Site icon Vistara News

Inhuman Behaviour : ಹಣಕ್ಕಾಗಿ ರಾಕ್ಷಸಿ ಕೃತ್ಯ; ಬಾಲಕಿಯ ತೊಡೆಗೆ ಇಸ್ತ್ರಿ ಪೆಟ್ಟಿಗೆ‌ ಇಟ್ಟು ಸುಟ್ಟ ದೊಡ್ಡಮ್ಮ

Inhuman behaviour Tumkur

ತುಮಕೂರು: ದೊಡ್ಡಮ್ಮನನ್ನೂ ಅಮ್ಮನೆಂದೇ ಪ್ರೀತಿಸುವ ಜನ ನಾವು. ಕಷ್ಟಗಳನ್ನು ಅವರ ಬಳಿಯೂ ಹೇಳಿ ಹಗುರಾಗುತ್ತೇವೆ. ಇಂಥ ಸಮಾಜದಲ್ಲೂ ರಾಕ್ಷಸಿ ದೊಡ್ಡಮ್ಮನಂಥವರು (Demon Aunt) ಇರುತ್ತಾರೆ ಎನ್ನುವುದಕ್ಕೆ ತುಮಕೂರು ಜಿಲ್ಲೆಯಲ್ಲಿ (Tumkur News) ನಡೆದ ಈ ಅಮಾನವೀಯ ಘಟನೆಯೇ (Inhuman Behaviour) ಸಾಕ್ಷಿ.

ಇಲ್ಲಿ ತಾಯಿ ಇಲ್ಲದೆ ಅನಾಥೆಯಾಗಿರುವ ಬಾಲಕಿಯೊಬ್ಬಳು (Orphaned Girl) ದೊಡ್ಡಮ್ಮನ ರಾಕ್ಷಸಿ ಕೃತ್ಯದಿಂದ ಕಂಗಾಲಾಗಿ ನೋವುಣ್ಣುತ್ತಿದ್ದಾಳೆ. ತಾಯಿ ಇಲ್ಲದ ಬಾಲಕಿಯನ್ನು ಅಮ್ಮನಂತೆ ಸಾಕಬೇಕಾಗಿದ್ದ ಈ ಮಹಿಳೆ ಬ್ಯಾಂಕ್ ನಲ್ಲಿದ್ದ ಹಣಕ್ಕಾಗಿ ಆ ಹುಡುಗಿಯನ್ನೇ ಇಸ್ತ್ರಿ ಪೆಟ್ಟಿಗೆಯಿಂದ (Aunt burnt girl with Hot Iron box) ಸುಟ್ಟಿದ್ದಾಳೆ.

ಈ ಘಟನೆ ನಡೆದಿರುವುದು ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ನಿಡಘಟ್ಟೆ ಗ್ರಾಮದಲ್ಲಿ. ನಂಜಮ್ಮ ಎಂಬ ದುರುಳ ಮಹಿಳೆಯೇ ಈ ಕೃತ್ಯವನ್ನು ಎಸಗಿದವಳು.

ಲಕ್ಷ್ಮಿ ಎಂಬ ಬಾಲಕಿಯ ತಾಯಿ ನರಸಮ್ಮ ನಾಲ್ಕು ವರ್ಷಗಳ ಹಿಂದೆ ಸಾವನ್ನಪ್ಪಿದ್ದರು. ಅದಾದ ಬಳಿಕ ಲಕ್ಷ್ಮೀ ಮೇಲೆ ಬಹಳ ಪ್ರೀತಿ ಎಂಬಂತೆ ದೊಡ್ಡಮ್ಮ ನಂಜಮ್ಮ ನಾಟಕ ಮಾಡುತ್ತಿದ್ದಳು. ಆದರೆ, ಇದು ಪ್ರೀತಿಯಲ್ಲ, ನಂಜು ಎಂದು ತಿಳಿಯಲು ಹೆಚ್ಚು ಸಮಯ ಬೇಕಾಗಲಿಲ್ಲ.

