Site icon Vistara News

Congress Guarantee: ಸಿದ್ದಗಂಗಾ ಮಠದಿಂದ ಅಕ್ಕಿ ಸಾಲ ಪಡೆದ ಸರ್ಕಾರ! ಗ್ಯಾರಂಟಿಯಿಂದ ಖಾಲಿಯಾಯ್ತಾ ಬೊಕ್ಕಸ?

Congress Guarantee Govt borrows rice from Siddaganga Mutt

ತುಮಕೂರು: ಈ ಬಾರಿ ಸಿಎಂ ಸಿದ್ದರಾಮಯ್ಯ (CM Siddaramaiah) ಅವರು 3,71,383 ಕೋಟಿ ರೂ. ಬಜೆಟ್‌ (Karnataka Budget 2024) ಗಾತ್ರವನ್ನು ಮಂಡಿಸಿದ್ದರೂ ರಾಜ್ಯದ ಬೊಕ್ಕಸದಲ್ಲಿ ಹಣವಿಲ್ಲವೇ? ಗ್ಯಾರಂಟಿ ಯೋಜನೆಗಳಿಗೆ (Congress Guarantee Scheme) ಅನುದಾನವನ್ನು ಕೊಟ್ಟು ಸರ್ಕಾರ ಬಡವಾಯಿತೇ? ಇಂಥ ಹೀನಾಯ ಸ್ಥಿತಿ ರಾಜ್ಯ ಸರ್ಕಾರ ತಲುಪಿತೇ ಎಂಬ ಪ್ರಶ್ನೆ ಮೂಡಿದೆ. ಇದಕ್ಕೆ ಕಾರಣ, ತುಮಕೂರಿನ ಸಿದ್ಧಗಂಗಾ ಮಠದಿಂದ (Tumkur Siddaganga Mutt) ಅಕ್ಕಿ ಸಾಲವನ್ನು ಪಡೆಯಲಾಗಿದೆ. ಇದೀಗ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರು ಶುಕ್ರವಾರ ಮಂಡಿಸಿದ 2024-25ನೇ ಸಾಲಿನ ಕರ್ನಾಟಕ ರಾಜ್ಯ ‌ ಆಯವ್ಯಯದ (Karnataka Budget 2024) ಒಟ್ಟು ಗಾತ್ರವು (Budget layout) 3,71,383 ಕೋಟಿ ರೂ. ಅಂದರೆ 2023-24ನೇ ಸಾಲಿನಲ್ಲಿ ಸಿದ್ದರಾಮಯ್ಯ ಅವರೇ ಮಂಡಿಸಿದ ಬಜೆಟ್‌ (ಗಾತ್ರ 3.27 ಲಕ್ಷ ಕೋಟಿ ರೂ.)ಗಿಂತ ಇದು 44 ಸಾವಿರ ಕೋಟಿ ರೂ. ಹೆಚ್ಚಾಗಿದೆ. ಇಷ್ಟೊಂದು ದೊಡ್ಡ ಗಾತ್ರದ ಬಜೆಟ್‌ ಮಂಡನೆ ಮಾಡಲು ಸಿದ್ದರಾಮಯ್ಯ ಅವರು ಪಡೆಯಲು ಉದ್ದೇಶಿಸಿದ ಸಾಲದ ಮೊತ್ತ 1,05,246 ಕೋಟಿ ರೂಪಾಯಿ ಆಗಿದೆ. ಅಲ್ಲದೆ, ಸರ್ಕಾರದಲ್ಲಿ ಅನುದಾನಕ್ಕೆ ಯಾವುದೇ ಕೊರತೆ ಇಲ್ಲ ಎಂದು ಅವರು ಬಜೆಟ್‌ ಮಂಡನೆ ವೇಳೆ ಒತ್ತಿ ಹೇಳಿದ್ದರು. ಇಷ್ಟಾದರೂ ಈಗ ಮಠದಿಂದ ಆಗಾಗ ಅಕ್ಕಿ ಸಾಲ ಪಡೆಯುತ್ತಿರುವುದನ್ನು ಗಮನಿಸಿದರೆ ಗ್ಯಾರಂಟಿ ಯೋಜನೆಗಳಿಂದ ಸರ್ಕಾರಕ್ಕೆ ಹಾಸ್ಟೆಲ್‌ಗಳಲ್ಲಿ ಮಕ್ಕಳಿಗೆ ಊಟ ಹಾಕಲು ಸಹ ದುಡ್ಡಿಗೆ ಪರದಾಟ ನಡೆಸಬೇಕಾದ ಸ್ಥಿತಿ ಬಂದೊದಗಿದೆಯೇ ಎಂಬ ಅನುಮಾನ ಕಾಡಲು ಶುರುವಾಗಿದೆ.

