ತುಮಕೂರು: ನಾನು ಇನ್ನು ರಾಜ್ಯದ ವಿಧಾನಸಭೆ ಚುನಾವಣೆಗೆ (Karnataka Assembly Elections) ಸ್ಪರ್ಧೆ ಮಾಡುವುದಿಲ್ಲ. ಈ ಬಾರಿ ಲೋಕಸಭಾ ಚುನಾವಣೆಯಲ್ಲಿ (Parliament Elections 2024) ತುಮಕೂರಿನಿಂದ ಸ್ಪರ್ಧೆ ಮಾಡಬೇಕು ಎನ್ನುವ ಆಸೆ ಇದೆ. ಹೈಕಮಾಂಡ್ (Congress High command) ಟಿಕೆಟ್ ಕೊಟ್ಟರೆ ಸ್ಪರ್ಧೆ ಮಾಡುತ್ತೇನೆ ಎಂದು ಹೇಳಿದ್ದಾರೆ ಸಹಕಾರಿ ಸಚಿವ ಕೆ.ಎನ್. ರಾಜಣ್ಣ (KN Rajanna).
ತುಮಕೂರಿನಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು ಬಿ.ವೈ ವಿಜಯೇಂದ್ರ ಅವರ ನೇಮಕ, ಸೋಮಣ್ಣ, ಮುದ್ದ ಹನುಮೇಗೌಡರ ಕಾಂಗ್ರೆಸ್ ಪ್ರವೇಶ ಸಾಧ್ಯತೆ, ತಮ್ಮ ರಾಜಕೀಯದ ಮುಂದಿನ ಹೆಜ್ಜೆಗಳ ಬಗ್ಗೆ ಮಾತನಾಡಿದರು.
ʻʻತುಮಕೂರು ಲೋಕಸಭೆ ಚುನಾವಣೆ ಟಿಕೆಟ್ ಗೆ ನಾನು ಡಿಮ್ಯಾಂಡ್ ಇಟ್ಟಿದ್ದೀನಿ. ಯಾಕೆ, ನನಗೇನು ಅರ್ಹತೆ ಇಲ್ವಾ.ʼʼ ಎಂದು ಕೇಳಿದ ಅವರು, ಹೈಕಮಾಂಡ್ ನಿಲ್ಲು ಅಂದ್ರೆ ನಿಲ್ತೀನಿ, ಇಲ್ಲ ಅಂದ್ರೆ ಸುಮ್ಮನೆ ಇರ್ತೀನಿ ಎಂದರು. ನಂದು ವಿಧಾನ ಪರಿಷತ್ ಆಯ್ತು, ಅಸೆಂಬ್ಲಿ ಆಯ್ತು, ಲೋಕಸಭೆ ಒಂದಿದೆ. ಲೋಕಸಭೆ ಹೇಗಿರುತ್ತದೆ ಅಂತ ನೋಡೋಣ ಅಂತ ಅಷ್ಟೆ. ಲೋಕಸಭೆಗೆ ಆಯ್ಕೆಯಾದರೆ ಮೂರು ಸದನ ಆಗುತ್ತದೆ. ವಯಸ್ಸು ಇದ್ರೆ ರಾಜ್ಯಸಭೆಗೂ ಹೋಗ್ತೀನಿ. ಆದರೆ, ಇನ್ನು ರಾಜ್ಯ ರಾಜಕಾರಣದಲ್ಲಿ ಯಾವ ಚುನಾವಣೆಗೂ ನಿಲ್ಲುವುದಿಲ್ಲ ಎಂದರು.
ಸೋಮಣ್ಣ, ಮುದ್ದಹನುಮೇಗೌಡರ ಕಥೆ ಏನು?
