ತುಮಕೂರು: ದೇವರಿಗೆ ಬಿಟ್ಟ ಹೋರಿಗಳು (Bullock Attack) ಸಾಮಾನ್ಯವಾಗಿ ಜನರ ನಡುವೆ ಬೆರೆಯುತ್ತಾ ಸೌಹಾರ್ದದಿಂದ ಇರುತ್ತವೆ ಎನ್ನುವ ಪ್ರತೀತಿ ಇದೆ. ಆದರೆ, ಕೆಲವು ಕಡೆ ಈ ನಂಬಿಕೆಯನ್ನು ಮುರಿಯುವುದು ಕೂಡಾ ಇದೆ. ಕೆಲವೊಮ್ಮೆ ಶಾಂತವಾಗಿರುವ ಹೋರಿಗಳು ಕೂಡಾ ಒಮ್ಮಿಂದೊಮ್ಮೆಗೇ ಸಿಟ್ಟಿಗೇಳುವುದುಂಟು (Enraged bullocks).
ತುಮಕೂರು ಜಿಲ್ಲೆಯ (Tumkur News) ಕೊರಟಗೆರೆಯಲ್ಲಿ ಆಗಿರುವುದು ಕೂಡಾ ಇಂಥಹುದೇ ಘಟನೆ. ಕೊರಟಗೆರೆ ಪಟ್ಟಣದಲ್ಲಿ (koratagere town) ಸಾಮಾನ್ಯವಾಗಿ ಶಾಂತವಾಗಿ ಓಡಾಡುತ್ತಾ ಜನಜೀವನದ ಭಾಗವಾಗಿದ್ದ ಹೋರಿಯೊಂದು ಶುಕ್ರವಾರ ಒಮ್ಮಿಂದೊಮ್ಮೆಗೆ ರೊಚ್ಚಿಗೆದ್ದಿದೆ. ಮದವೇರಿದಂತೆ ವರ್ತಿಸಿದೆ.
ರೊಚ್ಚಿಗೆದ್ದ ದೇವರ ಗೂಳಿ ಯಾವ ಪರಿಯಲ್ಲಿ ತನ್ನ ಆವೇಶವನ್ನು ಪ್ರದರ್ಶಿಸಿದೆ ಎಂದರೆ ಒಂದು ಬಸ್ಸನ್ನೇ ತನ್ನ ಕೊಂಬುಗಳಿಂದ ಒತ್ತಿ ಹಿಡಿದು ಮುಂದಕ್ಕೆ ಚಲಿಸದಂತೆ ಮಾಡಿದೆ. ಸ್ವಲ್ಪ ಮುಂದೆ ಹೋದರೂ ಅಡ್ಡ ನಿಂತು ಆಕ್ರೋಶ ವ್ಯಕ್ತಪಡಿಸಿದೆ. ದೇವರ ಬಸವನ ಅಬ್ಬರಕ್ಕೆ ಬೆಚ್ಚಿಬಿದ್ದ ಜನತೆ ಅದರ ನಡುವೆಯೂ ವಿಡಿಯೋ ವೈರಲ್ ಮಾಡಿದ್ದಾರೆ.
ತುಮಕೂರು ಜಿಲ್ಲೆ ಕೊರಟಗೆರೆ ಪಟ್ಟಣದಲ್ಲಿ ಎರಡು ದೇವರ ಗೂಳಿಗಳು ಇವೆ. ಎರಡೂ ಶಾಂತವಾಗಿಯೇ ಓಡಾಡುತ್ತಾ ಇರುತ್ತವೆ. ಯಾವಾಗಲೂ ಜನರ ನಡುವೆಯೇ ಇರುವ ಇವುಗಳ ಬಗ್ಗೆ ಜನರಿಗೆ ಸ್ನೇಹ ಭಾವವೇ ಇದೆ.
ಆದ್ರೆ ಇದ್ದಕ್ಕಿದ್ದ ಹಾಗೆ ಮದವೇರಿದ ಒಂದು ಗೂಳಿ ವಾಹನಗಳ ಮೇಲೆ ದಾಳಿ ಮಾಡಲು ಆರಂಭಿಸಿತು.
ಪಟ್ಟಣದ ಮುಖ್ಯ ರಸ್ತೆಯಲ್ಲಿ ಸಂಚರಿಸುತ್ತಿದ್ದ ಬಸ್ಸು, ಇತರ ವಾಹನಗಳಿಗೆ ಡಿಕ್ಕಿ ಹೊಡೆದು ರಾದ್ಧಾಂತವೆಬ್ಬಿಸಿದೆ ಬಸವನ ರೌದ್ರಾವತಾರಕ್ಕೆ ಜನತೆ ಬೆಚ್ಚಿಬಿದ್ದರು.
