ತುಮಕೂರು: ಈಗಾಗಲೆ ರಾಜ್ಯ ಬಿಜೆಪಿ ವಿರುದ್ಧ 40% ಕಮಿಷನ್ ಆರೋಪವನ್ನು ಮಾಡುತ್ತಿರುವ ಕಾಂಗ್ರೆಸ್ ಇದೀಗ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಮೇಲೆ ಲೋಕಾಯುಕ್ತ ದಾಳಿ ವಿಚಾರವನ್ನು ಹಿಡಿದು ಹೋರಾಟ ತೀವ್ರಗೊಳಿಸಿದೆ. ರಾಜ್ಯ ಬಿಜೆಪಿ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಮಾರ್ಚ್ 9ರಂದು ರಾಜ್ಯ ಬಂದ್‌ಗೆ (Karnataka Bandh) ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕರೆ ನೀಡಿದ್ದು, ಇದಕ್ಕೆ ಎಲ್ಲ ಉದ್ಯಮಿಗಳ, ವ್ಯಾಪಾರಿಗಳ ಬೆಂಬಲ ಕೋರಿದ್ದಾರೆ.
ತುಮಕೂರಿನ ಕೊರಟಗೆರೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಈ ಹೇಳಿಕೆ ನೀಡಿದ್ದಾರೆ. ರಾಷ್ಟ್ರದ ನಾಯಕರ ಬಳಿ ಅನೇಕ ವಿಚಾರಗಳನ್ನು ಚರ್ಚೆ ಮಾಡಿದ್ದೀವಿ. ಕಳೆದ ಮೂರುವರೆ ವರ್ಷದಿಂದ ಬ್ರಹ್ಮಾಂಡ ಭ್ರಷ್ಟಾಚಾರದ ಬಗ್ಗೆ ಜನರ ಗಮನ ಸೆಳೆದಿದ್ದೇವೆ. ಇಡೀ ರಾಜ್ಯಕ್ಕೆ ಅಗೌರ ತರುವ ಕೆಲಸ ಬಿಜೆಪಿ ಮಾಡಿದೆ.
ಸಿಎಂ ಭ್ರಷ್ಟಾಚಾರಕ್ಕೆ ಆಧಾರ ಕೊಡಿ ಎಂದು ಕೇಳಿದ್ರು. ಕಂಟ್ರಾಕ್ಟರ್ ಅಸೋಸಿಯೇಷನ್ ಅಧ್ಯಕ್ಷರು ನೇರವಾಗಿ ಮೋದಿ ಅವರಿಗೆ ಪತ್ರ ಬರೆದಿದ್ದರು. ಮೋದಿ ನಾನು ತಿನ್ನೋದಿಲ್ಲ, ತಿನ್ನೋರಿಗೂ ಬಿಡಲ್ಲ ಎಂದು ಹೇಳಿದ್ರು. ಎಲ್ಲ ಕಚೇರಿಗಳಲ್ಲಿ ಆಗುತ್ತಿರುವ ಭ್ರಷ್ಟಾಚಾರದ ಬಗ್ಗೆ ಜನರ ಗಮನ ಸೆಳೆದಿದ್ದೀವಿ.
ಭ್ರಷ್ಟಾಚಾರದಿಂದ ಸಾವಿರಾರು ಜನ ನೊಂದಿದ್ದಾರೆ. ಸಿಎಂ ಕೇಳಿದ ಸಾಕ್ಷಿಗೆ ಲೋಕಾಯುಕ್ತ ಅಧಿಕಾರಿಗಳು ಕೊಟ್ಟಿದ್ದಾರೆ. ಸರ್ಕಾರಿ ಕಚೇರಿಯಲ್ಲಿ ನಡೆಯುತ್ತಿದ್ದ ಭ್ರಷ್ಟಾಚಾರವನ್ನು ಬಯಲಿಗೆಳೆದಿದ್ದಾರೆ. ಎಲ್ಲಾ ಲೊಕಾಯುಕ್ತ ಅಧಿಕಾರಿಗಳಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ಸಿಎಂ ರಾಜೀನಾಮೆಗೂ ನಾವು ಒತ್ತಾಯ ಮಾಡಿದ್ದೇವೆ. 9 ತಾರೀಖು ಬೆಳಗ್ಗೆ 9 ಗಂಟೆಗೆ ರಾಜ್ಯಾದ್ಯಂತ ಭ್ರಷ್ಟಾಚಾರದ ಪಾರ್ಟಿ ವಿರುದ್ದ ಬಂದ್ ಆಚರಣೆ ಮಾಡಲಾಗುವುದು.
ಬಂದ್‌ನಿಂದಾಗಿ ಯಾವುದೇ ಶಾಲೆ, ಆಸ್ಪತ್ರೆಗೆ ತೊಂದರೆ ಆಗದಂತೆ ಪ್ರತಿಭಟನೆ ಮಾಡಲಿದ್ದೇವೆ. ಎಲ್ಲಾ ವ್ಯಾಪರಿಗಳು 9 ಗಂಟೆಯಿಂದ 11 ಗಂಟೆವರೆಗೆ ಸಹಕಾರ ನೀಡಬೇಕು. ಕಾನೂನು ಕೈಗೆತ್ತಿಕೊಳ್ಳುವ ಕೆಲಸ ಯಾರೂ ಕೂಡ ಮಾಡಬಾರದು. ಭ್ರಷ್ಟಾಚಾರ ಮುಕ್ತ ರಾಜ್ಯ ಮಾಡಲು ನಿಮ್ಮ ಸಹಕಾರ ಬೇಕು. ಎಲ್ಲ ಸಂಘ ಸಂಸ್ಥೆಗಳು ನಮಗೆ ಸಹಕಾರ ಕೊಡಿ.
ಇದನ್ನೂ ಓದಿ: Lokayukta Raid: ತಲೆ ಮರೆಸಿಕೊಂಡಿರುವ ಶಾಸಕ ಮಾಡಾಳುಗೆ ವಿಚಾರಣೆಗೆ ನೋಟಿಸ್; ಆದಾಯಕ್ಕಿಂತ ಅಧಿಕ ಆಸ್ತಿ?
ಎಲ್ಲ ವರ್ತಕರಿಗೆ ಒಂದು ಮನವಿ, ಇಡೀ ರಾಜ್ಯದ ಉದ್ದಗಲಕ್ಕೂ ಎರಡು ಗಂಟೆ ಪ್ರತಿಭಟನೆ ಮಾಡಬೇಕು. ಮುಂದಿನ ದಿನ ನಮ್ಮ ರಾಜ್ಯದಲ್ಲಿ ಉತ್ತಮ ಸರ್ಕಾರ ಕೊಡುತ್ತೇವೆ. ಜನ ನಮಗೆ ಆಶೀರ್ವಾದ ಮಾಡ್ತಾರೆ. ಕೊರಟಗೆರೆ ಕಾಂಗ್ರೆಸ್ ಭವನ ಉದ್ಘಾಟಿಸಿ ಇಂತಹ ಭವ್ಯ ಭವನದಲ್ಲಿ ಈ ಮನವಿ ಮಾಡ್ತೇನೆ ಎಂದಿದ್ದಾರೆ.