ತುಮಕೂರು: ವಿಧಾನಸಭೆ ಚುನಾವಣೆ (Karnataka Election 2023) ಸಮೀಪಿಸುತ್ತಿದ್ದಂತೆ ರಾಜ್ಯ ಚುನಾವಣಾ ಕಣ ದಿನೇದಿನೆ ರಂಗು ಪಡೆದುಕೊಳ್ಳುತ್ತಿದೆ. ಪರಸ್ಪರ ಆರೋಪ – ಪ್ರತ್ಯಾರೋಪಗಳಲ್ಲಿ ಅಭ್ಯರ್ಥಿಗಳು ತೊಡಗಿಕೊಂಡಿದ್ದಾರೆ. ಇನ್ನು ಕೆಲವು ಕಡೆ ಆಡಿಯೊ, ವಿಡಿಯೊ ಬಿಡುಗಡೆಯಂತಹ ಪ್ರಕರಣಗಳೂ ನಡೆಯುತ್ತಿವೆ. ಈಗ ತುಮಕೂರು ನಗರ ಜೆಡಿಎಸ್ ಅಭ್ಯರ್ಥಿಗೆ ಆಡಿಯೊ ಶಾಕ್ ಎದುರಾಗಿದೆ. ಮಂಚದ ವಿಷಯವಾಗಿ ನಡೆದಿದೆ ಎನ್ನಲಾದ ಆಡಿಯೊ (Audio Viral) ಬಹಿರಂಗಗೊಂಡಿದ್ದು, ಎನ್. ಗೋವಿಂದರಾಜು ವಿರುದ್ಧ ಮುಸ್ಲಿಂ ಮಹಿಳೆಯೊಬ್ಬರು ಗಂಭೀರ ಆರೋಪ ಮಾಡಿದ್ದಾರೆ. ಆದರೆ, ಮಹಿಳೆ ಸಹ ಪದೇ ಪದೆ ಕರೆ ಮಾಡಿ ಪ್ರಚೋದನೆ ನೀಡುತ್ತಿದ್ದರು ಎಂಬ ಆರೋಪವೂ ಕೇಳಿಬಂದಿದೆ.
ಎನ್. ಗೋವಿಂದರಾಜು ಅವರು ಜೆಡಿಎಸ್‌ನಿಂದ ನಾಮಪತ್ರ ಸಲ್ಲಿಸಲು ತಯಾರಿ ನಡೆಸುತ್ತಿರುವ ಬೆನ್ನಲ್ಲೇ ಈಗ ಆಡಿಯೊ ಬಿಡುಗಡೆಯಾಗಿರುವುದು ಇರಿಸುಮುರಿಸಿಗೆ ಕಾರಣವಾಗಿದೆ. ಯುವತಿಯರನ್ನು ಮಂಚಕ್ಕೆ ಕರೆಸುವಂತೆ ಬೇಡಿಕೆ ಇಟ್ಟಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಮುಸ್ಲಿಂ ಸಮುದಾಯದ ಮಹಿಳೆ ರೇಷ್ಮಾ ಈ ಬಗ್ಗೆ ಗಂಭೀರ ಆರೋಪ ಮಾಡಿದ್ದು, ಆಡಿಯೊ ಸಾಕ್ಷ್ಯಗಳನ್ನು ಒದಗಿಸಿದ್ದಲ್ಲದೆ, ಕುವೆಂಪು ನಗರದಲ್ಲಿರುವ ಗೋವಿಂದರಾಜು ಮನೆ ಮುಂದೆ ಗಲಾಟೆ ಮಾಡುವ ಮೂಲಕ ಹೈಡ್ರಾಮಾ ಸೃಷ್ಟಿಸಿದ್ದಾರೆ. ಚುನಾವಣಾ ಪ್ರಚಾರಕ್ಕೆ ಕರೆಯುತ್ತೇನೆ ಎಂದು ಅಸಭ್ಯವಾಗಿ ವರ್ತಿಸಿದ್ದಾರೆಂದು ಆರೋಪ ಮಾಡಲಾಗಿದೆ. 20ಕ್ಕೂ ಹೆಚ್ಚು ಆಡಿಯೊಗಳನ್ನು ರೇಷ್ಮಾ ಕುಟುಂಬಸ್ಥರು ಬಿಡುಗಡೆ ಮಾಡಿದ್ದಾರೆ.
ಇದನ್ನೂ ಓದಿ: KS Eshwarappa: ಗಡ್ಕರಿಗೆ ಜೀವ ಬೆದರಿಕೆ ಹಾಕಿದ್ದ ಜಯೇಶ್ ಪೂಜಾರಿಯಿಂದ ನನ್ನ ಕೊಲೆಗೆ ಸ್ಕೆಚ್: ಕೆ.ಎಸ್. ಈಶ್ವರಪ್ಪ
ಆಡಿಯೊದಲ್ಲೇನಿದೆ?
