ಬೆಂಗಳೂರು: ಇತ್ತೀಚೆಗಷ್ಟೆ ನಾ ನಾಯಕಿ ಕಾರ್ಯಕ್ರಮದ ಮೂಲಕ ಮಹಿಳಾ ಮತದಾರರನ್ನು ಓಲೈಸುವ ಕಾರ್ಯಕ್ಕೆ ಕಾಂಗ್ರೆಸ್ ಚಾಲನೆ ನೀಡಿದ ಬೆನ್ನಿಗೆ ಬಿಜೆಪಿಯೂ ಅದೇ ಹಾದಿಯಲ್ಲಿ ಮುನ್ನಡೆದಿದ್ದು, ಕರ್ನಾಟಕದಲ್ಲೆ ರಾಷ್ಟ್ರೀಯ ಬಿಜೆಪಿ ಮಹಿಳಾ ಕಾರ್ಯಕಾರಿಣೀ ನಡೆಸಲು ತೀರ್ಮಾನಿಸಿದೆ.
ಈ ಕುರಿತು ರಾಜ್ಯ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಕೆ.ಎಸ್. ನವೀನ್ ಹಾಗೂ ರಾಜ್ಯ ಮಹಿಳಾ ಮೋರ್ಚಾ ಅಧ್ಯಕ್ಷೆ ಗೀತಾ ವಿವೇಕಾನಂದ, ತುಮಕೂರಿನಲ್ಲಿ ರಾಷ್ಟ್ರೀಯ ಮಹಿಳಾ ಮೋರ್ಚಾದ ಕಾರ್ಯಕಾರಿಣಿ ಸಭೆ ನಿಗದಿಯಾಗಿದೆ ಎಂದು ತಿಳಿಸಿದರು.
ಜನವರಿ 20 ಹಾಗೂ 21ರಂದು ರಾಷ್ಟ್ರೀಯ ಮಹಿಳಾ ಮೋರ್ಚಾದ ಕಾರ್ಯಕಾರಿಣಿ ಸಭೆಯಲ್ಲಿ ರಾಷ್ಟ್ರೀಯ ಪದಾಧಿಕಾರಿಗಳು, ರಾಜ್ಯದ 37 ಘಟಕಗಳ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ. ರಾಷ್ಟ್ರೀಯ ಬಿಜೆಪಿ ಮಹಿಳಾ ಮೋರ್ಚಾದ ಅಧ್ಯಕ್ಷೆ ವಾನತಿ ಶ್ರೀನಿವಾಸ್ ಉದ್ಘಾಟಿಸಲಿದ್ದಾರೆ. ಬೈಕ್ ರ‍್ಯಾಲಿ ಮೂಲಕ ಮಹಿಳಾ ಮೋರ್ಚಾ ಕಾರ್ಯಕಾರಿಣಿಗೆ ಚಾಲನೆ ನೀಡಲಾಗುತ್ತಿದ್ದು, ಸಿಎಂ ಬಸವರಾಜ ಬೊಮ್ಮಾಯಿ, ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಸೇರಿ ಅನೇಕರು ಭಾಗವಹಿಸಲಿದ್ದಾರೆ ಎಂಧರು.
ಕಾಂಗ್ರೆಸ್‌ನ ನಾ ನಾಯಕಿ ಕಾರ್ಯಕ್ರಮದ ಕುರಿತು ಪ್ರತಿಕ್ರಿಯಿಸಿದ ಗೀತಾ ವಿವೇಕಾನಂದ, ನಾ ನಾಯಕಿ ಎಂದು ಅವರೇ ಬೆಳೆಯುತ್ತಿದ್ದಾರೆ. ಬೇರೆ ಯಾರನ್ನೂ ಬೆಳೆಯಲು ಬಿಡುತ್ತಿಲ್ಲ. ನಾ ನಾಯಕಿ ಎಂದುಹೇಳಿ ಸುಳ್ಳು ಬರವಸೆ ನೀಡಿ ಹೋಗುತ್ತಿದ್ದಾರೆ. ನಾವು ಆ ರೀತಿ ಯಾವುದೇ ಸುಳ್ಳು ಹೇಳುತ್ತಿಲ್ಲ.
ನಮ್ಮ ಸರ್ಕಾರ ಮಹಿಳೆಯರಿಗೆ ಏನೆಲ್ಲಾ ಕಾರ್ಯಕ್ರಮಗಳಲ್ಲಿ ನೀಡಲಿದೆ ಎನ್ನುವ ವರದಿ ಇದೆ. ಹಿಮಾಚಲ ಪ್ರದೇಶದಲ್ಲಿ ನಾಲ್ಕು ವರ್ಷಗಳ ಹಿಂದೆ ಅನೇಕ ಘೋಷಣೆ ಮಾಡಿದ್ದ ಕಾಂಗ್ರೆಸ್ ಯಾವುದನ್ನೂ ಈಡೇರಿಸಿಲ್ಲ. ಯುವತಿಯರಿಗೆ ನಾಲ್ಕು ಸಾವಿರ ರೂ. ನೀಡುವುದಾಗಿ ಹೇಳಿ ಕೊಟ್ಟಿಲ್ಲ. ರಾಜಸ್ಥಾನ ಚುನಾವಣೆ ಸಂದರ್ಭದಲ್ಲಿ ಪಿಎಚ್‌ಡಿವರೆಗೂ ಶಿಕ್ಷಣ ನೀಡುವುದಾಗಿ ಹೇಳಿದ್ದರು, ಅದೂ ಆಗಿಲ್ಲ. ಚುನಾವಣೆ ಬಂದ ಸಂದರ್ಭದಲ್ಲಿ ಈ ರೀತಿ ಮಹಿಳೆಯರನ್ನು ಮರುಳು ಮಾಡುತ್ತಾರೆ.
