Site icon Vistara News

Road accident Case: ಅಪಘಾತ ಪ್ರಕರಣದಲ್ಲಿ ಕೋರ್ಟ್‌ ತೀರ್ಪೇ ಫೈನಲ್‌, ನ್ಯಾಯಮಂಡಳಿಯದ್ದಲ್ಲ

Car accident case: high court order

Car accident case: high court order

ಬೆಂಗಳೂರು: ವಾಹನ ಅಪಘಾತ ಪ್ರಕರಣಗಳಲ್ಲಿ (Vehicle accident case) ನ್ಯಾಯಾಲಯ ಒಮ್ಮೆ ತೀರ್ಪು ನೀಡಿದ ಬಳಿಕ ಮೋಟಾರು ವಾಹನ ಅಪಘಾತ ಪರಿಹಾರ ನ್ಯಾಯಮಂಡಳಿ ಅದನ್ನು ಬದಲಿಸಲು ಅವಕಾಶವಿಲ್ಲ ಎಂದು ರಾಜ್ಯ ಹೈಕೋರ್ಟ್‌ (Karnataka High court) ಹೇಳಿದೆ. ಹಲವು ದಾಖಲೆ ಮತ್ತು ಸಾಕ್ಷ್ಯಗಳನ್ನು ಪರಿಶೀಲಿಸಿ ಕೋರ್ಟ್‌ ಚಾಲಕ ತಪ್ಪಿತಸ್ಥ ಎಂದು ತೀರ್ಮಾನಿಸಿದ ಬಳಿಕ ಇನ್ಯಾವುದೋ ದಾಖಲೆಯನ್ನು ಮುಂದಿಟ್ಟುಕೊಂಡು ನ್ಯಾಯ ಮಂಡಳಿ ಅದನ್ನು ಬದಲಿಸುವ ಹಾಗಿಲ್ಲ ಎನ್ನುತ್ತದೆ ಹೈಕೋರ್ಟ್‌ನ ಒಂದು ತೀರ್ಪು.

ಏನಿದು ಪ್ರಕರಣ? ಯಾಕೆ ಹೈಕೋರ್ಟ್‌ಗೆ ಬಂತು?

ದಾವಣಗೆರೆ ಜಿಲ್ಲೆಯ ಜಗಳೂರಿನಲ್ಲಿ 2015ರಲ್ಲಿ ಒಂದು ಅಪಘಾತ ನಡೆದಿತ್ತು. ಶುಕ್ರು ಸಾಬ್ ಮತ್ತು ಅವರ ಮೊಮ್ಮಗಳು ಬಸ್‌ಗಾಗಿ ನಿಲ್ದಾಣದಲ್ಲಿ ಕಾದು ನಿಂತಿದ್ದಾಗ ಕಾರೊಂದು ಢಿಕ್ಕಿ ಹೊಡೆದು ಶುಕ್ರು ಸಾಬ್ ಸಾವನ್ನಪ್ಪಿದರೆ, ಮೊಮ್ಮಗಳು ಗಾಯಗೊಂಡಿದ್ದರು. ಅತಾವುಲ್ಲಾ ಖಾನ್ ಎಂಬಾತ ಕಾರು ಚಾಲಕನಾಗಿದ್ದ.

ನಿರ್ಲಕ್ಷ್ಯ ಮತ್ತು ಅಜಾಗರೂಕತೆಯಿಂದ ಅತಾವುಲ್ಲಾ ಖಾನ್ ಕಾರು ಚಾಲನೆ ಮಾಡಿ ಅಪಘಾತ ಮಾಡಿದ್ದಾರೆ ಎಂಬ ತೀರ್ಮಾನಕ್ಕೆ ಬಂದಿದ್ದ ಕ್ರಿಮಿನಲ್ ಕೋರ್ಟ್ ಆತನನ್ನು ದೋಷಿಯಾಗಿ ತೀರ್ಮಾನಿಸಿತ್ತು. ಈ ನಡುವೆ ಪ್ರಕರಣದಲ್ಲಿ ಪರಿಹಾರ ಕೋರಿ ಮೃತನ ಪತ್ನಿ ಮೋಟಾರು ಅಪಘಾತ ಪರಿಹಾರ ನ್ಯಾಯ ಮಂಡಳಿ ಅರ್ಜಿ ಸಲ್ಲಿಸಿದ್ದರು. ಅದರ ವಿಚಾರಣೆಯ ವೇಳೆ ನ್ಯಾಯಮಂಡಳಿ ಪ್ರಕರಣದ ಗತಿಯನ್ನೇ ಬದಲಾಯಿಸಿತ್ತು.

