Site icon Vistara News

Modi In Karnataka: ರಾಗಿ ಮುದ್ದೆ, ರಾಗಿ ರೊಟ್ಟಿ ಸ್ವಾದಕ್ಕೆ ಮನಸೋತ ನರೇಂದ್ರ ಮೋದಿ!

Modi about raagi mudde

#image_title

ತುಮಕೂರು: ಕರ್ನಾಟಕದಲ್ಲಿ ಬೆಳೆಯುವ ಸಿರಿಧಾನ್ಯಗಳನ್ನು ಕೊಂಡಾಡಿರುವ ಪ್ರಧಾನಿ ನರೇಂದ್ರ ಮೋದಿ (Modi In Karnataka), ವಿಶೇಷವಾಗಿ ರಾಗಿಮುದ್ದೆ ಮತ್ತು ರಾಗಿ ರೊಟ್ಟಿಯ ಸ್ವಾದವನ್ನು ಮರೆಯಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ತುಮಕೂರು ಗುಬ್ಬಿಯಲ್ಲಿ ಲಘು ಉಪಯೋಗಿ ಹೆಲಿಕಾಪ್ಟರ್‌ ಘಟಕ ಉದ್ಘಾಟನೆ, ಜಲಜೀವನ್‌ ಮಿಷನ್‌ ಯೋಜನೆಗಳ ಅಡಿಗಲ್ಲು ಹಾಗೂ ಚೆನ್ನೈ-ಬೆಂಗಳೂರು ಎಕ್ಸ್‌ಪ್ರೆಸ್‌ ಕೈಗಾರಿಕಾ ಕಾರಿಡಾರ್‌ನಲ್ಲಿ ತುಮಕೂರು ಕೈಗಾರಿಕಾ ಟೌನ್‌ಷಿಪ್‌ ಅಡಿಗಲ್ಲು ಕಾರ್ಯಕ್ರಮದಲ್ಲಿ ಮಾತನಾಡಿದರು.

ಕೊರೊನಾ ಸಮಯದಲ್ಲಿ ಧಾನ್ಯದ ಖರ್ಚಿನ ಯೋಚನೆ ಇಲ್ಲದಂತೆ ಮಾಡಿದ್ದೇವೆ. ಇದಕ್ಕಾಗಿ ಸರ್ಕಾರ 4 ಲಕ್ಷ ಕೋಟಿ ರೂ. ವೆಚ್ಚ ಮಾಡಿದೆ. ಬಡವರಿಗೆ ಮನೆ ನಿರ್ಮಿಸಲು ಸಾವಿರಾರು ಕೋಟಿ ರೂ. ಮೀಸಲಿಟ್ಟಿದ್ದೇವೆ. ಇದರಿಂದ ಆ ಪರಿವಾರಗಳ ಜೀವನವೇ ಬದಲಾಗುತ್ತದೆ. ಮಧ್ಯಮ ವರ್ಗದ ಹಿತಕ್ಕಾಗಿ ಅನೇಕ ನಿರ್ಧಾರ ಮಾಡಲಾಗಿದೆ. 7 ಲಕ್ಷ ರೂ.ವರೆಗಿನ ಆದಾಯ ತೆರಿಗೆ ಇಲ್ಲದಿರುವುದರಿಂದ ಮಧ್ಯಮ ವರ್ಗಕ್ಕೆ ಸಂತೋಷವಾಗಿದೆ. 30 ವರ್ಷದೊಳಗಿನವರ ಬ್ಯಾಂಕ್‌ ಖಾತೆಯಲ್ಲಿ ಹೆಚ್ಚು ಹಣ ಉಳಿಯಲಿದೆ ಎಂದಿ ಇತ್ತೀಚಿನ ಕೇಂದ್ರ ಬಜೆಟ್‌ ಕುರಿತು ಮೋದಿ ಮಾತನಾಡಿದರು.

