ತುಮಕೂರು: ʻʻಹಿಂದೂ ಧರ್ಮ ಯಾವಾಗ ಹುಟ್ಟಿತು, ಯಾರು ಹುಟ್ಟು ಹಾಕಿದರು ಎಂಬುದು ಇಂದಿಗೂ ಪ್ರಶ್ನೆಯಾಗಿಯೇ ಉಳಿದಿದೆʼʼ ಎಂಬ ತಮ್ಮ ಹೇಳಿಕೆ ವಿವಾದವಾಗಿ ಪರಿವರ್ತನೆಯಾದ ಬಳಿಕ ಗೃಹ ಸಚಿವ ಜಿ. ಪರಮೇಶ್ವರ್ (G Parameshwar) ಅವರು ತುಂಬ ಜಾಗರೂಕತೆಯಿಂದ ಮಾತನಾಡುತ್ತಿದ್ದಾರೆ. ಪ್ರತಿ ವೇದಿಕೆಯಲ್ಲೂ ಮೊದಲು ಶ್ಲೋಕ ಹೇಳಿ ಭಾಷಣ (Speach starts with Shloka) ಆರಂಭ ಮಾಡುತ್ತಿದ್ದಾರೆ. ಶನಿವಾರ ಪಾವಗಡದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶನಿ ಮಂತ್ರ ಉಚ್ಚರಿಸಿ (Shani mantra recited by G Parameshwar) ಗಮನ ಸೆಳೆದರು.
ಕಳೆದ ಮಂಗಳವಾರ ತಮ್ಮ ಊರಾದ ಕೊರಟಗೆರೆಯಲ್ಲಿ ಶಿಕ್ಷಕರ ದಿನಾಚರಣೆಯ ಬಗ್ಗೆ ಮಾತನಾಡುವ ವೇಳೆ,ʻʻ ʻಹಿಂದೂ ಧರ್ಮ ಯಾವಾಗ ಹುಟ್ಟಿತು, ಯಾರು ಹುಟ್ಟು ಹಾಕಿದರು ಎಂಬುದು ಇಂದಿಗೂ ಪ್ರಶ್ನೆಯಾಗಿಯೇ ಉಳಿದಿದೆ. ಬೌದ್ಧ ಧರ್ಮ ಹುಟ್ಟಿದ್ದು ಭಾರತದಲ್ಲಿ. ಜೈನ ಧರ್ಮವು ಭಾರತದಲ್ಲಿ ತನ್ನ ಬೇರುಗಳನ್ನು ಹೊಂದಿದೆ. ಇಸ್ಲಾಂ ಮತ್ತು ಕ್ರೈಸ್ತ ಧರ್ಮಗಳು ವಿದೇಶಗಳಿಂದ ಬಂದವು. ಆದರೆ ನೀವು ವಿಶ್ಲೇಷಿಸಿದರೆ, ಈ ಎಲ್ಲ (ಧರ್ಮಗಳ) ಸಾರಾಂಶವು ಮನುಕುಲಕ್ಕೆ ಒಳ್ಳೆಯದನ್ನು ಮಾಡುವುದಾಗಿದೆʼʼ ಎಂದು ಹೇಳಿದ್ದರು. ಹಿಂದೂ ಧರ್ಮ ಸನಾತನ ಧರ್ಮ ಎನ್ನುವುದನ್ನೇ ಪರಮೇಶ್ವರ್ ಬೇರೆ ರೀತಿಯಲ್ಲಿ ಹೇಳಿದ್ದರು. ಆದರೆ, ಆಗ ಸನಾತನ ಧರ್ಮದ ಚರ್ಚೆ ಜೋರಾಗಿದ್ದರಿಂದ ಅದು ವಿವಾದವಾಗಿತ್ತು.
ತಮ್ಮ ಮಾತುಗಳಿಗೆ ಸ್ಪಷ್ಟನೆ ನೀಡಿದ ಪರಮೇಶ್ವರ್ ಅವರು ತಾನೊಬ್ಬ ಹಿಂದುವಾಗಿದ್ದು, ಹಿಂದು ಸಂಪ್ರದಾಯಗಳನ್ನು ಪಾಲಿಸುತ್ತೇನೆ. ಬೆಳಗ್ಗೆ ಎದ್ದ ಕೂಡಲೇ ʻಕರಾಗ್ರೇ ವಸತೇ ಲಕ್ಷ್ಮಿʼ ಹೇಳುತ್ತೇನೆ, ರಾತ್ರಿ ರಾಮರಕ್ಷಾ ಸ್ತೋತ್ರ ಹೇಳಿಯೇ ಮಲಗುವುದು ಎಂದು ವಿವರಿಸಿದ್ದಲ್ಲದೆ, ಭಗವದ್ಗೀತೆಯ ಕೆಲವು ಶ್ಲೋಕಗಳನ್ನು ಕೂಡಾ ಹೇಳಿದ್ದರು.
