Site icon Vistara News

ಶಿಕ್ಷಕರ ನೇಮಕಾತಿ ಅಕ್ರಮ, ತುಮಕೂರಿನಲ್ಲಿ 10 ಶಿಕ್ಷಕರನ್ನು ವಶಕ್ಕೆ ಪಡೆದು ಸಿಐಡಿ ತನಿಖೆ

CID police

ತುಮಕೂರು: 2014-15ನೇ ಸಾಲಿನ ಶಿಕ್ಷಕರ ನೇಮಕಾತಿಯಲ್ಲಿ ನಡೆದ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿ ಜಿಲ್ಲೆಯ 10 ಶಿಕ್ಷಕರನ್ನು ಸಿಐಡಿ ಪೊಲೀಸರು ತನಿಖೆಗಾಗಿ ವಶಕ್ಕೆ ಪಡೆದುಕೊಂಡಿದ್ದಾರೆ.

ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಅವರ ತವರು ಜಿಲ್ಲೆ ತುಮಕೂರಿನಲ್ಲೇ 10 ಶಿಕ್ಷಕರನ್ನು ಸಿಐಡಿ ವಶಕ್ಕೆ ಪಡೆದುಕೊಂಡಿದೆ. ಸಿಐಡಿ ತನಿಖೆಯಿಂದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ದೊರೆತಿದ್ದು, ಅಕ್ರಮ ನೇಮಕಾತಿ ಆರೋಪದಡಿ ಶಿಕ್ಷಕರನ್ನು ವಿಚಾರಿಸಲಾಗುತ್ತಿದೆ.

2014-15ರಲ್ಲಿ ಶಿಕ್ಷಕರ ನೇಮಕಾತಿಯಲ್ಲಿ ಅಕ್ರಮ ನೇಮಕಾತಿ ನಡೆದಿದೆ ಎಂದು ಆರೋಪಿಸಿ ಬೆಂಗಳೂರಿನ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆ ದೂರು ದಾಖಲಿಸಿತ್ತು. ಕೆಲ‌ ದಿನಗಳ‌ ಹಿಂದೆ ಈ ಪ್ರಕರಣವನ್ನು ರಾಜ್ಯ ಸರ್ಕಾರ ಸಿಐಡಿಗೆ ವರ್ಗಾವಣೆ ಮಾಡಿತ್ತು. ಇದೀಗ ತನಿಖೆಗಾಗಿ ವಶಕ್ಕೆ ಪಡೆದಿರುವ ಶಿಕ್ಷಕರನ್ನು ಬೆಂಗಳೂರಿನ‌ ಸಿಐಡಿ ಕಚೇರಿಗೆ ಕರೆದೊಯ್ಯಲಾಗಿದೆ.

ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಬೋರನಕಣಿವೆ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕಿ, ಕಮ್ಲಾಪುರದ ಶಾಲೆಯ ಶಿಕ್ಷಕ, ಕುಣಿಗಲ್ ತಾಲೂಕಿನ ಕೊಡವತ್ತಿ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕಿ, ನಾಗಸಂದ್ರ ಪ್ರೌಢಶಾಲೆಯ ಶಿಕ್ಷಕಿ, ಅಮೃತೂರಿನ ಕರ್ನಾಟಕ ಪಬ್ಲಿಕ್ ಸ್ಕೂಲ್‌ನ ಶಿಕ್ಷಕ, ಹೊಳಗೇರಿಪುರ ಶಾಲೆಯ ಶಿಕ್ಷಕ, ತಿಪಟೂರು ತಾಲೂಕಿನ ಅಲ್ಬೂರು ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ, ತುರುವೇಕೆರೆ ತಾಲೂಕಿನ ಹುಲಿಕಲ್ ಸರಕಾರಿ ಪ್ರೌಢಶಾಲೆಯ ಶಿಕ್ಷಕ, ಹುಲಿಕೆರೆ ಶಾಲೆಯ ಶಿಕ್ಷಕ, ಗುಬ್ಬಿ ತಾಲೂಕಿನ ಕೆ.ಮತ್ತಿಘಟ್ಟ ಶಾಲೆಯ ಶಿಕ್ಷಕ ಸೇರಿದಂತೆ 10 ಶಾಲೆಗಳಿಂದ ತಲಾ ಒಬ್ಬರನ್ನು ಸಿಐಡಿ ವಶಕ್ಕೆ ಪಡೆದಿದೆ.

ಇದನ್ನೂ ಓದಿ | KPTCL Irregularity | ಕೆಪಿಟಿಸಿಎಲ್‌ ಪರೀಕ್ಷಾ ಅಕ್ರಮ: ಕೊನೆಗೂ ಪೊಲೀಸ್ ಖೆಡ್ಡಾಕ್ಕೆ ಬಿದ್ದ ಕಿಂಗ್‌ಪಿನ್‌!

Exit mobile version