ಹಿಂದುಳಿದ ವರ್ಗ ಎಂದು ಹೇಳದೆ, ಮಹಿಳೆಯರಿಗೆ ಯೋಜನೆ ಎಂದು ಸಾಮೂಹಿಕವಾಗಿ ಕಾಂಗ್ರೆಸ್ ಹೇಳಿದೆ. ಕರ್ನಾಟಕದ ಪ್ರಜ್ಞಾವಂತ ಮಹಿಳೆಯರು ಇದಕ್ಕೆ ಮರುಳಾಗುವುದಿಲ್ಲ. ನಾವು ಹೇಳಿದ ಘೋಷಣೆ ಜಾರಿಗೆ ತರುತ್ತೇವೆ. ಕೇಂದ್ರ ಸರ್ಕಾರ ಆ ಕೆಲಸ ಕೂಡ ಮಾಡಿದೆ. ಬಿಜೆಪಿಯಲ್ಲಿ ಮೂರು ಜನ ಮಹಿಳಾ ನಾಯಕರು ಇಲ್ಲ ಎಂದು ಕಾಂಗ್ರೆಸ್ ನಾಯಕಿಯೊಬ್ಬರು ಹೇಳಿದ್ದಾರೆ. ನಮ್ಮ ಬಿಜೆಪಿಯಲ್ಲಿ ಒಂದು ವ್ಯವಸ್ಥೆ ಇದೆ, ನಮಗೆ ಕೊಟ್ಟ ಕೆಲಸ ಮಾಡುತ್ತಿದ್ದೇವೆ. ನಾವು ಲೀಡರ್‌ಗಳ ಹಿಂದೆ ನಿಲ್ಲುವುದಿಲ್ಲ. ನಮ್ಮಲ್ಲಿ ಜವಾಬ್ದಾರಿ ಕೊಟ್ಟು ಕೆಲಸ ಮಾಡಿ ಎಂದು ಹೇಳುತ್ತಾರೆ. ನಾವು ಬೂತ್‌ಗೆ ಇಳಿದು ಕೆಲಸ ಮಾಡುತ್ತಿದ್ದೇವೆ. ಕಾಂಗ್ರೆಸ್ ನಾಯಕಿಯರ ರೀತಿಯಲ್ಲಿ ನಾಯಕರ ಹಿಂದೆ ನಿಂತುಕೊಳ್ಳುವುದು, ನಾಯಕರು ಮಾದ್ಯಮ ಹೇಳಿಕೆ ಕೊಡುವಾಗ ಅವರ ಜತೆ ಬಂದು ನಿಲ್ಲುವುದನ್ನು ಮಾಡುವುದಿಲ್ಲ. ಈ ರೀತಿ ಸಂಘಟನೆಯಲ್ಲಿ ಗುರುತಿಸಿಕೊಳ್ಳುವುದು ನಮ್ಮಲ್ಲಿ ಇಲ್ಲ. ನಮಗೆ ಸಂಘಟನೆ ಮುಖ್ಯ ಅಷ್ಟೇ ಎಂದರು.
ಬಿಜೆಪಿ ಚಟುವಟಿಕೆಗಳಿಂದ ನಟಿ ಶೃತಿ ಮತ್ತಿತರರು ದೂರ ಆಗಿರುವ ಕುರಿತು ಪ್ರತಿಕ್ರಿಯಿಸಿ, ಒಬ್ಬರೋ ಇಬ್ಬರೋ ಕಾಣಿಸುತ್ತಿಲ್ಲ ಎಂದಕೂಡಲೆ ಸಂಘಟನೆ ಆಗುತ್ತಿಲ್ಲ ಎಂದು ಅರ್ಥವಲ್ಲ. ಅವರಿಗೆ ಕೊಟ್ಟಿರುವ ಜವಾಬ್ದಾರಿಯನ್ನು ಅವರು ನಿಭಾಯಿಸುತ್ತಿದ್ದಾರೆ. ನಮಗೆ ಕಕೊಟ್ಟ ಜವಾಬ್ದಾರಿಯನ್ನು ನಾವು ನಿಭಾಯಿಸುತ್ತಿದ್ದೇವೆ ಎಂದರು,
ಕೆ.ಎಸ್. ನವೀನ್ ಮಾತನಾಡಿ, ಪ್ರಿಯಾಂಕಾ ಗಾಂಧಿ ನಾಯಕಿ ಅಲ್ಲ, ನಾಪತ್ತೆ ನಾಯಕಿ. ಕಾರ್ಯಕ್ರಮ ಮಾಡಿ ನಾಪತ್ತೆ ಆಗೋ ನಾಯಕಿ ಅವರು ಎಂದರು.
ಇದನ್ನೂ ಓದಿ | ನಾ ನಾಯಕಿ | ರಾಜ್ಯದ ಮಹಿಳೆಯರಿಗೆ ಕಾಂಗ್ರೆಸ್‌ನಿಂದ ಬಂಪರ್ ಘೋಷಣೆ; ಪ್ರತಿ ತಿಂಗಳು ₹2,000 ರೂ.