ವಿಮಾ ಕಂಪೆನಿ ಪರ ವಕೀಲರು, ಪ್ರಕರಣದ ವೈದ್ಯಕೀಯ ದಾಖಲೆಗಳಲ್ಲಿ (ಎಂಎಲ್‌ಸಿ) ಕಾರು ಚಾಲಕನ ಹೆಸರು ಅತಾವುಲ್ಲಾ ಖಾನ್ ಬದಲಾಗಿ ಅಖ್ತರ್ ಎಂದು ತೋರಿಸಲಾಗಿದೆ. ಅಖ್ತರ್ ಕಾರು ಚಾಲನೆ ಪರವಾನಗಿ ಹೊಂದಿರಲಿಲ್ಲ. ಇದರಿಂದ ಪೊಲೀಸರು ಅತಾವುಲ್ಲಾ ಎಂಬಾತನನ್ನು ಪ್ರಕರಣದಲ್ಲಿ ಸಿಲುಕಿಸಿ ಆರೋಪ ಪಟ್ಟಿ ಸಲ್ಲಿಸಿದ್ದರು. ಆದ್ದರಿಂದ, ಪರಿಹಾರ ಕೊಡಲು ಸಾಧ್ಯವಿಲ್ಲ ಎಂದು ಹೇಳಿತ್ತು.

ಈ ವಾದ ಪುರಸ್ಕರಿಸಿದ ನ್ಯಾಯ ಮಂಡಳಿಯು ಪರಿಹಾರ ಪಾವತಿ ಹೊಣೆಗಾರಿಕೆಯನ್ನು ವಿಮಾ ಕಂಪೆನಿಯ ಬದಲಾಗಿ ಕಾರು ಮಾಲೀಕ ಪ್ರಭಾಕರ್ ಮೇಲೆ ಹೊರಿಸಿತ್ತು. ಸಂತ್ರಸ್ತರಿಗೆ ವಾರ್ಷಿಕ ಶೇ.6ರಷ್ಟು ಬಡ್ಡಿ ದರಲ್ಲಿ 4,43,000 ರೂಪಾಯಿ ಪಾವತಿಸುವಂತೆ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲಾಗಿತ್ತು.

ಹೈಕೋರ್ಟ್‌ನಲ್ಲಿ ವಿಚಾರಣೆ ನಡೆದಾಗ, ನ್ಯಾಯಮೂರ್ತಿ ಎನ್ ಎಸ್ ಸಂಜಯಗೌಡ ನೇತೃತ್ವದ ಏಕಸದಸ್ಯ ಪೀಠವು ಒಮ್ಮೆ ಕ್ರಿಮಿನಲ್‌ ಕೋರ್ಟ್‌ನಲ್ಲಿ ಆಗಿರುವ ತೀರ್ಪನ್ನು ನ್ಯಾಯಮಂಡಳಿ ಬದಲಿಸುವಂತಿಲ್ಲ ಎಂದು ಸ್ಪಷ್ಟಪಡಿಸಿತು. ಮತ್ತು ವಾಹನದ ಮಾಲೀಕನೇ ಪರಿಹಾರ ನೀಡಬೇಕು ಎಂಬ ಆದೇಶವನ್ನು ರದ್ದುಪಡಿಸಿತು.

ಸಂತ್ರಸ್ತರಿಗೆ ಪರಿಹಾರ ಪಾವತಿಸುವಂತೆ ವಿಮಾ ಕಂಪೆನಿಗೆ ಆದೇಶಿಸಿರುವ ನ್ಯಾಯಾಲಯವು ನ್ಯಾಯ ಮಂಡಳಿಯು ನಿಗದಿಪಡಿಸಿದ 4,43,000 ರೂಪಾಯಿ ಪರಿಹಾರದ ಮೊತ್ತವನ್ನು 9,48,200 ರೂಪಾಯಿಗೆ ಹೆಚ್ಚಿಸಿದೆ. ಆ ಮೊತ್ತವನ್ನು ವಾರ್ಷಿಕ ಶೇ 6ರಷ್ಟು ಬಡ್ಡಿದರಲ್ಲಿ ಪಾವತಿಸುವಂತೆ ಸೂಚಿಸಿದೆ.

ಇದನ್ನೂ ಓದಿ: High court Relief : ಅಪರಾಧಿಯ ಮದುವೆಗಾಗಿ ಭರ್ಜರಿ ರಿಲೀಫ್‌, 60 ದಿನ ಪೆರೋಲ್!‌

tribunal cant change criminal courts order in vehicle accident case says High court

Exit mobile version