲಿ ಎಂಜಿನಿಯರ್‌ಗೆ 65% ಅಂಗವೈಕಲ್ಯ: 11 ಲಕ್ಷ ಬದಲು 44 ಲಕ್ಷ ರೂ. ಪರಿಹಾರ ನೀಡಲು ಹೈಕೋರ್ಟ್ ಆದೇಶ