Site icon Vistara News

Modi In Karnataka: ಎಚ್‌ಎಎಲ್‌ ಕುರಿತು ಸುಳ್ಳು ಹೇಳಿದವರ ಬಣ್ಣ ಬಯಲಾಗಿದೆ: ಕಾಂಗ್ರೆಸ್‌ಗೆ ತಿರುಗೇಟು ನೀಡಿದ ಪ್ರಧಾನಿ ನರೇಂದ್ರ ಮೋದಿ

Modi In Tumakuru HAL

#image_title

ತುಮಕೂರು: ದೇಶದ ಪ್ರಮುಖ ರಕ್ಷಣಾ ಉಪಕರಣ ಉತ್ಪಾದನಾ ಸಂಸ್ಥೆ ಎಚ್‌ಎಎಲ್‌ (Modi In Karnataka) ಅನ್ನು ಕೇಂದ್ರ ಸರ್ಕಾರವು ಮುಳುಗಿಸುತ್ತಿದೆ ಎಂದು ಈ ಹಿಂದೆ ಪ್ರತಿಭಟನೆ ನಡೆಸಿದ್ದ, ಸಂಸತ್ತಿನಲ್ಲಿ ಗದ್ದಲ ಎಬ್ಬಿಸಿದ ಕಾಂಗ್ರೆಸ್‌ ಹಾಗೂ ಇನ್ನಿತರ ಪ್ರತಿಪಕ್ಷಗಳಿಗೆ ಪ್ರಧಾನಿ ನರೇಂದ್ರ ಮೋದಿ ತಿರುಗೇಟು ನೀಡಿದ್ದಾರೆ. ತುಮಕೂರು ಜಿಲ್ಲೆಯ ಗುಬ್ಬಿಯಲ್ಲಿ ಲಘು ಎಚ್‌ಎಎಲ್‌ನ ಉಪಯೋಗಿ ಉಹೆಲಿಕಾಪ್ಟರ್‌ ಘಟಕ ಉದ್ಘಾಟನೆ, ಜಲಜೀವನ್‌ ಮಿಷನ್‌ ಯೋಜನೆಗಳ ಅಡಿಗಲ್ಲು ಹಾಗೂ ಚೆನ್ನೈ-ಬೆಂಗಳೂರು ಎಕ್ಸ್‌ಪ್ರೆಸ್‌ ಕೈಗಾರಿಕಾ ಕಾರಿಡಾರ್‌ನಲ್ಲಿ ತುಮಕೂರು ಕೈಗಾರಿಕಾ ಟೌನ್‌ಷಿಪ್‌ ಅಡಿಗಲ್ಲು ಕಾರ್ಯಕ್ರಮದಲ್ಲಿ ಮೋದಿ ಮಾತನಾಡಿದರು.

ಅಂಕಿ ಸಂಖ್ಯೆ ನೆನಪಿನಲ್ಲಿಡಿ ಎಂದ ಮೋದಿ, 2014ಕ್ಕೆ ಮೊದಲಿನ 15 ವರ್ಷದಲ್ಲಿ ಎಷ್ಟು ಹೂಡಿಕೆಯು ಏರೋಸ್ಪೇಸ್‌ ಕ್ಷೇತ್ರದಲ್ಲಿ ಆಗಿದೆಯೋ ಅದರ ಐದು ಪಟ್ಟು ಹೂಡಿಕೆ, ಕಳೆದ 9 ವರ್ಷದಲ್ಲಿ ಆಗಿದೆ. ಇಂದು ನಾವು ನಮ್ಮ ಸೇನೆಗೆ ಮೇಡ್‌ ಇನ್‌ ಇಂಡಿಯಾ ಶಸ್ತ್ರಾಸ್ತ್ರಗಳ ಜತೆಗೆ, ನಮ್ಮ ರಕ್ಷಣಾ ರಫ್ತು ಹಲವು ಪಟ್ಟು ಹೆಚ್ಚಾಗಿದೆ. ಮುಂದಿನ ದಿನಗಳಲ್ಲಿ ತುಮಕೂರಿನಲ್ಲೇ ನೂರಾರು ಹೆಲಿಕಾಪ್ಟರ್‌ಗಳು ನಿರ್ಮಾಣ ಆಗಲಿವೆ ಎಂದರು.

ಈ ಘಟಕದಿಂದ ಅಂದಾಜು 4 ಲಕ್ಷ ಕೋಟಿ ರೂ. ಮೊತ್ತದ ವ್ಯಾಪಾರ ನಡೆಯಲಿದೆ. ಉತ್ಪಾದನಾ ಫ್ಯಾಕ್ಟರಿಗಳು ಸ್ಥಾಪನೆಯಾದರೆ ಸೇನೆಯ ಶಕ್ತಿ ಹೆಚ್ಚುತ್ತದೆ. ಅದರ ಜತೆಗೆ ಸಾವಿರಾರು ಉದ್ಯೋಗ ಹಾಗೂ ಸ್ವಯಂ ಉದ್ಯೋಗದ ಅವಕಾಶವೂ ಸಿಗುತ್ತದೆ. ತುಮಕೂರು ಕಾರ್ಖಾನೆಯಿಂದ ಸುತ್ತಮುತ್ತಲಿನ ಅನೇಕ ಸಣ್ಣಪುಟ್ಟ ಉದ್ಯೋಗಗಳಿಗೆ ಅನುಕೂಲ ಆಗುತ್ತದೆ ಎಂದು ಹೇಳಿದರು.

