Site icon Vistara News

Modi In Karnataka: ಶಿವಕುಮಾರ ಸ್ವಾಮೀಜಿಗಳ ಪರಂಪರೆಯನ್ನು ಸಿದ್ದಲಿಂಗ ಶ್ರೀ ಮುಂದುವರಿಸಿದ್ದಾರೆ: ಪ್ರಧಾನಿ ಮೋದಿ ಶ್ಲಾಘನೆ

modi-in-karnataka-Narendra Modi praised siddhaganga mutt of Tumakuru

#image_title

ತುಮಕೂರು: ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿಯವರು ಆರಂಭಿಸಿದ ತ್ರಿವಿಧ ದಾಸೋಹ ಪರಂಪರೆಯನ್ನು ಶ್ರೀ ಸಿದ್ದಲಿಂಗ ಸ್ವಾಮೀಜಿಯವರು ಮುಂದುವರಿಸಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ (Modi In Karnataka) ಶ್ಲಾಘಿಸಿದ್ದಾರೆ. ತುಮಕೂರು ಜಿಲ್ಲೆಯ ಗುಬ್ಬಿಯಲ್ಲಿ ಲಘು ಎಚ್‌ಎಎಲ್‌ನ ಉಪಯೋಗಿ ಹೆಲಿಕಾಪ್ಟರ್‌ ಘಟಕ ಉದ್ಘಾಟನೆ, ಜಲಜೀವನ್‌ ಮಿಷನ್‌ ಯೋಜನೆಗಳ ಅಡಿಗಲ್ಲು ಹಾಗೂ ಚೆನ್ನೈ-ಬೆಂಗಳೂರು ಎಕ್ಸ್‌ಪ್ರೆಸ್‌ ಕೈಗಾರಿಕಾ ಕಾರಿಡಾರ್‌ನಲ್ಲಿ ತುಮಕೂರು ಕೈಗಾರಿಕಾ ಟೌನ್‌ಷಿಪ್‌ ಅಡಿಗಲ್ಲು ಕಾರ್ಯಕ್ರಮದಲ್ಲಿ ಮೋದಿ ಮಾತನಾಡಿದರು.

ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ನಿಟ್ಟೂರು ನಗರದ ಆತ್ಮೀಯ ನಾಗರಿಕ ಬಂಧು ಭಗಿನಿಯರೆ, ನಿಮಗೆಲ್ಲ ನನ್ನ ನಮಸ್ಕಾರಗಳು ಎಂದು ಕನ್ನಡದಲ್ಲೆ ಮಾತು ಆರಂಭಿಸಿದ ಮೋದಿ, ನೆರೆದವರಲ್ಲಿ ಹರ್ಷ ಮೂಡಿಸಿದರು. ಕರ್ನಾಟಕವು ಸಂತರು, ಋಷಿಗಳು ಹಾಗೂ ಸಾದ್ವಿಯರ ಭೂಮಿ. ಅಧ್ಯಾತ್ಮ, ಜ್ಞಾನ-ವಿಜ್ಞಾನದ ಮಹಾನ್‌ ಪರಂಪರೆಯನ್ನು ಕರ್ನಾಟಕವು ಎಂದಿಗೂ ಸಶಕ್ತಗೊಳಿಸಿದೆ. ಅದರಲ್ಲೂ ತುಮಕೂರಿನ ವಿಶೇಷ ಸ್ಥಾನವಿದೆ. ಸಿದ್ಧಗಂಗಾ ಮಠದ ಪಾತ್ರ ಇದರಲ್ಲಿ ಬಹು ದೊಡ್ಡದು ಎಂದರು.

ಪೂಜ್ಯ ಶಿವಕುಮಾರ ಸ್ವಾಮಿಗಳು ತ್ರಿವಿಧ ದಾಸೋಹಿಗಳಾಗಿದ್ದರು. ಅವರು ಆರಂಭಿಸಿದ ಅನ್ನ, ಅಕ್ಷರ ಹಾಗೂ ಆಸರೆಯ ಪರಂಪರೆಯನ್ನು ಶ್ರೀ ಸಿದ್ಧಲಿಂಗ ಮಹಾಸ್ವಾಮೀಜಿ ಮುಂದುವರಿಸುತ್ತಿದ್ದಾರೆ. ಆ ಸಂತರಿಗೆ ನನ್ನ ನಮನ. ಗುಬ್ಬಿಯಲ್ಲಿರುವ ಶ್ರೀ ಚಿದಂಬರ ಆಶ್ರಮ ಹಾಗೂ ಭಗವಾನ್‌ ಚನ್ನಬಸವೇಶ್ವರರಿಗೂ ನನ್ನ ನಮನ ಎಂದರು.