ಮಹಿಳೆಯರನ್ನು ಆರ್ಥಿಕ ಸಬಲೀಕರಣವಾಗಿಸುವುದು ನಮ್ಮ ಉದ್ದೇಶ. ಮನೆಯ ನಿರ್ಧಾರಗಳಲ್ಲೂ ಅವರ ಸಹಭಾಗಿತ್ವ ಹೆಚ್ಚಾಗುತ್ತದೆ. ಅದಕ್ಕಾಗಿ ಈ ಬಜೆಟ್‌ನಲ್ಲಿ ದೊಡ್ಡ ಹೆಜ್ಜೆ ಇಟ್ಟಿದ್ದೇವೆ. ಮಹಿಳಾ ಸಮ್ಮಾನ್‌ ಉಳಿತಾಯ ಪತ್ರದಲ್ಲಿ 2 ಲಕ್ಷ ರೂ.ವರೆಗೆ ಹೂಡಿಕೆ ಮಾಡಬಹುದು. ಇದಕ್ಕೆ ಹೆಚ್ಚು ಬಡ್ಡಿ ಸಿಗುತ್ತದೆ. ಮಹಿಳೆಯರ ಪಾತ್ರವನ್ನು ಇದು ಹೆಚ್ಚಿಸುತ್ತದೆ ಎಂದರು.

ಇದನ್ನೂ ಓದಿ: Bill Gates Makes Roti: ಬಿಲ್‌ ಗೇಟ್ಸ್‌ ರೊಟ್ಟಿ ಲಟ್ಟಿಸಿದ್ದಕ್ಕೆ ಮೋದಿ ಮೆಚ್ಚುಗೆ, ಸಿರಿಧಾನ್ಯದ ರೊಟ್ಟಿ ಮಾಡಿ ಎಂದೂ ಸಲಹೆ

ಸಿರಿಧಾನ್ಯದ ಕುರಿತು ಕರ್ನಾಟಕ ಮೊದಲಿಂದಲೂ ತಿಳಿದಿದೆ. ಹಾಗಾಗಿ, ಕರ್ನಾಟಕದ ಇದೇ ಪರಂಪರೆಯನ್ನು ಇಡೀ ದೇಶದಲ್ಲಿ ಶ್ರೀ ಅನ್ನ ಎಂಬ ಹೆಸರಿನಿಂದ ಮುಂದುವರಿಸಲಾಗಿದೆ. ಕರ್ನಾಟಕದಲ್ಲಿ ಶ್ರೀ ಅನ್ನ ರಾಗಿ, ಶ್ರೀ ಅನ್ನ ನವಣೆ, ಶ್ರೀ ಅನ್ನ ಸಾಮೆ, ಶ್ರೀ ಅನ್ನ ಅರ್ಕ, ಶ್ರೀ ಅನ್ನ ಕೊರ್ಲೆ, ಶ್ರೀ ಅನ್ನ ಊದಲು, ಶ್ರೀ ಅನ್ನ ಸಜ್ಜೆ, ಶ್ರೀ ಅನ್ನಬಿಳಿ ಜೋಳದ ರೀತಿ ಅನೇಕ ಶ್ರೀ ಅನ್ನ ಉತ್ಪಾದನೆ ಮಾಡುತ್ತಾರೆ. ಕರ್ನಾಟಕದ ರಾಗಿ ಮುದ್ದೆ, ರಾಗಿ ರೊಟ್ಟಿಯ ಸ್ವಾದವನ್ನು ಯಾರೂ ಮರೆಯಲು ಸಾಧ್ಯವಿಲ್ಲ ಎಂದರು.

ಶ್ರೀ ಅನ್ನದ ಉತ್ಪಾದನೆಗೂ ಈ ಬಾರಿ ಬಜೆಟ್‌ನಲ್ಲಿ ಬಲ ನೀಡಲಾಗಿದೆ. ಸಣ್ಣ ಸಣ್ಣ ರೈತರಿಗೆ ಇದರಿಂದ ಲಾಭ ಆಗುತ್ತದೆ. ಡಬಲ್‌ ಇಂಜಿನ್‌ ಸರ್ಕಾರದ ಪ್ರಾಮಾಣಿಕ ಪ್ರಯತ್ನದ ಕಾರಣಕ್ಕೆ ಭಾರತದ ನಾಗರಿಕರ ವಿಶ್ವಾಸ ಹೆಚ್ಚಾಗಿದೆ. ಎಲ್ಲ ದೇಶವಾಸಿಗಳ ಜೀವನವನ್ನು ಸುರಕ್ಷಿತವಾಗಿಸಲು ದಿನ ರಾತ್ರಿ ಶ್ರಮಿಸುತ್ತಿದ್ದೇವೆ. ನಿಮ್ಮ ನಿರಂತರ ಆಶೀರ್ವಾದವೇ ನಮಗೆ ಶಕ್ತಿ ಸಿಗುತ್ತದೆ ಎಂದು ಭಾಷಣ ಮುಗಿಸಿದರು.

Exit mobile version