Site icon Vistara News

KN Rajanna : ಕೆ.ಎನ್‌. ರಾಜಣ್ಣ ಮೇಲೆ ನಡೆಯಿತಾ ವಾಮಾಚಾರ? ಹಾಸನಕ್ಕೆ ಹೋದ್ರೆ ಡೇಂಜರಾ?

KN-Rajanna-Black-Magic

ತುಮಕೂರು: ಸಹಕಾರ ಸಚಿವರಾಗಿರುವ ಕೆ.ಎನ್‌. ರಾಜಣ್ಣ (KN Rajanna) ಅವರಿಗೆ ಹಾಸನಕ್ಕೆ ಹೋದರೆ ಡೇಂಜರ್‌ (Danger in Hassan) ಕಾದಿದೆಯಾ? ಅವರ ಮೇಲೆ ವಾಮಾಚಾರ (Black Magic) ಮಾಡಲಾಗಿತ್ತಾ?:‌ ಈ ಪ್ರಶ್ನೆಗಳು ಹುಟ್ಟಲು ಕಾರಣವಾಗಿದ್ದು ಅವರದೇ ಮಾತುಗಳು.!

ತುಮಕೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೆ.ಎನ್‌. ರಾಜಣ್ಣ ಅವರು ಇಂಥದ್ದೊಂದು ಹೇಳಿಕೆ ನೀಡಿದ್ದಾರೆ. ನಗರದ ಗುಬ್ಬಿ ವೀರಣ್ಣ ಕಲಾಮಂದಿರದಲ್ಲಿ ನಡೆದ ವಾಲ್ಮೀಕಿ ಸಮಾಜದ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಭಾಷಣ ಮಾಡಿದ ಅವರು ಹಾಸನ ಮತ್ತು ಅವರ ನಡುವಿನ ಸಂಬಂಧ ಹೇಳಿಕೊಂಡರು.

ʻʻನನಗೂ ಹಾಸನಕ್ಕೂ ಅದೇನು ಸಂಬಂಧವೋ ಗೊತ್ತಿಲ್ಲ. ನನಗೆ ಹಾಸನದ ಉಸ್ತುವಾರಿ ಹಾಕಿದ್ದಾರೆ. ಆಗ ಕೆಲವರು ನನ್ನ ಅಭಿಮಾನಿಗಳು ಹೆದರಿಕೊಂಡು ಬಿಟ್ಟಿದ್ದರು. ಸಾರ್ ನೀವು ಹಾಸನಕ್ಕೆ ಹೋಗುವುದು ಬೇಡ ಎಂದರು. ಯಾಕೆ ಎಂದು ಕೇಳಿದರೆ ಅಲ್ಲಿ ವಾಮಾಚಾರ ಮಾಡ್ತಾರೆ ಹೋಗಬೇಡಿ ಅಂದ್ರು. ಆಗ ನಾನು ಹೇಳಿದೆ, ಯಾರಾದ್ರೂ ವಾಮಾಚಾರ ಮಾಡೋರು ಇದ್ರೆ ಸ್ವತಃ ನಾನೇ ಕೂತ್ಕೊಳ್ತೀನಿ. ನನ್ನ ಮೇಲೆ ವಾಮಾಚಾರ ಮಾಡಿ ಅಂತʼʼ ಎಂದು ಕಥೆ ಹೇಳಿದರು ರಾಜಣ್ಣ.

ʻʻನಾವು ಉಗ್ರ ನರಸಿಂಹಸ್ವಾಮಿ ಭಕ್ತರು. ಹಾಗಾಗಿ ನಮಗೆ ಯಾವ ವಾಮಚಾರನೂ ತಾಕೋದಿಲ್ಲ. ಹಾಗಂತ ವಾಮಾಚಾರ ತಗುಲುವುದಿಲ್ಲ ಅನ್ಕೋಬೇಡಿ. ನಾನು ಹಾಸನಕ್ಕೆ ಕುಣಿಗಲ್ ಮೂಲಕ ಮೊದಲ ದಿನ ಹೋಗುತ್ತಿದ್ದಾಗ, ಕುಣಿಗಲ್ ನಲ್ಲಿ ಪಟಾಕಿ ಸಿಡಿದು, ಕಣ್ಣಿಗೆ ಏಟಾಗಿತ್ತು. ಡಾಕ್ಟರ್ ಕಣ್ಣು ಕ್ಲೀನ್ ಮಾಡಿ ಹಾಸನಕ್ಕೆ ಹೋಗುವುದು ಬೇಡ ಎಂದು ಹೇಳಿದ್ದರು. ನನ್ನ ಎರಡೂ ಕಣ್ಣು ಹೋದರೂ ಪರವಾಗಿಲ್ಲ ಎಂದು ಧೈರ್ಯದಿಂದ ಹೋದೆ. ಹೆದರಿ ಹಾಸನಕ್ಕೆ ಬಂದಿಲ್ಲ ಎಂಬ ಸಂದೇಶ ಹೋಗುತ್ತೆ ಅಂತ ಹೇಳಿ ಹಠದಿಂದ ಹೋದೆʼʼ ಎಂದು ಹೇಳಿದರು ರಾಜಣ್ಣ.