“ಮನೆಯಲ್ಲಿ ಯಾರೂ ಇಲ್ವಾ? ನಾನು ಬರಲಾ?, ಬೇರೆ ಹುಡುಗಿಯರನ್ನು ಕಳಿಸು.… ಆ ಹುಡುಗಿಯರ ಫೋಟೊ ಕಳಿಸು” ಎಂಬಿತ್ಯಾದಿಯಾಗಿ ಅಶ್ಲೀಲವಾಗಿ ಮಾತನಾಡುವ ಮೂಲಕ ಹೆಣ್ಣು ಮಕ್ಕಳನ್ನು ಕಳುಹಿಸುವಂತೆ ದುಂಬಾಲು ಬೀಳುತ್ತಿದ್ದರು ಎಂದು ಗೋವಿಂದರಾಜು ಅವರ ವಿರುದ್ಧ ಮಹಿಳೆ ಆರೋಪ ಮಾಡಿದ್ದಾರೆ.
ಪ್ರಚೋದನೆ ಮಾಡುತ್ತಿದ್ದಳಾ ಮಹಿಳೆ?
ಮಹಿಳೆ ರೇಷ್ಮಾ ಮೇಲೆಯೂ ಈಗ ಆರೋಪಗಳು ಕೇಳಿಬಂದಿದ್ದು, ಆಕೆಯೂ ಗೋವಿಂದರಾಜು ಅವರಿಗೆ ಕರೆ ಮಾಡಿ ಪ್ರಚೋದನೆ ಮಾಡುತ್ತಿದ್ದಳು ಎನ್ನಲಾಗಿದೆ. ಹುಡುಗಿಯರ ಬಗ್ಗೆ ಇಬ್ಬರೂ ಮಾತನಾಡಿರುವ ಆಡಿಯೊ ಈಗ ಬಹಿರಂಗವಾಗಿದೆ.
ಗೋವಿಂದರಾಜು ಅವರಿಗೆ ಕರೆ ಮಾಡಿದ್ದ ಮಹಿಳೆ ಪದೇ ಪದೆ ಎಲ್ಲಿ ಸರ್ ಬರಲಿಲ್ಲ ಎಂದು ಕೇಳಿದ್ದಾಳೆ. ಅದಕ್ಕೆ ಗೋವಿಂದರಾಜು, “ಬರುತ್ತೇನೆ ಇರಮ್ಮ , ಹುಡುಗಿಯರ ಪೋಟೊ ಕಳುಹಿಸು ಎಂದು ಕೇಳಿದ್ದಾರೆ. ಪುನಃ ಆ ಮಹಿಳೆ ಪೋಟೊ ಕಳುಹಿಸಿದ್ದೇನೆ ನೋಡಿ ಸರ್ ಎಂದು ಕರೆ ಮಾಡಿ ಹೇಳಿದ್ದಾಳೆ. ಪೋಟೊ ಕಳುಹಿಸಿದ ಬಳಿಕ ಬರಲಿಲ್ಲ ಸರ್, ಬನ್ನಿ ಎಂದು ರೇಷ್ಮಾ ಪದೇ ಪದೆ ಪೋನ್ ಕರೆ ಮಾಡಿದ್ದಾಳೆ ಎನ್ನಲಾಗಿದೆ.
ಆಗ ಗೋವಿಂದರಾಜು, ನಾನು ಚುನಾವಣೆ ಪ್ರಚಾರದಲ್ಲಿದ್ದು, ಬ್ಯುಸಿ ಇದ್ದೇನೆ ಬರುತ್ತೇನೆ. ಸ್ವಲ್ಪ ಇರಮ್ಮ ಎಂದು ಹೇಳಿದ್ದಾರೆ. ಕೊನೆಗೆ ಈ ಬಗ್ಗೆ ಕೇಳಲು ಗೋವಿಂದರಾಜು ಮನೆ ಬಳಿ ಕುಟುಂಬಸ್ಥರೊಂದಿಗೆ ಬಂದ ಮಹಿಳೆ ಹೈಡ್ರಾಮ ನಡೆಸಿದ್ದಾರೆಂಬ ಆರೋಪ ಈಗ ಕೇಳಿಬಂದಿದೆ.
ಮಹಿಳೆ ತಾನೇ ಕರೆ ಮಾಡಿ ಪ್ರಚೋದನೆ ಮಾಡಿದ್ದಾಳೆ. ಇಬ್ಬರು ಕೂಡ ಪೋಲಿ ಮಾತುಗಳನ್ನು ಆಡಿದ ಬಗ್ಗೆ ಈಗ ಬಿಡುಗಡೆ ಆಗಿರುವ ಆಡಿಯೊದಲ್ಲಿ ಗೊತ್ತಾಗುತ್ತದೆ. ಇದೀಗ ಗೋವಿಂದರಾಜು ಮೇಲೆ ಲೈಂಗಿಕ ಕಿರುಕುಳ ನೀಡಿರುವ ಆರೋಪವನ್ನು ಮಹಿಳೆ ಹೊರಿಸುತ್ತಿದ್ದಾಳೆ.