ತುಮಕೂರು: ಆಸ್ತಿ ವಿಚಾರಕ್ಕೆ ಮೊಮ್ಮಗನಿಂದಲೇ ತಾತನ ಕೊಲೆ (Murder) ನಡೆದಿದ್ದು, ಎಂಟು ತಿಂಗಳ ಬಳಿಕ ಕೊಲೆ ರಹಸ್ಯ ಬೆಳಕಿಗೆ ಬಂದಿದೆ. ಇದೀಗ ಕೊಲೆಗೈದ ಮೊಮ್ಮಗ ಸೇರಿ ಮೂವರು ಪೊಲೀಸರ ವಶವಾಗಿದ್ದಾರೆ.
ಚೇಳೂರಿನ ಕಲ್ಲರ್ದಗೆರೆ ಭೋವಿ ಕಾಲೊನಿ ನಿವಾಸಿ ಗೋವಿಂದಪ್ಪ (75) ಕೊಲೆಯಾಗಿದ್ದ ದುರ್ದೈವಿಯಾಗಿದ್ದಾರೆ. ಮೊಮ್ಮಗ ಮೋಹನ್ ಹಾಗೂ ಆತನ ಇಬ್ಬರು ಸ್ನೇಹಿತರಾದ ಪ್ರಜ್ವಲ್, ಚೇತನ್ ಕೊಲೆ ಮಾಡಿದ ಆರೋಪಿಗಳಾಗಿದ್ದಾರೆ. ಗುಬ್ಬಿ ತಾಲೂಕಿನ ಚೇಳೂರಿನಲ್ಲಿ ಕೊಲೆಯಾದ ಗೋವಿಂದಪ್ಪ ನಾಲ್ಕು ಎಕರೆ ಜಮೀನು ಹೊಂದಿದ್ದರು. ಗೋವಿಂದಪ್ಪನಿಗೆ ಒಬ್ಬ ಮಗ ಹಾಗೂ ಒಬ್ಬ ಮಗಳಿದ್ದಳು. ಇಬ್ಬರಿಗೂ ಸಮಾನವಾಗಿ ಆಸ್ತಿ ಹಂಚಿಕೆ ಮಾಡಬೇಕೆಂದು ಗೋವಿಂದಪ್ಪ ಪಟ್ಟು ಹಿಡಿದಿದ್ದರು. ಗೋವಿಂದಪ್ಪ ಅವರ ಪುತ್ರ ವೆಂಕಟರಮಣಪ್ಪ ಈ ಬಗ್ಗೆ ಯಾವುದೇ ತಕರಾರು ಮಾಡದೆ ಸುಮ್ಮನಿದ್ದರು. ಇದನ್ನು ಸಹಿಸದ ಮೊಮ್ಮಗ ಮೋಹನ್, ಎಲ್ಲಿ ತಾತ ಆಸ್ತಿಯನ್ನು ಅತ್ತೆಗೆ ಬರೆಯುತ್ತಾನೆ ಎಂದು ತನ್ನ ತಂದೆಗೆ ತಿಳಿಯದ ಹಾಗೆ ತಾತನ ಕೊಲೆಗೆ ಸ್ಕೆಚ್ ಹಾಕಿದ್ದ.
ಕೊಲೆ ಮಾಡಿದ ಪಾಪಿ ಮೊಮ್ಮಗ!
