Site icon Vistara News

Cylinder Blast: ಗ್ಯಾಸ್‌ ಸಿಲಿಂಡರ್ ಸ್ಫೋಟ; 7 ದಿನ ನರಳಾಡಿ ಪ್ರಾಣಬಿಟ್ಟ ಇಬ್ಬರು ಗಾಯಾಳುಗಳು

cylinder blast in Tumkur

ತುಮಕೂರು: ಅಡುಗೆ ಮಾಡುವ ಸಂದರ್ಭದಲ್ಲಿ ಗ್ಯಾಸ್‌ ಸಿಲಿಂಡರ್ ಸ್ಫೋಟಗೊಂಡು (Cylinder Blast) ಆರು ಮಂದಿ ಗಂಭೀರ ಗಾಯಗೊಂಡಿದ್ದ ಘಟನೆ ತುಮಕೂರಿನ (Tum) ಕುಣಿಗಲ್‌ ಪಟ್ಟಣದ ಸಂತೆಬೀದಿಯಲ್ಲಿ ಮೇ 17ರ ಸಂಜೆ ನಡೆದಿತ್ತು. ಕುಣಿಗಲ್‌ನ ಕೋಟೆ ಪ್ರದೇಶದ ಸಿಂಗ್ ಬೀದಿಯ ಮನೆಯಲ್ಲಿ ಸಿಲಿಂಡರ್ ಸ್ಫೋಟದಿಂದಾಗಿ ತೀವ್ರವಾಗಿ ಗಾಯಗೊಂಡಿದ್ದ ಇಬ್ಬರು ಆಸ್ಪತ್ರೆಯಲ್ಲಿ ಮೇ 23ರಂದು ಮೃತಪಟ್ಟಿದ್ದಾರೆ. ಶಿವಣ್ಣ (45) ಮತ್ತು ಕುಶಾಲ್ ನಟರಾಜ್‌ (11) ಮೃತ ದುರ್ದೈವಿಗಳು.

ರವಿಕುಮಾರ್ ಎಂಬುವವರ ಮನೆಯಲ್ಲಿ ಅಡುಗೆ ಮಾಡುವಾಗ ಸಿಲಿಂಡರ್ ಸ್ಫೋಟಗೊಂಡಿತ್ತು. ಸ್ಫೋಟದ ತೀವ್ರತೆಗೆ ಮನೆಯಲ್ಲಿದ್ದ ದಿನಸಿ ಸಾಮಗ್ರಿ ಹಾಗೂ ಕಿಟಕಿ ಬಾಗಿಲುಗಳು ಛಿದ್ರಗೊಂಡು, ಗೋಡೆಗಳು ಬಿರುಕು ಬಿಟ್ಟಿದ್ದವು. ಘಟನೆಯಲ್ಲಿ ಮನೆಯಲ್ಲಿದ್ದ ರವಿಕುಮಾರ್ ಪತ್ನಿ ಶೃತಿ (45) ಮಕ್ಕಳಾದ ಕುಶಾಲ್ (11) ಹೇಮಲತಾ (16) ಅವರಿಗೆ ಗಂಭೀರ ಗಾಯವಾಗಿತ್ತು.

ಇನ್ನು ಸಿಲಿಂಡರ್ ಸ್ಫೋಟದ ಶಬ್ಧ ಕೇಳಿ ಮನೆಯೊಳಗೆ ಬಂದ ಪಕ್ಕದ ಮನೆಯ ಮಂಜಮ್ಮ(42), ಶಿವಣ್ಣ(45), ಸಮೀನಾ (46) ಎಂಬುವವರಿಗೂ ಬೆಂಕಿ ತಗುಲಿ ಗಂಭೀರ ಗಾಯಗಳಾಗಿತ್ತು. ಗಾಯಳುಗಳನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.

ಜಿಡ್ಡಿಗೆರೆ ಗ್ರಾಮದ ಶಿವಣ್ಣ ಕುಣಿಗಲ್‌ನಲ್ಲಿ ನಟರಾಜ್ ಎಂಬುವರ ಬಾಡಿಗೆ ಮನೆಯಲ್ಲಿದ್ದರು. ತರಕಾರಿ ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದ ಶಿವಣ್ಣ, ನಟರಾಜ್ ಮನೆಯಲ್ಲಿ ಸಿಲಿಂಡ‌ರ್ ಸ್ಫೋಟಗೊಂಡಾಗ ಬೆಂಕಿ ನಂದಿಸಲು ಹೋಗಿ ತೀವ್ರ ಸುಟ್ಟಗಾಯಗಳಾಗಿತ್ತು. ಈ ವೇಳೆ ನಟರಾಜ್ ಅವರ ಮಗ ಕುಶಾಲ್ ಕೂಡ ಗಾಯಗೊಂಡಿದ್ದ. ಇದೀಗ ಇವರಿಬ್ಬರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಇನ್ನುಳಿದ ಇಬ್ಬರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ.