ʻʻವಿ. ಸೋಮಣ್ಣ ಅವರು ತುಮಕೂರು ಕ್ಷೇತ್ರಕ್ಕೆ ಡಿಮ್ಯಾಂಡ್ ಇಟ್ಟಿದ್ದಾರೆ ಎನ್ನುವ ಬಗ್ಗೆ ನನಗೆ ಗೊತ್ತಿಲ್ಲ. ನಾನಂತೂ ಇಟ್ಟಿದ್ದೇನೆ. ಮಾಜಿ ಸಂಸದ ಮುದ್ದಹನುಮೇಗೌಡ ಅವರು ಕಾಂಗ್ರೆಸ್ ಸೇರುವ ಒಲವು ತೋರಿದ್ದಾರೆ ಎಂಬ ಮಾಹಿತಿ ಬೇರಯವರಿಂದ ಬಂದಿದೆ. ಅದನ್ನು ಸಂಪೂರ್ಣ ಅಲ್ಲಗಳೆಯೋಕೂ ಶಕ್ತಿ ಇಲ್ಲ. ಒಪ್ಪಿಕೊಳ್ಳೋಕೂ ಶಕ್ತಿ ಇಲ್ಲ. ಪರಮೇಶ್ವರ್ ಬಳಿಯೂ ಬಹಳಷ್ಟು ಜನ ಬಂದು ಹೇಳ್ತಿದ್ದಾರೆ ಅಂತಾ ಹೇಳಿದ್ರು. ಅದರ ಬಗ್ಗೆ ಹೆಚ್ಚು ಮಾಹಿತಿ ಕೇಳುವುದಕ್ಕೆ ನಾನು ಹೋಗಿಲ್ಲ. ಮಾಜಿ ಶಾಸಕ ಗೌರಿಶಂಕರ್ ಕಾಂಗ್ರೆಸ್ ಸೇರುವ ಬಗ್ಗೆಯೂ ನನಗೆ ಗೊತ್ತಿಲ್ಲ. ಸೇರೋರು ಯಾರು ಅಂತಾನು ಗೊತ್ತಿಲ್ಲಾ, ಬಿಟ್ಟೋಗೋರು ಯಾರು ಅಂತಾನೂ ಗೊತ್ತಿಲ್ಲ. ಪಂಚರಾಜ್ಯ ಚುನಾವಣೆ ಎಲೆಕ್ಷನ್ ರಿಸಲ್ಟ್ ಬರಲಿ. ಮುಂದೆ ಒಂದೊಂದು ಘಟನೆಗಳು ಕೂಡ ಒಂದೊಂದು ಕ್ರಿಯೆಗೆ ಕಾರಣ ಆಗುತ್ತದೆ. ಯಾರೇನೂ ಸನ್ಯಾಸಿಗಳು ಆಗಿರುವುದಿಲ್ಲ. ಯಾರು ಬರುವುದಕ್ಕೂ ನನ್ನ ಅಡ್ಡಿ ಇಲ್ಲ. ಬಾ ಅಂತ ನಾನು ಕರೆಯೋದಿಲ್ಲ. ಹೋಗು ಅಂತಾನೂ ಹೇಳುವುದಿಲ್ಲʼʼ ಎಂದು ಕೆ.ಎನ್. ರಾಜಣ್ಣ ಹೇಳಿದರು.
ಬೈ ಎಲೆಕ್ಷನ್ ಗೆಲ್ಲಿಸಿದ ಕೂಡಲೇ ನಾಯಕ ಆಗಲ್ಲ: ವಿಜಯೇಂದ್ರ ಬಗ್ಗೆ ರಾಜಣ್ಣ
ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿ.ವೈ.ವಿಜಯೇಂದ್ರ ಅವರನ್ನು ನೇಮಕ ಮಾಡಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಕೆ.ಎನ್. ರಾಜಣ್ಣ ಅವರು, ಬಹಳ ಸಮಯದಿಂದ ರಾಜ್ಯಾಧ್ಯಕ್ಷತೆ, ವಿಪಕ್ಷ ನಾಯಕ ಸ್ಥಾನದ ನೇಮಕ ನನೆಗುದಿಗೆ ಬಿದ್ದಿತ್ತು. ಏನೋ ಕೇಂದ್ರದ ಬಿಜೆಪಿ ಮುಖಂಡರಿಗೆ ಜ್ಙಾನೋದಯ ಆಗಿ ಅಧ್ಯಕ್ಷ ಸ್ಥಾನ ತುಂಬಿದ್ದಾರೆ. ವಿಜಯೇಂದ್ರ ಅವರನ್ನು ಆ ಸ್ಥಾನಕ್ಕೆ ತಂದಿದ್ದಾರೆ. ವಿಜಯೇಂದ್ರ ಅವರನ್ನು ತಂದಿದ್ದರಿದ ಆ ಪಕ್ಷದ ಅಸಮಾಧಾನ ಕೂಡ ಆಚೆ ಬರ್ತಾ ಇದೆ. ಮುಂದೆ ಕಾದು ನೋಡಬೇಕು ಎಂದರು.
