ಹೈದರಾಬಾದ್: ಲೋಕಸಭೆ ಚುನಾವಣೆಗೆ ಇನ್ನೂ ಎರಡು ವರ್ಷ ಬಾಕಿ ಇರುವಾಗಲೇ ಪ್ರಧಾನಿ ಹುದ್ದೆ ಮೇಲೆ ಹಲವರು ಕಣ್ಣಿಟ್ಟಿದ್ದಾರೆ. ಅದರಲ್ಲೂ, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ತೆಲಂಗಾಣ ಸಿಎಂ ಕೆ.ಚಂದ್ರಶೇಖರ ರಾವ್ (KCR Strategy) ಹಾಗೂ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೇರಿ ಹಲವರು ಪ್ರತಿಪಕ್ಷಗಳನ್ನು ಒಗ್ಗೂಡಿಸುತ್ತಿದ್ದಾರೆ.
ಇದೇ ದಿಸೆಯಲ್ಲಿ ಕೆ.ಚಂದ್ರಶೇಖರ್ ರಾವ್ ಅವರೂ ಮುಂದಡಿ ಇಟ್ಟಿದ್ದು, ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್) ಸ್ಪರ್ಧೆ ಮೂಲಕ ಲೋಕಸಭೆ ಚುನಾವಣೆಗೆ ಮುನ್ನುಡಿ ಬರೆಯಲು ಹೊರಟಿದ್ದಾರೆ. ಅದರಲ್ಲೂ, ಹೈದರಾಬಾದ್‌ನಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಕೆಸಿಆರ್ ಭೇಟಿಯಾಗಿರುವುದು ಇಂತಹ ಹತ್ತಾರು ಸಾಧ್ಯತೆಗಳಿಗೆ ಕನ್ನಡಿ ಹಿಡಿಯುತ್ತಿದೆ.
ಕರ್ನಾಟಕಕ್ಕೆ ಏಕೆ ಆದ್ಯತೆ?
ಕರ್ನಾಟಕದ ಬಳ್ಳಾರಿ, ರಾಯಚೂರು, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಕಲಬುರಗಿಯ ಚಿಂಚೋಳಿ, ಸೇಡಂ ಸೇರಿ ರಾಜ್ಯದ ಹಲವೆಡೆ ತೆಲುಗು ಮಾತನಾಡುವವರ ಸಂಖ್ಯೆ ಹೆಚ್ಚಿದೆ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಇಲ್ಲೆಲ್ಲ ಟಿಆರ್‌ಎಸ್ ಅಭ್ಯರ್ಥಿಗಳನ್ನು ನಿಲ್ಲಿಸುವ ಮೂಲಕ ತಮ್ಮ ಪಕ್ಷವನ್ನು ವಿಸ್ತರಿಸುವ ಹಾಗೂ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ತಮ್ಮ ವರ್ಚಸ್ಸನ್ನು ಇಮ್ಮಡಿಗೊಳಿಸುವ ಧ್ಯೇಯೋದ್ದೇಶ ಚಂದ್ರಶೇಖರ್ ರಾವ್ ಅವರದ್ದು ಎನ್ನಲಾಗುತ್ತಿದೆ.
ಗುಜರಾತ್ ಸೇರಿ ಹಲವು ರಾಜ್ಯಗಳಿಗೆ ಲಗ್ಗೆ
ಕರ್ನಾಟಕ ಮಾತ್ರವಲ್ಲ ತೆಲುಗು ಮಾತನಾಡುವವರ ಸಂಖ್ಯೆ ಹೆಚ್ಚಿರುವ ಹಲವು ರಾಜ್ಯಗಳಿಗೆ ಟಿಆರ್‌ಎಸ್ ರಂಗಪ್ರವೇಶ ಮಾಡಲಿದೆ. ವರ್ಷಾಂತ್ಯದಲ್ಲಿ ಚುನಾವಣೆ ನಡೆಯಲಿರುವ ಗುಜರಾತ್, ಎರಡು ವರ್ಷಗಳ ಬಳಿಕ ಚುನಾವಣೆ ನಡೆಯಲಿರುವ ಮಹಾರಾಷ್ಟ್ರ ಹಾಗೂ ಮೂರು ವರ್ಷಗಳ ಬಳಿಕ ಚುನಾವಣೆ ನಡೆಯುವ ದಿಲ್ಲಿಯಲ್ಲಿಯೂ ಟಿಆರ್‌ಎಸ್ ಪಕ್ಷವನ್ನು ಬಲಪಡಿಸುವ ದಿಸೆಯಲ್ಲಿ ಚಂದ್ರಶೇಖರ ರಾವ್ ಯೋಜನೆ ರೂಪಿಸುತ್ತಿದ್ದಾರೆ.
