Site icon Vistara News

Kidnap Case : ಅಪ್ಪ-ಅಮ್ಮನ ಮರುಳು ಮಾಡಿ 12ರ ಬಾಲಕಿ ಜತೆ ಊರು ಬಿಟ್ಟ ಕೇಡಿ ದಿಲ್ಲಿಯಲ್ಲಿ ಅರೆಸ್ಟ್‌

Kidnapped girl

ಕುಣಿಗಲ್‌ (ತುಮಕೂರು) : ಕುಣಿಗಲ್‌ ಪಟ್ಟಣದ ಬಾಲಕಿಯೊಬ್ಬಳನ್ನು ಆಮಿಷ ಒಡ್ಡಿ (Kidnap Case) ಪುಸಲಾಯಿಸಿ ತನ್ನೂರಾದ ಪಶ್ಚಿಮ ಬಂಗಾಳಕ್ಕೆ ಕರೆದೊಯ್ಯುತ್ತಿದ್ದ ಕಿರಾತಕನೊಬ್ಬ ಕುಣಿಗಲ್‌ ಪೊಲೀಸರ (Kunigal police) ಸಾಹಸಿಕ ಕಾರ್ಯಾಚರಣೆಯಲ್ಲಿ ಸಿಕ್ಕಿಬಿದ್ದಿದ್ದಾನೆ. ಬಾಲಕಿ ನಾಪತ್ತೆಯ ಸುಳಿವು ಪಡೆದ ಪೊಲೀಸರು ಆತನ ಜಾಡನ್ನು ಬೆನ್ನಟ್ಟಿ ಇದೀಗ ದಿಲ್ಲಿಯಲ್ಲಿ ಆರೋಪಿಯನ್ನು ಸೆರೆ (Accused arrested in Delhi) ಹಿಡಿದಿದ್ದಾರೆ. ಆರೋಪಿ ಬಾಲಕಿಯನ್ನು ಅಪಹರಿಸಿದ್ದಲ್ಲದೆ (Girl kidnapped), ಆಕೆಯ ಮೇಲೆ ಲೈಂಗಿಕ ದೌರ್ಜನ್ಯವನ್ನೂ (Sexual Assault) ನಡೆಸಿದ್ದಾನೆ ಎನ್ನಲಾಗಿದೆ.

ಪಶ್ಚಿಮ ಬಂಗಾಳದ ಕೋಲ್ಕೊತಾ ಮೂಲದ ಪುಲಿನ್‌ ಬಿಸ್ವಾಸ್‌ ಅಲಿಯಾಸ್‌ ಪುನೀತ್‌ (30) ಬಂಧಿತ ಆರೋಪಿ. ಆತ ಕುಣಿಗಲ್‌ ತಾಲೂಕಿನ ಹನುಮಾಪುರದ ಗ್ರಾಮದ ಎ.ಕೆ.ಆರ್‌. ಎಂಟರ್‌ ಪ್ರೈಸಸ್‌ ಎಂಬ ಗುಜರಿ ಫ್ಯಾಕ್ಟರಿಯೊಂದರಲ್ಲಿ ಕೆಲಸಕ್ಕಿದ್ದ. ಆತ ಚಳ್ಳಕೆರೆ ಮೂಲದ ಕುಟುಂಬವೊಂದಕ್ಕೆ ಸೇರಿದ 12 ವರ್ಷದ ಬಾಲಕಿಯನ್ನು ಪುಸಲಾಯಿಸಿ ಅಪಹರಿಸಿದ್ದ.

ನಿಜವೆಂದರೆ, ಈತ ಹನುಮಾಪುರದಲ್ಲಿ ಕೆಲಸ ಮಾಡುತ್ತಿದ್ದಂತೆಯೇ ಅವನಿಗೆ ಚಳ್ಳಕೆರೆಯ ಕುಟುಂಬವೊಂದರ ಪರಿಚಯವಾಗಿತ್ತು. ಅವನು ಈ ಕುಟುಂಬಕ್ಕೆ ಕೆಲಸ ಕೊಡಿಸುವುದಾಗಿ ಹನುಮಾಪುರಕ್ಕೆ ಕರೆಸಿಕೊಂಡಿದ್ದ. ಹಾಗೆ ಬಂದ ಕುಟುಂಬದಲ್ಲಿ ಈ 12 ವರ್ಷದ ಬಾಲಕಿ ಇದ್ದಳು. ಆಕೆಯನ್ನು ಆರಂಭದಲ್ಲಿ ಮಗುವಿನಂತೆ ನೋಡಿಕೊಂಡಿದ್ದ ಆತ ನಿಧಾನವಾಗಿ ತನ್ನ ಆಟವನ್ನು ಶುರು ಮಾಡಿದ್ದ.

ಕುಣಿಗಲ್‌ ಪೊಲೀಸ್‌ ಸ್ಟೇಷನ್

ಆಕೆಗೆ ಆಮಿಷ ಒಡ್ಡಿ, ಪುಸಲಾಯಿಸಿ ದುರುಪಯೋಗ ಮಾಡಿಕೊಂಡಿದ್ದಲ್ಲದೆ, ಕಳೆದ ಸೆಪ್ಟಂಬರ್‌ 14ರಂದು ಇದ್ದಕ್ಕಿದ್ದಂತೆಯೇ ಆಕೆಯನ್ನೂ ಕರೆದುಕೊಂಡು ಕಣ್ಮರೆಯಾಗಿದ್ದ. ಪುನೀತ್‌ ನನ್ನು ಬಹುವಾಗಿ ನಂಬಿದ್ದ ಕುಟುಂಬ ಇದರಿಂದ ಕಂಗಾಲಾಗಿ ಹೋಯಿತು.