ಸಂತರ ಆಶೀರ್ವಾದದಿಂದ ಕರ್ನಾಟಕದ ಯುವಕರಿಗೆ ಉದ್ಯೋಗ ನೀಡುವ, ಗ್ರಾಮೀಣ ಮಹಿಳೆಯರಿಗೆ ಸೌಲಭ್ಯ ನೀಡುವ, ದೇಶ ಸೇವೆಯ ಕೋಟ್ಯಂತರ ರೂ. ಮೊತ್ತದ ಯೋಜನೆಗಳ ಲೋಕಾರ್ಪಣೆ ಹಾಗೂ ಶಿಲಾನ್ಯಾಸ ಇಂದು ಆಗಿದೆ. ದೇಶದ ಬಹುದೊಡ್ಡ ಹೆಲಿಕಾಪ್ಟರ್‌ ಫ್ಯಾಕ್ಟರಿ ತುಮಕೂರಿಗೆ ಸಿಕ್ಕಿದೆ. ತುಮಕೂರು ಕೈಗಾರಿಕಾ ಟೌನ್‌ಷಿಪ್‌ ಜತೆಗೆ ಕುಡಿಯುವ ನೀರಿನ ಯೋಜನೆಗೂ ಚಾಲನೆ ಸಿಕ್ಕಿದೆ. ಇದಕ್ಕಾಗಿ ತಮಗೆಲ್ಲರಿಗೂ ಅಭಿನಂದನೆಗಳು ಎಂದರು.

ಇದನ್ನೂ ಓದಿ: ಶಿವಕುಮಾರ ಸ್ವಾಮೀಜಿ ಪುಣ್ಯಸ್ಮರಣೆ: ಶ್ರೀಗಳ ಬದುಕು ಸೇವೆಯ ಪ್ರತೀಕ, ತ್ಯಾಗಮಯ; ಸಿದ್ದಲಿಂಗ ಸ್ವಾಮೀಜಿ

ಕರ್ನಾಟಕವು ಯುವ ಪ್ರತಿಭೆ, ಯುವ ಅನ್ವೇಷಣೆಯ ನಾಡು. ಡ್ರೋಣ್‌ ಉತ್ಪಾದನೆಯಿಂದ ತೇಜಸ್‌ ಯುದ್ಧವಿಮಾನದವರೆಗೆ ಕರ್ನಾಟಕದ ಉತ್ಪಾದನಾ ಕ್ಷೇತ್ರದ ಶಕ್ತಿಯನ್ನು ಪ್ರಪಂಚ ನೋಡುತ್ತಿದೆ. ಡಬಲ್‌ ಇಂಜಿನ್‌ ಸರ್ಕಾರವು ಕರ್ನಾಟಕವನ್ನು, ಹೂಡಿಕೆದಾರರ ಮೊದಲ ಆಯ್ಕೆಯನ್ನಾಗಿಸಿದೆ. ಡಬಲ್‌ ಇಂಜಿನ್‌ ಸರ್ಕಾರ ಹೇಗೆ ಕೆಲಸ ಮಾಡುತ್ತದೆ ಎನ್ನುವುದರ ಉದಾಹರಣೆಯು ಇಂದು ಆಗುತ್ತಿರುವ ಹೆಲಿಕಾಪ್ಟರ್‌ ಕಾರ್ಖಾನೆಯೂ ಒಂದು ಉದಾಹರಣೆ. 2016ರಲ್ಲಿ ಈ ಘಟಕದ ಶಿಪಾನ್ಯಾಸದ ಅವಕಾಶ ಸಿಕ್ಕಿತ್ತು. ನಮ್ಮ ರಕ್ಷಣಾ ಅವಶ್ಯಕತೆಗಳಿಗಾಗಿ ವಿದೇಶದ ಮೇಲಿನ ಅವಲಂಬನೆ ಕಡಿಮೆ ಮಾಡಬೇಕು ಎನ್ನುವುದು ನಮ್ಮ ಉದ್ದೇಶವಾಗಿತ್ತು. ಇಂದು ಅನೇಕ ಕನಸುಗಳು ಸಾಕಾರಗೊಂಡಿವೆ ಎಂದು ಹೇಳಿದರು.

Exit mobile version