ನಾವು ಹುಟ್ಟುತ್ತಲೇ ನಾಯಕರು ಎಂದ ರಾಜಣ್ಣ

ʻʻನಾವು ಹುಟ್ಟುತ್ತಲೇ ನಾಯಕರು. ಹಾಗಾಗಿ ಬೇರೆಯವರನ್ನು ನಾವು ನಾಯಕರು ಎಂದು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ನಮ್ಮಲ್ಲಿ ಒಗ್ಗಟ್ಟಿನ ಕೊರತೆಯಿದೆ. ಹಾಗಾಗಿ ನಾವು ಅಭಿವೃದ್ಧಿಯಾಗುತ್ತಿಲ್ಲ. ಮಧುಗಿರಿಯಲ್ಲಿ ನಮ್ಮ ಜಾತಿಯವರಿಂದಲೇ ನಮಗೆ ಗೂಟ ಬೀಳುತ್ತಾ ಇದೆ. ಬೇರೆ ಸಮುದಾಯದವರು ನನ್ನ ಕೈ ಹಿಡಿಯುತ್ತಿದ್ದಾರೆ. ಯಾಕೆಂದರೆ ನಾನು ಎಲ್ಲಾ ವರ್ಗದ ಬಡ ಜನರ ಪರವಾಗಿದ್ದವನುʼʼ ಎಂದು ವಿವರಿಸಿದರು.

ಇದನ್ನೂ ಓದಿ :Mudda hanumegowda : ಕೆಲವರ ಅತೃಪ್ತಿ ನಡುವೆ ಮತ್ತೆ ಕೈ ಸೇರಿದ ಮುದ್ದಹನುಮೇಗೌಡ

ಮುದ್ದ ಹನುಮೇಗೌಡರಿಗೆ ಟಿಕೆಟ್‌ ಕೊಡಿಸೋನು ನಾನಲ್ಲ

ಬಿಜೆಪಿ ಬಿಟ್ಟು ಮರಳಿ ಕಾಂಗ್ರೆಸ್‌ ಸೇರಿರುವ ಸಚಿವ ಕೆ.ಎನ್‌. ರಾಜಣ್ಣ ಅವರಿಗೆ ತುಮಕೂರು ಲೋಕಸಭಾ ಕ್ಷೇತ್ರದ ಟಿಕೆಟ್‌ ಕೊಡಿಸುವ ಸಾಧ್ಯತೆ ಬಗ್ಗೆ ಕೇಳಿದಾಗ, ಯಾರು ಅವರನ್ನು ಸೇರಿಸಿಕೊಂಡಿದ್ದಾರೆ. ಅವರು ಟಿಕೆಟ್ ಕೊಡಿಸೋಕೆ ಪ್ರಯತ್ನ ಮಾಡ್ತಾರೆ. ಎಲ್ಲಾ ಮುಖಂಡರು ಸೇರಿ ಸೇರಿಸಿಕೊಳ್ಳಲಾಗಿದೆ, ಕಾಂಗ್ರೆಸ್ ಮುಖಂಡರಲ್ಲಿ ನಾನೂ ಒಬ್ಬ ಅಷ್ಟೇ.. ಮುಂಚೂಣಿ, ಹಿಂಚೂಣಿ ಅನ್ನೋದು ಏನೂ ಇಲ್ಲ. ಎಲ್ಲಾ ಸರಿಸಮಾನವಾಗಿಯೇ ಇರೋದು. ತುಮಕೂರು ಜಿಲ್ಲೆಯ ಎಲ್ಲಾ ಮುಖಂಡರು ಸೇರಿ ಪಕ್ಷಕ್ಕೆ ಅವರನ್ನು ಬರಮಾಡಿಕೊಂಡಿದ್ದೇವೆ. ಅವರು ಕೂಡ ತನಗೆ ಪಾರ್ಲಿಮೆಂಟ್ ಸೀಟ್ ಕೊಡಬೇಕು ಅಂತಾ ಕಾಂಗ್ರೆಸ್ ಗೆ ಬಂದಿಲ್ಲ. ಯಾವುದೇ ಷರತ್ತು ಇಲ್ಲದೆ ಬಂದಿದ್ದಾರೆ. ಮುಂದೆ ಜಿಲ್ಲೆಯ ಎಲ್ಲಾ ಮುಖಂಡರು ಸೇರಿ ತೀರ್ಮಾನ ಮಾಡ್ತಾರೆ ಎಂದು ಹೇಳಿದರು. ಮುದ್ದಹನುಮೇಗೌಡರಿಗೇ ಟಿಕೆಟ್ ಸಿಗುವ ಅವಕಾಶ ಇದೆ ಎಂದೂ ಅವರು ಹೇಳಿದರು.

