ಬೆಂಗಳೂರು: ಕಳೆದ ವರ್ಷ ನಡೆದ ರಾಜ್ಯಸಭೆ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ವಿಪ್ ಉಲ್ಲಂಘಿಸಿ ಕಾಂಗ್ರೆಸ್ ಕಡೆಗೆ ವಾಲಿದ್ದ ಗುಬ್ಬಿ ಶಾಸಕ ಎಸ್.ಆರ್. ಶ್ರೀನಿವಾಸ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ವಿಧಾನಸಬೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ಭೇಟಿ ಮಾಡಿ ರಾಜೀನಾಮೆ ಪತ್ರವನ್ನು ಶ್ರೀನಿವಾಸ್ ಸಲ್ಲಿಸಿದ್ದಾರೆ.
2022ರ ಜೂನ್‌ನಲ್ಲಿ ನಡೆದ ರಾಜ್ಯಸಭೆ ಚುನಾವಣೆಯಲ್ಲಿ ವಿಪ್ ಉಲ್ಲಂಘನೆ ಮಾಡಿದ್ದರು. ನಂತರ ಎಚ್.ಡಿ. ಕುಮಾರಸ್ವಾಮಿ ಸೇರಿ ಅನೇಕರ ಕುರಿತು ಶ್ರೀನಿವಾಸ್ ವಾಗ್ದಾಳಿ ನಡೆಸಿದ್ದರು.
ಶ್ರೀನಿವಾಸ್ ಆಪ್ತರನ್ನು ಜೆಡಿಎಸ್ ಪಕ್ಷದಿಂದ ಉಚ್ಚಾಟನೆ ಮಾಡಲಾಗಿತ್ತು. ಪಕ್ಷಕ್ಕೆ ಆಹ್ವಾನಿಸುವ ಪ್ರಯತ್ನವನ್ನು ರಾಜ್ಯ ಜೆಡಿಎಸ್ ಅಧ್ಯಕ್ಷ ಸಿ.ಎಂ. ಇಬ್ರಾಹಿಂ ನಡೆಸಿದ್ದರಾದರೂ ಸಫಲವಾಗಿರಲಿಲ್ಲ.
ರಾಜೀನಾಮೆ ನೀಡುವುದಕ್ಕೂ ಮುನ್ನ ಮಾಜಿ ಸಿಎಂ ಸಿದ್ದರಾಮಯ್ಯ ಮನೆಗೆ ಭೇಟಿ ನೀಡಿ ಮಾತುಕತೆ ನಡೆಸಿದ್ದರು. ಈ ಸಂದರ್ಭದಲ್ಲಿ ಜಮೀರ್ ಅಹಮದ್, ಕಾಂತರಾಜು, ಪಾವಗಡ ಅಭ್ಯರ್ಥಿ ವೆಂಕಟೇಶ್ ಉಪಸ್ಥಿತರಿದ್ದರು. ನಂತರ ಮಾತನಾಡಿದ್ದ ಶ್ರೀನಿವಾಸ್, ಇದೇ ತಿಂಗಳ 30 ರಂದು ಕಾಂಗ್ರೆಸ್ ಸೇರುತ್ತೇನೆ.
ನಮ್ಮ ತಾಲೂಕಿನಲ್ಲಿರುವ ಎಲ್ಲ ಮುಖಂಡರ ಜೊತೆ ಮಾತನಾಡಿ ಕಾಂಗ್ರೆಸ್ ಸೇರ್ಪಡೆ ಆಗ್ತೀನಿ. ಕಳೆದ 20 ವರ್ಷಗಳಿಂದ ನನಗೆ ಜನತಾದಳದಲ್ಲಿ ಕೆಲಸ ಮಾಡುವುದಕ್ಕೆ ಅವಕಾಶ ಕೊಟ್ಟಿದ್ದಕ್ಕೆ ದೇವೇಗೌಡರಿಗೆ, ಕುಮಾರಸ್ವಾಮಿ, ರೇವಣ್ಣ ಪಕ್ಷದ ಎಲ್ಲರಿಗೂ ಧನ್ಯವಾದಗಳು. 20 ವರ್ಷಗಳಿಂದ ಭಾವನಾತ್ಮಕ ಸಂಭದವನ್ನ ಇಟ್ಟುಕೊಂಡಿದ್ದೇನೆ. ಎಲ್ಲ ಶಾಸಕರು ಇಲ್ಲಿಯೇ ಉಳಿದುಕೋ ಅಂತ ಒತ್ತಾಯ ಮಾಡ್ತಿದ್ದಾರೆ. ಪ್ರೀತಿಯಿಂದ ನಾವುಗಳು ಒಂದೇ ಕುಟುಂಬದಲ್ಲಿ ಇದ್ದೆವು.
ಕುಮಾರಸ್ವಾಮಿ ಜತೆಗೆ 2021ರ ಅಕ್ಟೋಬರ್ 21ರವರೆಗೂ ಅಣ್ಣ ತಮ್ಮಂದಿರಾಗಿ ಇದ್ದೆವು. ಅಕ್ಟೋಬರ್ 21ರಂದು ನನ್ನ ವಿರುದ್ದ ಬೇರೆ ಅಭ್ಯರ್ಥಿಯನ್ನ ಯಾಕೆ ಕರೆ ತಂದ್ರೊ ಗೊತ್ತಿಲ್ಲ. ಅದರ ಬಳಿಕ ನನ್ನ ಕುಮಾರಸ್ವಾಮಿ ಅವರ ಬಾಂದವ್ಯ ಕೆಟ್ಟಿತು. ಆದರೂ ಕಳೆದ 20 ವರ್ಷಗಳ ಕಾಲ ನನ್ನಗೆ ಪಾರ್ಟಿಯಲ್ಲಿ ಕೆಲಸ ಮಾಡುವುದಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ. ದೇವೇಗೌಡರು ನನ್ನನ್ನ ಮಗನ ತರ ನೋಡಿಕೊಂಡಿದ್ದಾರೆ. ಜಿಲ್ಲೆಯಲ್ಲಿ ಯಾವುದೇ ಸಮಸ್ಯೆ ಇದ್ದರು ಸಂಘಟನೆಯ ವಿಚಾರದಲ್ಲಿ ರಾಜಿ ಮಾಡಿಸ್ತಿದ್ರು. ಕಾಂಗ್ರೆಸ್ ನ ಎಲ್ಲ ವರಿಷ್ಠರೊಂದಿಗೆ ಮಾತುಕತೆ ಮಾಡ್ತೀನಿ ಎಂದಿದ್ದಾರೆ.
ಇದನ್ನೂ ಓದಿ: MLA stopped | ಗುಬ್ಬಿ ಶಾಸಕ ಎಸ್.ಆರ್. ಶ್ರೀನಿವಾಸ್‌ಗೆ ಗ್ರಾಮಸ್ಥರ ಮುತ್ತಿಗೆ, ಬೈಕ್ ಹತ್ತಿ ಕಾಲ್ಕಿತ್ತ ಎಂಎಲ್‌ಎ