ಲಕ್ಷ್ಮಿಯ ತಾಯಿ ನರಸಮ್ಮ ಅಕಾಲಿಕವಾಗಿ ಪ್ರಾಣ ಕಳೆದುಕೊಂಡಿದ್ದರೂ ತಮ್ಮ ಮಗಳಿಗಾಗಿ ಜಂಟಿ ಖಾತೆಯಲ್ಲಿ ನಾಲ್ಕು ಲಕ್ಷ ರೂ. ಡಿಪಾಸಿಟ್‌ ಇಟ್ಟಿದ್ದಳು. ಇದು ಬ್ಯಾಂಕ್‌ನಲ್ಲಿ ಇತ್ತು. ಈ ಹಣವನ್ನು ಲಪಟಾಯಿಸಲು ನಂಜಮ್ಮ ಸಾಕಷ್ಟು ಪ್ಲ್ಯಾನ್‌ ಮಾಡಿದ್ದಳು. ಮೊದಲು ಲಕ್ಷ್ಮೀ ಜತೆ ಚೆನ್ನಾಗಿರುವಂತೆ ನಟಿಸಿದ್ದಳು. ಅಮ್ಮ ಇಲ್ಲದಿದ್ದರೇನಂತೆ ನಾನೇ ನಿನ್ನ ಅಮ್ಮ ಅಂದಿದ್ದಳು.

ಇದೇ ರೀತಿಯ ನಾಟಕದ ಭಾಗವಾಗಿ ಕೆಲವು ದಿನಗಳ ಹಿಂದೆ ಲಕ್ಷ್ಮೀಯನ್ನು ತನ್ನ ಮನೆಗೆ ಕರೆಸಿಕೊಂಡಿದ್ದಳು. ಮನೆಗೆ ಬಂದ ಲಕ್ಷ್ಮೀ ಜತೆಗೆ ಬ್ಯಾಂಕ್‌ನಲ್ಲಿರುವ ಹಣದ ಬಗ್ಗೆ ಮಾತನಾಡಿದ್ದಾಳೆ. ಜಂಟಿ ಖಾತೆಯಲ್ಲಿರುವ ಹಣವನ್ನು ಬಿಡಿಸಿ ಕೊಡು ಎಂದು ಹೇಳಿದ್ದಾಳೆ. ಬಾಲಕಿ ಒಪ್ಪದೆ ಇದ್ದಾಗ ಆಕೆಯ ತೊಡೆಗೆ ಬಿಸಿ ಬಿಸಿ ಇಸ್ತ್ರಿ ಪೆಟ್ಟಿಗೆ ಇಟ್ಟಿದ್ದಳು.

Inhuman behaviour Tumkur

ಈ ಕೃತ್ಯಕ್ಕೆ ಇನ್ನೊಬ್ಬ ದುಷ್ಟ ಕೂಡಾ ಸಾಥ್‌ ನೀಡಿದ್ದಾನೆ. ಅವನೇ ನಂಜಮ್ಮಳ ಮಗ ಬಸವರಾಜ್‌. ಬಿಸಿ ಬಿಸಿ ಇಸ್ತ್ರಿ ಪೆಟ್ಟಿಗೆಯನ್ನು ತೊಡೆಯ ಮಾಂಸಲ ಭಾಗಗಳ ಮೇಲೆ ಇಟ್ಟಾಗ ಲಕ್ಷ್ಮೀ ಬೊಬ್ಬೆ ಹೊಡೆಯದಂತೆ ಆತ ಬಾಯಿಯನ್ನು ಬಿಗಿಯಾಗಿ ಹಿಡಿದಿದ್ದ. ಕೈಗಳನ್ನೂ ಕಟ್ಟಿ ಹಾಕುವಂತೆ ಹಿಡಿದಿದ್ದ.