ʻʻʻಯಾವುದೋ ನಾಲ್ಕು ಬೈ ಎಲೆಕ್ಷನ್ ಗೆಲ್ಲಿಸಿದ ಕ್ಷಣಕ್ಕೆ ದೊಡ್ಡ ಸಂಘಟನಾ ಚತುರ ಅಂತಾ ಸರ್ಟಿಫಿಕೇಟ್ ಕೊಡೋಕೆ ಆಗಲ್ಲ. ಇತ್ತೀಚಿನ ಬೈ ಎಲೆಕ್ಷನ್ ಗಳು ಯಾವ ಆಧಾರದ ಮೇಲೆ ಗೆಲ್ಲುತ್ತದೆ, ಸೋಲುತ್ತದೆ ಅಂತಾ ಗೊತ್ತಿದೆ. ಗುಂಡ್ಲುಪೇಟೆ, ನಂಜನಗೂಡು ಬೈ ಎಲೆಕ್ಷನ್‌ನಲ್ಲಿ ಕಾಂಗ್ರೆಸ್ ಗೆದ್ದರೂ ಆರು ತಿಂಗಳಿಗೆ ಸೋತರು. ಬೈ ಎಲೆಕ್ಷನ್ ರಿಸಲ್ಟ್ ತರೋಕೆ ಮಾನದಂಡಗಳು ಬೇರೆ ಬೇರೆ ಇರುತ್ತೆ. ಹಾಗಾಗಿ ಬೈ ಎಲೆಕ್ಷನ್ ಗೆದ್ದ ಕ್ಷಣಕ್ಕೆ ಮಹಾ ಸಂಘಟನಾ ಚತುರರು ಅಂತಾ ಸರ್ಟಿಫಿಕೇಟ್ ಕೊಡೋಕೆ ಆಗಲ್ಲʼʼ ಎಂದು ರಾಜಣ್ಣ ಹೇಳಿದರು.
ʻʻಆ ಪಾರ್ಟಿಯ ಕೇಂದ್ರದ ಮುಖಂಡರು ನೇಮಕ ಮಾಡಿದ್ದಾರೆ. ಅದು ಅವರ ಮನೆಯ ವಿಚಾರ, ಅದಕ್ಕೆ ನಾವೇನ್ ಕಾಮೆಂಟ್ ಮಾಡೋಕೆ ಹೋಗಲ್ಲ. ಆದರೂ ಪಾರ್ಟಿ ಗೊಂದಲ ಇದ್ಯಲ್ಲಾ, ಜೆಡಿಎಸ್-ಬಿಜೆಪಿ ಸೀಟು ಹಂಚಿಕೆ ಬಗ್ಗೆ ತೀರ್ಮಾನ, ಇವೆಲ್ಲವೂ ಕೂಡ ಪ್ರಮುಖ. ಟಿವಿಯಲ್ಲಿ ನೋಡುತ್ತಿದ್ದೆ. ವಿಜಯೇಂದ್ರ ಬಹಳಷ್ಟು ಉತ್ಸಾಹದಲ್ಲಿ ಇದ್ದಾರೆ, ಅವರಿಗೆ ಒಳ್ಳೆದಾಗ್ಲಿ ಅಂತಾ ಹೇಳ್ತೀನಿʼʼ ಎಂದು ಕೆ.ಎನ್. ರಾಜಣ್ಣ ಹೇಳಿದರು.
ʻʻಎಲ್ಲಾ ಸವಾಲುಗಳನ್ನ ಸ್ವೀಕಾರ ಮಾಡ್ತೀನಿ ಅಂತ ವಿಜಯೇಂದ್ರ ಹೇಳಿದ್ದು ಯಾಕೋ ಎಳಸು ಅನಿಸಿತು. ಈ ಮಾತನ್ನೆಲ್ಲ ಯಡಿಯೂರಪ್ಪ ಹೇಳಿದ್ರೆ ಒಪ್ಪಿಕೊಳ್ಳೋಣ, ಅವರದ್ದು 50 ವರ್ಷಗಳ ಹೋರಾಟ ಇದೆ. ಇವರದ್ದು ಎಷ್ಟು ಹೋರಾಟ ಇದೆ, ಯಡಿಯೂರಪ್ಪ ಹೆಸರೇ ಇವರಿಗೆ ಬಂಡವಾಳ. ಮುಂದಿನ ದಿನಗಳಲ್ಲಿ ನೋಡೋಣ, ಯಾವ ಮಟ್ಟಕ್ಕೆ ಎಲ್ಲರನ್ನೂ ವಿಶ್ವಾಸ ತೆಗೆದುಕೊಳ್ತಾರೆ ಅಂತ. ಪಕ್ಷ ಕಟ್ಟಿದಾಕ್ಷಣಕ್ಕೆ ವಿಶ್ವಾಸ ಗಳಿಸದೇ ಇದ್ರೇ ಏನ್ ಮಾಡೋಕೆ ಆಗುತ್ತೆʼʼ ಎಂದು ಪ್ರಶ್ನಿಸಿದರು ಕೆ.ಎನ್. ರಾಜಣ್ಣ.