ಹೀಗೆ ವಿವಾದಗಳು ಶುರುವಾದ ಬಳಿಕ ತಾನು ವೈಯಕ್ತಿಕ ಬದುಕಿನಲ್ಲಿ ಆಚರಿಸುತ್ತಿರುವ ಧರ್ಮ ನಿಷ್ಠೆಯನ್ನು, ದೈವ ಭಕ್ತಿಯನ್ನು ಅವರು ಬಹಿರಂಗದಲ್ಲೂ ತೋರಿಸಿಕೊಳ್ಳುತ್ತಿದ್ದಾರೆ. ವೇದಿಕೆಗಳಲ್ಲಿ ಶ್ಲೋಕ ಪಠಣ ಮಾಡುವ ಮೂಲಕ ಪಕ್ಷ ಯಾವುದಾದರೂ ಧರ್ಮದ ವಿಚಾರದಲ್ಲಿ ಯಾವುದೇ ತಡೆ ಇರುವುದಿಲ್ಲ ಎನ್ನುವುದನ್ನು ನಿರೂಪಿಸುತ್ತಿದ್ದಾರೆ. ಜತೆಗೆ ಬಿಜೆಪಿಯವರು ಮಾತ್ರ ಹಿಂದುಗಳಲ್ಲ ಎನ್ನುವುದನ್ನು ಕೂಡಾ.
ಪಾವಡಗಡದಲ್ಲಿ ಶನಿ ಮಂತ್ರ ಹೇಳಿದ್ದೇಕೆ ಪರಮೇಶ್ವರ್?
ಪಾವಗಡ ತಾಲೂಕಿನಲ್ಲಿ 147 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಲು ಅವರು ಬಂದಿದ್ದರು. ಶಾಸಕ ವೆಂಕಟರಮಣಪ್ಪ ಅವರ ಕ್ಷೇತ್ರದಲ್ಲಿ ಅಭಿವೃದ್ಧಿ ಕಾಮಗಾರಿಕೆಗಳಿಗೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಮಾತಿಗೆ ಮೊದಲು ಶನಿ ಮಂತ್ರ ಉಚ್ಛಾರಣೆ ಮಾಡಿದರು ಪರಮೇಶ್ವರ್.
ʻʻನಾನಿವತ್ತು ಪಾವಗಡಕ್ಕೆ ಬಂದಾಗ ಹಲವಾರು ಮಂದಿ ಮೂರು ನಾಮ ಹಾಕಿಕೊಂಡು ನಿಂತಿದ್ದರು. ಏನು ವಿಶೇಷ ಎಂದು ಕೇಳಿದೆ. ಇವತ್ತು ಶ್ರಾವಣ ಶನಿವಾರ. ಅದಕ್ಕಾಗಿ ಶನಿ ಮಹಾತ್ಮ ದೇವಸ್ಥಾನಕ್ಕೆ ಬಂದಿದ್ದೇವೆ ಎಂದು ಹೇಳಿದರು. ಅದಕ್ಕೆ ಶನಿ ಮಹಾತ್ಮನನ್ನು ನಮಿಸಿ ನನ್ನ ಮಾತು ಶುರು ಮಾಡುತ್ತೇನೆʼʼ ಎಂದು ಹೇಳಿದರು.
ವೆಂಕಟರಮಣಪ್ಪ ಪಾವಗಡ ತೋಳ!
ʻʻವೆಂಕಟರಮಣಪ್ಪ ನಾನು ಇಬ್ಬರೂ ಒಂದೇ ಬಾರಿ ರಾಜಕೀಯಕ್ಕೆ ಎಂಟ್ರಿ ಕೊಟ್ಟವರು. ಅವರು ನನ್ನ ಆತ್ಮೀಯ ಸ್ನೇಹಿತರುʼʼ ಎಂದು ಹೇಳಿದ ಪರಮೇಶ್ವರ್, ವೆಂಕಟರಮಣಪ್ಪ ಅವರನ್ನು ಪಾವಗಡ ತೋಳಕ್ಕೆ ಹೋಲಿಸಿದರು.
