ತುಮಕೂರು: ಹಿಂದಿನ ಪ್ರಧಾನಿಗಳ ಸಮಯದ ಯೋಜನೆಗಳಿಗೆ ಒಬ್ಬರು ಶಿಲಾನ್ಯಾಸ ಮಾಡಿದರೆ ಮೂರ್ನಾಲ್ಕು ಪ್ರಧಾನಿಗಳ ನಂತರ ಮತ್ತೊಬ್ಬರು ಉದ್ಘಾಟನೆ ಮಾಡುತ್ತಿದ್ದರು. ಆದರೆ ಈಗ ತಾವೇ ಶಿಲಾನ್ಯಾಸ ಮಾಡಿದ ಯೋಜನೆಯನ್ನು ಮೋದಿಯವರೇ ಉದ್ಘಾಟನೆ ಮಾಡುತ್ತಿದ್ದಾರೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಶ್ಲಾಘಿಸಿದರು.
ತುಮಕೂರು ಗುಬ್ಬಿಯಲ್ಲಿ ಲಘು ಉಪಯೋಗಿ ಹೆಲಿಕಾಪ್ಟರ್ ಘಟಕ ಉದ್ಘಾಟನೆ, ಜಲಜೀವನ್ ಮಿಷನ್ ಯೋಜನೆಗಳ ಅಡಿಗಲ್ಲು ಹಾಗೂ ಚೆನ್ನೈ-ಬೆಂಗಳೂರು ಎಕ್ಸ್‌ಪ್ರೆಸ್ ಕೈಗಾರಿಕಾ ಕಾರಿಡಾರ್‌ನಲ್ಲಿ ತುಮಕೂರು ಕೈಗಾರಿಕಾ ಟೌನ್‌ಷಿಪ್ ಅಡಿಗಲ್ಲು ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರಧಾನಿ ನರೇಂದ್ರ ಮೋದಿಯವರೇ ಅಡಿಗಲ್ಲು ಹಾಕಿದ್ದ ಘಟಕವನ್ನು ಅವರೇ ಉದ್ಘಾಟನೆ ಮಾಡುತ್ತಿದ್ದಾರೆ. ಹಿಂದೆ ಒಬ್ಬ ಪ್ರಧಾನಿ ಅಡಿಗಲ್ಲು ಹಾಕಿದರೆ ನಂತರ ಇನ್ಯಾರೊ ಪ್ರಧಾನಿಯಾದಾಗ ಉದ್ಘಾಟನೆ ಮಾಡುತ್ತಿದ್ದರು. ಆ ಗತಿಗೆ ಪ್ರಧಾನಿ ಈಗ ವೇಗ ನೀಡಿದ್ದಾರೆ. ಇಂದು ಲಘು ಉಪಯೋಗಿ ಹೆಲಿಕಾಪ್ಟರ್ ಉತ್ಪಾದನೆ ಆಗುತ್ತಿದ್ದು, ಮುಂದೆ ಬೃಹತ್ ವಿಮಾನಗಳ ಉತ್ಪಾದನೆಯನ್ನೂ ಮಾಡುವ ಸಾಮರ್ಥ್ಯ ಈ ಘಟಕಕ್ಕಿದೆ. ಈ ಘಟಕದಿಂದ 10 ಸಾವಿರ ಜನರಿಗೆ ಉದ್ಯೋಗ ಸೃಜನೆಯಾಗಲಿದೆ ಎಂದರು.
ಕರ್ನಾಟಕದಲ್ಲಿ ಕಳೆದ 75 ವರ್ಷದಿಂದ ಕೇವಲ 25 ಲಕ್ಷ ಮನೆಗೆ ನೀರು ಕೊಟ್ಟಿದ್ದರು. ಈ ಮೂರು ವರ್ಷದಲ್ಲಿ 30 ಲಕ್ಷ ಮನೆಗಳಿಗೆ ನೀರು ನೀಡಿದ್ದೇವೆ. 2024ರ ಅಂತ್ಯಕ್ಕೆ ಎಲ್ಲ ಮನೆಗಳಿಗೆ ನೀರು ನೀಡುವ ಉದ್ದೇಶವನ್ನು ಜಲಜೀವನ್ ಮಿಷನ್ ಈಡೇರಿಸುತ್ತದೆ. ಡಬಲ್ ಇಂಜಿನ್ ಸರ್ಕಾರ ಏನು ಮಾಡುತ್ತದೆ ಎನ್ನುವವರು ಇದನ್ನು ನೋಡಬೇಕು.
ಬೆಂಗಳೂರು-ಚೆನ್ನೈ ಕಾರಿಡಾರ್‌ನಲ್ಲಿ ಕೈಗಾರಿಕಾ ವಸಾಹತು ನಿರ್ಮಾಣವಾಗುತ್ತಿದೆ. ಕೇಂದ್ರ ಸರ್ಕಾರವೂ ವಿಶೇಷ ಹೂಡಿಕೆ ಮಾಡಿದೆ, ಸಾವಿರಾರು ಜನರಿಗೆ ಉದ್ಯೋಗ ಸಿಗಲಿದೆ. ಬೆಂಗಳೂರಿನ ನಂತರ ಎಲ್ಲ ಕ್ಷೇತ್ರಗಳಲ್ಲೂ ಬೆಳವಣಿಗೆ ಕಾಣುವುದು ತುಮಕೂರು. ಇದಕ್ಕೆ ಅಗತ್ಯವಾದ ಎಲ್ಲ ಅಡಿಗಲ್ಲನ್ನೂ ನರೇಂದ್ರ ಮೋದಿಯವರ ಸರ್ಕಾರ ಹಾಕಿದೆ.