ವಿ.ಸೋಮಣ್ಣ ಕಾಂಗ್ರೆಸ್ ಪಕ್ಷಕ್ಕೆ ಸೇರ್ತಾರೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು ʻʻಸಿದ್ದಗಂಗಾ ಮಠದಲ್ಲಿ 6ನೇ ತಾರೀಖು ಕಾರ್ಯಕ್ರಮ ಮಾಡ್ತಿದ್ದಾರೆ. ಅದಕ್ಕೆ ಬರಬೇಕು ಅಂತ ನನಗೆ ಪೋನ್ ಮಾಡಿದ್ರು. ನಾನು ಅವಾಗ ಅಸೆಂಬ್ಲಿ ಇರುತ್ತೆ ಅಂದೆ. ನಾನು ಆ ಕಾರ್ಯಕ್ರಮಕ್ಕೆ ಬರಬೇಕು ಅನ್ನೋ ಅಭಿಲಾಷೆ ಇಟ್ಟುಕೊಂಡಿದ್ದೀನಿ. ನೋಡೋಣ ವಿಧಾನಸಭೆ ಕಾರ್ಯಕಲಾಪ ಆದ್ಮೇಲೆ ಸಮಯ ಆದ್ರೆ ಬಂದು ಹೋಗ್ತೀನಿʼʼ ಎಂದರು.
ʻʻಕಾಂಗ್ರೆಸ್ ಒಂಥರಾ ಸಮುದ್ರ ಇದ್ದಂಗೆ, ಗಂಗಾ ನದಿ ನೀರೂ ಬರುತ್ತೆ, ಚರಂಡಿ ನೀರು ಬಂದು ಬೀಳುತ್ತೆ. ಸಮುದ್ರದಲ್ಲಿ ಅಮೃತನೂ ಇದೆ, ವಿಷನೂ ಇದೆ. ಅಮೃತ ಸಿಗೋರಿಗೆ ಅಮೃತ ಸಿಗುತ್ತೆ, ವಿಷ ಸಿಗೋರಿಗೆ ವಿಷ ಸಿಗುತ್ತೆ. ಕಾಂಗ್ರೆಸ್ ಮಾಸ್ ಬೇಸ್ಡ್ ಪಾರ್ಟಿ, ಕೇಡರ್ ಬೇಸಡ್ ಪಾರ್ಟಿ ಅಲ್ಲ. ದೊಡ್ಡ ಪ್ರವಾಹ ಇದ್ದಂಗೆ, ಹೋಗ್ತಾ ಇರುತ್ತೆʼʼ ಎಂದು ರಾಜಣ್ಣ ವಿವರಿಸಿದರು.
ಜಾತಿ ಗಣತಿ ಬಿಡುಗಡೆ ಆಗುವುದು ಖಚಿತ. ಆದರೆ, ಬಿಡುಗಡೆ ಆದ ಕ್ಷಣಕ್ಕೆ ಸರ್ಕಾರ ಒಪ್ಪಿಬಿಟ್ಟಿದೆ ಅಂತ ಅಲ್ಲ. ಅದನ್ನ ಜನರ ಡೊಮೈನ್ ಗೆ ಬಿಡ್ತೀವಿ. ಜನರು ಚರ್ಚೆ ಮಾಡ್ಲಿ. ಯಾವುದು ಸರಿ,ಯಾವುದು ಸರಿ ಇಲ್ಲಾ ಅಂತಾ ಜನಾಭಿಪ್ರಾಯ ಸಂಗ್ರಹಣೆ ಮಾಡ್ತೀವಿ. ಅಂತಿಮವಾಗಿ ಮಂತ್ರಿ ಮಂಡಲದಲ್ಲಿ ಯಾವ ಅಂಶ ಒಪ್ಪಬೇಕು, ಯಾವ ಅಂಶ ತಿರಸ್ಕರಿಸಬೇಕು ಅಂತಾ ಚರ್ಚೆ ಬಳಿಕ ತೀರ್ಮಾನ ಆಗುತ್ತದೆ ಎಂದು ಜಾತಿಗಣತಿ ವರದಿ ಬಗ್ಗೆ ಹೇಳಿದರು.