ಕೊಲೆಗೆ ಸ್ಕೆಚ್ ಹಾಕಿದ ಆರೋಪಿ ಮೋಹನ್ ತನ್ನ ಇಬ್ಬರು ಸ್ನೇಹಿತರ ಜತೆ ಸೇರಿ ಜನವರಿ 20ರಂದು ಗೋವಿಂದಪ್ಪ ಅವರನ್ನು ತೋಟದ ಬಳಿ ಕರದೊಯ್ದಿದ್ದ. ನಂತರ ತಾತನ ತಲೆಗೆ ಕಬ್ಬಿಣದ ರಾಡ್‌ನಿಂದ ಹೊಡೆದು ಕೊಲೆ ಮಾಡಿದ್ದ. ಮೂವರು ಸೇರಿಕೊಂಡು ಬಳಿಕ ಅಲ್ಲೇ ಹಾಳು ಬಿದ್ದ ಜಾಗದಲ್ಲಿ ಗುಂಡಿ ತೋಡಿ ಗೋವಿಂದಪ್ಪ ಮೃತದೇಹವನ್ನು ಹೂತು ಹಾಕಿದ್ದರು. ತಮಗೆ ಏನೂ ಗೊತ್ತಿಲ್ಲ ಎಂಬಂತೆ ಆರಾಮಾಗಿ ಆರೋಪಿಗಳು ಓಡಾಡಿಕೊಂಡಿದ್ದರು. ಮೃತ ಗೋವಿಂದಪ್ಪ ಎಲ್ಲಿಯೂ ಕಾಣದ ಹಿನ್ನೆಲೆಯಲ್ಲಿ ಪುತ್ರ ವೆಂಕಟರಮಣಪ್ಪ ಗುಬ್ಬಿ ತಾಲೂಕಿನ ಚೇಳೂರು ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಕೇಸ್ ದಾಖಲಿಸಿದ್ದರು.
ಇದನ್ನೂ ಓದಿ | Women Murder | ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಅಪರಿಚಿತ ಮಹಿಳೆ ಶವ ಪತ್ತೆ
ಎಣ್ಣೆ ಮತ್ತಲ್ಲಿ ಕೊಲೆ ರಹಸ್ಯ ಬಾಯ್ಬಿಟ್ಟ ಸ್ನೇಹಿತರು!
ಆರೋಪಿ ಮೋಹನ್ ಕೊಲೆಯಾದ ಬಳಿಕ ಪ್ರತಿದಿನ ತನ್ನಿಬ್ಬರು ಸ್ನೇಹಿತರಿಗೆ ಎಣ್ಣೆ ಪಾರ್ಟಿ ಕೊಡಿಸುತ್ತಿದ್ದ. ಇತ್ತೀಚೆಗೆ ತನ್ನಿಬ್ಬರು ಸ್ನೇಹಿತರನ್ನು ದೂರವಿಟ್ಟು ಎಣ್ಣೆ ಪಾರ್ಟಿ ಕೊಡಿಸುವುದನ್ನು ನಿಲ್ಲಿಸಿದ್ದ. ಇದರಿಂದ ಮೂವರಲ್ಲೇ ವೈಮನಸ್ಸು ಉಂಟಾಗಿತ್ತು. ಕಳೆದ ವಾರ ಎಣ್ಣೆ ಕುಡಿಯುವ ಮತ್ತಲ್ಲಿ ಸ್ನೇಹಿತರ ಜತೆ ಮಾತನಾಡುವಾಗ ಚೇತನ್ ಹಾಗೂ ಪ್ರಜ್ವಲ್ ಕೊಲೆ ರಹಸ್ಯ ಬಾಯ್ಬಿಟ್ಟಿದ್ದಾರೆ.
ಈ ಪ್ರಕರಣದ ಕುರಿತು ತುಮಕೂರು ಎಸ್ ಪಿ ರಾಹುಲ್ ಕುಮಾರ್ ಶಹಪುರ್ ವಾಡ್ ಮಾತನಾಡಿ ʻʻ ಡಿಎಸ್‌ಪಿ ನವೀನ್ ನೇತೃತ್ವದಲ್ಲಿ ಪ್ರಕರಣದ ವಿಚಾರಣೆ ನಡೆಸಿದ್ದೇವು. ಕೊಲೆಯ ಸುಳಿವು ತಿಳಿಯುತ್ತಿದ್ದಂತೆ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಕೊಲೆ ಮಾಡಿ ಹೂತಿಟ್ಟಿದ್ದ ಮೃತದೇಹವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಚೇಳೂರು ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿ ವಿಚಾರಣೆ ಮುಂದುವರಿಸಿದ್ದಾರೆʼʼ ಎಂದರು.
ಇದನ್ನೂ ಓದಿ | murder | ಒಂಟಿಯಾಗಿ ವಾಸಿಸುತ್ತಿದ್ದ ನಿವೃತ್ತ ಶಿಕ್ಷಕಿಯ ಕೊಲೆ, ಚಿನ್ನಾಭರಣದೊಂದಿಗೆ ಪರಾರಿಯಾದ ದುಷ್ಕರ್ಮಿಗಳು