ʻʻಡಿಕೆಶಿ, ಸಿದ್ದರಾಮಯ್ಯ ಹಾಗೂ ನಾವು ರಾಜ್ಯ ಪ್ರವಾಸ ಮಾಡಬೇಕಾದ್ರೆ, ಜನಪರ ಆಡಳಿತ ನೀಡುತ್ತೇವೆ ಎಂದು ಹೇಳಿದ್ವಿ. ಪ್ರಣಾಳಿಕೆಯಲ್ಲಿ ನೀಡಿದ ಭರವಸೆಯನ್ನು ಈಡೇರಿಸುತ್ತೇವೆ ಎಂದು ಹೇಳಿದ್ವಿ. ಐದು ಗ್ಯಾರಂಟಿಗಳನ್ನು ಕೊಟ್ಟಿದ್ವಿ, ಅದನ್ನು ಜಾರಿಗೆ ತಂದಿದ್ದೇವೆ. ಬಿಜೆಪಿಯವರಂತೆ ಸುಳ್ಳು ಹೇಳಲಿಲ್ಲʼʼ ಎಂದು ಪರಮೇಶ್ವರ್ ನುಡಿದರು.
ʻʻಅಭಿವೃದ್ಧಿಗೆ ಹಣವಿಲ್ಲ ಅಂತ ಕೆಲವರು ಟೀಕೆ ಮಾಡ್ತಾರೆ. 148 ಕೋಟಿ ರೂ. ಕಾಮಗಾರಿಗೆ ಶಂಕುಸ್ಥಾಪನೆ ಮಾಡ್ತಿದ್ದೀವಿ. ಇದೆಲ್ಲಾ ಅಭಿವೃದ್ಧಿಯಲ್ವಾ? ಇನ್ನು ಮೂರು ತಿಂಗಳಲ್ಲಿ ಪಾವಗಡಕ್ಕೆ ತುಂಗಾಭದ್ರ ನದಿಯಿಂದ ಕುಡಿಯುವ ನೀರು ತರುತ್ತೇವೆʼʼ ಎಂದು ಹೇಳಿದರು.
ʻʻಎತ್ತಿನಹೊಳೆ ಯೋಜನೆಗೆ ಬಿಜೆಪಿ ಸರ್ಕಾರ ಒಂದು ಕಾಸು ಕೊಟ್ಟಿಲ್ಲ. ಅವರು ಹಣ ಕೊಡದಿದ್ದಕ್ಕೆ ಇವತ್ತು ಈ ಯೋಜನೆಯ ವೆಚ್ಚ 24 ಸಾವಿರ ಕೋಟಿಗೆ ಏರಿದೆʼʼ ಎಂದು ಹೇಳಿದರು.
ಇದನ್ನೂ ಓದಿ : G Parameshwar : ಹಿಂದು ಧರ್ಮ ಯಾವಾಗ ಹುಟ್ಟಿತು? ಹುಟ್ಟಿಸಿದ್ದು ಯಾರು? ; ಸಚಿವ ಪರಮೇಶ್ವರ್ ಪ್ರಶ್ನೆ
ವೆಂಕಟರಮಣಪ್ಪ ನೀನು ಬಡವನಲ್ಲ!
ʻʻವೆಂಕಟರಮಣಪ್ಪ ನೀನೇನು ಬಡವನಲ್ಲ, ಪಾವಗಡ ಜನರು ಬಹಳ ಸಂತೋಷದಿಂದ ಇದ್ದಾರೆʼʼ ಎಂದು ಪರಮೇಶ್ವರ್ ಹೇಳಿ ಖುಷಿಯಾದರು. ʻʻವಿಶ್ವದ ಅತಿ ದೊಡ್ಡ ಸೋಲಾರ್ ಪಾರ್ಕ್ ಪಾವಗಡದಲ್ಲಿದೆ. ಇದರ ಫಲ ಪಾವಗಡ ಜನಕ್ಕೆ ಬರುತ್ತೆ. ಸೋಲಾರ್ ಪಾರ್ಕ್ ಬಂದ ಪರಿಣಾಮ ಜನರು ಚೆನ್ನಾಗಿ ಮನೆ ಕಟ್ಟಿಸಿಕೊಂಡಿದ್ದಾರೆ. ಸಹೋದರ ರಘುವೀರ ರೆಡ್ಡಿ ನಾವು ಒತ್ತಾಯ ಮಾಡಿ ತುಮಕೂರು-ಪಾವಗಡ- ಆಂಧ್ರಕ್ಕೆ ರೈಲು ತಂದೆವುʼʼ ಎಂದು ವಿವರಿಸಿದರು.