ಹಿಂದುಳಿದ ವರ್ಗಗಳ ಹಾಸ್ಟೆಲ್‌ಗಳಿಗೆ ಸಿದ್ದಗಂಗಾ ಮಠದಿಂದ ಅಕ್ಕಿಯನ್ನು ಸಾಲ ಪಡೆಯಲಾಗಿದೆ. ತುಮಕೂರು ಜಿಲ್ಲೆಯ ಬಿಸಿಎಂ ಹಾಸ್ಟೆಲ್‌ಗಳಿಗೆ ಸರ್ಕಾರದಿಂದ ಸಕಾಲಕ್ಕೆ ರೇಷನ್ ಪೂರೈಕೆಯಾಗುತ್ತಿಲ್ಲ. ಆದರೆ, ಮಕ್ಕಳನ್ನು ಹೊಟ್ಟೆಗಿಲ್ಲದೆ ಕೂರಿಸಲು ಸಾಧ್ಯವೇ? ಆ ಸಕಾರಣದಿಂದ ಬಿಸಿಎಂ ಇಲಾಖೆ ಅಧಿಕಾರಿಗಳು ಸಿದ್ದಗಂಗಾ ಮಠದಿಂದ ಅಕ್ಕಿ ದಾಸ್ತಾನು ಸಾಲ ಪಡೆದಿದ್ದಾರೆ ಸುಮಾರು 500 ಚೀಲ ಅಕ್ಕಿಯನ್ನು ಸಾಲವಾಗಿ ಪಡೆದಿದ್ದಾರೆ ಎಂಬ ಮಾಹಿತಿ ವಿಸ್ತಾರ ನ್ಯೂಸ್‌ಗೆ ಗೊತ್ತಾಗಿದೆ. ಸಾಲದ ಅಕ್ಕಿಯಿಂದ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಊಟವನ್ನು ಹಾಕಲಾಗುತ್ತಿದೆ. “ಹಸಿವು ಮುಕ್ತ ಕರ್ನಾಟಕ” ಎಂದು ಹೇಳುತ್ತಿರುವ ಸಿಎಂ ಸಿದ್ದರಾಮಯ್ಯ ಅವರ ಕನಸು ಇದೇನಾ ಎಂಬ ಪ್ರಶ್ನೆಯನ್ನು ಜನರು ಮಾಡುತ್ತಿದ್ದಾರೆ.

ಇದನ್ನೂ ಓದಿ: Suhani Bhatnagar: ಸುಹಾನಿಯ ಜೀವ ಕಸಿದ ಡರ್ಮಟೊಮೈಯೋಸಿಟಿಸ್‌; ಈ ಕಾಯಿಲೆ ಹೇಗೆ ಕಾಣಿಸಿಕೊಳ್ಳುತ್ತದೆ? ಲಕ್ಷಣಗಳೇನು?

ಅಕ್ಕಿ ಸಾಲ ಕೊಟ್ಟಿದ್ದು ಹೌದು: ಮಠದ ಆಡಳಿತಾಧಿಕಾರಿ ಸ್ಪಷ್ಟನೆ

ಬಿಸಿಎಂ ಹಾಸ್ಟೆಲ್‌ಗಳಿಗೆ ಅಕ್ಕಿ ಸಾಲ ಕೊಟ್ಟಿರುವುದು ಹೌದು. ಈಗಾಗಲೇ ಈ ರೀತಿ ಎರಡು ಬಾರಿ ತೆಗೆದುಕೊಂಡು ಹೋಗಿದ್ದಾರೆ. ಒಮ್ಮೆ ವಾಪಸ್‌ ಕೊಟ್ಟಿದ್ದಾರೆ. ಈಗ ವಾಪಸ್‌ ಕೊಡಲಾಗಿದೆಯಾ? ಇಲ್ಲವಾ? ಎಂಬ ಸಂಗತಿ ಬಗ್ಗೆ ನನಗೆ ಇನ್ನೂ ಮಾಹಿತಿ ಇಲ್ಲ. ಉಗ್ರಾಣದಲ್ಲಿ ಈ ಎಲ್ಲ ಮಾಹಿತಿ ಇರುತ್ತದೆ. ನಮ್ಮ ಸಿಬ್ಬಂದಿಗೆ ಈ ವಿಷಯ ಗೊತ್ತಿರುತ್ತದೆ. ಅಕ್ಕಿ ಸಾಲದ ರೂಪದಲ್ಲಿ ಬೇಕು ಎಂದು ಕೇಳಿದಾಗ ಕೊಡಲು ನಾನು ಸೂಚನೆ ನೀಡಿದ್ದೆ. ತರುವಾಯ ಬಂತೋ ಇಲ್ಲವೋ ಎಂಬುದು ನನಗೆ ಗೊತ್ತಿಲ್ಲ ಎಂದು ಸಿದ್ದಗಂಗಾ ಮಠದ ಆಡಳಿತಾಧಿಕಾರಿ ವಿಶ್ವನಾಥಯ್ಯ ವಿಸ್ತಾರ ನ್ಯೂಸ್‌ಗೆ ಪ್ರತಿಕ್ರಿಯೆ ನೀಡಿದ್ದಾರೆ.

Exit mobile version