ದೊಡ್ಡಬಳ್ಳಾಪುರ: ತುಕಡೇ ಗ್ಯಾಂಗನ್ನು ಓಲೈಸುವ ಕಾಂಗ್ರೆಸ್ ಪಕ್ಷ ಈಗ ʼಭಾರತ್ ಜೋಡೋʼ ನಾಟಕ ಮಾಡುತ್ತಿದೆ. ನಿಜವಾಗಿಯೂ ಭಾರತವನ್ನು ಜೋಡಿಸುವ ಕೆಲಸ ಮಾಡುತ್ತಿರುವವರ ಪ್ರಧಾನಿ ನರೇಂದ್ರ ಮೋದಿ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಶಾಸಕ ಸಿ.ಟಿ.ರವಿ ಅವರು ಜನಸ್ಪಂದನ ಕಾರ್ಯಕ್ರಮದಲ್ಲಿ ಹೇಳಿದರು.
ನರೇಂದ್ರ ಮೋದಿ ದೇಶವನ್ನು ನಿಜಕ್ಕೂ ಜೋಡಿಸುವ ಕೆಲಸ ಮಾಡುತ್ತಿದ್ದಾರೆ. ದೇಶದ ಎಲ್ಲ ಭಾಷೆಗಳೂ ಇಲ್ಲಿನ ಆತ್ಮ ಎಂದರು, ಒಂದು ದೇಶ ಒಂದು ತೆರಿಗೆ ಎಂದು ಜಿಎಸ್‌ಟಿ ತಂದರು, ಒಂದೇ ಪರೀಕ್ಷೆ ಎಂದು ನೀಟ್ ಜಾರಿಗೆ ತಂದರು, ಏಕ್ ಭಾರತ್ ಶ್ರೇಷ್ಠ ಭಾರತ್ ಎಂದರು, ಒನ್ ನೇಶನ್ ಒನ್ ರೇಶನ್ ಎಂದರು, ದೇಶದ ೧೩೮ ಕೋಟಿ ಜನರಿಗೆ ಉಚಿತವಾಗಿ ಲಸಿಕೆ ನೀಡಿದರು. ಆದರೆ ಇಂದು ತುಕಡೇ ಗ್ಯಾಂಗನ್ನು ಓಲೈಸುವ, ಭಯೋತ್ಪಾದಕರಿಗೆ ಬಿರಿಯಾನಿ ಕೊಡುವ ಕಾಂಗ್ರೆಸ್ ಭಾರತ್ ಜೋಡೋ ನಾಟಕ ಮಾಡುತ್ತಿದೆ ಎಂದು ಟೀಕಿಸಿದರು.
ಬಿಜೆಪಿ ಅಧಿಕಾರಕ್ಕೆ ಬಂದಾಗಲೆಲ್ಲ ರಾಜ್ಯದಲ್ಲಿ ಚೆನ್ನಾಗಿ ಮಳೆಯಾಗಿ ಕೆರೆಗಳು ತುಂಬಿ ಕೋಡಿ ಬಿದ್ದಿದೆ. ಶೆಟ್ಟರ್, ಬಿಎಸ್ ಯಡಿಯೂರಪ್ಪನವರು ಅಧಿಕಾರದಲ್ಲಿದ್ದಾಗಲೂ, ಈಗ ಬಸವರಾಜ ಬೊಮ್ಮಾಯಿ ಅವರು ಅಧಿಕಾರದಲ್ಲಿರುವಾಗಲೂ ಚೆನ್ನಾಗಿ ಮಳೆ- ಬೆಳೆಯಾಗುತ್ತಿದೆ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಯಾವ ಕೆರೆಯೂ ತುಂಬಿರಲಿಲ್ಲ. ಬಿಜೆಪಿ ಕಾಲ್ಗುಣ ಒಳ್ಳೆಯದೋ, ಕಾಂಗ್ರೆಸ್‌ನದು ಒಳ್ಳೆಯದೋ ನೀವೇ ತೀರ್ಮಾನ ಮಾಡಿ. ʼಕಾಲಿಟ್ಟ ಕಡೆ ಮಟಾಶ್ ಮಾಡುವ ಆಸಾಮಿಗಳʼ ಬಗ್ಗೆ ಹುಷಾರಾಗಿರಿ ಎಂದು ಎಚ್ಚರಿಸಿದರು. ಅರ್ಕಾವತಿ ರಿಡೂ ಪಿತಾಮಹ ಯಾರು? ಸೋಲಾರ್ ಅಲಾಟ್‌ಮೆಂಟ್ ಹಗರಣ ಖದೀಮ ಯಾರು? ಕೆಂಪಣ್ಣ ಆಯೋಗ ವರದಿ ಮಂಡಿಸಿದರೆ ಯಾರು ಕಳ್ಳ ಎಂಬುದು ಗೊತ್ತಾಗುತ್ತದೆ. ಸಿದ್ದರಾಮಯ್ಯ ಈ ಪ್ರಶ್ನೆಗಳಿಗೆ ಉತ್ತರಿಸಲಿ ಎಂದು ಅರು ಸವಾಲು ಎಸೆದರು.
ಜನಸ್ಪಂದನ ನಡೆಯುತ್ತಿರುವ ಈ ಭಾಗದ ಮೂರು ಜಿಲ್ಲೆಗಳಲ್ಲಿ ಬಿಜೆಪಿ ಕೇವಲ ಎರಡು ವಿಧಾನಸಭೆ ಸೀಟು ಹೊಂದಿದೆ. ಆದರೆ ಇಲ್ಲೂ ಇಷ್ಟೊಂದು ಸಂಖ್ಯೆಯಲ್ಲಿ ಸೇರಿ ಬಿಜೆಪಿಯನ್ನು ಬೆಂಬಲಿಸುತ್ತಿರುವುದು ನೋಡಿ ವಿರೋಧಿಗಳು ಪಾಠ ಕಲಿಯಬೇಕು. ಈ ಬಾರಿ ಕನಿಷ್ಠ ಹತ್ತಕ್ಕೂ ಹೆಚ್ಚು ಸ್ಥಾನ ನೀಡಿ ಗೆಲ್ಲಿಸಿ. ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರುವುದು ಶತಸ್ಸಿದ್ಧ. ಬಿಜೆಪಿ ಸರ್ಕಾರ ರೈತರ, ಮಹಿಳೆ ಹಿತಕ್ಕೆ ಕಟಿಬದ್ಧವಾಗಿದೆ ಎಂದು ಭರವಸೆ ನೀಡಿದರು.
ಇದನ್ನೂ ಓದಿ | BJP ಜನಸ್ಪಂದನ | ಮೋದಿ ಪ್ರಧಾನಿ ಆಗಿರುವವರೆಗೆ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ, ಬರಲ್ಲ, ಬರಲ್ಲ: ಬಿಎಸ್‌ವೈ