ಅಂದ ಹಾಗೆ, ನಂಜಮ್ಮ ವಾಸವಾಗಿರುವುದು ಶಿರಾ ತಾಲೂಕಿನ ನಿಡಘಟ್ಟೆ ಗ್ರಾಮದಲ್ಲಿ. ಬಾಲಕಿ ವಾಸವಾಗಿರುವುದು ಮಧುಗಿರಿ ತಾಲೂಕಿನ ಪೂಜಾರಹಳ್ಳಿ ಗ್ರಾಮದಲ್ಲಿ. ಶಿವರಾತ್ರಿ ಹಬ್ಬಕ್ಕೆಂದು ಊರಿಗೆ ಬಂದಿದ್ದ ನಂಜಮ್ಮ ಕಳೆದ ಶನಿವಾರ ರಾತ್ರಿ ಲಕ್ಷ್ಮಿಯನ್ನು ತನ್ನ ಊರಿಗೆ ಕರೆದುಕೊಂಡು ಬಂದಿದ್ದಳು.

ಇದನ್ನೂ ಓದಿ : Inhuman Behaviour : ಮಗುವಿಗೆ ಚಿತ್ರಹಿಂಸೆ ನೀಡಿದ ರಾಕ್ಷಸಿ ತಾಯಿ, ದುರುಳ ಬಾಯ್‌ಫ್ರೆಂಡ್‌ ಅರೆಸ್ಟ್‌

Inhuman behaviour : ಬೆಳಕಿಗೆ ಬಂದಿದ್ದು ಹೇಗೆ?

ಹಾಗಂತ ಈ ಪುಟ್ಟ ಹುಡುಗಿಗೆ ಇಸ್ತ್ರಿ ಪೆಟ್ಟಿಗೆ ಇಟ್ಟು ಸುಟ್ಟ ಘಟನೆಯನ್ನು ಯಾರೂ ಬಾಯಿ ಬಿಟ್ಟಿಲ್ಲ. ಲಕ್ಷ್ಮೀ ಐದನೇ ಕ್ಲಾಸಿನಲ್ಲಿ ಓದುತ್ತಿದ್ದ ಹುಡುಗಿ. ಆಕೆಗೆ ಸದ್ಯ ಪರೀಕ್ಷೆಗಳು ನಡೆಯುತ್ತಿದ್ದವು. ಆಕೆ ಸೋಮವಾರ ನಡೆದ ಪರೀಕ್ಷೆಗೆ ಹಾಜರಾಗದೇ ಇದ್ದ ಹಿನ್ನೆಲೆಯಲ್ಲಿ ಘಟನೆ ಬೆಳಕಿಗೆ ಬಂದಿದೆ.

ವಿಚಾರಿಸಿದಾಗ, ರಾಕ್ಷಸಿ ನಂಜಮ್ಮ ಬೇರೆಯೇ ಕಥೆ ಕಟ್ಟಿದ್ದಾಳೆ. ಇಸ್ತ್ರಿಪೆಟ್ಟಿಯಿಂದ ಸುಟ್ಟ ಆಕೆ ಕೊನೆಗೆ ಲಕ್ಷ್ಮೀ ಚಹಾ ಚೆಲ್ಲಿಕೊಂಡಿದ್ದಾಳೆ ಎಂದು ಕಥೆ ಹೇಳಿದ್ದಾಳೆ. ಶಾಲೆಯ ಶಿಕ್ಷಕರು ಮತ್ತು ಸಂಬಂಧಿಕರು ಲಕ್ಷ್ಮೀಯನ್ನು ಊರಿಗೆ ಕರೆಸಿ ಮಾತನಾಡಿಸಿದಾಗ ಭೀಕರ ಘಟನೆ ಬೆಳಕಿಗೆ ಬಂದಿದೆ. ಬಡವನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಈಗ ಮುಂದಿನ ಕ್ರಮ ಕೈಗೊಳ್ಳಬೇಕಾಗಿದೆ.

ಬಾಲಕಿಗೆ ಈಗ ಆಸ್ಪತ್ರೆಗೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

Exit mobile version