ಟಿಕೆಟ್ ಹಂಚಿಕೆಯಲ್ಲಿ ಸಿಎಂ-ಡಿಸಿಎಂ ನಡುವೆ ಪ್ರತಿಷ್ಠೆಯ ಸಮರ ನಡೆಯುತ್ತಿದೆಯಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಸಿದ್ದರಾಮಯ್ಯ ಯಾರಿಗೆ ಕೇಳಿದ್ದಾರೆ, ಡಿಕೆ ಶಿವಕುಮಾರ್ ಅವರು ಯಾರಿಗೆ ಕೇಳಿದ್ದಾರೆ ನನಗೆ ಗೊತ್ತಿಲ್ಲ. ಗೌರಿಶಂಕರ್ ಇರಬಹುದು, ಮತ್ತೊಬ್ಬರು ಇರಬಹುದು. ಯಾರು ಬೇಕಾದರೂ ಟಿಕೆಟ್ ಕೇಳಬಹುದು. ಎಲ್ಲರೂ ಟಿಕೆಟ್ ಕೇಳ್ತಾರೆ, ಕೇಳೋದ್ರಲ್ಲಿ ತಪ್ಪೇನಿಲ್ಲ. ಅಂತಿಮವಾಗಿ ನಿರ್ಣಯ ತೆಗೆದುಕೊಳ್ಳೋರು ಹೈ ಕಮಾಂಡ್. ಹೈ ಕಮಾಂಡ್ ನವರು, ಡಿಕೆಶಿಯವರು, ಸಿದ್ದರಾಮಯ್ಯನವರು ಎಲ್ಲರ ಅಭಿಪ್ರಾಯ ಪಡೆದು ಟಿಕೆಟ್ ಕೊಡ್ತಾರೆ ಎಂದರು.

ಮುರಳೀಧರ ಹಾಲಪ್ಪ ಮೇಲೆ ಕೆಂಡಾಮಂಡಲ

ಕಾಂಗ್ರೆಸ್ ಟಿಕೆಟ್ ರೇಸ್ ನಲ್ಲಿ ಮುರಳೀಧರ ಹಾಲಪ್ಪ ಕೂಡ ಇದ್ದಾರೆ ಅನ್ನೋ ವಿಚಾರದ ಬಗ್ಗೆ ಕೇಳಿದಾಗ ʻʻಯಾವ ಸಿಕ್ಕಾಪಟ್ಟೆ ರೇಸ್? ನಡೀರೀ, ಯಾರ‍್ರೀ ಅವನು? ನೀವೇ ರೇಸ್ ಗೆ ತಗೊಂಡೋಗಿ ಮುಂದೆ ಕೂರಿಸಿದ್ದೀರಿ ಅಷ್ಟೇ. ಯಾರ್ರೀ ಅವನು, ಯಾರಿಗೆ ವೋಟ್ ಹಾಕ್ಸಿದ್ದಾನ್ರೀ.. ನನ್ನ ಕ್ಷೇತ್ರ ಮಧುಗಿರಿಯಲ್ಲಿ ನಾನು ಐದು ಚುನಾವಣೆ ನಡೆಸಿದ್ದೀನಿ. ಒಂದು ಚುನಾವಣೆಯಲ್ಲಿ ಒಂದು ವೋಟ್ ಹಾಕ್ಸಿದ್ದಾನಾ ಕೇಳ್ರಿ.ʼʼ ಎಂದು ಜಿ‌.ಪರಮೇಶ್ವರ ಆಪ್ತ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮುರುಳೀಧರ್ ಹಾಲಪ್ಪ ವಿರುದ್ಧ ಏಕ ವಚನದಲ್ಲೇ ವಾಗ್ದಾಳಿ ನಡೆಸಿದರು ರಾಜಣ್ಣ.

Exit mobile version