ಇದನ್ನೂ ಓದಿ: Prajwal Revanna Case: ಪ್ರಜ್ವಲ್‌ ಪಾಸ್‌ಪೋರ್ಟ್‌ ರದ್ದತಿಗಾಗಿ ಪಿಎಂಗೆ ಸಿದ್ದರಾಮಯ್ಯ ಇನ್ನೊಂದು ಪತ್ರ; ಚುರುಕಾದ ವಿದೇಶಾಂಗ ಇಲಾಖೆ

ಭೀಕರ ದೋಣಿ ದುರಂತ; ಪುಟ್ಟ ಮಕ್ಕಳು ಸೇರಿ 6 ಜನ ನೀರುಪಾಲು

ಮಹಾರಾಷ್ಟ್ರ: ಭೀಕರ ಗಾಳಿಗೆ ದೋಣಿಯಿಂದು ಮಗುಚಿ(Boat Capsizes) ಬಿದ್ದಿದ್ದು, ದೋಣಿಯಲ್ಲಿದ್ದ ಆರು ಜನ ನೀರುಪಾಲಾಗಿರುವ ದಾರುಣ ಘಟನೆ ಮಹಾರಾಷ್ಟ್ರದ (Maharastra) ಪುಣೆಯಲ್ಲಿ ನಡೆದಿದೆ. ಜಿಲ್ಲೆಯ ಫಾಲಘರ್ ತಾಲೂಕಿನ ಕಲಾಶಿ ಬಳಿ ದುರ್ಘಟನೆ ಸಂಭವಿಸಿದ್ದು, ಇಬ್ಬರು ಪುಟ್ಟ ಮಕ್ಕಳು ಸೇರಿ ಆರು ಮಂದಿ ಕಣ್ಮರೆ ಆಗಿದ್ದಾರೆ. ನೀರು ಪಾಲಾಗಿರುವ ಆರು ಮಂದಿಗಾಗಿ ಶೋಧ ಕಾರ್ಯಾಚರಣೆ ಕೈಗೆತ್ತಿಕೊಳ್ಳಲಾಗಿದೆ.

ಘಟನೆ ವಿವರ:

ಮಹಾರಾಷ್ಟ್ರದ ಪುಣೆ ಜಿಲ್ಲೆಯ ಫಾಲಘರ್ ತಾಲೂಕಿನ ಕಲಾಶಿ ಬಳಿ ದೋಣಿ (Boat) ಮುಗುಚಿ 6 ಮಂದಿ ನೀರು ಪಾಲಾಗಿದ್ದಾರೆ. ಉಜ್ಜನಿ ಜಲಾಶಯದ ಹಿನ್ನೀರಿನಲ್ಲಿ ಕುಟುಂಬಸ್ಥರು ದೋಣಿ ವಿಹಾರಕ್ಕೆ ತೆರಳಿದ್ದರು. ಭೀಮಾ ನದಿಗೆ ಅಡ್ಡಲಾಗಿ ಕಟ್ಟಿರುವ ಉಜ್ಜನಿ ಜಲಾಶಯದಲ್ಲಿ ಗೋಕುಳ ಜಾಧವ್(30) ಕೋಮಲ್ ಜಾಧವ್(26) ಶುಭ ಜಾಧವ್(1) ಮಾಹಿ ಜಾಧವ್(3) ನೀರು ಪಾಲಾಗಿದ್ದಾರೆ. ಇನ್ನೂ ಅದೇ ದೋಣಿಯಲ್ಲಿ ಮತ್ತಿಬ್ಬರು ವಿಹಾರಿಗಳು ಸಹ ಪಯಣಿಸುತ್ತಿದ್ದು, ಅವರೂ ನೀರು ಪಾಲಾಗಿದ್ದಾರೆ ಎನ್ನಲಾಗಿದೆ.

