ತುಮಕೂರು: ಸಿಎಂ ಬಸವರಾಜ್ ಬೊಮ್ಮಾಯಿಯವರು ಕಾಂಗ್ರೆಸ್ ನಾಯಕ ಡಾ. ಜಿ. ಪರಮೇಶ್ವರ್ ಪ್ರತಿನಿಧಿಸುವ ಕೊರಟಗೆರೆ ಕ್ಷೇತ್ರಕ್ಕೆ ಬಂಪರ್ ಗಿಫ್ಟ್ ನೀಡಿದ್ದಾರೆ. ಈ ಮೂಲಕ ಜಿ. ಪರಮೇಶ್ವರ್ ಮೇಲಿನ ಪ್ರೀತಿಯನ್ನು ಮತ್ತೊಮ್ಮೆ ವ್ಯಕ್ತಪಡಿಸಿದ್ದಾರೆ. ಈ ಹಿಂದೆ ಸಿದ್ದಗಂಗಾ ಮಠದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಷಾ ಭಾಗವಹಿಸಿದ್ದರು. ಆ ಸಂದರ್ಭದಲ್ಲಿ ಅಮಿತ್ ಷಾ ಅವರಿಗೆ ಪರಮೇಶ್ವರ ಅವರನ್ನು ಸಿಎಂ ಬೊಮ್ಮಾಯಿ ಪರಿಚಯಿಸಿದ್ದರು. ಅಲ್ಲದೆ, ಪರಮೇಶ್ವರ್ ಬಗ್ಗೆ ಭರವಸೆಯ ಮಾತುಗಳನ್ನಾಡಿದ್ದರು.
ಈಗ ಕೊರಟಗೆರೆ ಕ್ಷೇತ್ರಕ್ಕೆ ಸಿಎಂ ಬೊಮ್ಮಾಯಿ ತಮ್ಮ ವಿವೇಚನಾ ಕೋಟಾದಡಿ ₹30 ಕೋಟಿ ವಿಶೇಷ ಅನುದಾನ ಬಿಡುಗಡೆ ಮಾಡಿದ್ದಾರೆ. ಈ ಅನುದಾನವನ್ನು ಪರಮೇಶ್ವರ್ ಒಟ್ಟು 36 ಪಂಚಾಯತಿಗೆ ಸಮವಾಗಿ ಹಂಚುತ್ತಿದ್ದಾರೆ. ಇದು ಒಂದು ಘಟನೆಯಾದರೆ, ಇನ್ನೊಂದೆಡೆ ವಸತಿ ಸಚಿವ ವಿ.ಸೋಮಣ್ಣ ಕೂಡ ಕೊರಟಗೆರೆ ಕ್ಷೇತ್ರಕ್ಕೆ ವಿಶೇಷವಾಗಿ 3 ಸಾವಿರ ಮನೆ ಮಂಜೂರು ಮಾಡಿದ್ದಾರೆ. ಕಳೆದ ಬಾರಿಯೂ 5 ಸಾವಿರ ಮನೆ ಮಂಜೂರು ಮಾಡಿದ್ದರು.
2013ರಲ್ಲಿ ಜಿ. ಪರಮೇಶ್ವರ್ ಕೊರಟಗೆರೆ ಕ್ಷೇತ್ರದಲ್ಲಿ ಸೋಲು ಅನುಭವಿಸಿದ್ದರು. ಅದೇ ರೀತಿ ಈ ಬಾರಿ ಮತ್ತೊಮ್ಮೆ ಆಗಬಾರದೆಂದು ಪರಮೇಶ್ವರ್ ಎಚ್ಚರ ವಹಿಸಿದ್ದಾರೆ. ಈ ವೇಳೆ ಕ್ಷೇತ್ರದ ಅಭಿವೃದ್ಧಿಯತ್ತ ಗಮನ ಹರಿಸಿದ್ದಾರೆ. ಈ ಕಾರಣಕ್ಕಾಗಿ ಬಿಜೆಪಿ ಸರ್ಕಾರದ ಸಹಕಾರ ಪಡೆಯುತ್ತಿದ್ದಾರೆ.
ಇದನ್ನೂ ಓದಿ: ಲೂಟಿ ಮಂತ್ರಿಗಳ ಕ್ಷೇತ್ರದಲ್ಲಿ CM ಪ್ರದಕ್ಷಿಣೆ: ಸಿದ್ದರಾಮಯ್ಯ ವಿರುದ್ಧ HDK ಆಕ್ರೋಶ