ಈ ಗೂಳಿ ಒಂದು ಖಾಸಗಿ ಬಸ್ಸನ್ನು ಬೆನ್ನಟ್ಟಿ ಬಂದು ಯಾವ ರೀತಿಯಲ್ಲಿ ಅಡ್ಡ ಗಟ್ಟಿ ನಿಂತಿತೆಂದರೆ ಬಸ್ ಮುಂದಕ್ಕೆ ಚಲಿಸಲೂ ಬಿಡಲಿಲ್ಲ. ಆರಂಭದಲ್ಲಿ ಬಸ್ಸಿನ ಹತ್ತಿಳಿಯುವ ಮೆಟ್ಟಿಲಿನ ಭಾಗದಲ್ಲಿ ಕೊಂಬಿಟ್ಟು ತಡೆದ ಅದು, ಚಾಲಕ ಸ್ವಲ್ಪ ಮುಂದಕ್ಕೆ ಚಲಾಯಿಸುತ್ತಿದ್ದಂತೆಯೇ ನೇರವಾಗಿ ಎದುರೇ ಬಂದು ನಿಂತಿತು.
ಯಾರು ಎಷ್ಟೇ ಬೊಬ್ಬೆ ಹೊಡೆದರೂ ಅದು ಬಸ್ಸನ್ನು ಮುಂದಕ್ಕೆ ಹೋಗಲು ಬಿಡಲಿಲ್ಲ. ಒಂದೊಮ್ಮೆ ಹೋಗುವುದಿದ್ದರೂ ಅದಕ್ಕೆ ಡಿಕ್ಕಿ ಹೊಡೆದುಕೊಂಡೇ ಹೋಗಬೇಕಾಗಿತ್ತು. ಆದರೆ, ದೇವರ ಹೋಗಿ ಆಗಿರುವುದರಿಂದ ಅಂಥ ಸಾಹಸಕ್ಕೆ ಯಾರೂ ಇಳಿಯುವುದಿಲ್ಲ.
ಈ ನಡುವೆ ಅಡ್ಡ ನಿಂತಿದ್ದ ಹೋರಿ ಮತ್ತು ಹತ್ತಿಳಿಯುವ ಮೆಟ್ಟಿಲ ಬಳಿ ಬಂದು ನಿಂತು ಮುಂದೆ ಹೋಗದಂತೆ ಕೊಂಬಿನಿಂದ ತಡೆಯಿತು. ಆಗ ಕೆಲವರು ನೀರು ತಂದು ಅದರ ಮೇಲೆ ಹಾಯಿಸಿದರು. ತುಂಬ ಹೊತ್ತು ಇದಕ್ಕೂ ಜಗ್ಗದ ಅದು ಸ್ವಲ್ಪ ಹೊತ್ತಿನ ಬಳಿಕ ಬಸ್ಸಿನಿಂದ ಸ್ವಲ್ಪ ದೂರ ಸರಿಯಿತು. ಆಗ ಬಸ್ಸಿನ ಚಾಲಕ ವೇಗವಾಗಿ ವಾಹನ ಚಲಾಯಿಸಿಕೊಂಡು ಮುಂದೆ ಹೋಗಿದ್ದಾನೆ.
ಆಗ ಸಿಟ್ಟಿಗೆದ್ದ ಗೂಳಿ ಬಸ್ಸನ್ನು ವೇಗವಾಗಿ ಓಡುತ್ತಾ ಬೆನ್ನಟ್ಟಿತ್ತು. ಆದರೆ ಕೊನೆಗೆ ಕೈ ಸಾಗದೆ ಇದ್ದಾಗ ಮರಳಿಬಂತು.
ಶಾಂತವಾಗಿದ್ದ ಗೂಳಿ ಇಷ್ಟೆಲ್ಲ ಆಕ್ರೋಶಿತವಾಗಿದ್ದೇಕೆ ಎಂಬ ಚರ್ಚೆ ಇಲ್ಲಿ ಜೋರಾಗಿದೆ. ಬಸ್ಸಿನ ಬಣ್ಣ ಕೆಂಪಾಗಿದ್ದರಿಂದ ಅದು ಕೆರಳಿ ಹೀಗೆ ಮಾಡಿರಬಹುದು ಎಂಬ ಗುಮಾನಿಯನ್ನು ಕೆಲವರು ವ್ಯಕ್ತಪಡಿಸಿದರು. ಅಂತೂ ಕೊನೆಗೆ ಹೋರಿಯನ್ನು ಶಾಂತಗೊಳಿಸಲಾಯಿತು.