ತುಮಕೂರು: ಒಬ್ಬ ತಂದೆ ತನ್ನ ಮಕ್ಕಳನ್ನು, ಕುಟುಂಬವನ್ನು ರಕ್ಷಿಸಿಕೊಳ್ಳಲು ಯಾವ ಮಟ್ಟಕ್ಕಾದರೂ ಕಾದಾಡಲು ರೆಡಿ ಇರುತ್ತಾನೆ ಎನ್ನುವುದು ಹಲವಾರು ಬಾರಿ ಪ್ರೂವ್ ಆಗಿ ಹೋಗಿರುವ ಸತ್ಯ. ಆದರೆ, ಅದಕ್ಕೊಂದು ಅದ್ಭುತವಾದ ಪ್ರೀತಿ ಬೇಕು, ಆತ್ಮಬಲ ಬೇಕು, ನನ್ನ ಕುಟುಂಬಕ್ಕಾಗಿ ಯಾರನ್ನು ಎದುರು ಹಾಕಿಕೊಳ್ಳಬಲ್ಲೆ ಎನ್ನುವ ಧೈರ್ಯ ಬೇಕು. ಇಂಥಹುದೊಂದು ಧೈರ್ಯವನ್ನು ಪ್ರದರ್ಶಿಸಿದ ವ್ಯಕ್ತಿಯೊಬ್ಬರು ತನ್ನ ಏಳು ವರ್ಷದ ಮಗಳನ್ನು ಸಾವಿನೊಂದಿಗೆ ಕಾದಾಡಿ ಅದರ ಬಾಯಿಯಿಂದ ರಕ್ಷಿಸಿಕೊಂಡು ಬಂದಿದ್ದಾರೆ.
ಇದು ಯಾವುದೇ ವ್ಯಕ್ತಿಯ ಜತೆಗಿನ ಕಾದಾಟವಲ್ಲ, ಹೋರಾಟವಲ್ಲ. ತಾನು ಹಿಡಿದರೇ ಮರಣವೇ ಎನ್ನುವಷ್ಟು ಬಲಿಷ್ಠವಾದ ಒಂದು ಮೃಗದೊಂದಿಗೆ ಹೋರಾಡಿ ಮಗಳನ್ನು ರಕ್ಷಿಸಿದ್ದಾರೆ. ಮಗಳ ಮೇಲೆ ದಾಳಿ ಮಾಡಿ ಹೊತ್ತೊಯ್ಯಲು ಯತ್ನಿಸಿದ ಅಪಾಯಕಾರಿ ಚಿರತೆಯನ್ನೇ (Leopard Attack) ಹಿಮ್ಮೆಟ್ಟಿಸಿ, ಬಡಿದು ಬೆನ್ನಟ್ಟಿ ಮಗಳನ್ನು ರಕ್ಷಿಸಿಕೊಂಡಿದ್ದಾರೆ ಈ ತಂದೆ.
ಇಂಥ ಒಬ್ಬ ಶಕ್ತಿಶಾಲಿ ಅಪ್ಪನ ಹೆಸರು ರಾಕೇಶ್. ಚಿರತೆಯ ದಾಳಿಗೆ ಒಳಗಾದರೂ ಅಪ್ಪನ ಸಾಹಸದಿಂದ, ಒಂದು ಭೀಕರ ಕಾದಾಟದಿಂದ ಪ್ರಾಣ ಉಳಿಸಿಕೊಂಡ ಏಳು ವರ್ಷದ ಮಗಳ ಹೆಸರು ಲೇಖನ. ಈ ಘಟನೆ ನಡೆದಿರುವುದು ತುಮಕೂರು ಜಿಲ್ಲೆಯ ಬೆಳ್ಳಾವಿ ಗ್ರಾಮದಲ್ಲಿ.
ತುಮಕೂರು ಜಿಲ್ಲೆ ಮತ್ತು ಅದೇ ತಾಲೂಕಿನ ಬೆಳ್ಳಾವಿ ಗ್ರಾಮದ ನಿವಾಸಿಗಳಾದ ರಾಕೇಶ್ ಮತ್ತು ಹರ್ಷಿತಾ ದಂಪತಿಯ ಮಗಳು ಈ ಲೇಖನ. ಅವರದು ಕಾಡಂಚಿನ ಮನೆ. 7 ವರ್ಷದ ಲೇಖನ ಮಂಗಳವಾರ ಸಂಜೆ ಮನೆಯ ಮುಂದೆ ಆಟವಾಡುತ್ತಿದ್ದಳು.