ಆ ಇಬ್ಬರು ದುರ್ದೈವಿಗಳನ್ನು ಕುಗ್ಗಾಂವ್ ಗ್ರಾಮದ ಅನುರಾಗ್ ಅವಘಡೆ, ಗೌರವ್ ಡೋಂಗರೆ ಎಂದು ಗುರುತಿಸಲಾಗಿದೆ. ನೀರುಪಾಲಾಗಿರುವವರ ಹುಡುಕಾಟಕ್ಕೆ ರಾಷ್ತ್ರೀಯ ವಿಪತ್ತು ನಿರ್ವಹಣಾ ದಳ (NDRF) ತಂಡದ ಸಿಬ್ಬಂದಿ ಆಗಮಿಸಿದ್ದಾರೆ. ಸ್ಥಳೀಯ ಪೊಲೀಸರ ಸಹಾಯದೊಂದಿಗೆ ಎನ್ ಡಿ ಆರ್ ಎಫ್ ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿಯಿಂದ ಹುಡುಕಾಟ ಮುಂದುವರಿಸಿದ್ದಾರೆ.

ಇನ್ನು ನಿನ್ನೆ ಸಂಜೆ ಈ ದುರ್ಘಟನೆ ಸಂಭವಿಸಿದ್ದು, ನೀರುಪಾಲಾಗಿರುವ ಆರು ಜನರು ಬದುಕಿರುವ ಸಾಧ್ಯತೆ ಬಹಳಷ್ಟು ಕಡಿಮೆ ಇದೆ. ಇದಾಗ್ಯೂ ಇದುವರೆಗೆ ಯಾರೊಬ್ಬರ ಶವ ಪತ್ತೆ ಆಗಿಲ್ಲ.

ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ತದಡಿ ಗ್ರಾಮದ ಸಮೀಪ ಸಮುದ್ರದ ಹಿನ್ನೀರಿನಲ್ಲೂ ಮೂರು ದಿನಗಳ ಹಿಂದೆ ಪ್ರವಾಸಿಗರ ಬೋಟ್ ಮಗುಚಿದ್ದು, 40 ಪ್ರವಾಸಿಗರನ್ನು ರಕ್ಷಣೆ ಮಾಡಲಾಗಿದೆ. ಅಳಿವೆ ಸಂಗಮ ಸ್ಥಳದಿಂದ ತುಸು ದೂರದಲ್ಲಿ ಘಟನೆ (Tourist Boat Capsizes) ನಡೆದಿದ್ದು, ಕರಾವಳಿ ಕಾವಲು ಪಡೆ ಮತ್ತು ಸ್ಥಳೀಯ ರಕ್ಷಣಾ ತಂಡದಿಂದ ಪ್ರವಾಸಿಗರನ್ನು ರಕ್ಷಣೆ ಮಾಡಲಾಗಿದೆ.

ಮೂಡಂಗಿಯ ಗಣೇಶ, ರಮೇಶ ಎಂಬುವವರ ಪ್ರವಾಸಿ ಬೋಟ್ ಮಗುಚಿದ್ದು, ದೋಣಿ ಸಾಮರ್ಥ್ಯಕ್ಕಿಂತ ಹೆಚ್ಚಿನ ಜನರನ್ನು ಹತ್ತಿಸಿಕೊಂಡಿದ್ದರಿಂದ ಬೋಟ್ ಮಗುಚಿದೆ. ಸಕಾಲಕ್ಕೆ ಕರಾವಳಿ ಕಾವಲು ಪಡೆ ಆಗಮಿಸಿ ರಕ್ಷಣೆ ಮಾಡಿದ್ದರಿಂದ ದೊಡ್ಡ ದುರಂತವೊಂದು ತಪ್ಪಿದೆ.

ಮತ್ತೊಂದೆಡೆ ಮೀನು ಹಿಡಿಯಲು ಹೋಗಿದ್ದ ಇಬ್ಬರು ನೀರು ಪಾಲಾಗಿರುವ ಘಟನೆ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಶಿರ್ಲಾಲುವಿನ ಉಬ್ಬರಬೈಲಿನಲ್ಲಿ ನಡೆದಿದೆ. ಮುಡ್ಡಾಯಿಗುಡ್ಡೆ ಹರೀಶ್ ಪೂಜಾರಿ (48), ಹೃತೇಶ್ ಪೂಜಾರಿ (18) ಮೃತಪಟ್ಟವರು. ಮೀನು ಹಿಡಿಯಲೆಂದು ಉಬ್ಬರಬೈಲು ಕೆರೆಗೆ ಹೋಗಿದ್ದಾಗ ದುರ್ಘಟನೆ ನಡೆದಿದೆ. ಮೀನಿಗೆ ಬಲೆ‌ ಹಾಕುವಾಗ ಆಯತಪ್ಪಿ ಕೆರೆಗೆ ಬಿದ್ದು ಇಬ್ಬರೂ ನೀರುಪಾಲಾಗಿದ್ದಾರೆ. ಕಾರ್ಕಳ ಅಜೆಕಾರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version