ರಾಷ್ಟ್ರೀಯ ಪಕ್ಷ ಮಾನ್ಯತೆಗೆ ಪ್ರಯತ್ನ
ತೆಲಂಗಾಣ ರಾಷ್ಟ್ರ ಸಮಿತಿ ಪಕ್ಷವನ್ನು ರಾಷ್ಟ್ರೀಯ ಪಕ್ಷವನ್ನಾಗಿಸುವುದು ಕೆಸಿಆರ್ ಅವರ ಮಹತ್ವಾಕಾಂಕ್ಷೆಯಾಗಿದೆ. ಯಾವುದೇ ಒಂದು ಪಕ್ಷವು ರಾಷ್ಟ್ರೀಯ ಪಕ್ಷದ ಮಾನ್ಯತೆ ಪಡೆಯಲು ನಾಲ್ಕು ಅಥವಾ ಅದಕ್ಕಿಂತ ಹೆಚ್ಚಿನ ರಾಜ್ಯಗಳಲ್ಲಿ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಯಲ್ಲಿ ಶೇ.೬ರಷ್ಟು ಮತ ಪಡೆಯಬೇಕು. ಇದಕ್ಕಾಗಿ, ಹಲವು ರಾಜ್ಯಗಳಲ್ಲಿ ಟಿಆರ್‌ಎಸ್ ಸ್ಪರ್ಧೆ ಮೂಲಕ ರಾಷ್ಟ್ರೀಯ ಪಕ್ಷದ ಮಾನ್ಯತೆ ಪಡೆಯುವ ಯೋಜನೆ ರೂಪಿಸಿದ್ದಾರೆ. ಒಮ್ಮೆ ರಾಷ್ಟ್ರೀಯ ಪಕ್ಷದ ಮಾನ್ಯತೆ ದೊರೆತರೆ ಚಂದ್ರಶೇಖರ್ ರಾವ್ ಅವರು ರಾಷ್ಟ್ರೀಯ ನಾಯಕರಾಗುತ್ತಾರೆ. ಅಲ್ಲಿಗೆ, ಪ್ರತಿಪಕ್ಷಗಳ ಬೆಂಬಲವೂ ದೊರೆತರೆ, ಎಲ್ಲ ಪಕ್ಷಗಳು ಜತೆ ನಿಂತರೆ ಪ್ರಧಾನಿಯಾಗಬಹುದು ಎಂಬ ಲೆಕ್ಕಾಚಾರ ಕೆಸಿಆರ್ ಅವರದ್ದಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಇದಕ್ಕೂ ಮೊದಲು ಸಹ ಮಮತಾ ಬ್ಯಾನರ್ಜಿ ಸೇರಿ ಹಲವು ಪ್ರತಿಪಕ್ಷ ನಾಯಕರನ್ನು ಒಗ್ಗೂಡಿಸಲು ಯತ್ನಿಸಲು ಚಂದ್ರಶೇಖರ ರಾವ್ ಯತ್ನಿಸಿದ್ದರು. ಅದರಲ್ಲಿ ಅಷ್ಟರಮಟ್ಟಿಗೆ ಅವರು ಸಫಲವಾಗಿರಲಿಲ್ಲ. ಆದರೆ, ಈಗ ಪರಿಸ್ಥಿತಿ ಬದಲಾಗಿದೆ. ಬಿಹಾರದಲ್ಲಿ ಎನ್‌ಡಿಎ ಜತೆಗಿನ ಮೈತ್ರಿ ತೊರೆದಿರುವ ನಿತೀಶ್ ಕುಮಾರ್ ಅವರು ಎಲ್ಲ ಪ್ರತಿಪಕ್ಷಗಳನ್ನು ಒಗ್ಗೂಡಿಸುತ್ತಿದ್ದಾರೆ. ಇತ್ತೀಚೆಗಷ್ಟೇ ನಿತೀಶ್ ಕುಮಾರ್ ಅವರೂ ಕೆಸಿಆರ್ ಅವರನ್ನು ಭೇಟಿಯಾಗಿದ್ದರು. ಈಗ ಕುಮಾರಸ್ವಾಮಿ ಹಾಗೂ ಕೆಸಿಆರ್ ಭೇಟಿಯಾಗಿದ್ದು, ದಕ್ಷಿಣ ಭಾರತದಲ್ಲಿಯೂ ಪ್ರತಿಪಕ್ಷಗಳ ಒಗ್ಗಟ್ಟು, ಪ್ರಾದೇಶಿಕ ಪಕ್ಷಗಳ ಬೆಂಬಲ ಪಡೆಯಲು ಕೆಸಿಆರ್ ಚಿಂತನೆ ನಡೆಸಿರುವುದರ ಭಾಗವಾಗಿದೆ ಎಂದೇ ಹೇಳಲಾಗುತ್ತಿದೆ. ಹಾಗಾಗಿ, ಮುಂದಿನ ದಿನಗಳ ಬೆಳವಣಿಗೆಗಳು ಕುತೂಹಲ ಕೆರಳಿಸಿವೆ.
ಇದನ್ನೂ ಓದಿ | ಬಿಹಾರದಲ್ಲಿ ತೆಲಂಗಾಣ ಸಿಎಂ ಕೆಸಿಆರ್; ನಿತೀಶ್ ಕುಮಾರ್, ತೇಜಸ್ವಿ ಯಾದವ್ ಭೇಟಿ, ಜಂಟಿ ಸುದ್ದಿಗೋಷ್ಠಿ