ಆಗ ಒಮ್ಮಿಂದೊಮ್ಮೆಗೇ ಚಿರತೆಯೊಂದು ಓಡಿ ಬಂದು ಅಂಗಳದಲ್ಲಿದ್ದ ಲೇಖನ ಮೇಲೆ ದಾಳಿ ಮಾಡಿದೆ. ಲೇಖನ ಒಮ್ಮೆಗೇ ಕಿಟಾರನೆ ಕಿರುಚಿಕೊಂಡಿದ್ದಾರೆ. ಆಗ ಮನೆಯ ಜಗಲಿಯಲ್ಲಿದ್ದ ರಾಕೇಶ್ ಹೊರಗೆ ಇಣುಕಿದ್ದಾರೆ. ಅವರ ಕಣ್ಣೆದುರೇ ಚಿರತೆ ಅವಳ ಮಗಳ ಮೇಲೆ ಜಿಗಿದಿತ್ತು.
ಒಂದು ಕ್ಷಣವೂ ಯೋಚಿಸದೆ ರಾಕೇಶ್ ಅಂಗಳಕ್ಕೆ ಜಿಗಿದೇ ಬಿಟ್ಟರು. ಅಲ್ಲೇ ಇದ್ದ ಒಂದು ದೊಣ್ಣೆಯನ್ನು ಎತ್ತಿಕೊಂಡು ಜೋರಾಗಿ ಕೂಗಿದರು. ಅದಕ್ಕೆ ಹೊಡೆಯುವಂತೆ ಮುನ್ನುಗ್ಗಿದರು.
ಮಗಳನ್ನು ರಕ್ಷಿಸಬೇಕು ಎಂಬ ತಹತಹದಲ್ಲಿದ್ದ ಅಪ್ಪನ ಕಣ್ಣಿನ ಆ ಆಕ್ರೋಶವನ್ನು ಬಹುಶಃ ಚಿರತೆಯೂ ಗಮನಿಸಿರಬೇಕು. ರಾಕೇಶ್ ದೊಡ್ಡ ಬಡಿಗೆಯನ್ನು ಹಿಡಿದು ಮುನ್ನುಗ್ಗುತ್ತಿದ್ದಂತೆಯೇ ಭಯಗೊಂಡ ಚಿರತೆ ಮಗುವನ್ನು ಬಿಟ್ಟು ಅಲ್ಲಿಂದ ಕಾಲ್ಕಿತ್ತಿದೆ.
ಇದನ್ನೂ ಓದಿ: Leopard Attack : ಬೆಂಗಳೂರಿಗೆ ಪ್ರತ್ಯೇಕ ಚಿರತೆ ಕಾರ್ಯಪಡೆ ರಚನೆಗೆ ಸಚಿವ ಈಶ್ವರ ಖಂಡ್ರೆ ಸೂಚನೆ
ಚಿರತೆ ಮೊದಲು ಹಿಡಿದದ್ದು ಬಾಲಕಿಯ ಕಾಲುಗಳನ್ನು. ಅದು ಕಾಲಿನಿಂದ ಮೈಮೇಲೆ ಎಗುರುವುದರ ನಡುವೆ ಇರುವ ಸಣ್ಣ ಅಂತರದಲ್ಲೇ ರಾಕೇಶ್ ಅದನ್ನು ಬೆನ್ನಟ್ಟಲು ಮುಂದಾಗಿದ್ದಾರೆ.
ಹಾಗೆ ಓಡಿಸಿದ ಬೆನ್ನಿಗೇ ಮಗಳನ್ನು ಹಿಡಿದುಕೊಂಡು ಕೂಡಲೇ ಆಸ್ಪತ್ರೆಗೆ ಧಾವಿಸಿದ್ದಾರೆ. ಬಾಲಕಿಯ ಕಾಲುಗಳಲ್ಲಿ ಚಿರತೆಯ ಬಲಿಷ್ಠ ಉಗುರುಗಳ ಅಚ್ಚು ಇದೆ. ಒಂದು ಕ್ಷಣ ಕಳೆಯುತ್ತಿದ್ದರೂ ಅದು ಕಾಲುಗಳ ಅಷ್ಟೂ ಮಾಂಸವನ್ನು ಕಿತ್ತುಕೊಂಡು ಬಿಡುವ ಎಲ್ಲ ಸಾಧ್ಯತೆಗಳು ಇದ್ದವು.
ಮಗಳನ್ನು ರಕ್ಷಿಸಿಕೊಳ್ಳುವುದಕ್ಕಾಗಿ ಎಂಥ ಕ್ರೂರ ಮೃಗವನ್ನಾದರೂ ಎದುರು ಹಾಕಿಕೊಳ್ಳಬಲ್ಲೆ ಎಂಬ ರಾಕೇಶ್ ಅವರ ದಿಟ್ಟತನ ಈಗ ಎಲ್ಲರ ಪ್ರಶಂಸೆಗೆ ಕಾರಣವಾಗಿದೆ. ಬೆಳ್ಳಾವಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಅರಣ್ಯಾಧಿಕಾರಿಗಳು ಕೂಡಾ ಧಾವಿಸಿದ್ದಾರೆ.