ತುಮಕೂರು: ಈಗ ಎಲ್ಲಿ ಹೋದರೂ ದುಡ್ಡು ಎಣಿಸಿ ಪಾವತಿ ಮಾಡೋದು ಭಾರಿ ಕಡಿಮೆ. ತರಕಾರಿ, ಹಣ್ಣು, ಬಟ್ಟೆ ಖರೀದಿಸುವಾಗ, ಹೋಟೆಲ್‌ಗೆ ಹೋದಾಗಲೆಲ್ಲ ಡಿಜಿಟಲ್ ಪೇಮೆಂಟ್‌ಗೇ ಆದ್ಯತೆ. ಎಲ್ಲೋ ಭಿಕ್ಷುಕರು ಕೂಡಾ ಪೇ ಸ್ಕ್ಯಾನರ್ ಇಟ್ಟುಕೊಂಡಿದ್ದಾರೆ ಅಂತ ಕೇಳಿದ ನೆನಪು! ಇದೆಲ್ಲವನ್ನೂ ಮೀರಿ ಈಗ ದೇವರ ಹುಂಡಿಗೂ ಡಿಜಿಟಲ್ ಪೇಮೆಂಟ್ ಬಂದಿದೆ. ದೇವಾಲಯಕ್ಕೆ ಹೋಗಿ ಛೆ.. ಚಿಲ್ಲರೆ ಇಲ್ವಲ್ಲ ಅಂತ ಬೇಸರ ಮಾಡಬೇಕಾಗಿಲ್ಲ. ಸ್ಕ್ಯಾನ್ ಮಾಡಿ.. ಪೇ ಮಾಡಿ!
ಅಂದ ಹಾಗೆ, ಈ ರೀತಿಯ ಹೊಸ ವ್ಯವಸ್ಥೆ ಜಾರಿ ಮಾಡಿದ ರಾಜ್ಯದ ಮೊದಲ ದೇಗುಲ ಯಾವುದು ಅನ್ನೋ ಕುತೂಹಲವೇ? ತುಮಕೂರಿನ ದೇವರಾಯನ ದುರ್ಗದ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ಮೊದಲ ಬಾರಿ ಇ- ಕಾಣಿಕೆ ಹುಂಡಿ ಬಂದಿದೆ ಎಂದು ಅಲ್ಲಿನ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಟಿ ಸುನೀಲ್ ಕುಮಾರ್ ಮಾಹಿತಿ ನೀಡಿದ್ದಾರೆ.
ಮೋದಿಯ ಕ್ಯಾಶ್‌ಲೆಸ್‌ನ ಕನಸು ದೇವಾಲಯದಲ್ಲೂ ನನಸಾಗುವಂತೆ ಮಾಡಲಾಗಿದೆ. ಫೋನ್ ಪೇ, ಯುಪಿಐ ಇತರೆ ಡಿಜಿಟಲ್ ಮಾಧ್ಯಮದ ಮೂಲಕ ದೇವರಿಗೆ ಕಾಣಿಕೆ ಹಣ ಪಾವತಿ ಮಾಡಬಹುದಾಗಿದೆ.
ಅಂದ ಹಾಗೆ ದೇವರ ಹುಂಡಿಗೆ ದುಡ್ಡು ಹಾಕುವ ಮೊದಲು ತಲೆಗೆ ಮೂರು ಸುತ್ತು ಸುತ್ತಿಸುವ ಪರಿಪಾಠ ಜನರದ್ದು. ಅವರೆಲ್ಲ ಇನ್ನು ಏನು ಮಾಡುವುದು? ಮೊಬೈಲನ್ನೇ ಮೂರು ಸುತ್ತು ತಿರುಗಿಸಬಹುದಾ ಎಂಬ ಪ್ರಶ್ನೆ ಆಸ್ತಿಕರನ್ನು ಕಾಡುತ್ತಿದೆ.
ಇದನ್ನೂ ಓದಿ: ಪುರಿ ಜಗನ್ನಾಥ ದೇವಳದಲ್ಲಿನ ನಿರ್ಮಾಣ ಕಾಮಗಾರಿ ಪ್ರಶ್ನಿಸಿದ ಅರ್ಜಿಗಳನ್ನು ವಜಾಗೊಳಿಸಿದ ಸು.ಕೋರ್ಟ್