ಕೊನೆಗೆ ಕುಣಿಗಲ್‌ ಪೊಲೀಸರಿಗೆ ದೂರು ನೀಡಿದರು. ಸಿಪಿಐ ನವೀನ್‌ ಗೌಡ ಅವರು ಪ್ರಕರಣ ದಾಖಲಿಸಿಕೊಂಡರು. ಆದರೆ, ಪುನೀತ್‌ ಎಲ್ಲಿದ್ದಾನೆ ಎಂಬ ಸುಳಿವು ಸಿಕ್ಕಿರಲಿಲ್ಲ.

ಈ ನಡುವೆ, ಮನೆಯವರು ಮಗಳಿಗಾಗಿ ಕಾತರಿಸುತ್ತಿದ್ದರೆ ಪುನೀತ್‌ ಆಕೆಯನ್ನು ಬೇರೆ ಬೇರೆ ರಾಜ್ಯಗಳಲ್ಲಿ ಸುತ್ತಾಡಿಸಿ, ಚೆನ್ನಾಗಿ ದುರುಪಯೋಗ ಪಡಿಸಿಕೊಂಡು ಅಂತಿಮವಾಗಿ ದಿಲ್ಲಿ ತಲುಪಿದ್ದ. ಈ ಮಾಹಿತಿ ಪೊಲೀಸರಿಗೆ ಸಿಕ್ಕಿತ್ತು. ಹೀಗಾಗಿ ಎಸ್‌ಪಿ ಕೆ.ವಿ ಅಶೋಕ್‌, ಎಎಸ್‌ಪಿ ಮರಿಯಪ್ಪ, ಡಿವೈಎಸ್‌ಪಿ ಲಕ್ಷ್ಮೀ ಕಾಂತ್‌ ಅವರ ಮಾರ್ಗದರ್ಶನದಲ್ಲಿ ಕುಣಿಗಲ್‌ ಸರ್ಕಲ್‌ ಇನ್ಸ್‌ ಪೆಕ್ಟರ್‌ ನವೀನ್‌ ಗೌಡ ಅವರು ಕಾರ್ಯಾಚರಣೆಗೆ ಇಳಿದರು. ಅವರಿಗೆ ಎಎಸ್‌ಐ ಪ್ರಕಾಶ್‌, ಸಿಬ್ಬಂದಿಗಳಾದ ನಟರಾಜು ಮತ್ತು ನಂದಿನಿಗೆ ಸಹಾಯ ಮಾಡಿದ್ದರು.‌

ಇದನ್ನೂ ಓದಿ: Kidnap Case: ಬೆಂಗಳೂರಿನಲ್ಲಿ ಕಿಡ್ನ್ಯಾಪ್ ಮಾಡಿ ಹಾಸನದಲ್ಲಿ ವಿದ್ಯಾರ್ಥಿಯನ್ನು ಬಿಟ್ಟುಹೋದರು

ಕೆಲವು ದಿನಗಳ ಹಿಂದೆ ದಿಲ್ಲಿಗೆ ತೆರಳಿದ ಪೊಲೀಸರ ತಂಡ ಐದು ದಿನಗಳ ಕಾಲ ಸಾಕಷ್ಟು ಹುಡುಕಾಡಿ ಅಂತಿಮವಾಗಿ ಪುನೀತ್‌ ಮತ್ತು ಬಾಲಕಿಯನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದೆ. ಇದೀಗ ಪುನೀತ್‌ ನನ್ನು ಕುಣಿಗಲ್‌ಗೆ ತರಲಾಗಿದೆ. ಆತನ ಮೇಲೆ ಅಹಹರಣ ಮತ್ತು ಪೋಕ್ಸೋ ಕಾಯಿದೆಯಡಿ ಕೇಸು ದಾಖಲಿಸಲಾಗಿದೆ.

ಅಂದ ಹಾಗೆ ಪುನೀತ್‌ ಹಲವು ರಾಜ್ಯ ಸುತ್ತಿ ದಿಲ್ಲಿ ತಲುಪಿದವನೇ ಅಲ್ಲಿನ ಅಲಿಪುರ್‌ ನಲ್ಲಿರುವ ಕ್ರಿಶನ್‌ ಎಂಬ ‌ ಪ್ಲಾಸ್ಟಿಕ್‌ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ. ಬಾಲಕಿ ಕೂಡಾ ಅಲ್ಲೇ ಇದ್ದಳು. ಈ ನಡುವೆ ಪುನೀತ್‌ಗೆ ಮದುವೆಯಾಗಿದ್ದು, ಆತ ಹೆಂಡತಿಯನ್ನು ಕೋಲ್ಕೊತಾದಲ್ಲೇ ಬಿಟ್ಟು ಬೆಂಗಳೂರಿಗೆ ಬಂದು ಈ ಕೃತ್ಯ ಎಸಗಿದ್ದ!

Exit mobile version