ಮುಂದಿನ 25 ವರ್ಷವು ಅಮೃತ ಕಾಲವಾಗಿದೆ. ಈ ಸಮಯದಲ್ಲೆ ಜಿ20ಅಧ್ಯಕ್ಷ ಸ್ಥಾನ ಸಿಗುತ್ತಿದೆ. ಅದರ ಅಡಿಯಲ್ಲಿ, ಒಂದೇ ವಿಶ್ವ-ೊಂದೇ ಕುಟುಂಬ ಎಂಬ ಘೋಷಣೆಯಿಂದ ಮಾರ್ಗದರ್ಶನವನ್ನು ಮಾಡುತ್ತಿದ್ದಾರೆ. ಅಮೃತ ಕಾಲ ಎಂದರೆ ಇದು ಕರ್ತವ್ಯ ಕಾಲ. ಸ್ವಾತಂತ್ರ್ಯದ 100 ನೇ ವರ್ಷದಲ್ಲಿ ಭಾರತ ನಂಬರ್ 1 ಆಗಬೇಕೆಂದರೆ, ಕರ್ನಾಟಕ ಅಗ್ರಮಾನ್ಯವಾಗಿ ಮುಂದೆ ನಿಲ್ಲುತ್ತದೆ. ನವ ಭಾರತ ನಿರ್ಮಾಣಕ್ಕೆ ನವ ಕರ್ನಾಟಕವನ್ನು ನಿರ್ಮಾಣ ಮಾಡುತ್ತೇವೆ ಎಂಬ ಆಶ್ವಾಸನೆಯನ್ನು ನೀಡುತ್ತೇವೆ ಎಂದರು.
ಇದಕ್ಕೂ ಮುನ್ನ ಮಾತನಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಕರ್ನಾಟಕ ಎಂದರೆ ವಿಜ್ಞಾನ ಮತ್ತು ತಂತ್ರಜ್ಞಾನ. ಕರ್ನಾಟಕ ಎಂದರೆ ಅಭಿವೃದ್ಧಿ, ಶಾಂತಿ ಮತ್ತು ಸಮೃದ್ಧಿ. ಕರ್ನಾಟಕ ಎಂದರೆ ಭಾರತದ ಭವಿಷ್ಯ ಎಂದು ಶ್ಲಾಘಿಸಿದರು.
ಪ್ರಧಾನಿಯವರ ದೂರದರ್ಶೀ ನಾಯಕತ್ವದ ಕಾರಣಕ್ಕೆ ಭಾರತದತ್ತ ಇಡೀ ವಿಶ್ವ ನೋಡುತ್ತಿದೆ. ಈ ಹಿಂದೆ ಭಾರತವು ರೇಷ್ಮೆ, ಹತ್ತಿ ಹಾಗೂ ಉಕ್ಕಿನ ಉತ್ಪಾದನೆಯಲ್ಲಿ ಮುಂದಿತ್ತು. ಭವಿಷ್ಯದಲ್ಲಿ ರಕ್ಷಣಾ ಉತ್ಪಾದನೆಯಲ್ಲಿ ಭಾರತ ಮುಂಚೂಣಿಯಲ್ಲಿರಲಿದೆ. ಇಂದು ಲಘು ಉಪಯೋಗಿ ಹೆಲಿಕಾಪ್ಟರ್ ಉತ್ಪಾದನಾ ಘಟಕ ಉತ್ಪಾದನೆ ಆಗುತ್ತಿದೆ. ಪ್ರಧಾನಿಯವರಿಂದಲೇ ಈ ಘಟಕದ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ಎರಡೂ ಆಗುತ್ತಿದೆ. ರಕ್ಷಣಾ ಕ್ಷೇತ್ರದಲ್ಲಿ ಆತ್ಮನಿರ್ಭರತೆಗೆ ಇದು ಪೂರಕವಾಗಿದೆ ಎಂದು ಹೇಳಿದರು.
ಸ್ವಾತಂತ್ರ್ಯ ಹೋರಾಟವು ರಾಷ್ಟ್ರೀಯ ಆಂದೋಲನ 1.0 ಎಂದರೆ, ಈಗ ಆಗುತ್ತಿರುವುದು ರಾಷ್ಟ್ರೀಯ ಆಂದೋಲನದ 2.0. ಪ್ರಧಾನಿಯವರ ಮಾರ್ಗದರ್ಶನದಲ್ಲಿ ನಮ್ಮ ಸೈನ್ಯವು ರಾಷ್ಟ್ರದ ಸುರಕ್ಷತೆಯಲ್ಲಿ ಮುನ್ನಡೆದಿದೆ. ಕಂಪನಿಗಳಿಂದ ವೈಯಕ್ತಿಕ ಸಂಶೋಧಕರವರೆಗೆ, ಕಾರ್ಮಿಕರವರೆಗೆ ಎಲ್ಲರೂ ದೇಶದ ಅಭಿವೃದ್ಧಿಯಲ್ಲಿ ಕೊಡುಗೆ ನೀಡುತ್ತಿದ್ದಾರೆ. ಎಲ್ಲರೂ ಗಡಿಯಲ್ಲಿ ಇಲ್ಲದಿದ್ದರೂ, ಸೈನ್ಯಕ್ಕೆ ಎಲ್ಲರ ಬೆಂಬಲ ಇದೆ. ಎಚ್‌ಎಎಲ್‌ನ ಈ ಘಟಕವು ರಕ್ಷಣಾ ಕ್ಷೇತ್ರಕ್ಕೆ ಬಹುದೊಡ್ಡ ಕೊಡುಗೆಯಾಗಿದೆ ಎಂದು ತಿಳಿಸಿದರು.