ದೇಶ ಮೊದಲು ಎಂಬ ಘೋಷಣೆಯೊಂದಿಗೆ ಕೆಲಸ ಮಾಡಿದರೆ ಸಫಲತೆ ಸಿಕ್ಕೇ ಸಿಗುತ್ತದೆ ಎಂದ ನರೇಂದ್ರ ಮೋದಿ, ಕಳೆದ ಎಂಟು ವರ್ಷದಲ್ಲಿ ಒಂದೆಡೆ ಸರ್ಕಾರಿ ಫ್ಯಾಕ್ಟರಿಗಳನ್ನು ಸ್ಥಾಪಿಸುವುದರ ಜತೆಗೆ, ಅವುಗಳನ್ನು ಸುಧಾರಿಸುವ ಜತೆಗೆ ಖಾಸಗಿ ಕ್ಷೇತ್ರಕ್ಕೂ ಬಾಗಿಲು ತೆರೆದಿದ್ದೇವೆ. ಇದರ ಲಾಭವನ್ನು ಎಚ್‌ಎಎಲ್‌ನಲ್ಲೂ ನೋಡುತ್ತಿದ್ದೇವೆ. ಕೆಲ ವರ್ಷದ ಹಿಂದಿನ ವಿಷಯ ಹೇಳುತ್ತೇನೆ. ಇದೇ ಎಚ್‌ಎಎಲ್‌ ಸಂಸ್ಥೆಯನ್ನು ನೆಪವಾಗಿಸಿಕೊಂಡು ನಮ್ಮ ಸರ್ಕಾರದ ಮೇಲೆ ಸುಳ್ಳು ಆರೋಪಗಳನ್ನು ಮಾಡಲಾಯಿತು. ಇದೇ ಎಚ್‌ಎಎಲ್‌ ಹೆಸರನ್ನು ತೆಗೆದುಕೊಂಡು ಜನರನ್ನು ಪ್ರಚೋದನೆಗೊಳಿಸಲಾಯಿತು. ಸಂಸತ್ತಿನ ಅನೇಕ ಗಂಟೆಗಳನ್ನು ಹಾಳು ಮಾಡಲಾಯಿತು. ಸುಳ್ಳು ಎಷ್ಟೇ ದೊಡ್ಡದಿರಲಿ, ಎಷ್ಟೇ ಬಾರಿ ಹೇಳಲಿ, ಎಷ್ಟೇ ದೊಡ್ಡ ಜನರು ಹೇಳಲಿ, ಒಂದಲ್ಲಾ ಒಂದು ದಿನ ಸತ್ಯದ ಎದುರು ಸೋಲಲೇ ಬೇಕು.

ಇದನ್ನೂ ಓದಿ: Modi In Karnataka: ಮೋದಿಯೆದುರು ಸಿಎಂ ಬೊಮ್ಮಾಯಿ ಹೇಳಿದ ಯುವ ಉದ್ಯಮಿ ವಿಜಯ್‌ ನಿರಾಣಿ ಯಾರು? ಅವರ ಸಾಧನೆ ಏನು?

ಎಚ್‌ಎಎಲ್‌ ಹೆಲಿಕಾಫ್ಟರ್‌ ಫ್ಯಾಕ್ಟರಿ ಹಾಗೂ ಎಚ್‌ಎಎಲ್‌ನ ಹೊಸ ಶಕ್ತಿಯು, ಅನೇಕ ಸುಳ್ಳುಗಳನ್ನು, ಸುಳ್ಳು ಆರೋಪ ಮಾಡುವವರ ಬಣ್ಣ ಬಯಲಾಗಿಸಿದೆ. ಇದೇ ಎಚ್‌ಎಎಲ್‌ ಭಾರತದ ಸೇನೆಗೆ ಆಧುನಿಕ ತೇಜಸ್‌ ವಿಮಾನ ನಿರ್ಮಿಸುತ್ತಿದೆ. ಇದು ವಿಶ್ವದ ಆಕರ್ಷಣೆಯ ಕೇಂದ್ರವಾಗಿದೆ ಎಂದು ಹೇಳಿದರು.

ತುಮಕೂರು, ಭಾರತದ ಒಂದು ಪ್ರಮುಖ ಉದ್ಯೋಗ ಕೇಂದ್ರವಾಗಿ ವಿಕಾಸವಾಗಲಿದೆ. ಈಗಾಗಲೆ ಹೈದರಾಬಾದ್‌-ಬೆಂಗಳೂರು ಕೈಗಾರಿಕಾ ಕಾರಿಡಾರ್‌ ಕಾರ್ಯವೂ ನಡೆಯುತ್ತಿದೆ. ಇದರಿಂದ ಕರ್ನಾಟಕಕ್ಕೆ ಲಾಭವಾಗಲಿದೆ. ತುಮಕೂರು ಕೈಗಾರಿಕಾ ಕಾರಿಡಾರ್‌ ನಿರ್ಮಾಣವು ಪಿಎಂ ಗತಿಶಕ್ತಿ ಯೋಜನೆಯಲ್ಲಿ ನಡೆಯುತ್ತಿದೆ. ತುಮಕೂರು ರೈಲ್ವೆ ನಿಲ್ದಾಣ, ಮಂಗಳೂರು ಬಂದರು, ಗ್ಯಾಸ್‌ ಸಂಪರ್ಕ ಸೇರಿ ಅನೇಕ ಯೋಜನೆಗಳೊಂದಿಗೆ ಇದನ್ನು ಜೋಡಿಸಲಾಗುತ್ತದೆ. ಇದರಿಂದ ಅನೇಕ ಉದ್ಯೋಗ ಮತ್ತು ಸ್ವ ಉದ್ಯೋಗ ನಿರ್ಮಾಣ ಆಗುತ್ತದೆ ಎಂದು ಹೇಳಿದರು.

Exit mobile version